ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮ್ಮಮ್ಮಾ, ಇಮಾ ಕೈತಿಲ್‌!

Last Updated 17 ನವೆಂಬರ್ 2019, 3:51 IST
ಅಕ್ಷರ ಗಾತ್ರ

ಸಂಪೂರ್ಣವಾಗಿ ಮಹಿಳೆಯರೇ ವಹಿವಾಟು ನಡೆಸುವ ಏಷ್ಯಾದ ಏಕೈಕ ಮಾರುಕಟ್ಟೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ‘ಇಮಾ ಕೈತಿಲ್‌’ ಹಲವು ಅಚ್ಚರಿಗಳ ಆಗರ. ನೋಡಿದಷ್ಟೂ ವೈವಿಧ್ಯ; ಹತ್ತಾರು ಹೆಜ್ಜೆ ಹಾಕುವಷ್ಟರಲ್ಲಿ ಐದಾರು ಪದಾರ್ಥಗಳು! ಮುಕ್ತ ಮಾರುಕಟ್ಟೆ ಪರಿಕಲ್ಪನೆಗೆ ಮಣಿಯದ ಮಣಿಪುರದ ಮಹಿಳೆಯರು ಆರ್‌ಸಿಇಪಿಯಂತಹ ‘ಗುಮ್ಮ’ಗಳಿಗೆ ಎಸೆದ ದೇಸಿ ಸವಾಲ್‌ ಆಗಿಯೂ ಈ ಸಂತೆ ಗಮನ ಸೆಳೆಯುತ್ತದೆ.

ಬೆರಗುಗೊಳಿಸುವ ನೋಟವೆಂದರೆ ಅದೇ ಇರಬೇಕು. ಒಂದು ಕಡೆ ಕಣ್ಣು ಹಾಯಿಸಿದಷ್ಟೂ ದೂರ ಮಹಿಳೆಯರು ಅಚ್ಚುಕಟ್ಟಾಗಿ ಸಾಲಿನಲ್ಲಿ ಕೂತು ತರಹೇವಾರಿ ಪದಾರ್ಥ ಮಾರುತ್ತಿದ್ದರೆ, ಇನ್ನೊಂದು ಕಡೆ ಶಂಖು, ಬಸವನಹುಳು, ತಾವರೆ ಮಾರಾಟ ಮಾಡುವವರು. ಹಿಂದೆ ಹೊರಳಿದರೆ ನಾವೆಂದೂ ನೋಡದಂಥ ಸ್ಥಳೀಯ ಕಂದಮೂಲಗಳನ್ನು ಹಿಡಿದು ‘ತಗೊಳ್ಳಿ’ ಎಂದು ಒತ್ತಾಯಿಸುವವರು... ‘ಆಮೇಲೆ ಖರೀದಿಸುತ್ತೇವೆ’ ಎನ್ನುತ್ತ ಮುಂದೆ ಹೋದರೆ ಚಿಮಟದಲ್ಲಿ ‘ಕಿಂಗ್ ಚಿಲ್ಲಿ’ಯನ್ನು ಬಾಯಿ ಹತ್ತಿರವೇ ತಂದು ‘ಬಹಳ ಸಿಹಿಯಾಗಿದೆ, ತಿಂದು ನೋಡಿ ಬೇಕಿದ್ದರೆ’ ಎಂದು ಜೋಕ್ ಮಾಡುವವರು...

ಸಮಯದ ಪರಿವೆ ಅಥವಾ ಚೌಕಟ್ಟು ಇಲ್ಲದೇ ಇಂಥ ಕಡೆ ಬರಬೇಕು ಅಂತ ಮೊದಲ ಸಲ ಅನಿಸಿದ್ದು ಸುಳ್ಳಲ್ಲ! ನೋಡಿದಷ್ಟೂ ವೈವಿಧ್ಯ; ಹತ್ತು ಹೆಜ್ಜೆಗೆ ಐದಾರು ತರಹದ ಪದಾರ್ಥ. ಈ ಮಾರುಕಟ್ಟೆಯ ಶುರುವಿನಲ್ಲೇ ‘ಜೀವ ವೈವಿಧ್ಯ ಮೇಳ’ ಎಂಬ ಫಲಕ ನೆಟ್ಟರೆ ಸಾಕು; ಜಗತ್ತಿನ ಪರಂಪರೆ ತಾಣಗಳ ಸಾಲಿಗೆ ಮಣಿಪುರದ ಇಂಫಾಲ್‍ನ ‘ಇಮಾ ಕೈತಿಲ್’ ಅನಾಯಾಸವಾಗಿ ಸೇರ್ಪಡೆಯಾದೀತು.

ಮಣಿಪುರಕ್ಕೆ ಹೋದವರು ಈ ಮಾರುಕಟ್ಟೆಗೆ ಭೇಟಿ ನೀಡದೇ ಹೋದರೆ ಮುಕ್ಕಾಲು ಭಾಗ ಪ್ರವಾಸ ವ್ಯರ್ಥವಾದಂತೆ. ಅದರಲ್ಲೂ ಸ್ಥಳೀಯ ಆಹಾರದ ಸೊಗಡು, ಸಾಂಪ್ರದಾಯಿಕ ವೇಷಭೂಷಣ, ಕಲಾಕೃತಿಗಳು, ಕೃಷಿ ವೈವಿಧ್ಯ ವೀಕ್ಷಿಸಬೇಕೆಂದರೆ ಇಂಫಾಲ್‍ನ ‘ಇಮಾ ಕೈತಿಲ್’ಗಿಂತ ಬೇರಾವ ತಾಣವಿದೆ ಹೇಳಿ?

ಸಂಸಾರದ ಹೊಣೆ

ಸಂಪೂರ್ಣವಾಗಿ ಮಹಿಳೆಯರೇ ವಹಿವಾಟು ನಡೆಸುವ ಏಷ್ಯಾದ ಏಕೈಕ ಮಾರುಕಟ್ಟೆ ಎಂಬ ಹೆಗ್ಗಳಿಕೆ ‘ಇಮಾ ಕೈತಿಲ್’ಗೆ ಇದೆ. ಮಣಿಪುರಿ ಭಾಷೆಯಲ್ಲಿ ‘ಇಮಾ’ ಎಂದರೆ ತಾಯಿ; ‘ಕೈತಿಲ್’ ಅಂದರೆ ಮಾರುಕಟ್ಟೆ. ಹೀಗಾಗಿ ಇದಕ್ಕೆ ‘ತಾಯಂದಿರ ಮಾರುಕಟ್ಟೆ’ ಅನ್ನಬಹುದು. ಪ್ರಸ್ತುತ ಇಲ್ಲಿ ವಹಿವಾಟು ನಡೆಸುವವರ ಸಂಖ್ಯೆ ಸುಮಾರು ನಾಲ್ಕು ಸಾವಿರ. ಪುರುಷರು ಇಲ್ಲಿ ಗ್ರಾಹಕರಾಗಿ ಬರಬಹುದೇ ಹೊರತೂ ವ್ಯಾಪಾರ ಮಾಡಲು ನಿಷೇಧ!

ಈ ಮಾರುಕಟ್ಟೆಗೆ ಐದು ಶತಮಾನಗಳ ಇತಿಹಾಸವಿದೆ. ಅಲ್ಲಿಂದ ಈವರೆಗೆ ‘ಇಮಾ ಮಾರ್ಕೆಟ್’ ಸಾಗಿ ಬಂದ ಬಗೆ ಕುತೂಹಲಕರ.

ಹದಿನಾರನೇ ಶತಮಾನದ ಮಧ್ಯಭಾಗದಲ್ಲಿ ಮಣಿಪುರ ಪ್ರಾಂತದ ಅರಸು ‘ಲಾಲಪ್ ಕಬಾ’ ಎಂಬ ಪದ್ಧತಿ ಜಾರಿಗೆ ತಂದಿದ್ದ. ಇದು ಒಂದು ಬಗೆಯಲ್ಲಿ ಗುಲಾಮಿತನದ ವಿಧಾನ. ಮೈತೀ ಸಮುದಾಯದ ಗಂಡಸರನ್ನು ಯುದ್ಧ ಅಥವಾ ಗಡಿಭಾಗವನ್ನು ರಕ್ಷಿಸಲು ದೂರಕ್ಕೆ ಕಳಿಸಲಾಗುತ್ತಿತ್ತು. ಆ ಕುಟುಂಬಗಳ ಹೆಣ್ಣುಮಕ್ಕಳು ಊರಲ್ಲಿಯೇ ಉಳಿದು, ಸಂಸಾರ ಸರಿದೂಗಿಸಬೇಕಿತ್ತು. ನೂಲು ತೆಗೆಯುವುದು, ಹೊಲ- ಗದ್ದೆಗಳಲ್ಲಿ ಕೆಲಸ ಮಾಡುವುದು, ಮಕ್ಕಳನ್ನು ಸಾಕಿ ಸಲಹುವುದು ಅವರ ಪಾಲಿಗೇ ಬರುತ್ತಿತ್ತು. ಜೀವನೋಪಾಯಕ್ಕೆಂದು ನೂಲು ತೆಗೆಯುವುದು, ಬಟ್ಟೆ ಹೊಲಿಯುವುದು, ಸಾಮಗ್ರಿ ತಯಾರಿಕೆ ಯಂಥ ಚಟುವಟಿಕೆಗಳನ್ನು ಅವಲಂಬಿಸಿದ್ದರು. ಈ ಎಲ್ಲ ವಹಿವಾಟಿನ ಕೇಂದ್ರವಾಗಿದ್ದ ತಾಣವು ‘ಇಮಾ ಕೈತಿಲ್’ ರೂಪುಗೊಳ್ಳಲು ಮೂಲ ಕಾರಣವಾಯಿತು.

ಇಂಫಾಲ್‍ನ ವಿಶಾಲ ಜಾಗದಲ್ಲಿ ಕಟ್ಟೆ ಕಟ್ಟಿಕೊಂಡು, ಅದರ ಮೇಲೆ ಪದಾರ್ಥಗಳನ್ನು ಇಟ್ಟುಕೊಂಡು ಚಿಕ್ಕಪುಟ್ಟ ವಹಿವಾಟು ನಡೆಸುತ್ತಿದ್ದ ಮಾರುಕಟ್ಟೆಯು ಶತಮಾನಗಳ ಕಾಲ ಮುಂದುವರಿದುಕೊಂಡು ಬಂದಿತು. 1890ರ ಸುಮಾರಿಗೆ ಬ್ರಿಟಿಷರು ಮಣಿಪುರದ ಮೇಲೆ ನಿಯಂತ್ರಣ ಸಾಧಿಸಿದ ಪರಿಣಾಮವಾಗಿ ಉಂಟಾದ ಬದಲಾವಣೆಗಳಿಂದ ‘ಇಮಾ ಮಾರ್ಕೆಟ್’ ನಲುಗಿತು. ಅದರಲ್ಲೂ ಸ್ಥಳೀಯ ಆಡಳಿತಗಾರನ ಮೂಲಕ ವಹಿವಾಟನ್ನು ತಮ್ಮ ಹಿಡಿತಕ್ಕೆ ತಂದುಕೊಂಡ ಬ್ರಿಟಿಷರು, ಮಣಿಪುರದ ವಿಶೇಷ ಅಕ್ಕಿಯನ್ನು ಬಲವಂತದಿಂದ ಪಡೆದು ಬೇರೆ ದೇಶಗಳಿಗೆ ರಫ್ತು ಮಾಡಲು ಶುರು ಮಾಡಿದರು. ಇದರ ಜತೆ ಸುಂಕ ಹೆಚ್ಚಳದಂಥ ಕಠಿಣ ನಿಯಮಾವಳಿಗಳು ಮಾರುಕಟ್ಟೆಗೆ ಪೆಟ್ಟು ನೀಡಿದವು.

ಒಂದಷ್ಟು ವರ್ಷಗಳ ಕಾಲ ಈ ಕಷ್ಟಗಳನ್ನು ಮೌನವಾಗಿ ಸಹಿಸಿಕೊಂಡ ಮಹಿಳೆಯರು, ಕ್ರಮೇಣ ಪ್ರತಿರೋಧ ತೋರಿಸಲು ಶುರು ಮಾಡಿದರು. ಅದು ಸ್ಫೋಟಗೊಂಡಿದ್ದು 1939ರಲ್ಲಿ. ಪಟ್ಟಣದ ವಿವಿಧೆಡೆ ಬೃಹತ್ ಸಭೆಗಳು, ಪ್ರತಿಭಟನೆಗಳು ನಡೆದವು. ಹೋರಾಟ, ಚಳವಳಿಗಳನ್ನು ಹತ್ತಿಕ್ಕುವುದು ಬ್ರಿಟಿಷರಿಗೆ ಹೊಸದೇನೂ ಅಲ್ಲವಲ್ಲ? ಬಗೆಬಗೆಯ ‘ಅಸ್ತ್ರ’ಗಳನ್ನು ಅವರು ಬಳಸಿದರು. ಆದರೆ, ಕೊನೆಗೂ ಮಹಿಳೆಯರ ಹೋರಾಟಕ್ಕೆ ಬ್ರಿಟಿಷರು ಮಣಿದಿದ್ದು ಇತಿಹಾಸದಲ್ಲಿ ದಾಖಲಾದ ಸಂಗತಿ.

ಭಾರತಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಇಡೀ ಭೂಮಿಕೆ ಬದಲಾಗುತ್ತ ಹೋಯಿತು. ಮಣಿಪುರದ ಮಹಿಳೆಯರ ಆರ್ಥಿಕತೆಗೆ ಚೈತನ್ಯ ನೀಡಲು ‘ಇಮಾ ಮಾರ್ಕೆಟ್’ಗೆ ಹೊಸ ರೂಪು ಕೊಡಲಾಯಿತು. ಬರೀ ವಹಿವಾಟು ಮಾತ್ರವಲ್ಲ; ಸ್ವಾವಲಂಬನೆ ಬದುಕಿನ ಸಂಕೇತವೆನಿಸಿದ ಈ ಮಾರುಕಟ್ಟೆಯು ಹೊಸ ಹೊಸ ಸಾಧ್ಯತೆಗಳನ್ನೂ ತೆರೆದಿಟ್ಟಿತು.

ಉಸ್ತುವಾರಿಗೆ ಸಮಿತಿ

ವಿಶಾಲ ಜಾಗದ ಮಾರುಕಟ್ಟೆಯ ಸ್ಥಳೀಯ ಆಡಳಿತಕ್ಕೆ ಒಳಪಟ್ಟರೂ, ಮಾರುಕಟ್ಟೆಯನ್ನು ನಿರ್ವಹಿಸುವುದು ಮಹಿಳೆಯರ ಒಂದು ಸಮಿತಿ. ಇಲ್ಲಿ ವಹಿವಾಟು ನಡೆಸುವವರು ವಿವಾಹಿತೆಯಾಗಿರಬೇಕು ಎಂಬುದು ಒಂದು ನಿಯಮ (ಅಲ್ಲೊಂದು ಇಲ್ಲೊಂದು ಕಣ್ತಪ್ಪಿ ಪ್ರಕರಣಗಳು ನಡೆಯುತ್ತವೆಯಂತೆ). ದಶಕಗಳಿಂದಲೂ ವಹಿವಾಟು ನಡೆಸುತ್ತ ಬಂದವರು ಇಲ್ಲಿದ್ದಾರೆ. ಇದಲ್ಲದೇ ಹೊಸದಾಗಿ ಸೇರುವವರೂ ಇದ್ದಾರೆ. ಮಾರುಕಟ್ಟೆಯ ಸ್ಥಳಾವಕಾಶ ತಾಯಿಯಿಂದ ಮಗಳಿಗೆ ವರ್ಗಾವಣೆಯಾಗುವುದು ಸಂಪ್ರದಾಯ. ಹೊಸದಾಗಿ ಮಾರುಕಟ್ಟೆಗೆ ಸೇರಬೇಕೆಂದರೆ, ಸಮಿತಿಯ ಅನುಮತಿ ಅಗತ್ಯ. ಇದಕ್ಕಾಗಿ ನೋಂದಣಿ ಶುಲ್ಕ ನಿಗದಿ ಮಾಡಲಾಗಿದೆ. ತಿಂಗಳ ಬಾಡಿಗೆ ಹೊರೆ ಅನಿಸುವುದಿಲ್ಲ. ‘ಇಲ್ಲಿನ ದರಗಳೂ ಕಡಿಮೆ. ಹೀಗಾಗಿ ಹಣ ಸಂಗ್ರಹ ಹೆಚ್ಚೇನೂ ಇರುವುದಿಲ್ಲ. ಕಡಿಮೆ ಬಾಡಿಗೆ ನಿಗದಿಗೆ ಇದೇ ಕಾರಣ’ ಎಂದು ವಸ್ತ್ರಗಳ ವಹಿವಾಟು ನಡೆಸುವ ಇಮೊ ಮೊರೆನ್ ಹೇಳಿದರು.

‘ಇಮಾ ಮಾರ್ಕೆಟ್’ ಹಲವು ವಿಭಾಗಗಳಾಗಿ ವಿಂಗಡಣೆಯಾಗಿದೆ. ಪ್ರಾಂಗಣದೊಳಗೆ ಕಟ್ಟೆಗಳಲ್ಲಿ ಕುಳಿತು ವಹಿವಾಟು ನಡೆಸುವವರು (ಸುಮಾರು 3,000 ಜನ) ಒಂದೆಡೆಯಾದರೆ, ಹೊರಗೆ ಉದ್ದಕ್ಕೂ ರಸ್ತೆಯಲ್ಲಿ ಕುಳಿತು ಮಾರಾಟ ಮಾಡುವವರದು ಇನ್ನೊಂದು ಬಗೆ. ಬೆಳ್ಳಂಬೆಳಿಗ್ಗೆಯೇ ರಂಗುರಂಗಿನ ಸಾಂಪ್ರದಾಯಿಕ ಉಡುಗೆ ಧರಿಸಿ ಮಾರುಕಟ್ಟೆಗೆ ಬರುವ ತಾಯಂದಿರು, ಕಟ್ಟೆಯ ಅಡಿ ಪೆಟ್ಟಿಗೆಯಲ್ಲಿನ ವಸ್ತುಗಳನ್ನು ಹೊರತೆಗೆದು ಅಚ್ಚುಕಟ್ಟಾಗಿ ಜೋಡಿಸಿ
ಡುತ್ತಾರೆ. ಹೊರಾವರಣದಲ್ಲಿ ಅದಾಗಲೇ ಹಣ್ಣು- ತರಕಾರಿ, ಮೀನು- ಮಾಂಸ ಮಾರಾಟ ನಡೆಯುತ್ತಿದ್ದರೆ ಒಳಾಂಗಣದಲ್ಲಿ ಬಟ್ಟೆ, ಕರಕುಶಲ ವಸ್ತುಗಳ ಮಾರಾಟ ಬೆಳಿಗ್ಗೆ 9ರ ಸುಮಾರಿಗೆ ಶುರುವಾಗುತ್ತದೆ.

ತರಕಾರಿ, ಹಣ್ಣು- ಹಂಪಲು, ಮೀನು ಮಾರಾಟ

ಒಬ್ಬೊಬ್ಬರೇ ನಡೆಸಿದರೆ, ಉಳಿದೆಲ್ಲ ವಹಿವಾಟಿಗೆ ಇಬ್ಬರು ಇರುವುದು ಸಾಮಾನ್ಯ. ಜಾಗ ಸಣ್ಣದಾದರೂ ತಾಯಿ- ಮಗಳು, ಅತ್ತೆ- ಸೊಸೆ, ಅಕ್ಕ-ತಂಗಿ ಹೀಗೆ ಇಬ್ಬಿಬ್ಬರು ಕುಳಿತು ಗ್ರಾಹಕರ ಜತೆ ಚೌಕಾಸಿಗೆ ಇಳಿದಿರುವುದು ಕಾಣುತ್ತದೆ. ಸಾಲ ಕೊಡುವ ವ್ಯವಸ್ಥೆಯೂ ಇಲ್ಲಿದ್ದು, ಸಂಘದಿಂದ ಬಂಡವಾಳ ಪಡೆದು ನಿಗದಿತ ಅವಧಿಯಲ್ಲಿ ಬಡ್ಡಿಸಮೇತ ಮರುಪಾವತಿ ಮಾಡುವವರು ಇದ್ದಾರೆ. ಇಂಥವರ ಪ್ರಮಾಣ ಶೇ 60ರಷ್ಟಿದೆ ಎನ್ನಲಾಗುತ್ತಿದೆ.

ಬೆಳಿಗ್ಗೆಯೇ ಮಾರುಕಟ್ಟೆಗೆ ಬರುವವರ ಪೈಕಿ ಬಹುತೇಕರು ಊಟ- ತಿಂಡಿ ಇಲ್ಲೇ ಮಾಡುತ್ತಾರೆ. ಅದಕ್ಕಾಗಿಯೇ ಪ್ರಾಂಗಣದ ಅಲ್ಲಲ್ಲಿ ಹೋಟೆಲುಗಳಿವೆ. ಯಥಾಪ್ರಕಾರ ಇವುಗಳನ್ನು ನಡೆಸುವವರು ಕೂಡ ಮಹಿಳೆಯರೇ. ಭತ್ತದ ನಾಡು ಮಣಿಪುರದಲ್ಲಿ ಅನ್ನಕ್ಕೇನೂ ಕೊರತೆಯಿಲ್ಲ. ಅದರ ಸಿಹಿ ತಿಂಡಿಗಳು ಲೆಕ್ಕಕ್ಕಿಲ್ಲ. ವಿಶೇಷವೆಂದರೆ, ಹಾಲು ಅಲ್ಲಲ್ಲಿ ಸಿಕ್ಕೀತೇ ಹೊರತೂ ಮೊಸರಿನ ಲಭ್ಯತೆ ತೀರಾ ಕಡಿಮೆ. ಎಲ್ಲೆಲ್ಲೂ ಸಿಹಿತಿಂಡಿಗಳದೇ ಭರಾಟೆ!

ದಿನನಿತ್ಯ ಬಳಸುವ ಎಲ್ಲ ಸಾಮಗ್ರಿಗಳು ಇಮಾ ಮಾರುಕಟ್ಟೆಯಲ್ಲಿ ಸಿಗುತ್ತವೆ ಎಂಬುದೇ ಇದರ ವೈಶಿಷ್ಟ್ಯ. ಮೂವತ್ತು ವರ್ಷಗಳಿಂದಲೂ ಮಣ್ಣಿನ ಪಾತ್ರೆ ಮಾರುತ್ತಿರುವ ಶುಹಾಸಿ ಹೇಳುತ್ತಾರೆ: ‘ಇಂಫಾಲ್ ಮಾತ್ರವಲ್ಲ, ಅಕ್ಕಪಕ್ಕದ ಹಳ್ಳಿ- ಪಟ್ಟಣಗಳಿಂದ ಇಲ್ಲಿಗೆ ಬಂದು ಮನೆಗೆ ಬೇಕಾಗುವ ಎಲ್ಲವನ್ನೂ ಖರೀದಿಸಿ ಒಯ್ಯುವವರು ಸಾವಿರಾರು ಜನರಿದ್ದಾರೆ. ಅದೇಕೋ ಸೂಪರ್ ಬಜಾರುಗಳು ಇದ್ದರೂ ಇಲ್ಲಿಗೆ ಬರುವವರ ಸಂಖ್ಯೆ ಕಡಿಮೆಯೇನಾಗಿಲ್ಲ.’

‘ಇಮಾ ಮಾರ್ಕೆಟ್’ ಮಾತ್ರವಲ್ಲ; ಮಣಿಪುರದ ಎಲ್ಲೆಲ್ಲೂ ವ್ಯಾಪಾರ- ವಹಿವಾಟು ನಡೆಸುವವರು ಹೆಚ್ಚಾಗಿ ಮಹಿಳೆಯರೇ. ಈ ಮಾರುಕಟ್ಟೆ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಇರುವುದರಿಂದ ಎಲ್ಲೆಲ್ಲೂ ಹೆಣ್ಣುಮಕ್ಕಳೇ ಕಾಣುತ್ತಾರೆ. ‘ನಿಮ್ಮ ಪತಿ ಏನು ಮಾಡುತ್ತಾರೆ?’ ಎಂದು ತಾವರೆ ಹೂವುಗಳ ಕಟ್ಟುಗಳನ್ನು ಮಾರುತ್ತಿದ್ದ ದೊಂತಾಗ್ಮಲು ಅವರನ್ನು ಪ್ರಶ್ನಿಸಿದೆ. ‘ಗದ್ದೆಯ ಹೊಂಡಗಳಲ್ಲಿ ಮೀನು ಸಾಕಣೆ ಮಾಡುತ್ತಾರೆ. ಸ್ವಲ್ಪ ಜಮೀನು ಇದೆ; ಅಲ್ಲಿ ತರಕಾರಿ, ತಾವರೆ ಬೆಳೆಯುತ್ತಾರೆ’ ಎಂದು ಅವರು ಉತ್ತರಿಸಿದರು.

ಎರಡು ಬಗೆಯಲ್ಲಿ ‘ಇಮಾ ಮಾರ್ಕೆಟ್’ ಪರಿಗಣಿಸಬಹುದು: ಹೆಣ್ಣುಮಕ್ಕಳಿಗೆ ಸಿಕ್ಕ ಆರ್ಥಿಕ ಭದ್ರತೆ ಹಾಗೂ ಸಾಂಪ್ರದಾಯಿಕ ಕೃಷಿ ವೈವಿಧ್ಯದ ಅನಾವರಣ. ಬೆಳಿಗ್ಗೆ 3 ಗಂಟೆಗೆ (ಅಲ್ಲಿ ಬೇಗ ಸೂರ್ಯೋದಯ) ಶುರುವಾಗುವ ಮಾರುಕಟ್ಟೆಯು ಹಂತಹಂತದಲ್ಲಿ ನಡೆದು ಸಂಜೆ 6ಕ್ಕೆ ಮುಕ್ತಾಯವಾಗುತ್ತದೆ. ಗ್ರಾಹಕರ ಪೈಕಿ ಹೆಚ್ಚಿನವರು ಮಹಿಳೆಯರೇ ಇರುವುದರಿಂದ, ದಿನವಿಡೀ ನಡೆಯುವ ಚಟುವಟಿಕೆಗಳು ಮಹಿಳೆಯರ ಸುತ್ತಲೇ ಇರುತ್ತವೆ.

ಗಿನ್ನಿಸ್ ದಾಖಲೆ ಮಾಡಿರುವ ‘ಕಿಂಗ್ ಚಿಲ್ಲಿ’ಯ ವಿಶಾಲ ಲೋಕವೇ ಇಲ್ಲಿದೆ. ಕೈಯಿಂದ ಮುಟ್ಟಲೂ ಆಗದಷ್ಟು ಭಯಂಕರ ಖಾರ ಅದು! ಹೊಳೆಯುವ ಕೆಂಪು ವರ್ಣದ ‘ಕಿಂಗ್ ಚಿಲ್ಲಿ’ ರಾಶಿಯನ್ನು ಕುತೂಹಲದಿಂದ ನೋಡುವಾಗ ಅದನ್ನು ಮಾರುತ್ತಿದ್ದ ಮೊಯಾಂಗ್ಮು ಚಿಮ್ಮಟದಿಂದ ಮೆಣಸೊಂದನ್ನು ಹಿಡಿದು ‘ಸಿಹಿ ಇದೆ. ತಿಂದು ನೋಡಿ’ ಎಂದು ನಗುತ್ತ ಚಿಮ್ಮಟ ಹತ್ತಿರ ತಂದಳು. ಬರೀ ಫೋಟೊದಲ್ಲಿ ನೋಡಿದ್ದ ‘ಕಿಂಗ್ ಚಿಲ್ಲಿ’ ಘಾಟು ಎರಡು ಸೆಕೆಂಡುಗಳಲ್ಲಿ ನೆತ್ತಿಗೇರಿ ಕಂಗಾಲಾಗಿದ್ದು ‘ಇಮಾ ಕೈತಿಲ್’ ಭೇಟಿಯನ್ನು ಜೀವನದಲ್ಲಿ ಯಾವತ್ತೂ ಮರೆಯದಂತೆ ಮಾಡಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT