ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಲಾವಣೆ ಬೇಕು, ಆದರೆ ಅದು ಸುಲಭ ಅಲ್ಲ...

Last Updated 7 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

ದೆಹಲಿಯಲ್ಲಿ ಆಮ್‌ ಆದ್ಮಿ ಪಕ್ಷ ಜಯ ಗಳಿಸಿದ ನಂತರ ದೇಶದ ಇತರ ಭಾಗಗಳಲ್ಲಿಯೂ ಅಂತಹ ಪ್ರಯೋಗ ನಡೆಯ­ಬೇಕು ಎಂದು ಬಯಸುವುದು ಸಹಜ. ವಿದ್ಯಾವಂತರು, ಬುದ್ಧಿಜೀವಿಗಳು ಮುಂದಾಗಿ ಎಲ್ಲ ಕಡೆ ಅಂತಹ ಬದಲಾವಣೆ­ಯನ್ನು ತರಬೇಕು ಎನ್ನು­ವುದೂ ದೇಶದ ಭವಿಷ್ಯದ ದೃಷ್ಟಿ­ಯಿಂದ ಒಳ್ಳೆಯದು. ನಮ್ಮ ಕಾಲದಲ್ಲಿ ಅಲ್ಲ; ನಮ್ಮ ಮೊಮ್ಮಕ್ಕಳ ಕಾಲದಲ್ಲಿಯಾದರೂ ಅಂತಹ ಬದಲಾ­ವಣೆ ಬರಲಿ ಎಂದು ನಾನು ಬಯಸುತ್ತೇನೆ.

ಆದರೆ, ಈಗ ತಕ್ಷಣಕ್ಕೆ ಯಾವುದೇ ಬದಲಾವಣೆಯ ಸೂಚನೆ ನನಗಂತೂ ಕಾಣುತ್ತಿಲ್ಲ. ಎಎಪಿ ಗೆಲುವು ಇತರ ಸಾಂಪ್ರದಾಯಿಕ ಪಕ್ಷಗಳ ಮೇಲೆ ಯಾವುದೇ ಪರಿ­ಣಾಮವನ್ನೂ ಬೀರಿಲ್ಲ. ಸಾಂಪ್ರ­ದಾಯಿಕ ಪಕ್ಷಗಳು ತಮ್ಮ ನಿಲುವು, ಕಾರ್ಯವೈಖರಿ, ಚುನಾವಣಾ ತಂತ್ರಗಳನ್ನು  ಬದ­ಲಾ­ಯಿಸಿಕೊಂಡಿಲ್ಲ. ಇದಕ್ಕೆ ಉತ್ತಮ ಉದಾ­ಹರಣೆ ಎಂದರೆ ಈಗ ಲೋಕಸಭಾ ಚುನಾವಣೆಗಾಗಿ ಎಲ್ಲ ಪಕ್ಷಗಳು ನಡೆಸಿ­ರುವ ಗೆಲ್ಲುವ ಅಭ್ಯರ್ಥಿಗಳ ಹುಡುಕಾಟ. ಗೆಲ್ಲುವ ಅಭ್ಯರ್ಥಿ­ಗಳು ಎಂದರೆ ಯಾರು? ಮತ್ತೆ ಅದೇ ಜಾತಿ, ಹಣ, ತೋಳ್ಬಲ ಇರುವವರೇ ತಾನೆ? ಅಭ್ಯರ್ಥಿಗಳ ಹುಡುಕಾಟಕ್ಕೆ ನಡೆಸಿರುವ ಪ್ರಯತ್ನ ನೋಡಿದರೆ ಏನಾದರೂ ಬದಲಾವಣೆಯಾಗಿದೆ ಎನ್ನಿಸುತ್ತದೆಯೇ?

ಆಮ್‌ ಆದ್ಮಿ ಪಕ್ಷ ನಿರೀಕ್ಷೆಗೂ ಮೀರಿ ಗೆಲುವು ಸಾಧಿಸಿದ ನಂತರ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರೊಬ್ಬರು ‘ನಾವೂ ಇಂತಹ ತಂತ್ರಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ಹೇಳಿದ್ದು ಬಿಟ್ಟರೆ ಉಳಿದವರು ಯಾರೂ ಏನೂ ಹೇಳಿಲ್ಲ. ಸಾಂಪ್ರದಾಯಿಕ ಪಕ್ಷಗಳು ಬದಲಾಗಲು ಒಂದು ಹೊಸ ಪೀಳಿಗೆ ಬರಬೇಕು. ಎಎಪಿ ಗೆಲುವು ಸಾಧಿಸಿತು ಎಂದು ಕಾಂಗ್ರೆಸ್‌ನಲ್ಲಿರುವ ಪ್ರಾಮಾಣಿಕರು ಒಂದಾಗಿ ಕಾಂಗ್ರೆಸ್‌–ಬಿ ಅಥವಾ ಕಾಂಗ್ರೆಸ್‌–ಸಿ ಎಂದು ಗುಂಪು ಮಾಡಿಕೊಳ್ಳಲು ಸಾಧ್ಯವೇ? ಹಾಗೆಯೇ ಬಿಜೆಪಿ–ಬಿ ಎಂದು ಮಾಡುತ್ತಾರಾ? ಆಮ್‌ ಆದ್ಮಿ ಪಕ್ಷದ ಗೆಲುವು ಶೇಕಡ 20ರಷ್ಟು ಮತದಾರರಲ್ಲಿ ಜಾಗೃತಿ ಮೂಡಿಸಿದರೆ ಅದೇ ಬಹಳ ದೊಡ್ಡ ಕ್ರಾಂತಿ.

ಅರವಿಂದ ಕೇಜ್ರಿವಾಲ್‌ರನ್ನು ದೆಹಲಿ ಜನ ಗೆಲ್ಲಿಸಿದರು. ಆದರೆ ಇತ್ತೀಚೆಗೆ ಅವರ ನಡೆ ನೋಡಿದರೆ ನನಗೆ ಬೇಸರವಾಗುತ್ತದೆ. ಅಧಿಕಾರ ಇಲ್ಲದಿರುವಾಗ ಏನು ಬೇಕಾದರೂ ಮಾಡಬಹುದು. ಅಧಿಕಾರಕ್ಕೆ ಬಂದಾಗ ಅದಕ್ಕೆ ತಕ್ಕಂತೆ ನಡೆದುಕೊಳ್ಳಬೇಕು. ಏನು ಮಾಡಬೇಕು, ಏನು ಮಾಡಬಾರದು ಎನ್ನುವ ವಿವೇಚನೆ ಇರಬೇಕು. ಧರಣಿ ಸ್ಥಳಕ್ಕೇ ಅಧಿಕಾರಿಗಳನ್ನು ಕರೆಸಿಕೊಂಡು ಸಭೆ ಮಾಡುವುದು, ಕಾರ್‌ನಲ್ಲಿಯೇ ಸಂಪುಟ ಸಭೆ ಮಾಡುವುದು ಇಂತಹ ಚೇಷ್ಟೆಗಳು ಸರಿಯಲ್ಲ. ಇದಕ್ಕೆ ಸರ್ಕಾರ ಎನ್ನಲಾಗದು.

ಮುಖ್ಯಮಂತ್ರಿ ಕೇಜ್ರಿವಾಲ್‌ ಅವರ ಹೋರಾಟವನ್ನು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ, ‘ಜನಪ್ರಿಯ ಅರಾಜಕತೆ’ ಎಂದರು. ಅದು ಸತ್ಯ. ಅವರು ಅರಾಜಕತೆಯನ್ನು ಸೃಷ್ಟಿಸಿ ಜನಪ್ರಿಯರಾಗಲು ಯತ್ನಿಸಿದರು. ಇದನ್ನೆಲ್ಲಾ ಜನ ಎಷ್ಟು ಕಾಲ ಸಹಿಸುತ್ತಾರೆ?

ಶೇ 60ರಷ್ಟು ವಿದ್ಯಾವಂತರೂ ಅಶಿಕ್ಷಿತರಂತೆ ನಡೆದು­ಕೊಳ್ಳು­ತ್ತಾರೆ. ‘ಬೆಟರ್‌ ಲೋಫರ್‌’ ಹುಡುಕುವುದು ಮತದಾರರ ಕೆಲಸ­ವಾಗಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿಯೂ ಪಟಿಂಗರು, ಮಾಫಿಯಾಗಳು ಟಿಕೆಟ್‌ ಪಡೆಯುತ್ತಾರೆ. ನಂದನ್‌ ನಿಲೇಕಣಿ ಕಾಂಗ್ರೆಸ್‌ನಿಂದ ಸ್ಪರ್ಧಿಸಲಿದ್ದಾರೆ ಎನ್ನುವುದು ಸರಿ. ಅವರು ಸ್ವತಂತ್ರ­ವಾಗಿ ನಿಂತರೆ ಏನಾಗಬಹುದು. ಪಟ್ಟಣ ಪ್ರದೇಶ­ಗಳಲ್ಲಿ ಸ್ವಲ್ಪ ಮತ ಬರಬಹುದು. ಗ್ರಾಮೀಣ ಪ್ರದೇಶದಲ್ಲಿ ಆಗಲ್ಲ. ಕ್ಯಾಪ್ಟನ್‌ ಗೋಪಿನಾಥ್‌ ಚುನಾವಣೆಗೆ ಸ್ಪರ್ಧಿಸಿದರಲ್ಲ. ಫಲಿತಾಂಶ ಏನಾಯಿತು? ಈಗ ಅಣ್ಣಾ ಹಜಾರೆ ಚುನಾವಣೆಗೆ ನಿಂತರೂ ಗೆಲ್ಲುವುದಿಲ್ಲ.

ನನಗೂ ಲೋಕಸಭಾ ಚುನಾವಣೆಗೆ ನಿಲ್ಲುವಂತೆ ಕೆಲವರು ಒತ್ತಾಯಿಸುತ್ತಿದ್ದಾರೆ. ಆದರೆ ನಾನು ಚುನಾವಣೆಗೆ ಸ್ಪರ್ಧಿಸಿ ಗೆಲ್ಲಲು ಸಾಧ್ಯವೇ? ಈಗಿನ ಚುನಾವಣೆಗೆ ಬೇಕಾಗಿರುವ ಹಣ, ಜಾತಿ, ತೋಳ್ಬಲ ಯಾವುದೂ ನನ್ನ ಬಳಿ ಇಲ್ಲ. ಇದೆಲ್ಲ ಇದ್ದವನೇ ಗೆಲ್ಲುತ್ತಾನೆ. ಅದೇ ನಮ್ಮ ಸಂಪ್ರದಾಯ ತಾನೆ.

ಯಾರೋ ಎಲ್ಲಿಯೋ ಗೆದ್ದರು ಎಂದು ಇಡೀ ದೇಶದಲ್ಲಿ ಬದಲಾವಣೆಯಾಗುವುದಿಲ್ಲ. ಇಡೀ ವ್ಯವಸ್ಥೆ ಬದಲಾಗಬೇಕು. ವ್ಯವಸ್ಥೆಯೇ ಭ್ರಷ್ಟವಾಗಿದೆ. ಹಾಗಾದರೆ ವ್ಯವಸ್ಥೆ ಎಂದರೆ ಯಾವುದು? ನಾವು–ನೀವು ಸೇರಿದರೆ ತಾನೆ ವ್ಯವಸ್ಥೆ. ನಾವು ಬದಲಾಗಬೇಕಲ್ಲವಾ? ನಾವು ಬದಲಾಗಲು ಸಿದ್ಧವಾಗಿದ್ದೇವಾ? ಚುನಾವಣೆಯಲ್ಲಿ ಶುದ್ಧ, ಪ್ರಾಮಾಣಿಕ ಅಭ್ಯರ್ಥಿಯನ್ನೇ ಆಯ್ಕೆ ಮಾಡುವವರು ಎಷ್ಟಿದ್ದಾರೆ? ತಮ್ಮನ್ನು ‘ಚೆನ್ನಾಗಿ ನೋಡಿಕೊಂಡವರನ್ನು’ ಜನ ಆಯ್ಕೆ ಮಾಡುತ್ತಾರೆ.

ಇನ್ಫೊಸಿಸ್‌ ನಾರಾಯಣ ಮೂರ್ತಿ ಅವರು ಸ್ವತಂತ್ರವಾಗಿ ಚುನಾವಣೆಗೆ ನಿಲ್ಲಲಿ. ನಾನು ಸ್ವಚ್ಛ ಎಂದು ಹೇಳಲಿ. ಎಷ್ಟು ಮತ ಬೀಳುತ್ತದೆಯೋ ನೋಡೋಣ. ವಿದ್ಯಾವಂತರು, ಶ್ರೀಮಂತರೇ ಅವರನ್ನು ಸೋಲಿಸುತ್ತಾರೆ.

ರಾಜ್ಯದಲ್ಲಿ ಅವರನ್ನು ಮನೆಗೆ ಕಳುಹಿಸಬೇಕು, ಇವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಪತ್ರ ಬರೆಯುವ ಎಚ್‌.ಎಸ್‌.ದೊರೆಸ್ವಾಮಿ, ಸಂತೋಷ್‌ ಹೆಗ್ಡೆ ಮತ್ತು ನಾನೂ ಸೇರಿದಂತೆ ನಾವೇ 28 ಅಭ್ಯರ್ಥಿಗಳನ್ನು ನಿಲ್ಲಿಸೋಣ. ರಾಜ್ಯದ ಎಲ್ಲ ಕಡೆ ಸುತ್ತಿ ಪ್ರಚಾರವನ್ನೂ ಮಾಡೋಣ. ಫಲಿತಾಂಶ ಏನಾಗುತ್ತದೆ? ಎಲ್ಲ 28 ಮಂದಿಯೂ ಸೋಲುತ್ತಾರೆ.

ಬದಲಾವಣೆ ಈ ತಲೆಮಾರಿನಲ್ಲಿ ಆಗಿಲ್ಲ. ಮುಂದಿನ ಪೀಳಿಗೆ­ಯನ್ನೂ ಭ್ರಷ್ಟರನ್ನಾಗಿ ಮಾಡಿದ್ದೇವೆ. ಯುವ ರಕ್ತದಲ್ಲಿಯೂ ಭ್ರಷ್ಟಾಚಾರ ತುಂಬಿಕೊಂಡಿದೆ. ಐಎಎಸ್‌, ಐಪಿಎಸ್‌ ಅಧಿಕಾರಿಗಳು ಆರು ತಿಂಗಳಲ್ಲಿ ಭ್ರಷ್ಟರಾಗುತ್ತಾರೆ. ನಮ್ಮಲ್ಲಿ ಇರುವ ಎಷ್ಟು ಐಎಎಸ್‌ ಅಧಿಕಾರಿಗಳು ಭ್ರಷ್ಟರಲ್ಲ?! ಪ್ರಾಮಾಣಿಕರನ್ನು ಬೆರಳೆಣಿಕೆ­ಯಲ್ಲಿ ಹೆಸರಿಸಬಹುದು.

ಆಮ್‌ ಆದ್ಮಿ ಪಕ್ಷ ಹೇಗೆ ಅಧಿಕಾರವನ್ನು ನಿಭಾಯಿಸುತ್ತದೆ ಎನ್ನುವುದು ಮುಖ್ಯ. ಟೀಮ್‌ ಕೂಡ ಹಾಗೆಯೇ ಇರಬೇಕು. ದೆಹಲಿಯ ಮಂತ್ರಿಯೊಬ್ಬರು ಪೊಲೀಸರ ಜೊತೆ ಜಗಳ ಮಾಡಿದ್ದನ್ನೂ ಜನರು ನೋಡಿದ್ದಾರೆ. ನಡವಳಿಕೆ ಬದಲಾಗದಿದ್ದರೆ ಅದಕ್ಕೂ ಉಳಿಗಾಲವಿಲ್ಲ.

ಇಷ್ಟೆಲ್ಲಾ ಹೇಳಿದ ಮೇಲೂ ನಾವು ಆಶಾವಾದಿಗಳಾಗಿರಬೇಕು. ಬದಲಾವಣೆಯಾಗಲೇಬೇಕು. 543 ಸಂಸತ್‌ ಸದಸ್ಯರಲ್ಲಿ ಈ ಸಲ 50 ಜನರಾದರೂ ಉತ್ತಮರು ಬಂದರೆ, ಮುಂದಿನ ಬಾರಿಗೆ ಇದು ನೂರು ಜನರಾದರೆ  ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT