ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲಲಾ ವೀರಭದ್ರ...

ಅಚ್ಚಟ್ನಹಳ್ಳಿಯ ವಿಸ್ಮಯ ಗೊಂಬೆಗಳು
Last Updated 20 ನವೆಂಬರ್ 2013, 19:30 IST
ಅಕ್ಷರ ಗಾತ್ರ

ಕೋಲಾರ ಜಿಲ್ಲೆಯ ಅಚ್ಚಟ್ನಹಳ್ಳಿಯ ಗೊಂಬೆಗಳು ಆಡುವುದು ಹೇಗೆ ಎನ್ನುವುದು ಈವರೆಗೆ ಗುಟ್ಟಾಗಿಯೇ ಉಳಿದಿದೆ. ಅಳಿವಿನಿ ಅಂಚಿನಲ್ಲಿದ್ದ ಈ ಗೊಂಬೆಯಾಟದ ಕಲೆಗೆ ನೀರೆರೆಯುವ ಕೆಲಸವನ್ನು ‘ವೀರಭದ್ರಸ್ವಾಮಿ ಪುರಾತನ ಕಲಾ ಗೊಂಬೆಯಾಟ ಯುವಕ ಸಂಘ’ ಮಾಡುತ್ತಿದೆ. ಗೊಂಬೆಯಾಟ ಎಂದ ಮೇಲೆ ಅಲ್ಲಿ ಯುವಕರು ಇಲ್ಲದಿದ್ದರೆ ಹೇಗೆ?

ಶ್ರೀ  ವೀರಭದ್ರಸ್ವಾಮಿ ಪುರಾತನ ಕಲಾ ಗೊಂಬೆಯಾಟ ಯುವಕ ಸಂಘ– ಒಂದು ಯುವಕ ಸಂಘದ ಮಟ್ಟಿಗೆ ಇದು ಸ್ವಲ್ಪ ವಿಚಿತ್ರ ಹಾಗೂ ವಿಶಿಷ್ಟವಾದ ಹೆಸರು.

ಕೋಲಾರದ ನರಸಾಪುರ ಕೈಗಾರಿಕಾ ವಸಾಹತುವಿನ ಒಳಗೆ ಹುದುಗಿ ಹೋಗಿರುವ ಅಚ್ಚಟ್ನಹಳ್ಳಿಗೊಮ್ಮೆ ಹೋದರೆ ಈ ಯುವಕ ಸಂಘದ ಹೆಸರು ಮಾತ್ರ ವಿಶಿಷ್ಟವಲ್ಲ, ಅದು ಮಾಡಿದ ಮತ್ತು ಮಾಡುತ್ತಿರುವ ಕೆಲಸಗಳೆರಡೂ ವಿಶಿಷ್ಟ ಎಂಬುದು ಎಂಥವರಿಗೂ ಅರ್ಥವಾಗುತ್ತದೆ.

ಅಚ್ಚಟ್ನಹಳ್ಳಿಗೇ ವಿಶೇಷವಾದ ವಿಸ್ಮಯ ಗೊಂಬೆ ಎಂದು ಕರೆಯಬಹುದಾದ ವಿಶಿಷ್ಟ ಗೊಂಬೆಯಾಟವೊಂದಿದೆ. ಇದು ಸೂತ್ರದ ಗೊಂಬೆಯಲ್ಲ, ತೊಗಲುಗೊಂಬೆಯೂ ಅಲ್ಲ. ಅಥವಾ ಆಡದೆ ಸುಮ್ಮನಿರುವ ದಸರಾ ಗೊಂಬೆಗಳೂ ಇಲ್ಲ. ಇವುಗಳು ಆಡುತ್ತವೆ, ಹಾಡುತ್ತವೆ ಮತ್ತು ಕುಣಿಯುತ್ತವೆ- ಕುಣಿಸುವವರ ತಾಳಕ್ಕೆ, ಧ್ವನಿಗೆ ಮತ್ತು ಚಾತುರ್ಯಕ್ಕೆ ತಕ್ಕಂತೆ.

ಬೇಸಾಯ, ಪಶುಪಾಲನೆಯನ್ನು ನಂಬಿಕೊಂಡ ಅಚ್ಚಟ್ನಹಳ್ಳಿಗೆ ವಿಸ್ಮಯ ಗೊಂಬೆಯಾಟದ ಬೆಸುಗೆ ಯಾವಾಗ ಆಯಿತೆಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಕನ್ನಡ, ತೆಲುಗು ಭಾಷೆಗಳ ಪ್ರಭಾವವಿರುವ ಕೋಲಾರ ಜಿಲ್ಲೆಯ ಪರಿಸರದಲ್ಲಿ ಇಂತಹ ಅಚ್ಚರಿಯ ಜಾನಪದ ಕಲೆ ಪ್ರಚಲಿತವಾಗಿತ್ತೆಂಬುದನ್ನು ಹಳಬರು ಹೇಳುತ್ತಾರಾದರೂ ಅದನ್ನು ರೂಢಿಯಲ್ಲಿಟ್ಟುಕೊಂಡು ಪೋಷಿಸುತ್ತಿರುವ ಹಳ್ಳಿ ಅಚ್ಚಟ್ನಹಳ್ಳಿ ಒಂದೇ.

ಈಗ ಆ ಹಳ್ಳಿಯಲ್ಲಿ ಉಳಿದಿರುವ ಹಿರಿಯರು ನೆನಪಿನಿಂದ ಹೇಳಿದಂತೆ ಕನಿಷ್ಠ ೧೫೦–೨೦೦ ವರ್ಷಗಳಿಂದ ವಿಸ್ಮಯಗೊಂಬೆಗಳನ್ನು ಇಲ್ಲಿ

ಆಡಿಸುವುದು ನಡೆದಿದೆ. ಬೇರೆ ಜಾನಪದ ಕಲೆಗಳಂತೆ ಇವು ದಿಢೀರೆಂದು ಪ್ರದರ್ಶನ ನೀಡುವಂತಹ ಕಲೆಯಲ್ಲ. ಬೇರೆ ಬೇರೆ ಸ್ಥಳಗಳಲ್ಲೂ ಸುಲಭವಾಗಿ ವ್ಯವಸ್ಥೆ ಮಾಡುವ ಪ್ರದರ್ಶನವೂ ಅಲ್ಲ. ಹೀಗಾಗಿ ಪ್ರತಿವರ್ಷ ದಸರಾದಿಂದ ದೀಪಾವಳಿಯವರೆಗೆ ಮಾತ್ರ ವಿಸ್ಮಯ ಗೊಂಬೆಗಳ ಚಮತ್ಕಾರಕ ಆಟಗಳನ್ನು ಈವರೆಗೂ ನೋಡಲು ಸಾಧ್ಯವಿತ್ತು. ಆದರೆ, ಶ್ರೀ ವೀರಭದ್ರಸ್ವಾಮಿ ಪುರಾತನ ಕಲಾ ಗೊಂಬೆಯಾಟ ಯುವಕ ಸಂಘ ಹಾಗೂ ಊರವರ ಶ್ರಮದಿಂದ ಹಾಗೂ ಸರ್ಕಾರದ ಸಹಾಯ ಹಸ್ತದಿಂದ ಅಗತ್ಯಬಿದ್ದಾಗಲೆಲ್ಲ ಗೊಂಬೆಯಾಟ ಆಡಿಸಬಹುದಾದ ವ್ಯವಸ್ಥೆಯೊಂದು ಇದೀಗಷ್ಟೇ ಸಿದ್ಧಗೊಂಡಿದೆ. 

ಈ ಆಟದಲ್ಲಿ ಪಾಲ್ಗೊಳ್ಳುವ ಬಹುತೇಕ ಎಲ್ಲಾ ಗೊಂಬೆಗಳನ್ನು ಮಾಡಿರುವುದು ಹಗುರವಾದ ಮರದಿಂದ. ಅನೇಕ ಆಕೃತಿಗಳಲ್ಲಿ ತಯಾರಾಗುವ ಈ ಗೊಂಬೆಗಳಿಗೆ ವರ್ಣಾಲಂಕಾರ ಮತ್ತು ವಸ್ತ್ರಾಲಂಕಾರ ಆಗುವುದು ನಂತರ. ಅಚ್ಚಟ್ನಹಳ್ಳಿಯಲ್ಲಿ ಈಗ ಲಭ್ಯವಿರುವ ಗೊಂಬೆಗಳಲ್ಲಿ ಪೆಜವಾಡ ಸಾಬಿ ಗೊಂಬೆ, ಪೈಲ್ವಾನರ ಗೊಂಬೆಗಳು, ಗೋಪಿಕಾ ಸ್ತ್ರೀಯರು, ಕೃಷ್ಣ, ಹಳ್ಳಿಗಾಡಿನ ಹೆಂಗಸರು-–ಗಂಡಸರು, ಭತ್ತ ಕುಟ್ಟುವ ಯುವತಿಯರು, ಅಜ್ಜ-ಅಜ್ಜಿಯರ ಗೊಂಬೆಗಳು ಪ್ರದರ್ಶನ ನೀಡಲು ಸನ್ನದ್ಧವಾಗಿವೆ.

ಅಚ್ಚಟ್ನಹಳ್ಳಿಯ ಚಾವಡಿಯಲ್ಲಿಯೇ ವರ್ಷಕ್ಕೊಮ್ಮೆ ವಿಸ್ಮಯ ಗೊಂಬೆಗಳ ಆವರಣವನ್ನು ನಿರ್ಮಿಸಲಾಗುತ್ತಿತ್ತು. ಚಾವಡಿ ಶಿಥಿಲವಾಗಿ ಬೊಂಬೆಯಾಟಕ್ಕೆ ಅನೇಕ ಬಗೆಯ ಅಡ್ಡಿ ಆತಂಕಗಳನ್ನು ತಂದೊಡ್ಡಿತ್ತು. ನಿರ್ವಹಣೆಯಿಲ್ಲದ ಚಾವಡಿಯಲ್ಲಿ ಮಳೆ ಬಂದಾಗ ನೀರು ಸುರಿಯುತ್ತಿತ್ತು. ಕಲ್ಲು ಚಪ್ಪಡಿಗಳು ಸಡಿಲಗೊಂಡು ಅಪಾಯದಂಚನ್ನು ತಲುಪಿತ್ತು. ಇದರ ಜೊತೆಗೆ ಸಿನಿಮಾ, ಟೀವಿ ಪ್ರಭಾವದಿಂದ ಈ ಅಪ್ಪಟ ದೇಸಿ ಕಲೆಗೆ ಹೆಚ್ಚಿನ ಪ್ರೋತ್ಸಾಹವೂ ನಿಂತುಹೋಗಿತ್ತು. ಗ್ರಾಮೀಣ ತಂತ್ರಜ್ಞಾನದಿಂದಲೇ ಸಿದ್ಧಗೊಂಡಿರುವ ವಿಸ್ಮಯ ಗೊಂಬೆಗಳು ಹಾಡುಗಾರರ ಕಂಠವನ್ನಾಧರಿಸಿ, ಆ ಸಂದರ್ಭದಲ್ಲಿ ನುಡಿಸುವ ಸಂಗೀತ ವಾದ್ಯಗಳ ಸದ್ದಿಗೆ ಅನುಸಾರವಾಗಿ ಜೊತೆಗೆ ಈ ಗೊಂಬೆಗಳ ಸೂತ್ರಧಾರನ ಮಾತುಗಳಿಗೆ ಪ್ರತಿಕ್ರಿಯೆ ನೀಡುವಂತಹ ವ್ಯವಸ್ಥೆಯಿದು. ಇದರ ಗುಟ್ಟು ತಿಳಿದಿರುವುದು ಬೆರಳೆಣಿಕೆಯಷ್ಟು ಜನಕ್ಕೆ ಮಾತ್ರ. 

ಗೊಂಬೆಗಳು ಆಡುವುದಂತೂ ಸತ್ಯ. ಆದರೆ, ಅವು ಹೇಗೆ ಆಡುತ್ತವೆ ಎಂಬುದನ್ನು ಅರಿಯಲು ಬೇರೆಯವರಿಗೆ ಈವರೆಗೆ ಸಾಧ್ಯವಾಗಿಲ್ಲ. ಪರಂಪರೆಯಿಂದ ಬಂದ ಈ ತಂತ್ರಜ್ಞಾನವನ್ನು ಸೋರಿಕೆಯಾಗದಂತೆ ಇಟ್ಟುಕೊಂಡಿರುವುದು ಅಚ್ಚಟ್ನಹಳ್ಳಿಯ ಕೆಲವು ನಿಪುಣರ ವೈಶಿಷ್ಟ್ಯ.
 

ಚಾವಡಿಯಲ್ಲಿರುವ ಸ್ಥಳಾವಕಾಶವನ್ನು ಸದುಪಯೋಗಪಡಿಸಿಕೊಂಡು ಬೊಂಬೆಗಳ ಗುಂಪೊಂದನ್ನು ಹಳ್ಳಿಗರು ಸಿದ್ಧಗೊಳಿಸಿದ್ದಾರೆ. ಅವುಗಳನ್ನು ನಿಗದಿತ ಸಮಯದಲ್ಲಿ ನಿಶ್ಚಿತ ಆಟಗಳನ್ನು ಆಡುವಂತಹ ವ್ಯವಸ್ಥೆಯನ್ನು ಮಾಡಿದ್ದಾರೆ. ಸೂತ್ರಧಾರ ಮಾತ್ರ ಈ ಗೊಂಬೆಗಳನ್ನು ಮಾತನಾಡಿಸಬಲ್ಲ. ಅವುಗಳಿಗೆ ಚಾಲನೆ ನೀಡಬಲ್ಲ. ಆತನ ಹಾಡುಗಳಿಗೆ ಕುಣಿಯುವಂತೆ ಮಾಡಬಲ್ಲ. ಕುಣಿತ, ನೆಗೆತ ಇನ್ನಿತರ ಚಲನೆಗಳನ್ನು ಬದಿಯಲ್ಲೇ ಇರುವ ಸಂಗೀತಕ್ಕೆ ಸರಿಹೊಂದುವಂತೆ ಹೊಂದಾಣಿಕೆ ಮಾಡಲು ಸೂತ್ರಧಾರನಿಂದ ಮಾತ್ರ ಸಾಧ್ಯ.

ದೇವರ ಆರಾಧನೆಯಿಂದ ಆರಂಭವಾಗಿರಬಹುದಾದ ಈ ವಿಸ್ಮಯ ಗೊಂಬೆಯಾಟ ಕಾಲ ಕಾಲಕ್ಕೆ ಬದಲಾವಣೆಗಳನ್ನು ಹೊಂದುತ್ತಾ ಸಾಗಿಬಂದಿದೆ ಎಂಬುದಕ್ಕೆ ಬೊಂಬೆಗಳ ಮೇಲಿರುವ ವೇಷಭೂಷಣಗಳು ಸಾಕ್ಷಿ ಒದಗಿಸುತ್ತವೆ. ಮಹಾನವಮಿ ಸಮಯದಲ್ಲಿ ಅಚ್ಚಟ್ನಹಳ್ಳಿಯಲ್ಲಿ ನಡೆಯುವ ವೀರಭದ್ರ ದೇವರ ಆರಾಧನೆಯೊಂದಿಗೆ ತಳುಕು ಹಾಕಿಕೊಂಡಿರುವ ವಿಸ್ಮಯ ಗೊಂಬೆಗಳ ಪ್ರದರ್ಶನ ಪ್ರತಿದಿನ ಆರಂಭಗೊಳ್ಳುವುದೂ ವೀರಭದ್ರನ ಪೂಜೆಯೊಂದಿಗೆ. ಪೂಜೆಯ ನಂತರವೇ ಚಮತ್ಕಾರಿಕ ಆಟದ ಶುರು. 

ಜಾನಪದ ಹಾಡುಗಳು, ಯಾಲಪದಗಳು ಆಟದ ಜೊತೆ ಜೊತೆಗೆ ಸಾಗುತ್ತವೆ. ಇದರೊಂದಿಗೆ ಸೂತ್ರಧಾರನ ರಂಜನೆಯ ಮಾತುಗಳೂ ಸೇರುತ್ತವೆ. ಇದರೊಟ್ಟಿಗೆ ಹಾರ್ಮೋನಿಯಂ, ತಬಲಾ ದನಿಯೂ ಇರುತ್ತದೆ. ಇವೆಲ್ಲವುಗಳೊಂದಿಗೆ ಸೂತ್ರಧಾರನ ತಾಳದ ನಿಯಂತ್ರಣವೂ ಇದ್ದೇ ಇರುತ್ತದೆ.

ಪೌರಾಣಿಕ ಸನ್ನಿವೇಶಗಳೇ ಹೆಚ್ಚಾಗಿದ್ದ ಈ ವಿಸ್ಮಯ ಗೊಂಬೆಯಾಟದಲ್ಲಿ ಬಹುಶಃ ಕಾಲಕ್ರಮೇಣ ಸಮಾಜದ ಘಟನೆಗಳ ಕನ್ನಡಿಯೂ ಕಾಣಿಸಿಕೊಂಡಿರಬೇಕು. ಹೀಗಾಗಿಯೇ ದೇವಾನುದೇವತೆಗಳ ಜೊತೆಗೆ ಜನ ಸಾಮಾನ್ಯರ ನೋವು ನಲಿವು, ರಂಜನೆಗಳು ಇತ್ತೀಚೆಗೆ ಪ್ರಸ್ತಾಪಗೊಳ್ಳುತ್ತಿವೆ. ಸಮಕಾಲೀನ ಸಮಸ್ಯೆಗಳು, ಸಂತಸಗಳೂ ಸೂತ್ರಧಾರನ ಮಾತುಗಳಲ್ಲಿ ಸೇರಿಕೊಳ್ಳುತ್ತಿವೆ. ಇದೊಂದು ಪಾರಂಪರಿಕ ಕಲೆಯಾಗಿದ್ದರೂ ಇದರ ವೈವಿಧ್ಯತೆ ಇತ್ತೀಚಿನವರೆಗೂ ಬೆಳಕಿಗೆ ಬಂದಿರಲಿಲ್ಲ. ಭಾರತೀಯ ಬೊಂಬೆಯಾಟದ ಚರಿತ್ರೆಯಲ್ಲಿ ಅಲ್ಲಲ್ಲಿ ವಿರಳವಾದ ಪ್ರಸ್ತಾಪಗಳಿದ್ದರೂ ಸಂಪೂರ್ಣವಾದ ವಿವರಗಳಿಲ್ಲ. ಕರ್ನಾಟಕದಲ್ಲಿಯೂ ಇಂಥದ್ದೊಂದು ವಿಸ್ಮಯ ಗೊಂಬೆಗಳು ಪ್ರದರ್ಶನಗೊಳ್ಳುತ್ತವೆ ಎನ್ನುವುದು ಕತ್ತಲಲ್ಲೇ ಇತ್ತು.  ಜಾನಪದ ವಿದ್ವಾಂಸ ಡಾ. ಟಿ. ಗೋವಿಂದರಾಜು ಇದನ್ನು ಒಂದು ದಶಕದ ಹಿಂದೆ ಪತ್ತೆ ಹಚ್ಚಿ ಎಲ್ಲಾ ವಿವರಗಳನ್ನು ದಾಖಲು ಮಾಡಿಕೊಂಡರು. ಆ ವೇಳೆಗಾಗಲೇ ಹಳೆಯ ಬೊಂಬೆಗಳು ಗೆದ್ದಲಿಗೆ ಆಹಾರವಾಗಿದ್ದವು. ಇದರ ಬಗ್ಗೆ ಇನ್ನಷ್ಟು ಮಾಹಿತಿಯಿದ್ದ ಹಿರಿಯರು ಕಣ್ಮರೆಯಾಗಿದ್ದರು.  ವರ್ಷಕ್ಕೊಮ್ಮೆ ನಿಯತವಾಗಿ ನಡೆಯುತ್ತಿದ್ದ ವಿಸ್ಮಯ ಗೊಂಬೆಗಳ ಪ್ರದರ್ಶನ ಅನಿಯತವಾಗಿತ್ತು. ಊರಿನ ಎಲ್ಲಾ ಜನರಿಗೆ ಅನುಕೂಲವಾದಾಗ ಮಾತ್ರ ಆಡುವ ಪರಿಪಾಠವೂ ಆರಂಭಗೊಂಡಿತ್ತು.

ಇದರ ಮಧ್ಯೆ ಆಧುನಿಕತೆಯ ಬಿರುಗಾಳಿಯೆದುರು ಜನಪದ ಕಲೆಗಳು ತರಗೆಲೆಗಳಂತೆ ಧೂಳಿಪಟವಾಗುತ್ತಿರುವ ಸಂಗತಿಗಳು ಬೇಕಾದಷ್ಟಿವೆ. ಅದೃಷ್ಟವಶಾತ್ ಅಚ್ಚಟ್ನಹಳ್ಳಿ ವಿಸ್ಮಯ ಗೊಂಬೆಗಳು ಉಳಿದುಕೊಂಡಿವೆ. ಇದ್ದ ಸ್ಥಿತಿಯಲ್ಲಿಯೇ ಪ್ರತಿ ವರ್ಷ ಸಾಂಪ್ರದಾಯಿಕವಾಗಿ ಗೊಂಬೆಗಳ ಆಟ ನಡೆಯುತ್ತಾ ಬರುತ್ತಿದ್ದವು. ಆದರೆ, ಕಳೆದ ಹತ್ತು ವರ್ಷಗಳಿಂದ ನೂರಾ ಹತ್ತು ಮನೆಗಳಿರುವ ಅಚ್ಚಟ್ನಹಳ್ಳಿಯಲ್ಲಿ ಪ್ರತಿಯೊಂದು ಕುಟುಂಬದಿಂದಲೂ ಈ ಆಟಕ್ಕೆ ಪ್ರೋತ್ಸಾಹ ದೊರೆಯುವಂತಾಗಿದ್ದು ಇಲ್ಲಿಯ ಶ್ರೀ ವೀರಭದ್ರಸ್ವಾಮಿ ಪುರಾತನ ಕಲಾ ಗೊಂಬೆಯಾಟ ಯುವಕ ಸಂಘದ ಆಸಕ್ತಿಯಿಂದಾಗಿ.

ದಸರಾ, ದೀಪಾವಳಿ ನಡುವೆ ಕನಿಷ್ಠ ಒಂದು ತಿಂಗಳ ಕಾಲ ಪ್ರತಿದಿನ ವಿಸ್ಮಯ ಗೊಂಬೆಯಾಟ ಪ್ರದರ್ಶನಗೊಳ್ಳುತ್ತದೆ. ಈ ಊರಿನ ಸಂಬಂಧವಿರುವ ಬೇರೆ ಬೇರೆ ಹಳ್ಳಿಗಳವರು ಆಟ ನಡೆಸಲು ಪೂಜೆಗೆ ಕೊಡುವ ಸಂಪ್ರದಾಯವೂ ಹುಟ್ಟಿಕೊಂಡಿದೆ. ಕೆ.ಬಿ. ಹೊಸಳ್ಳಿ, ಅಪ್ಪಸಂದ್ರ ಮೊದಲಾದ ಅಕ್ಕಪಕ್ಕದ ಹಳ್ಳಿಗಳ ಕುಟುಂಬಗಳು ಕೂಡ ದಿನನಿತ್ಯದ ಆಟಕ್ಕಾಗಿ ಅಗತ್ಯವಿರುವ ಪೂಜಾ ಸಾಮಗ್ರಿಗಳನ್ನು ಪ್ರಸಾದ ವ್ಯವಸ್ಥೆಯ ಖರ್ಚನ್ನು ನೀಡಲು ಮುಂದೆ ಬಂದಿದ್ದಾರೆ. 

ಇನ್ನೇನು ಕಣ್ಮರೆಯಾಗುತ್ತದೆ ಎಂದುಕೊಂಡಿದ್ದ ಸಂದರ್ಭದಲ್ಲಿ ಇದನ್ನು ಚೆನ್ನಾಗಿ ಬಲ್ಲ ಸಂಜೀವರೆಡ್ಡಿಯವರು ಅಕಾಲಿಕವಾಗಿ ನಿಧನರಾದರು.  ಅವರು ಅಷ್ಟರಲ್ಲಾಗಲೇ ಆಟದ ರಹಸ್ಯಗಳನ್ನು ಕೆಲವರಿಗೆ ತಿಳಿಸಿದ್ದರಿಂದಾಗಿ ವಿಸ್ಮಯ ಆಟದ ಪಯಣ ಮುಂದಕ್ಕೆ ಸಾಗಿದೆ. ಇದರ ಮಧ್ಯೆ ಈ. ರಮೇಶ್, ಎ.ಎಮ್. ಮಂಜುನಾಥ ನಾಯ್ಡು, ಎ. ಮಂಜುನಾಥ್, ಎನ್. ರಮೇಶ್, ರಾಮಾಂಜಪ್ಪ ಮೊದಲಾದ ಗ್ರಾಮ ಯುವಕರ ಪಡೆ ಸರ್ಕಾರಕ್ಕೆ ಅಹವಾಲು ಸಲ್ಲಿಸಿ ಕಾಯಂ ರಂಗಮಂದಿರವೊಂದನ್ನು ನಿರ್ಮಿಸಿಕೊಡುವಂತೆ ಕೇಳಿಕೊಂಡಿತು. ಅದಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಕಾರಾತ್ಮಕವಾಗಿ ಸ್ಪಂದಿಸಿ ರೂ. ೧೦ ಲಕ್ಷಗಳ ಅನುದಾನವನ್ನು ರಂಗಮಂದಿರ ನಿರ್ಮಾಣಕ್ಕೆ ಮಂಜೂರು ಮಾಡಿದೆ. ಬೆಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಆಂಜನೇಯಪ್ಪನವರ ಮುಂದಾಳತ್ವದಲ್ಲಿ ೩೩x೨೯ ಅಡಿಯ ವಿಸ್ತೀರ್ಣವುಳ್ಳ ರಂಗಮಂದಿರ ಸಿದ್ಧವಾಗಿದೆ.

ಸರ್ಕಾರ ಕಟ್ಟಡದ ನೆರವಿಗೆ ಕೈಜೋಡಿಸಿದರೆ, ಗ್ರಾಮಸ್ಥರು ಬೊಂಬೆ ರಿಪೇರಿ, ಹೊಸ ಉಡುಗೆ-ತೊಡುಗೆಗಳನ್ನು ಸಿದ್ಧ ಮಾಡಿದ್ದಾರೆ.  ಒಟ್ಟಾರೆ ೧೬–೧೮ ಗೊಂಬೆಗಳು ದುರಸ್ಥಿಗೊಂಡು ಪ್ರದರ್ಶನಕ್ಕೆ ಸಜ್ಜಾಗಿವೆ. ನಾಲ್ಕು ಅಡಿಯಿಂದ ಆರು ಅಡಿ ಎತ್ತರದ ಈ ಗೊಂಬೆಗಳು ಹೊಸ ರಂಗಮಂದಿರದಲ್ಲಿ ವ್ಯವಸ್ಥಿತವಾಗಿ ಅನಾವರಣಗೊಂಡಿವೆ.  ಪ್ರಾಯೋಗಿಕವಾಗಿ ಇಲ್ಲಿ ವಿಸ್ಮಯ ಗೊಂಬೆಗಳನ್ನು ಈ ವರ್ಷ ಆಡಿಸಿದ್ದು, ಸಂಜೀವರೆಡ್ಡಿಯವರ ತಮ್ಮ ಚನ್ನಕೇಶವ ರೆಡ್ಡಿ ಹೊಸ ಸೂತ್ರಧಾರರಾಗಿ ಸಿದ್ಧವಾಗಿದ್ದಾರೆ. 

ನಾಮಾವಶೇಷವಾಗುತ್ತಿದ್ದ ವಿಸ್ಮಯ ಗೊಂಬೆಗಳ ಜಾನಪದ ಕಲೆಗೆ ಈಗ ಹೊಸ ಜೀವ ಬಂದಿದೆ. ಹೊಸ ರಂಗಮಂದಿರವೂ ನಿರ್ಮಾಣವಾಗಿದೆ. ಇನ್ನೂ ಕೆಲವು ಸೌಲಭ್ಯಗಳು ಈ ರಂಗಮಂದಿರಕ್ಕೆ ದೊರಕಿದರೆ ಬಹು ಅಪರೂಪವಾದ ದೇಸಿ ಕಲೆಯೊಂದು ಹೊರಜಗತ್ತಿಗೆ ಅನಾವರಣಗೊಳ್ಳಲು ಸಾಧ್ಯವಾಗುತ್ತದೆ. ವರ್ಷಕ್ಕೊಮ್ಮೆ ಕೇವಲ ೩೦–೩೫ ದಿನಗಳು ಪ್ರದರ್ಶನಗೊಳ್ಳುತ್ತಿದ್ದ ವಿಸ್ಮಯ ಗೊಂಬೆಗಳ ಪ್ರದರ್ಶನ ಇನ್ನು ಮುಂದೆ ಕನಿಷ್ಠ ವಾರಕ್ಕೊಮ್ಮೆಯಾದರೂ ಏರ್ಪಾಡಾದರೆ ಉತ್ತಮ. ಎಲೆಕ್ಟ್ರಾನಿಕ್ ಯುಗದಲ್ಲಿ ರಿಮೋಟ್ ಕಂಟ್ರೋಲ್‌ನಲ್ಲಿ ಚಾಲನೆ ಮಾಡಿದಂತೆ ಬೊಂಬೆಗಳ ಪ್ರದರ್ಶನವನ್ನು ನೋಡಲು ಸಾಧ್ಯವಾಗುತ್ತದೆ.

ವಿಸ್ಮಯ ಗೊಂಬೆಗಳ ಗುಟ್ಟು ಈಗಲೂ ರಟ್ಟಾಗಿಲ್ಲ. ಈ ದೇಸಿ ತಂತ್ರಜ್ಞಾನವನ್ನು ಹಳ್ಳಿಯ ಕೆಲವರೇ ಉಳಿಸಿಕೊಂಡು ಅಪೂರ್ವವಾದ ಜಾನಪದ ಕಲೆಯ ಪ್ರದರ್ಶನವನ್ನು ಜೀವಂತವಾಗಿಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT