ಶನಿವಾರ, ಸೆಪ್ಟೆಂಬರ್ 19, 2020
22 °C

ತಲಕಾಡಿನಲ್ಲಿ ಕಂಡ ನಿಸರ್ಗ ಶಿಲ್ಪಗಳು !

ಸ್ವರೂಪಾನಂದ ಎಂ. ಕೊಟ್ಟೂರು Updated:

ಅಕ್ಷರ ಗಾತ್ರ : | |

Prajavani

ದಕ್ಷಿಣ ಕಾಶಿ ಎಂದೇ ಹೆಸರಾಗಿರುವ ಮೈಸೂರು ಜಿಲ್ಲೆಯ ತಲಕಾಡಿಗೆ ಹೋಗಿದ್ದೆ. ವೈದ್ಯನಾಥೇಶ್ವರ ದರ್ಶನ ಪಡೆದು, ಪಕ್ಕದಲ್ಲೇ ಹರಿಯುತ್ತಿದ್ದ ಕಾವೇರಿ ನದಿ ನೀರಲ್ಲಿ ಕೈ ಯಾಡಿಸಿ, ಮರಳು ಗುಡ್ಡದಲ್ಲಿರುವ ಪಾತಳೇಶ್ವರ, ಮರಳೇಶ್ವರ, ಕೀರ್ತಿನಾರಾಯಣ.. ದೇವರ ದರ್ಶನಕ್ಕೆ ಹೊರಟೆ. ಕಣ್ಣು ಹಾಯಿಸಿದಷ್ಟು ದೂರ ಮರಳೇ ಮರಳು. ಹುಮ್ಮಸ್ಸಿನಿಂದ ಮನ ಬಯಸಿದ ಕಡೆ ಹೆಜ್ಜೆ ಹಾಕಿದೆ. ಹಾದಿ ತಪ್ಪಿತು!

ಆಕಸ್ಮಿಕವಾಗಿ ಮುಂದೆ ಇದ್ದ ನೀಲಗಿರಿ ಬುಡದತ್ತ ಕಣ್ಣಾಡಿಸಿದೆ. ಅಚ್ಚರಿ ಎನಿಸುವಂತಹ ಚಿತ್ತಾರ ಗಳು ಕಂಡವು. ಒಂದು ಕ್ಷಣ ದಂಗಾದೆ. ಒಂದು ಮರದ ಬುಡದಲ್ಲಿ ಅನ್ಯಗ್ರಹ ಜೀವಿ ಎಲಿಯನ್ ಹೋಲುವ ಪ್ರತಿಕೃತಿ ಕಂಡಿತು. ಸಾವರಿಸಿಕೊಂಡು ಹತ್ತಿರ ಹೋಗಿ ನೋಡಿದರೆ ನೀಲಗಿರಿ ಬೇರುಗಳಲ್ಲಿ ನೈಸರ್ಗಿಕ ವಾಗಿ ಮೂಡಿದ ಚಿತ್ತಾರವದು. ಫೋಟೊ ಕ್ಲಿಕ್ಕಿಸಿದೆ. ಮತ್ತಷ್ಟು ಬೆರಗು ಹುಟ್ಟಿಸುವ ಪ್ರತಿಕೃತಿಗಳು ಸಿಗಬಹುದೇ? ಎನ್ನುವ ಕುತೂಹಲ. ದೇಗುಲಗಳ ದರ್ಶನ ಉದ್ದೇಶದ ಚೌಕಟ್ಟು ಮುರಿಯಿತು.

ಅಷ್ಟ ದಿಕ್ಕುಗಳಲ್ಲಿ ಸೂಕ್ಷ್ಮವಾಗಿ ದೃಷ್ಟಿ ನೆಡುತ್ತಾ ಹೊರಟೆ. ಪ್ರತಿ ಮರಗಿಡಗಳನ್ನು ಅಧ್ಯಾಯನಕಾರನಂತೆ ಗಮನಿಸಿದೆ. ದಣಿವರಿ ಯದ ಓಡಾಟ, ಎಡಬಿಡದ ಹುಡುಕಾಟ ನಿರಾಸೆ ಆಗಲಿಲ್ಲ. ಮುಗಿಲು ಚುಂಬಿಸುವ, ಒಣಗಿ ನಿಂತ, ಮಳೆ-ಗಾಳಿಗೆ ಸಿಕ್ಕು ಬಾಗಿದ, ನೆಲಕಚ್ಚಿದ, ನೆಲದಲ್ಲಿ ಹರಡಿದಂತೆ... ಹೀಗೆ ಬಹುತೇಕ ಮರ-ಗಿಡಗಳಲ್ಲಿ ವಿವಿಧ ಪ್ರಾಣಿಗಳ ಪ್ರತಿಕೃತಿಗಳು ಕಂಡವು.

ಹಸಿರ ಮರೆಯಲಿ ಮಲಗಿರುವ ಹೆಬ್ಬಾವು; ಕಡವೆಯ ಮುಖ; ಗೂಬೆಯ ಮುಖ ಮತ್ತು ಅದರ ಸುತ್ತಾ ಚಿಕ್ಕ-ಚಿಕ್ಕ ಮಾನವನ ತಲೆ ಬುರುಡೆಗಳು; ಬೋರಲು ಮಲಗಿದ ವ್ಯಕ್ತಿಯ ತಲೆ; ಚಿಂಪಾಜಿ ಬಾಯಿ; ಆನೆಯ ಸೊಂಡಿಲು; ಗಣೇಶ; ಬಾಯ್ದೆರೆದ ಹಾವು, ಆನೆಯ ಕಣ್ಣು/ಮೀನು, ಮನುಷ್ಯನ ಮುಂಡ ಮತ್ತು ಕಾಲು; ನಿದ್ರಿಸುತ್ತಿರುವ ಮುಸುಳೆ; ಕಾಡಿನ ರಾಜ ಸಿಂಹದ ದೇಹಭಾಗ... ಹೀಗೆ ಎಷ್ಟೊಂದು ಪ್ರತಿಕೃತಿಗಳು!

ಇನ್ನು ನೀಲಗಿರಿ ಮರದ ಕಾಂಡದಲ್ಲಿ ವಾಟರ್ ಪೇಟಿಂಗ್‌, ಬೇರುಗಳಲ್ಲಿ ಬಗೆಬಗೆಯ ಆಕೃತಿಗಳು.. ವೈವಿಧ್ಯಮಯ ಪ್ರಕೃತಿ ಕಟೆದ ಚಿತ್ರಪಟಗಳದ್ದೇ ದರ್ಶನ.

ಬೆದಕಿಸಿದಷ್ಟೂ ಕಣ್ಣಿಗೆ ಬೀಳಲಿದ್ದು, ನಾವು ಊಹಿಸಿದಂತೆ, ಅರ್ಥೈಸಿಕೊಂಡಂತೆ ಕಲಾ ಪ್ರಪಂಚ ತೆರೆದುಕೊಳ್ಳುತ್ತೆ. ಒಂದನ್ನೇ ವಿವಿಧ ಕೋನದಲ್ಲಿ ನೋಡಿದರೆ ಬೇರೆ-ಬೇರೆ ಪ್ರತಿಕೃತಿಗಳು ಕಂಡಿದ್ದು ವಿಶೇಷ.

ಸುಂದರ ದೃಶ್ಯ ಕಾವ್ಯಗಳು ಸಿಗುತ್ತವೆ

ಸುಮಾರು 186 ಹೆಕ್ಟೇರ್‌ನಲ್ಲಿ ತಲಕಾಡು ಮರಳು ಗುಡ್ಡ ಅರಣ್ಯ ಪ್ರದೇಶವಿದೆ!. ಇದಕ್ಕೆ ನೀಲಗಿರಿ ಕಾಯ್ದಿಟ್ಟ ಅರಣ್ಯ ಪ್ರದೇಶ, ಕಾವೇರಿ ನಿಸರ್ಗಧಾಮ ಎಂತಲೂ ಕರೆಯಲಾಗುತ್ತೆ. ಇಲ್ಲಿ ನೀಲಗಿರಿ ಮರಗಳೇ ಹೆಚ್ಚಾಗಿವೆ. ದೇಗುಲಗಳ ದರ್ಶನಕ್ಕೆ ಸುಮಾರು 2-3 ಕಿ.ಮೀ ಮರಳಿನಲ್ಲೇ ನಿಗದಿತ ದಾರಿಯಲ್ಲಿ ಹೋಗಬೇಕು. ದಾರಿ ಇಕ್ಕೆಲಗಳಲ್ಲಿ ಸೂಕ್ಷ್ಮವಾಗಿ ಕಣ್ಣಾಡಿಸಿದರೆ ಪ್ರಕೃತಿ ಸೃಷ್ಟಿಸಿದ ಪ್ರಾಣಿ ಪ್ರಪಂಚದ ಪ್ರತಿಕೃತಿಗಳು ಕಣ್ಣಿಗೆ ಬೀಳುತ್ತವೆ. ಸ್ವಲ್ಪ ದಾರಿ ಬಿಟ್ಟು ಕಾಡಿನೊಳಗೆ ನಡೆದರೆ ಸಾಕಷ್ಟು ನಿಸರ್ಗ ಸುಂದರ ದೃಶ್ಯ ಕಾವ್ಯಗಳು ಸಿಗುತ್ತವೆ!.

ಒಟ್ಟಿನಲ್ಲಿ ತಲಕಾಡು ಪೌರಾಣಿಕ, ಐತಿಹಾಸಿಕ, ಜಾನಪದ, ಸಾಂಸ್ಕೃತಿಕ ಮತ್ತು ಧಾರ್ಮಿಕ ಹಿನ್ನಲೆ ಜತೆಗೆ ಪ್ರಾಕೃತಿಕ ವಿಸ್ಮಯ ತಾಣವೂ ಆಗಿದೆ. ಆದರೆ ಅದನ್ನು ಆಸ್ವಾದಿಸಲು ಸಂಯಮ ಮತ್ತು ಸಮಯ ಇರಬೇಕಷ್ಟೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು