ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ಮಯೋಗಿ ಶಾರದಾಪ್ರಸಾದ್‌.. ಎಚ್.ವೈ. ಶಾರದಾ ಪ್ರಸಾದ್‌ ಜನ್ಮಶತಮಾನೋತ್ಸವ ಲೇಖನ

ಮೂರು ಪ್ರಧಾನ ಮಂತ್ರಿಗಳಿಗೆ ವಾರ್ತಾ ಸಲಹೆಗಾರರಾಗಿದ್ದ ಎಚ್. ವೈ.ಶಾರದಾ ಪ್ರಸಾದ್‌ ಜನ್ಮಶತಮಾನೋತ್ಸವ ವರ್ಷವಿದು
Published 13 ಏಪ್ರಿಲ್ 2024, 20:31 IST
Last Updated 13 ಏಪ್ರಿಲ್ 2024, 20:31 IST
ಅಕ್ಷರ ಗಾತ್ರ

ಮೂರು ಪ್ರಧಾನ ಮಂತ್ರಿಗಳಿಗೆ ವಾರ್ತಾ ಸಲಹೆಗಾರರಾಗಿದ್ದ ಎಚ್. ವೈ.ಶಾರದಾ ಪ್ರಸಾದ್‌ ಜನ್ಮಶತಮಾನೋತ್ಸವ ವರ್ಷವಿದು. ಅವರು ಬಿಟ್ಟುಹೋಗಿರುವ ಅಪ್ರಕಟಿತ ಬರಹಗಳನ್ನು, ಅಸಂಖ್ಯಾತ ಖಾಸಗಿ ಪತ್ರಗಳನ್ನು ಸಂಪಾದಿಸಿ ಕನ್ನಡಿಗರಿಗೆ ಪರಿಚಯಿಸುವ ಜವಾಬ್ದಾರಿ ಅವರ ಕುಟುಂಬದ ಮೇಲಿದೆ.

–––––

ಎಚ್. ವೈ. ಶಾರದಾ ಪ್ರಸಾದ್‌ (15.4.1924–2.9.2008) ಎಂದಕೂಡಲೇ ಎಲ್ಲರಿಗೂ ನೆನಪಾಗುವುದು ಅವರು ಮೂರು ಪ್ರಧಾನ ಮಂತ್ರಿಗಳಿಗೆ ವಾರ್ತಾ ಸಲಹೆಗಾರರಾಗಿದ್ದದ್ದು; ಇಂದಿರಾಗಾಂಧಿಯವರ ಆಪ್ತವಲಯದಲ್ಲಿದ್ದದ್ದು ಎಂಬುದು. ನಿಜ, ಇದು ಅವರ ವ್ಯಕ್ತಿತ್ವದ, ಬದುಕಿನ ಮುಖ್ಯ ಭಾಗ. ಅದರೆ ಪ್ರಸಾದರ ವ್ಯಕ್ತಿತ್ವದ ಆಸಕ್ತಿ ಸಾಧನೆಗಳ ಹರವು ಇನ್ನೂ ವಿಶಾಲವಾದದ್ದು, ವೈವಿಧ್ಯವಾದದ್ದು.

ಹೊಳೆನರಸೀಪುರ ಯೋಗಾನರಸಿಂಹಂ ಶಾರದಾಪ್ರಸಾದರು ಸಾಹಿತ್ಯದ ಆನರ್ಸ್ ಡಿಗ್ರಿ ಪಡೆದದ್ದು ಮೈಸೂರು ಮಹಾರಾಜ ಕಾಲೇಜಿನಲ್ಲಿ. ಕ್ವಿಟ್ ಇಂಡಿಯಾ ಚಳವಳಿ ಸಂದರ್ಭದಲ್ಲಿ ಎರಡು ಸಲ ಸೆರೆಮನೆಯ ವಾಸ, ಚಳವಳಿಯ ಸಕ್ರಿಯ ನಾಯಕತ್ವ. ಆದರೆ ಮುಂದೆಂದೂ ತಾನು ಸ್ವಾತಂತ್ರ್ಯ ಹೋರಾಟಗಾರ ಎಂಬ ಹೆಗ್ಗಳಿಕೆಯನ್ನು ಮುಂದೆ ಮಾಡಲಿಲ್ಲ. ಸೆರೆಮನೆಯ ದಿನಚರಿ ‘A Window On The Wall’ (‘ಅರಿವಿನ ಆಡುಂಬೋಲ’) ಪ್ರಕಟವಾದದ್ದು ಕೂಡ ಅವರು ತೀರಿಕೊಂಡ ಬಳಿಕವೇ. ಅವರ ಸ್ವಾತಂತ್ರ್ಯ ಚಳವಳಿಯ ದೇಶಪ್ರೇಮ, ಆದರ್ಶಪ್ರಿಯತೆ, ಕನಸುಗಾರಿಕೆ, ದೇಶವನ್ನು ಕಟ್ಟುವ ಸಾರ್ವಜನಿಕ ಜವಾಬ್ದಾರಿಯ ನಿರ್ವಹಣೆ ಇವುಗಳಿಂದ ಪ್ರಸಾದರು ಎಂದೂ ವಿಮುಖರಾಗಲಿಲ್ಲ. ಕರ್ನಾಟಕದ ಅವರ ಬಹುತೇಕ ಸಾಂಸ್ಕೃತಿಕ ಒಡನಾಡಿಗಳು ಕಾಂಗ್ರೆಸ್ ಮತ್ತು ನೆಹರೂರವರ ಕಡುವಿರೋಧಿಗಳಾಗಿದ್ದರು. ಅಂಥ ದಿನಗಳಲ್ಲೂ ಶಾರದಾಪ್ರಸಾದರು ಮಾತ್ರ, ತನ್ನ ತಲೆಮಾರಿನ ದೃಷ್ಟಿಕೋನವನ್ನೂ ಕನಸುಗಾರಿಕೆಯನ್ನೂ ಪ್ರಭಾವಿಸಿದ್ದು ನೆಹರೂ ಅವರ ಕೃತಿಗಳು, ಅವರ ವೈಜ್ಞಾನಿಕ ಮನೋಧರ್ಮ ಎಂಬುದನ್ನು ಪ್ರಸ್ತಾಪಿಸುತ್ತಲೇ ಇದ್ದರು. ಸಾರ್ವಜನಿಕ ಅಡಳಿತದ ಜವಾಬ್ದಾರಿಯುತ ನಿರ್ವಹಣೆಯಿಂದಲೂ ದೇಶ ಕಟ್ಟುವ ಕಡೆಗೆ ಗಮನ ಕೊಡುವುದು ಮುಖ್ಯ ಎನ್ನುವುದು ಅವರೇ ಕಾರಣವಾಗಿ ಸ್ಥಾಪಿತವಾದ ‘Indian Institute of Mass Communications’, ‘National Institute of Design’ನಂತಹ ಸಂಸ್ಥೆಗಳ ಮಹತ್ವದಿಂದಲೂ ತಿಳಿಯುತ್ತದೆ. ಪಂಚವಾರ್ಷಿಕ ಯೋಜನೆಗಳ ಯುಗ ಪ್ರಾರಂಭವಾದಾಗ ಹೊರಬಂದ ‘ಯೋಜನಾ’ ಪತ್ರಿಕೆಯ ದೀರ್ಘಕಾಲದ ಸಂಪಾದಕರು ಕೂಡ ಆಗಿದ್ದರು.

ಇಂಡಿಯನ್ ಎಕ್ಸ್‌ಪ್ರೆಸ್‌ ಪತ್ರಿಕೆಯಲ್ಲಿ ಬಹುಬೇಗ ಸಹಾಯಕ ಸಂಪಾದಕರಾದರೂ ಪ್ರಧಾನ ಮಂತ್ರಿಗಳ ವಾರ್ತಾ ಸಲಹೆಗಾರರಾಗಿಯೇ ವೃತ್ತಿಜೀವನದ ಬಹುಭಾಗವನ್ನು ಕಳೆದರು. ಇದು ಕೇಂದ್ರ ಸರ್ಕಾರದ ಕಾರ್ಯದರ್ಶಿಯ ಸ್ತರದ ಹುದ್ದೆ. ಅವರು ನಿವೃತ್ತಿಯ ವಯಸ್ಸನ್ನು ದಾಟಿದ ನಂತರವೂ ಆರು ಸಲ ಸೇವಾವಧಿಯ ವಿಸ್ತರಣೆ ಪಡೆದಿದ್ದರು. ತಮ್ಮ ನಿಸ್ಪೃಹತೆ, ಬದ್ಧತೆ, ವೃತ್ತಿಪರತೆ, ವೈಯಕ್ತಿಕ ನಿಷ್ಠೆಯಿಂದ ಪ್ರಧಾನಿಗೆ ಆಪ್ತವಾಗಿದ್ದರು. ಪ್ರಧಾನಿಗೆ ತಾನು ಕೇವಲ ವಾರ್ತಾ ಸಲಹೆಗಾರನೇ ಹೊರತು ರಾಜಕೀಯ, ಅರ್ಥಿಕ, ಕಾನೂನು ಸಲಹೆಗಾರನಲ್ಲ ಎಂದೇ ಅವರೇ ಬರೆದುಕೊಂಡಿದ್ದಾರೆ. ‘ಪ್ರಧಾನ ಮಂತ್ರಿಗೆ ಅತ್ಯುತ್ತಮ ಸಲಹೆಗಾರನೆಂದರೆ ಪ್ರಧಾನ ಮಂತ್ರಿಯೇ ಆಗಿರುತ್ತಾನೆ. ಆದರೆ ಅನೇಕ ಸಲಹೆಗಾರರ ಮೂಲಕ ತನಗೆ ತಾನೇ ಸಲಹೆ ಕೊಟ್ಟುಕೊಳ್ಳುತ್ತಿರುತ್ತಾನೆ. (Prime Minister advises himself through others). ಅಲ್ಲದೆ, ಪ್ರಧಾನ ಮಂತ್ರಿಗೆ ಸಲಹೆಗಾರರಿಗಿಲ್ಲದ ಜನಸಂಪರ್ಕದ ಮೂಲಗಳಿಂದ ಕೂಡ ಮಾಹಿತಿ-ಒಳನೋಟಗಳು ದಕ್ಕುತ್ತಿರುತ್ತವೆ. ಈ ಅರಿವಿನ ಜೊತೆಗೆ ಪ್ರಧಾನ ಮಂತ್ರಿಗೆ ಚಾರಿತ್ರಿಕ ವ್ಯಕ್ತಿತ್ವ-ಪಾತ್ರವಿರುತ್ತದೆ; ಆದರೆ ಅವರ ಹತ್ತಿರವಿರುವ ಸಲಹೆಗಾರನಿಗೆ ಆ ರೀತಿಯ ಪಾತ್ರವಿರುವುದಿಲ್ಲ. ಇದನ್ನು ಮರೆತರೆ, ಸ್ವಪ್ರಾಮುಖ್ಯದ ಗೀಳು ಪ್ರಾರಂಭವಾಗುತ್ತದೆ. ನಾನು ಸಮಕಾಲೀನ ಚರಿತ್ರೆಗೆ ಹತ್ತಿರವಿರಬಹುದು: ಆದರೆ ಶಾಲಾ ಬಾಲಕನಂತೆ ಮರದ ಮೇಲೆ ತನ್ನ ಹೆಸರನ್ನು ಕೆತ್ತಿ, ಇತಿಹಾಸದಲ್ಲಿ ಉಳಿಯುವ ಬಾಲಿಶ ಹಂಬಲ ತನಗಿರಲಿಲ್ಲ’ ಎಂದು ತಮಾಷೆ ಮಾಡಿಕೊಂಡಿದ್ದಾರೆ. ಇಂದಿರಾಗಾಂಧಿ ಒಮ್ಮೆ ಅವರನ್ನು ಆನಂದ ಭವನಕ್ಕೆ ಕಳುಹಿಸಿ ಬಹುಕಾಲದಿಂದ ಬೀಗ ಹಾಕಿರುವ ಹಳೆಯ ಬೀರುವಿನಿಂದ ಕೌಟುಂಬಿಕ-ರಾಜಕೀಯ ದಾಖಲೆಗಳನ್ನು ತರಲು ಸೂಚಿಸುತ್ತಾರೆ. ಹಾಗೆ ಹೋದಾಗ, ಆ ದಾಖಲೆಗಳನ್ನು ಕಂಡಾಗ ತನ್ನ ಮನಸ್ಸಿನಲ್ಲಿ ಹಾದುಹೋದ ಭಾವನೆಗಳ ಬಗ್ಗೆ ಬರೆದಿರುವ ಲೇಖನವು ಶಾರದಾಪ್ರಸಾದರ ಅತ್ಯುತ್ತಮ ಬರಹಗಳಲ್ಲೊಂದು. ಸೂಕ್ಷ್ಮತೆ, ಚಾರಿತ್ರಿಕ ಪ್ರಜ್ಞೆ, ವಸ್ತುನಿಷ್ಠತೆ ಎಲ್ಲವೂ ಬೆರೆತ ಲೇಖನವದು.

‘ನಾನು ಬರೆಯದೆ ಹೋಗುವ ಪುಸ್ತಕ’ (‘The Book I Won’t be Writing’) ಎಂಬುದು ಅವರ ಪುಸ್ತಕವೊಂದರ ಶೀರ್ಷಿಕೆ. ನಿವೃತ್ತಿಯ ನಂತರ ಬರೆದ ವ್ಯಾಪಕ ಅಂಕಣ ಬರಹಗಳು ಅವರ ವೈವಿಧ್ಯಮಯ ಆಸಕ್ತಿ, ವಿಶಾಲವಾದ ಓದು ಮತ್ತು ಸಾಹಿತ್ಯಿಕ ಸೂಕ್ಷ್ಮಸಂವೇದನೆಗೆ ದಾಖಲೆಯಾಗಿವೆ. ಕರ್ನಾಟಕ, ಕನ್ನಡ ಸಾಂಸ್ಕೃತಿಕ ಲೋಕದೊಡನೆ ನಿರಂತರ ಕ್ರಿಯಾಶೀಲ ಒಡನಾಟದಿಂದಾಗಿ ಮೂಡಿದ ಪುಸ್ತಕ ‘Exploring Karnataka’ (ಟಿ. ಎಸ್. ಸತ್ಯನ್ ಸಹಲೇಖಕರು). ನೆಹರೂ ಆಯ್ದ ಬರವಣಿಗೆಯ ಸಂಪುಟಗಳನ್ನು ಪ್ರಕಟಿಸಿದ ಸಂಪಾದಕೀಯ ಮಂಡಳಿಯ ಸದಸ್ಯರೂ ಆಗಿದ್ದರು. ಶಿವರಾಮ ಕಾರಂತರ ‘ಕುಡಿಯರ ಕೂಸು’, ‘ಮೈ ಮನಗಳ ಸುಳಿಯಲ್ಲಿ’, ಆರ್.ಕೆ. ನಾರಾಯಣರ ‘Swami and His Friends’ ಕೃತಿಯನ್ನು ಭಾಷಾಂತರಿಸಿದರು. ಅವರ ಅಜ್ಜಿಯನ್ನು ಕುರಿತು ಮೊಮ್ಮಕ್ಕಳೆಲ್ಲ ಸೇರಿ ಬರೆದು, ಪ್ರಸಾದರೇ ಸಂಪಾದಿಸಿದ ಪುಸ್ತಕ ಆ ಕಾಲದ ಕೌಟುಂಬಿಕ ಜೀವನದ ಎಳೆಗಳ ದಾಖಲೆ. ಕನ್ನಡ ಸಾಹಿತ್ಯಿಕ-ಸಾಂಸ್ಕೃತಿಕ ಲೋಕಕ್ಕೆ ಆ ಕಾಲದಲ್ಲಿ ದೊರಕಿದ ರಾಷ್ಟ್ರೀಯ ಪುರಸ್ಕಾರಗಳ ಹಿಂದೆ ಅವರ ಪ್ರಭಾವವೂ ಇತ್ತೆಂದು ಹೇಳುತ್ತಾರೆ. ಶಿವರಾಮ ಕಾರಂತರೊಡನೆ ಅವರು ನಡೆಸಿರುವ ದೀರ್ಘ ಸಂದರ್ಶನವೂ ತುಂಬಾ ಜನಪ್ರಿಯವಾದದ್ದು.

ಇಷ್ಟೆಲ್ಲ ಸೂಕ್ಷ್ಮಸಂವೇದಿಯಾಗಿದ್ದ ಶಾರದಾ ಪ್ರಸಾದರು, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ, ಪತ್ರಿಕಾ ಸ್ವಾತಂತ್ರ್ಯ ಹರಣವಾದಾಗ ಇಂದಿರಾಗಾಂಧಿಯವರ ಹತ್ತಿರ ಹೇಗೆ ಕೆಲಸ ಮಾಡಿದರು ಎಂಬ ಪ್ರಶ್ನೆ ಇದ್ದೇ ಇದೆ. ಈ ಪ್ರಶ್ನೆಯ ಅರಿವು ಅವರಿಗೂ ಇತ್ತು. ತುರ್ತು ಪರಿಸ್ಥಿತಿಯನ್ನು ಅವರು ಬೆಂಬಲಿಸಿಯೂ ಬರೆದಿಲ್ಲ, ವಿರೋಧಿಸಿಯೂ ಬರೆದಿಲ್ಲ. ಇಂದಿರಾ ಅವರು ತುರ್ತು ಪರಿಸ್ಥಿತಿಯನ್ನು ಸಡಿಲಿಸಿ ಚುನಾವಣೆಗಳನ್ನು ಘೋಷಿಸಲು ಕಾರಣವಾದದ್ದು ಮತ್ತು ವಿದೇಶ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದ ತೀಕ್ಷ್ಣ ಟೀಕೆ-ಟಿಪ್ಪಣಿಗಳು, ಅವನ್ನೆಲ್ಲ ಅವರ ಗಮನಕ್ಕೆ ತಮ್ಮ ಕಚೇರಿ ತರುತ್ತಿತ್ತು ಎಂದು ಬರೆದುಕೊಂಡಿದ್ದಾರೆ. ಇಂದಿರಾ ಅವರ ರಾಜಕೀಯ ವಿರೋಧಿಯಾಗಿದ್ದ ಮೊರಾರ್ಜಿ ದೇಸಾಯಿ, ಜಯಪ್ರಕಾಶ ನಾರಾಯಣರಂತಹವರ ವ್ಯಕ್ತಿಚಿತ್ರಗಳನ್ನು ತಮ್ಮ ಅಂಕಣದಲ್ಲಿ ಬರೆದಾಗ, ಇಬ್ಬರನ್ನೂ ನೆಹರೂ ಮನೆತನ-ಇಂದಿರಾಗಾಂಧಿಯ ದೃಷ್ಟಿಕೋನದಿಂದ ವಿಶ್ಲೇಷಿಸಿಲ್ಲ ಎಂಬುದು ಕೂಡ ಮುಖ್ಯ. ಇಂದಿರಾ ಜೊತೆ ದೀರ್ಘಕಾಲ ಕೆಲಸ ಮಾಡಿದರೂ, ನೆಹರೂ ಬರವಣಿಗೆಯ ರೀತಿಯ ಬಗ್ಗೆಯೇ ಅವರಿಗೆ ಅಪಾರವಾದ ಗೌರವ.

ಸರ್ಕಾರಿ ಸೇವೆಯಿಂದ ನಿವೃತ್ತಿಯಾದ ದಿನ ಶಾರದಾಪ್ರಸಾದರು ಆಟೋರಿಕ್ಷಾದಲ್ಲಿ ಮನೆಗೆ ಹೋದರಂತೆ. ಎರಡು ಪುಟ್ಟ ಕೋಣೆಗಳಿದ್ದ ಮನೆಯಲ್ಲಿ ದೆಹಲಿಯಲ್ಲೇ ಅವರು ಕೊನೆಯ ತನಕ ವಾಸವಾಗಿದ್ದರು. ಮುಂದೆ ಅವರಿಗೆ ಪದ್ಮಭೂಷಣ, ರಾಷ್ಟ್ರೀಯ ಏಕತಾ ಪ್ರಶಸ್ತಿ ಬಂದವು. ಕರ್ನಾಟಕ, ಕನ್ನಡದೊಡನೆ ಒಡನಾಡುವ ಬಯಕೆಯಿಂದಾಗಿ ಮತ್ತೆ ಮತ್ತೆ ಕರ್ನಾಟಕದ ಪ್ರವಾಸ ಮಾಡುತ್ತಿದ್ದರು. ಸದ್ಯಕ್ಕೆ ಅವರ ಅಂಕಣ ಬರಹಗಳು ಮತ್ತು ಸಂಕ್ಷಿಪ್ತ ಜೀವನಚರಿತ್ರೆ ಮಾತ್ರ ಕನ್ನಡ ಓದುಗರಿಗೆ ಲಭ್ಯವಾಗಿದೆ. ಅವರು ಬಿಟ್ಟುಹೋಗಿರುವ ಅಪ್ರಕಟಿತ ಬರಹಗಳನ್ನು, ಅಸಂಖ್ಯಾತ ಖಾಸಗಿ ಪತ್ರಗಳನ್ನು ಸಂಪಾದಿಸಿ ಕನ್ನಡಿಗರಿಗೆ ಪರಿಚಯಿಸುವ ಜವಾಬ್ದಾರಿ ಅವರ ಕುಟುಂಬದ ಮುಂದಿನ ತಲೆಮಾರಿನ ಮೇಲಿದೆ. ಜನ್ಮಶತಮಾನೋತ್ಸವದ ಸಂದರ್ಭವು ಅದಕ್ಕೆ ಸೂಕ್ತ ಸಮಯವಾಗಿದೆ.

*****

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT