ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್ ರಕ್ತ ದಾನಿಗಳ ಕೈಪಿಡಿ ಸ್ಥಾಪನೆ

Last Updated 10 ಮೇ 2011, 19:30 IST
ಅಕ್ಷರ ಗಾತ್ರ

ಅಪಘಾತ, ಯುದ್ಧ, ಭೂಕಂಪ ಮುಂತಾದ ತುರ್ತು ಸಂದರ್ಭಗಳಲ್ಲಿ ಗಂಭೀರ ಗಾಯಗೊಂಡು, ಸಾವು-ಬದುಕಿನ ನಡುವೆ ಹೋರಾಟ ನಡೆಸುವ ಜೀವಗಳಿಗೆ ಅವಶ್ಯಕವಾದ ರಕ್ತ ಒದಗಿಸುವುದು ಸವಾಲಿನ ಕೆಲಸ.
 

ಕೆಲವು ಬಾರಿ ಎಷ್ಟು ಹಣ ತೆರಲು ಸಿದ್ಧರಾದರೂ ಬೇಕಾದ ರಕ್ತದ ಗುಂಪು ಸಿಗುವುದು ದುರ್ಲಭ. ಇದನ್ನು ಮನಗಂಡು ಜೀವಾಧಾರವಾದ ರಕ್ತವನ್ನು ಸಕಾಲಕ್ಕೆ ಉಚಿತವಾಗಿ ಒದಗಿಸಲು ‘ಆನ್‌ಲೈನ್ ಬ್ಲಡ್ ಡೋನರ್ಸ್‌ ಡೈರೆಕ್ಟರಿ’ ಸ್ಥಾಪಿಸಿದವರು ಮೈಸೂರಿನ ಮಹಾರಾಜ ತಾಂತ್ರಿಕ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಪಿ.ರಾಕೇಶ್.

ಏನಿದು ಆನ್‌ಲೈನ್ ಡೈರೆಕ್ಟರಿ ?
ಉಚಿತವಾಗಿ ರಕ್ತ ನೀಡಲು ಸಿದ್ಧರಿರುವ ವಿದ್ಯಾರ್ಥಿಗಳ ಪಟ್ಟಿ ತಯಾರಿಸಿ, ಅವರ ಹೆಸರು, ರಕ್ತದ ಗುಂಪು, ದೂರವಾಣಿ ಸಂಖ್ಯೆ, ಇರುವ ನಗರ ಮುಂತಾದ ಅಂಶಗಳನ್ನು ecellmitm.org  ವೆಬ್‌ಸೈಟಿನಲ್ಲಿ ದಾಖಲಿಸಿದ್ದಾರೆ. ರಕ್ತದ ಅವಶ್ಯಕತೆ ಇರುವವರು ಈ ವೆಬ್ ತಾಣಕ್ಕೆ ಭೇಟಿ ನೀಡಿ, ನಿಮಗೆ ಬೇಕಾದ ರಕ್ತದ ಗುಂಪನ್ನು ಆಯ್ಕೆ ಮಾಡಿದರೆ, ಆ ಗುಂಪಿನ ಹತ್ತಾರು ವಿದ್ಯಾರ್ಥಿಗಳ ಹೆಸರು, ದೂರವಾಣಿ ಸಂಖ್ಯೆ ನಿಮಗೆ ಕಾಣಿಸುತ್ತದೆ.
 
ನೀವು ಅವರಿಗೆ ಕರೆ ಮಾಡಿ ನಿಮ್ಮ ಪರಿಚಯ, ನೀವಿರುವ ಸ್ಥಳ ಹೇಳಿದರೆ ತಕ್ಷಣವೇ ಧಾವಿಸಿ ರಕ್ತ ನೀಡುತ್ತಾರೆ. ಆದರೆ ಈ ಸೇವೆ ಪ್ರಸ್ತುತ ಲಭ್ಯವಿರುವುದು ಮೈಸೂರು ಜಿಲ್ಲೆಗೆ ಮಾತ್ರ. ಕಾರಣ ವೆಬ್‌ಸೈಟ್‌ನಲ್ಲಿರುವ ಸುಮಾರು 300 ವಿದ್ಯಾರ್ಥಿಗಳು ಮೈಸೂರು ಹಾಗೂ ಸುತ್ತಮುತ್ತಲಿನ ಕಾಲೇಜಿನ ವಿದ್ಯಾರ್ಥಿಗಳು. (ಬೇರೆ ಜಿಲ್ಲೆಗೆ ಬಂದು ಸಕಾಲಕ್ಕೆ ರಕ್ತ ಒದಗಿಸುವುದು ತುಸು ಕಷ್ಟ.)

ಆದರೆ ಭಾರತಾದ್ಯಂತ ಎಲ್ಲ ಕಾಲೇಜು, ವಿಶ್ವವಿದ್ಯಾನಿಲಯಗಳಿಗೆ ಭೇಟಿ ನೀಡಿ ಅಲ್ಲಿನ  ವಿದ್ಯಾರ್ಥಿಗಳಿಗೆ ಇದರ ಬಗ್ಗೆ ಅರಿವು ಮೂಡಿಸಿ, ಆಸಕ್ತರನ್ನು ‘ಇಸೆಲ್’ಗೆ ಸೇರ್ಪಡೆಗೊಳಿಸಿ ದೇಶಾದ್ಯಂತ ಈ ಸೇವೆ ವಿಸ್ತರಿಸಬೇಕು ಎಂಬ ಮಹತ್ವಾಕಾಂಕ್ಷೆ ಹೊಂದಿದ್ದಾರೆ ರಾಕೇಶ್.

ಡೈರೆಕ್ಟರಿ ರೂಪು ತಳೆದಿದ್ದು ಹೇಗೆ?

ರಾಕೇಶ್‌ನ ಸ್ನೇಹಿತರೊಬ್ಬರಿಗೆ ತುರ್ತು ಸಂದರ್ಭದಲ್ಲಿ ರಕ್ತ ಬೇಕಾದಾಗ ಇಡೀ ದಿನ ನಾನಾ ಕಡೆ ಅಲೆದಾಡಿ, ಕಷ್ಟಪಟ್ಟು ರಕ್ತ ಸಂಪಾದಿಸಲಾಯಿತು. ತುರ್ತು ಸಂದರ್ಭಗಳಲ್ಲಿ ರಕ್ತ ದೊರೆಯದೆ ಯಾವುದೇ ಜೀವಕ್ಕೆ ಕುತ್ತು ಬರಬಾರದು ಮತ್ತು ಇಂಥ ಅಲೆದಾಟ, ತೊಂದರೆ ಇತರರಿಗೆ ಆಗಬಾರದು ಎಂದು ನಿರ್ಧರಿಸಿ ಬ್ಲಡ್ ಡೋನರ್ಸ್‌ ಡೈರೆಕ್ಟರಿ ಹುಟ್ಟು ಹಾಕುವ ಮಾನವೀಯ ಕೆಲಸಕ್ಕೆ ಮುಂದಾದರು. ಇವರ ಜೊತೆ ಕೈ ಜೋಡಿಸಿದ್ದು ಅಜಿತ್‌ಕುಮಾರ್ ಜೈನ್, ರೇವಂತ್, ಎಚ್.ಯು.ಸಂದೀಪ್, ಅನಿರುದ್ಧ, ಸಾದಿಯಾ ಕೈಸರ್ ಎಂಬ ಉತ್ಸಾಹಿ ವಿದ್ಯಾರ್ಥಿಗಳು.

ಮೊದಲಿಗೆ ರಕ್ತದಾನ ಶಿಬಿರ ಏರ್ಪಡಿಸುವ ಆಶಯವಿದ್ದರೂ ಇತರರ ಸಲಹೆ ಮೇರೆಗೆ ಶಾಶ್ವತವಾಗಿ ಉಳಿಯುವ ಆನ್‌ಲೈನ್ ಬ್ಲಡ್ ಬ್ಯಾಂಕ್ ಸ್ಥಾಪಿಸುವ ನಿರ್ಧಾರವನ್ನು ರಾಕೇಶ್ ಕೈಗೊಂಡರು. ಮೈಸೂರಿನ ನವೀನ್ ಫ್ಯೂಚರ್ ಡಿಸೈನ್ ಟೆಕ್ನಾಲಜೀಸ್ ಅವರಿಂದ 6 ಜಿಬಿ ಸಾಮರ್ಥ್ಯವಿರುವ ecellmitm.org  ಎಂಬ ವೆಬ್‌ಸೈಟ್ ಖರೀದಿಸಿ, ಅದನ್ನು ಅಭಿವೃದ್ಧಿ ಪಡಿಸಿದರು.

ಇದಕ್ಕೆ ಬೇಕಾದ ಖರ್ಚು-ವೆಚ್ಚವನ್ನು ವಿದ್ಯಾರ್ಥಿ-ಬೋಧಕರ ಒಪ್ಪಿಗೆ ಮೇರೆಗೆ ಕಾಲೇಜಿನ ವಿದ್ಯಾರ್ಥಿಗಳು ಸದಸ್ಯತ್ವ ಪಡೆದಿದ್ದ ಎನ್‌ಇಎನ್ (ನ್ಯಾಷನಲ್ ಎಂಟರ್‌ಪ್ರೀನಿಯರ್‌ಷಿಪ್ ನೆಟ್‌ವರ್ಕ್)ನಿಂದ ಭರಿಸಿದರು. ನಂತರ ಮೈಸೂರಿನ ಅನೇಕ ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಮನವೊಲಿಸಿ ಆಯಾ ಕಾಲೇಜಿನಲ್ಲಿ ಒಬ್ಬೊಬ್ಬ ತಂಡದ ನಾಯಕನನ್ನು ನೇಮಿಸಿ ಸುಸೂತ್ರವಾಗಿ ಸೇವೆ ಒದಗಿಸಲು ಕ್ರಮ ಕೈಗೊಂಡರು. 

ರೂವಾರಿ ಬಗ್ಗೆ ಒಂದಿಷ್ಟು...

ರೈಲ್ವೆ ಇಲಾಖೆಯ ಉದ್ಯೋಗಿಯಾಗಿರುವ ತಂದೆ ಪಿ.ಗೋಪಾಲ್ ಮತ್ತು ತಾಯಿ ಉಷಾ ಅವರು ರಾಕೇಶ್ ಅವರ ಎಲ್ಲ ಕೆಲಸಗಳಿಗೆ ಬೆನ್ನೆಲುಬಾಗಿ ಮಾನವೀಯ ಕೆಲಸಗಳಲ್ಲಿ ತೊಡಗಲು ಉತ್ತೇಜಿಸುತ್ತಾರೆ. ರಾಕೇಶ್ ಹುಟ್ಟಿದ್ದು ಜೂನ್ 6, 1989ರಲ್ಲಿ.

ಮೈಸೂರಿನ ಸೆಂಟ್ ಥಾಮಸ್ ಶಾಲೆಯಲ್ಲಿ ಸಿಬಿಎಸ್‌ಇ ಶಿಕ್ಷಣ ಪಡೆದು, ಡಿಎಂಎಸ್ ಶಾಲೆಯಲ್ಲಿ ಪಿಯುಸಿ ಪೂರೈಸಿ, ಪ್ರಸ್ತುತ ಮಹಾರಾಜ ತಾಂತ್ರಿಕ ವಿದ್ಯಾಸಂಸ್ಥೆಯಲ್ಲಿ  ಬಿ.ಇ. (ಕಂಪ್ಯೂಟರ್ ಸೈನ್ಸ್) ವ್ಯಾಸಂಗ ಮಾಡುತ್ತಿದ್ದಾರೆ. ಬಾಲ್ಯದಿಂದಲೂ ಶಿಕ್ಷಣದ ಜೊತೆಗೆ ಉತ್ತಮ ಮೌಲ್ಯಗಳನ್ನು ಮೈಗೂಡಿಸಿಕೊಂಡಿರುವ ರಾಕೇಶ್, ಸಮಾಜಕ್ಕೆ ಕಿಂಚಿತ್ತಾದರೂ ಸೇವೆ ಸಲ್ಲಿಸಬೇಕು ಎಂಬ ಆದರ್ಶವಾದಿ.

ಭವಿಷ್ಯದ ಕನಸು
ರಕ್ತದ ಅವಶ್ಯಕತೆ ಇರುವವರು ಸರ್ವರ್‌ಗೆ ಎಸ್‌ಎಂಎಸ್ ಮೂಲಕ ಸಂದೇಶ ರವಾನಿಸಿ ಅಗತ್ಯ ಮಾಹಿತಿ, ಸೇವೆ ಪಡೆಯಲು ಅನುಕೂಲವಾಗುವಂತೆ ಎಸ್‌ಎಂಎಸ್ ಗೇಟ್‌ವೇ ಅಳವಡಿಸಬೇಕು.
 
ಸರ್ವರ್‌ಗೆ ಬಂದ ಎಸ್‌ಎಂಎಸ್‌ಗಳಿಗೆ ಬೇಕಾದ ಮಾಹಿತಿ ಒದಗಿಸುವುದು, ಬಂದ ಸಂದೇಶಗಳಿಗೆ ಪ್ರತಿಕ್ರಿಯಿಸಲು ಸಂಘಟನಾಕಾರರಿಗೆ ಸೂಚನೆ ನೀಡುವುದು ಸೇರಿದಂತೆ ಹಲವಾರು ಸೌಲಭ್ಯಗಳು ಎಸ್‌ಎಂಎಸ್ ಗೇಟ್‌ವೇ ಮೂಲಕ ಸಿಗುತ್ತವೆ.ಇದರಿಂದ ದೇಶದಾದ್ಯಂತ ಯಶಸ್ವಿಯಾಗಿ ರಕ್ತ ನೀಡಲು ಸಾಧ್ಯವಾಗುತ್ತದೆ ಎಂದು ಭವಿಷ್ಯದ ಕನಸುಗಳನ್ನು ರಾಕೇಶ್ ಹಂಚಿಕೊಂಡರು.
ರಾಕೇಶ್ ಜೊತೆ ಕೈ ಜೋಡಿಸಲು ಮೊ.8951897798 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT