ಮಂಗಳವಾರ, ಏಪ್ರಿಲ್ 13, 2021
32 °C

ಸಿಕ್ಕಿಂ ಪಯಣದ ಚಿತ್ರಪಟಗಳು…

ದೀಪಾ ಪ್ರಶಾಂತ್  Updated:

ಅಕ್ಷರ ಗಾತ್ರ : | |

Prajavani

ಹಿಮದ ರಸ್ತೆಗಳಲ್ಲಿ ಪಯಣ. ಹಿಮಾಚ್ಛಾದಿತ ಪರ್ವತಗಳ ದರ್ಶನ, ಪಯಣದ ಜತೆಯಲ್ಲಿ ನದಿಗಳ ಝುಳು ಝುಳು ನೀನಾದ. ಜಲಪಾತಗಳ ನರ್ತನ, ಚಳಿ ಚಳಿ ತಾಳಲು ಬಿಸಿ ಬಿಸಿ ಚಹಾ, ಚುರ್ ಎನ್ನುವ ಹೊಟ್ಟೆಗೆ ಮೋಮೋ, ಮ್ಯಾಗಿಯ ರುಚಿ… ಅಬ್ಬಾ! ಮೂರು ದಿನಗಳ ಸಿಕ್ಕಿಂ ರಾಜ್ಯದ ಪ್ರವಾಸ, ಅನೂಹ್ಯ ಅನುಭವಗಳ ಕಥನದ ಮೂಟೆಯನ್ನೇ ಕಟ್ಟಿಕೊಟ್ಟಿತು.

ಕಳೆದ ವರ್ಷ ಮೇ ತಿಂಗಳು ಸಿಕ್ಕಿಂ ರಾಜ್ಯಕ್ಕೆ ಮೂರು ದಿನಗಳ ಪ್ರವಾಸ ಹೋಗಿದ್ದೆವು. ಸಿಕ್ಕಿಂ ರಾಜಧಾನಿ ಗ್ಯಾಂಗ್ಟಕ್‌ನಿಂದ ನಮ್ಮ ಪ್ರವಾಸ ಆರಂಭ. ಪೂರ್ವ ಸಿಕ್ಕಿಂನಲ್ಲಿರುವ ಸ್ವಚ್ಛ ಸುಂದರ ನಗರಿ ಗ್ಯಾಂಗ್ಟಕ್‌ನಿಂದ ನಾತುಲ್ ಪಾಸ್ ನತ್ತ ಹೊರಟೆವು. ಇಲ್ಲಿಗೆ ಸ್ಥಳೀಯ ಎಸ್‍ಯುವಿ ವಾಹನಗಳಲ್ಲಿ ಮಾತ್ರ ಹೋಗಲು ಮಾತ್ರ ಅವಕಾಶವಿದೆ. ಮಾತ್ರವಲ್ಲ, ನಾತುಲ್‌ಪಾಸ್‌ಗೆ ಹೋಗಲು ಪರವಾನಗಿ ಪಡೆದಿರಬೇಕು. ಸ್ಥಳೀಯ ಟ್ರಾವೆಲ್ ಏಜೆನ್ಸಿಗಳು ಈ ವ್ಯವಸ್ಥೆ ಮಾಡಿಸಿಕೊಡುತ್ತವೆ.

ನಾವು ಇದೇ ರೀತಿ ವಾಹನದಲ್ಲಿ, ವಿಶೇಷ ಪರವಾನಗಿಯೊಂದಿಗೆ ನಾತುಲ್‌ಪಾಸ್‌ಗೆ ಹೊರಟೆವು. ಹಿಮಾಚ್ಛಾದಿತ ಬೆಟ್ಟಗಳು, ಜತೆಯಲ್ಲೇ ಹರಿದು ಬರುತ್ತಿದ್ದ ತೀಸ್ತಾ ನದಿ.. ಎಲ್ಲವೂ ಸೇರಿ 56 ಕಿ.ಮೀ ದೂರದ ಎರಡು ಗಂಟೆಗಳ ತಿರುವುಗಳ ರಸ್ತೆ ಪಯಣದ ಆಯಾಸವನ್ನು ಮರೆಸಿತು. ಮನಸ್ಸನ್ನು ಪ್ರಫುಲ್ಲವಾಗಿಸಿತು. ಕಂದಕಗಳ ದಂಡೆಯಲ್ಲಿ ರಸ್ತೆಯಲ್ಲಿ ಸಾಗುವುದು ಸ್ವಲ್ಪ ಮಟ್ಟಿಗೆ ದಿಗಿಲು ಹುಟ್ಟಿಸಿದರೂ, ಆ ಪ್ರಕೃತಿ ಸೌಂದರ್ಯದ ಮುಂದೆ ದಿಗಿಲು ನಮಗೆ ಗೊತ್ತಿಲ್ಲದೇ ಮಾಯವಾಗುತ್ತದೆ.

ಚಾಂಗ್ ಸರೋವರ

ನಾತುಲ್‌ಪಾಸ್‌ಗೆ ಇನ್ನೂ 16 ಕಿ.ಮೀ. ಬಾಕಿ ದೂರವಿದ್ದಾಗಲೇ ಚಾಂಗ್ ಎಂಬ ಸರೋವರ ಕಂಡಿತು. ಇದು ಬೌದ್ಧರ ಪವಿತ್ರವಾದ ಸರೋವರ. ಸಮುದ್ರ ಮಟ್ಟದಿಂದ 12,313 ಅಡಿ ಮೇಲಿದೆ. ಸುತ್ತ ಬೆಟ್ಟ, ನಡುವೆ ಸರೋವರವಿದೆ. ಚಳಿಗಾಲದಲ್ಲಿ ಈ ಸರೋವರದ ನೀರು ಮಂಜುಗಡ್ಡೆಯಾಗುತ್ತದೆ. ಬೇಸಿಗೆಯಲ್ಲಿ ಪ್ರಶಾಂತವಾಗಿರುತ್ತದೆ. ನಾವು ಹೋದಾಗ, ಸರೋವರದ ನೀರು ತಿಳಿಯಾಗಿತ್ತು. ಕೊರೆಯುವ ಚಳಿಯಲ್ಲಿ ಸರೋವರದ ಬ್ಯಾಕ್ ಡ್ರಾಪ್‌ನಲ್ಲಿ ಫೋಟೊ ಕ್ಲಿಕ್ಕಿಸಿಕೊಂಡೆವು. ಈ ಸರೋವರದ ಸುತ್ತ ಚಮರೀಮೃಗಗಳು ಓಡಾಡುತ್ತಿರುತ್ತವೆ. ಅವನ್ನು ಸಾಕಿರುತ್ತಾರೆ. ತುಂಬಾ ಚೆನ್ನಾಗಿ ಅಲಂಕಾರ ಮಾಡಿರುತ್ತಾರೆ. ಅವುಗಳ ಮೇಲೆ ಪ್ರವಾಸಿಗರನ್ನು ಕೂರಿಸಿಕೊಂಡು, ಸರೋವರವನ್ನು ಸುತ್ತು ಹಾಕಿಸುತ್ತಾರೆ.

ಸ್ವಲ್ಪ ಹಾಗೆ ಮುಂದೆ ಹೆಜ್ಜೆ ಹಾಕಿದಾಗ ಕ್ಯಾಂಟಿನ್‌ಗಳು ಕಂಡವು. ಚಳಿ ಹಾಗೂ ಹಸಿವು ಶಮನ ಮಾಡಲು ಬಿಸಿ ಬಿಸಿ ಚಹಾ, ಮೋಮೋ, ಮ್ಯಾಗಿಗೆ ಮೊರೆ ಹೋದೆವು. ಬೆಲೆ ಸ್ವಲ್ಪ ದುಬಾರಿ. ಆದರೂ ಇಂಥ ಜಾಗದಲ್ಲಿ ಆಹಾರ ಸಿಗುವುದೇ ಸಂತೋಷವಲ್ಲವೇ?

ಬಾಬಾ ಹರಭಜನ್ ಮಂದಿರ

ನಾತುಲ್‌ ಪಾಸ್‌ನಿಂದ ಬಾಬಾ ಹರಭಜನ್ ಮಂದಿರಕ್ಕೆ ಇಪ್ಪತ್ತು ನಿಮಿಷಗಳ ದಾರಿ. ಇದು ವೀರಯೋಧ ಹುತಾತ್ಮ ಬಾಬಾ ಹರಭಜನ್ ಸಿಂಗ್ ಹೆಸರಿನ ಮಂದಿರ. ಇವರು 1968 ರಲ್ಲಿ ಗಡಿ ಕಾಯುತ್ತಿದ್ದ ವೇಳೆ ಹಿಮನದಿಯಲ್ಲಿ ಮೃತಪಟ್ಟಿದ್ದರು. ಆಗ ಎರಡು ದಿನ ಶೋಧಿಸಿದರೂ ಅವರ ಮೃತದೇಹ ಸಿಕ್ಕಿರಲಿಲ್ಲ. ನಂತರ ಬಾಬಾ ತನ್ನ ಸ್ನೇಹಿತನ ಕನಸಲ್ಲಿ ಬಂದು ತನ್ನ ಮೃತದೇಹದ ವಿವರ ತಿಳಿಸಿದ. ಹಾಗೆ ಅದು ಅಲ್ಲಿ ಸಿಕ್ಕಿತಂತೆ. ಅಂದಿನಿಂದ ನಮ್ಮ ವೀರ ಯೋಧರಿಗೆ ಬಾಬಾನಲ್ಲಿ ಅತೀವ ನಂಬಿಕೆ. ಹಾಗಾಗಿ ಅವರಿಗಾಗಿ ಒಂದು ಮಂದಿರವನ್ನು ಕಟ್ಟಿದ್ದಾರೆ. ಅಲ್ಲಿ ಸೊಗಸಾದ ಜಲಪಾತ ಮತ್ತು ಶಿವನ ಪ್ರತಿಮೆ ಇದೆ. ಬಾಬಾನ ದರ್ಶನ ಪಡೆದು ಗ್ಯಾಂಗ್ಟಕ್‌ನತ್ತ ಮುಖ ಮಾಡಿದೆವು.

ಲಾಚುಂಗ್‌ನತ್ತ ಪಯಣ

ಎರಡನೇ ದಿನ ಲಾಚುಂಗ್‍ನತ್ತ ನಮ್ಮ ಪಯಣ. ಇದು ಗ್ಯಾಂಗ್ಟಕ್‌ನಿಂದ 102 ಕಿ.ಮೀ ದೂರವಿದೆ. ದಾರಿಯುದ್ದಕ್ಕೂ ನಾಗಾ ಜಲಪಾತ, ಬರ್‌ಫ್ಲೈ ಜಲಪಾತ. ಅಮಿತಾಬ್‍ಬಚ್ಚನ್ ಜಲಪಾತ.. ಹೀಗೆ ಜಲಪಾತಗಳ ನರ್ತನ ಕಾಣಿಸುತ್ತದೆ. ಸೊಗಸಾದ ಜಲಧಾರೆಗಳನ್ನು ನೋಡುತ್ತಾ ಸಾಗುತ್ತಿದ್ದರೆ, ಇನ್ನೊಂದು ಬದಿಯಲ್ಲಿ ತೀಸ್ತಾ ನದಿ ನಮ್ಮೊಂದಿಗೆ ಹರಿಯುತ್ತಿರುತ್ತದೆ.

ಮರುದಿನ ಲಾಚುಂಗ್‍ನಿಂದ ಜೀರೂ ಪಾಯಿಂಟ್‍ಗೆ ಕರೆದೊಯ್ದರು. ಅದು ಒಂದೂವರೆ ಗಂಟೆಗಳ ಪಯಣ. ದಾರಿಯುದ್ದಕ್ಕೂ ಸುಂದರ ಪುಷ್ಪಗಳು ಕಣ್ಮನ ಸೆಳೆಯುತ್ತಿದ್ದವು. ಈ ಸ್ಥಳವನ್ನು ಜೀರೂ ಪಾಯಿಂಟ್ ಎಂದು ಏಕೆ ಕರೆಯುತ್ತಾರೆ ಎಂದರೆ ಅದು ರಸ್ತೆಯ ಕೊನೆ. ಅಲ್ಲಿಂದ ಮುಂದಕ್ಕೆ ರಸ್ತೆಯಿಲ್ಲ. ಬೆಟ್ಟದಿಂದ ಆಚೆಗೆ ಚೀನಾ ದೇಶವಿದೆ. ಇಂಥ ಜೀರೊ ಪಾಯಿಂಟ್‍ನಲ್ಲಿ ಮಂಜುಗಡ್ಡೆಯಿಂದ ಆಡಿ ಆನಂದಿಸಿದೆವು.

ಅಲ್ಲಿಗೆ ಸಿಕ್ಕಿಂ ಪ್ರವಾಸ ಯಶಸ್ವಿಯಾಗಿ ಪೂರ್ಣ ಗೊಂಡಿತು. ಮರುದಿನ ಸುಂದರ ನೆನಪುಗಳೊಂದಿಗೆ, ಕಣ್ಣು, ಮನ ತಂಪಾಗಿಸಿದ ಸಿಕ್ಕಿಂಗೆ ಒಂದು ಭಾವಪೂರ್ವಕ ವಿದಾಯ ಹೇಳಿ ನಮ್ಮ ಕರುನಾಡಿನತ್ತ ಹೊರೆಟೆವು.

ಚೀನಾ-ಭಾರತ ಗಡಿಯಲ್ಲಿ..

ನಾತುಲ್ ಪಾಸ್‌ಗೆ ಪಯಣ ಮುಂದುವರಿಸಬೇಕಿತ್ತು. ಆದರೆ, ನಮ್ಮ ವಾಹನದ ಚಾಲಕ, ನಮ್ಮನ್ನು ಅಲ್ಲೇ ಇಳಿಸಿ, ‘ಮುಂದೆ ಕಾರು ಹೋಗಲು ಅನುಮತಿ ಇಲ್ಲ’ ಎಂದುಬಿಟ್ಟ. ಅದು ಭಾರತ- ಚೀನಾ ಗಡಿಭಾಗದ ಪ್ರದೇಶ. ತಾಪಮಾನ 2 ಡಿಗ್ರಿ. ಚಳಿಯಲ್ಲಿ ನಾವೆಲ್ಲ ಗಡ ಗಡ ನಡುಗತ್ತಿದ್ದೆವು. ಭುವಿ-ಬಾನು ಎಲ್ಲೆಡೆಯೂ ಹಾಲು ಚೆಲ್ಲಿದಂತಹ ಅನುಭವ.

ಒಂದು ದಾರ ಎರಡು ದೇಶಗಳನ್ನು ಬೇರ್ಪಡಿಸಿದೆ ಅಥವಾ ಒಂದು ದಾರ ಎರಡು ದೇಶಗಳನ್ನು ಬೆಸೆದಿದೆ ಎನ್ನುವಂತಹ ನೋಟ. ಏಕೆಂದರೆ ಆ ದಾರದ ಒಂದು ಕಡೆ ಚೀನಾ, ಇನ್ನೊಂದು ಕಡೆ ಭಾರತವಿತ್ತು. ಎರಡೂ ಕಡೆಯ ಯೋಧರು ಗಡಿ ಕಾಯುತ್ತಿದ್ದರು. ಒಂದು ಕಡೆ ಚೀನಾ, ಇನ್ನೊಂದು ಕಡೆ ಭಾರತದ ತ್ರಿವರ್ಣ ಧ್ವಜ. ಆಹಾ ! ನೋಡುವುದಕ್ಕೆ ಎರಡು ಕಣ್ಣು ಸಾಲದು. ಚಳಿಯಲ್ಲೂ ಯೋಧರು ದೇಶ ಕಾಯುತ್ತಿದ್ದರಿಂದಲೇ ನಾವು ನಮ್ಮ ಮನೆಗಳಲ್ಲಿ ಬೆಚ್ಚಗೆ ಮಲಗಲು ಸಾಧ್ಯವಾಗಿದ್ದು ಎನ್ನಿಸಿತು. ಆ ಯೋಧರಿಗೆ ಒಂದು ಸಲಾಂ ಹೇಳಿದೆವು. ಮುಂದಿನ ಪಯಣ ಬಾಬಾ ಮಂದಿರದತ್ತ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.