ಶುಕ್ರವಾರ, ಜೂನ್ 5, 2020
27 °C
₹ 3.5 ಕೋಟಿ ನಿರ್ಮಾಣ ವೆಚ್ಚ: ಹೆಚ್ಚುವರಿ ಕಾಮಗಾರಿಗೆ ಹಣಬಿಡುಗಡೆಯಾದರೂ ನಿಧಾನಗತಿ ಕೆಲಸ

ರಂಗಮಂದಿರದಲ್ಲಿ ಪ್ರದರ್ಶನ ಕಾಣುವುದೆಂದು?

ರವಿ ಎನ್‌. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಹಲವು ಜನಪದ ಕಲೆಗಳ ತವರೂರು ಆಗಿರುವ ಚಾಮರಾಜನಗರ ಜಿಲ್ಲೆಗೆ ಇನ್ನೂ ಸುಸಜ್ಜಿತ ರಂಗಮಂದಿರದ ಭಾಗ್ಯ ಸಿಕ್ಕಿಲ್ಲ. 

ಚಾಮರಾಜನಗರದಲ್ಲಿ ಜಿಲ್ಲಾಡಳಿತ ಭವನದ ಸಮೀಪವೇ ಕಾಣಲು ಅದ್ಧೂರಿಯಾದ ರಂಗಮಂದಿರದ ಕಟ್ಟಡ‌ ಎದ್ದು ನಿಂತಿದೆಯಾದರೂ ಎಂಟು ವರ್ಷಗಳಿಂದ ಮುಚ್ಚಿದ ಸ್ಥಿತಿಯಲ್ಲೇ ಇದೆ. ವಿವಿಧ ಕಲೆಗಳ ಕಲಾವಿದರ ಪ್ರೌಢಿಮೆಯನ್ನು ಜಗತ್ತಿನ ಮುಂದೆ ಇಡಬೇಕಾಗಿದ್ದ ರಂಗಮಂದಿರ ಇನ್ನೂ ಉದ್ಘಾಟನೆಗೊಳ್ಳದಿರುವುದು ಜಿಲ್ಲೆಯ ಕಲಾವಿದರಲ್ಲಿ, ಕಲಾಸಕ್ತರಲ್ಲಿ ಬೇಸರ ಮೂಡಿಸಿದೆ.  

‘ಜಿಲ್ಲಾ ಕೇಂದ್ರದಲ್ಲಿ ನಾಟಕಗಳ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಸಭಾಂಗಣದ ವ್ಯವಸ್ಥೆ ಇಲ್ಲ. ಆಧುನಿಕ ತಂತ್ರಜ್ಞಾನ ವ್ಯವಸ್ಥೆಯುಳ್ಳ ರಂಗಮಂದಿರವೂ ಇಲ್ಲ. ಆದ್ದರಿಂದ ಇಲ್ಲಿ ಸುಸಜ್ಜಿತ ರಂಗಮಂದಿರ ನಿರ್ಮಾಣವಾಗಬೇಕು’ ಎನ್ನುವುದು ಕಲಾವಿದರು, ನಾಗರಿಕರ ಬಹುದಿನಗಳ ಒತ್ತಾಯವಾಗಿತ್ತು. ಆದರೆ ಅದಕ್ಕೆ ಇನ್ನೂ ಮುಹೂರ್ತ ಕೂಡಿ ಬಂದಿಲ್ಲ. 

₹ 3.5 ಕೋಟಿ ವೆಚ್ಚ: ಕಲಾವಿದರ ಒತ್ತಾಯಕ್ಕೆ ಮಣಿದ ರಾಜ್ಯ ಸರ್ಕಾರ 2009–10ನೇ ಸಾಲಿನಲ್ಲಿ ರಂಗಮಂದಿರ ನಿರ್ಮಾಣಕ್ಕೆ ಅನುಮೋದನೆ ನೀಡಿತ್ತು. ಜಿಲ್ಲಾಡಳಿತ ಭವನದ ಸಮೀಪ ಒಂದು ಎಕರೆ 20 ಗುಂಟೆ ಪ್ರದೇಶದಲ್ಲಿ ₹ 3.5 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಸ್ತುವಾರಿಯಲ್ಲಿ ಲೋಕೋಪಯೋಗಿ ಇಲಾಖೆ ಇದನ್ನು ನಿರ್ಮಿಸಿದೆ.

ಆದರೆ, ಒಳಾಂಗಣದಲ್ಲಿ ಸ್ಥಳಾವಕಾಶ ಕಡಿಮೆ ಇದೆ ಹಾಗೂ ರಂಗಮಂದಿರದ ರೀತಿಯಲ್ಲಿ ನಿರ್ಮಿಸಲಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಮಹದೇವ ಪ್ರಸಾದ್‌ ಅವರು ಮತ್ತೆ ಕೆಲವು ಕಾಮಗಾರಿ ನಡೆಸಲು ಸೂಚಿಸಿದ್ದರು.  

ಆ ಬಳಿಕ ಸಚಿವರ ಉಳಿದ ಕೆಲಸಗಳನ್ನು ಮಾಡಲು ಹೆಚ್ಚುವರಿ ಅನುದಾನಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಸರ್ಕಾರ ₹2.3 ಕೋಟಿ ಬಿಡುಗಡೆಯನ್ನೂ ಮಾಡಿದೆ. ಆದರೆ, ಎಲ್ಲ ಕೆಲಸಗಳು ಇನ್ನೂ ಆರಂಭವಾಗಿಲ್ಲ. ರಂಗ ಮಂದಿರದ ಆವರಣದಲ್ಲಿ ವಿವಿಧ ಕಾಮಗಾರಿಗಳನ್ನು ಲೋಕೋಪಯೋಗಿ ಇಲಾಖೆ ಕೈಗೆತ್ತಿಕೊಂಡಿದೆಯಾದರೂ ಮಂದಗತಿಯಲ್ಲಿ ನಡೆಯುತ್ತಿದೆ.

ಒಳಾಂಗಣದ ಕೆಲಸ ಆರಂಭ ಮಾಡಿಲ್ಲ: ಈ ಸಂಬಂಧ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎಚ್.ಚೆನ್ನಪ್ಪ ಅವರು, ‘ರಂಗಮಂದಿರ ಕಾಮಗಾರಿಗೆ ಪೂರಕವಾಗಿ ₹ 1.25 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿ ಆರಂಭವಾಗಿದೆ. ಚರಂಡಿ, ಕಾಂಪೌಂಡ್, ವಾಹನ ನಿಲುಗಡೆ ಪ್ರದೇಶ ನಿರ್ಮಾಣ ಕೆಲಸ ನಡೆಯುತ್ತಿದೆ. ಇದಕ್ಕಾಗಿ ಲೋಕೋಪಯೋಗಿ ಇಲಾಖೆ ಟೆಂಡರ್‌ ಕರೆದಿದೆ. ಒಳಾಂಗಣ ಕಾಮಗಾರಿ ಆರಂಭ ಮಾಡಿಲ್ಲ’ ಎಂದರು.

ಅನುಮೋದನೆ ನೀಡಿಲ್ಲ: ‘ಸರ್ಕಾರಕ್ಕೆ ಹೆಚ್ಚುವರಿ ಕಾಮಗಾರಿಯ ಕ್ರಿಯಾಯೋಜನೆ ಸಿದ್ದಪಡಿಸಿ ಸಲ್ಲಿಸಲಾಗಿದೆ. ಆದರೆ, ಪ್ರಸ್ತಾವಕ್ಕೆ ರಾಜ್ಯ ಸರ್ಕಾರದಿಂದ ಇನ್ನೂ ಅನುಮೋದನೆ ನೀಡಿಲ್ಲ. ಆದ್ದರಿಂದ, ಒಳಾಂಗಣ ಕಾಮಗಾರಿ ಆರಂಭವಾಗಿಲ್ಲ’ ಎಂದು ಅವರು ಹೇಳಿದರು.

ಸದ್ಯ ರಂಗಮಂದಿರವು 450 ಆಸನಗಳ ವ್ಯವಸ್ಥೆಯನ್ನು ಹೊಂದಿದೆ. ಇದನ್ನು 500ಕ್ಕೆ ಹೆಚ್ಚಿಸಲು ಯೋಜನೆ ರೂಪಿಸಲಾಗಿದೆ. ಸುಸಜ್ಜಿತ ಧ್ವನಿವರ್ಧಕ, ಬೆಳಕಿನ ವ್ಯವಸ್ಥೆಗಳನ್ನು ಮಾಡಬೇಕಾಗಿದೆ.  

ಜೆ.ಎಚ್‌.ಪಟೇಲ್‌ ಸಭಾಂಗಣವೇ ದಿಕ್ಕು: ಜಿಲ್ಲಾ ಕೇಂದ್ರದಲ್ಲಿ ಸದ್ಯಕ್ಕೆ ಜಿಲ್ಲಾಡಳಿತ ಭವನದ ಆವರಣದಲ್ಲೇ ಇರುವ ಜೆ.ಎಚ್‌.ಪಟೇಲ್‌ ಸಭಾಂಗಣದಲ್ಲಿ ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಆದರೆ, ರಂಗಮಂದಿರದ ರೀತಿಯ ವ್ಯವಸ್ಥೆ ಅಲ್ಲಿಲ್ಲ. ಸುಸಜ್ಜಿತ ಧ್ವನಿವರ್ಧಕ, ಬೆಳಕಿನ ವ್ಯವಸ್ಥೆ ಇಲ್ಲ. ಸಭಾಂಗಣದ ವೇದಿಕೆ ತುಂಬಾ ಕಿರಿದು. ನಾಟಕ, ನೃತ್ಯ ಪ್ರದರ್ಶನ ನೀಡಲು ಕಲಾವಿದರು, ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಹಾಗಾಗಿ, ರಂಗ ಮಂದಿರ ಆದಷ್ಟು ಬೇಗ ಬಳಕೆಗೆ ಮುಕ್ತವಾಗಬೇಕು ಎಂಬುದು ಕಲಾವಿದರ ಹಾಗೂ ಜನರ ಒತ್ತಾಯ.

‘ಕಲಾವಿದರಿಗೆ ಆತ್ಮಸ್ಥೈರ್ಯ ತುಂಬಲಿದೆ’
‘ರಂಗಮಂದಿರ ಲೋಕಾರ್ಪಣೆಗೊಂಡರೆ ಜಿಲ್ಲೆಯ ಕಲಾವಿದರಿಗೆ ಆತ್ಮಸ್ಥೈರ್ಯ ಬರಲಿದೆ. ‌ಪ್ರಸ್ತುತ ನಾವು ಬೇರೆ ಕಡೆ ವೇದಿಕೆಗಾಗಿ ಬೇಡುವಂತಹ ಸ್ಥಿತಿಯಲ್ಲಿದ್ದೇವೆ. ಸುಸಜ್ಜಿತ ಆವರಣದಲ್ಲಿ ನಾಟಕ ಹಾಗೂ ಇನ್ನಿತರ ಚಟುವಟಿಕೆ ಕೈಗೊಳ್ಳಲು ಆಗುತ್ತಿಲ್ಲ. ಆರ್ಥಿಕ ಹೊರೆ ಹೆಚ್ಚುತ್ತಿದೆ. ನಾಟಕ, ಶಿಬಿರ, ಕಾರ್ಯಾಗಾರಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ. ಕಲಾವಿದರಿಗೆ ನಿರಾಸೆಯಾಗಿದೆ. ಶೀಘ್ರವೇ ರಂಗಮಂದಿರ ಬಳಕೆಗೆ ಇಲಾಖೆ ಹಾಗೂ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಶಾಂತಲಾ ಕಲಾವಿದರು ತಂಡದ ಸಂಚಾಲಕಿ ವಿ.ಚಿತ್ರಾ ಅವರು ಒತ್ತಾಯಿಸಿದರು.

ಜಾಗ ಒತ್ತುವರಿ ಆರೋಪ
ಈ ಮಧ್ಯೆ, ರಂಗಮಂದಿರ ಕಟ್ಟಡದ ಆವರಣದಲ್ಲಿ ಖಾಸಗಿಯವರ ಜಾಗವನ್ನು ಒತ್ತುವರಿ ಮಾಡಿಕೊಂಡು ಲೋಕೋಪಯೋಗಿ ಇಲಾಖೆ ಕಾಂಪೌಂಡ್‌ ನಿರ್ಮಿಸುತ್ತಿದೆ ಎಂದು ಕೆಲವರು ಆರೋಪಿಸಿದ್ದಾರೆ.

‘ರಂಗಮಂದಿರ ಬಳಿಯ ನನ್ನ 30X40 ಅಳತೆಯ ನಿವೇಶನವನ್ನು ಲೋಕೋಪಯೋಗಿ ಇಲಾಖೆಯವರು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ನಗರಸಭಾ ಆಯುಕ್ತರು ಹಾಗೂ ಇಲಾಖೆಗೆ ದೂರು ನೀಡಿದ್ದೆವು. ಆದರೆ, ಪ್ರಯೋಜನವಾಗಿಲ್ಲ’ ಎಂದು ಧರ್ಮೇಶ್‌ ಜೈನ್‌ ಎಂಬುವವರು ‘ಪ್ರಜಾವಾಣಿ’ಗೆ ತಿಳಿಸಿದರು.

ದಾಖಲಾತಿ ನೀಡಿದರೆ ಕ್ರಮ: ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ನಗರಸಭೆ ಆಯುಕ್ತ ಎನ್‌.ರಾಜಣ್ಣ, ‘ಖಾಸಗಿ ಜಾಗ ಒತ್ತುವರಿ ವಿಚಾರವಾಗಿ ಮಾಲೀಕರು ಸೂಕ್ತ ದಾಖಲಾತಿ ನೀಡಿದಾಗ ಅದನ್ನು ಪರಿಶೀಲಿಸಿ ಕ್ರಮಕೈಗೊಳ್ಳುತ್ತೇವೆ. ಪ್ರಸ್ತುತ ಇಬ್ಬರು ನೀಡಿರುವ ದಾಖಲೆ ತಾಳೆ ಬರುತ್ತಿಲ್ಲ. ಚೆಕ್‌ಬಂದಿ ಸರಿಯಾಗಿಲ್ಲ. ಸರ್ಕಾರಿ ಜಾಗದಲ್ಲೇ ಕಾಮಗಾರಿ ನಡೆಯುತ್ತಿದೆ’ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು