ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾರುಣ್ಯದ ಪ್ರಬುದ್ಧತೆಗೆ ನಿರಂತರದ ಗರಿ...

Last Updated 13 ಡಿಸೆಂಬರ್ 2011, 19:30 IST
ಅಕ್ಷರ ಗಾತ್ರ

ಹದಿನೈದು ವರ್ಷಗಳಿಂದ  ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಸಾಂಸ್ಕೃತಿಕ ಮಾಧ್ಯಮವಾಗಿ ಕೆಲಸ ಮಾಡುತ್ತಿರುವ `ನಿರಂತರ ಫೌಂಡೇಶನ್~ ತನ್ನದೇ ಆತ ಛಾಪು ಮೂಡಿಸುತ್ತಿದೆ. ಉತ್ಸಾಹಿ ಯುವ ಪ್ರತಿಭಾವಂತರನ್ನು ಒಳಗೊಂಡ `ನಿರಂತರ~ ತಂಡ ಪರಿಣಾಮಕಾರಿಯಾಗಿ ಜನಪರ ಹೋರಾಟದ ರಂಗಭೂಮಿಯಾಗಿ ರೂಪುಗೊಂಡಿದೆ...

ಯುವ ಶಕ್ತಿ ಮನಸ್ಸು ಮಾಡಿದರೆ ಯಾವುದೇ ರಂಗದಲ್ಲಾದರೂ ಪರಿವರ್ತನೆ ಮಾಡಬಹುದು ಎಂಬುದಕ್ಕೆ ಸಾಕ್ಷಿಯಾಗಿ ಮೈಸೂರಿನ ನಿರಂತರ ಫೌಂಡೇಶನ್ ತಂಡ ಶ್ರಮಿಸುತ್ತಿದೆ.

ಸಾಂಸ್ಕೃತಿಕ ನೆಲಗಟ್ಟಿನಲ್ಲಿ ತನ್ನ ಪ್ರತಿಭೆಯನ್ನು ನಾಟಕ ಹಾಗೂ ಸಾಂಸ್ಕೃತಿ ಚಟುವಟಿಕೆಗಳ ಮೂಲಕ ಬಿತ್ತುತ್ತಿರುವ ನಿರಂತರ ತಂಡವು, ಮೈಸೂರು ಮಾತ್ರವಲ್ಲದೇ ನಾಡಿನಾದ್ಯಂತ ತನ್ನ ಹಿರಿಮೆಯನ್ನು ವೃದ್ಧಿಕೊಳ್ಳುತ್ತಾ ಸಾಗಿದೆ.

ಆರಂಭದಲ್ಲಿ  `ಮಾನಸ ಗಂಗೋತ್ರಿ~ಯಲ್ಲಿ ಹತ್ತಾರು ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು ಕೆಲ ಹಿರಿಯರ ಆಸ್ಥೆಯಲ್ಲಿ ಕೇವಲ ಬೌದ್ಧಿಕ ಪಟ್ಟಾಂಗಕ್ಕೆ ವೇದಿಕೆಯಾಗಿದ್ದ `ನಿರಂತರ~ ಇಂದು ಒಂದು  ಸಾಂಸ್ಕೃತಿಕ ಕೂಸಾಗಿ ಬೆಳೆದಿರುವುದಕ್ಕೆ ಅದಕ್ಕಿರುವ ವೈಚಾರಿಕ ಮತ್ತು ಪ್ರಗತಿಪರ ಧೋರಣೆಗಳೇ ಬೆನ್ನೆಲುಬು.

ಸಾಂಸ್ಕೃತಿಕ ನೆಲೆಗಟ್ಟಿಗಾಗಿ, ಸಮಾಜದ ಉನ್ನತಿಗಾಗಿ, ಶಿಕ್ಷಣದ ಪ್ರಗತಿಗಾಗಿ ಪರ್ಯಾಯಗಳನ್ನು ಹುಡುಕುವ ಮೂಲಕ ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಸಾಂಸ್ಕೃತಿಕ ಮಾಧ್ಯಮವಾಗಿ ಕೆಲಸ ಮಾಡುತ್ತಿರುವ `ಮೈಸೂರಿನ ನಿರಂತರ ಫೌಂಡೇಶನ್~ಗೆ ಈಗ ಹತ್ತಿರತ್ತಿರ ಹದಿನೈದರ ತಾರುಣ್ಯ.

ನಿರಂತರ ಫೌಂಡೇಶನ್ ಮುಖ್ಯವಾಗಿ ಸಾಮಾಜಿಕ ಅರಿವು ಹಾಗೂ ಬದ್ಧತೆಯುಳ್ಳ ಉತ್ಸಾಹಿ ಪ್ರತಿಭಾವಂತರನ್ನು ಒಳಗೊಂಡ ಜನಪರ ಹೋರಾಟಗಳ ರಂಗಭೂಮಿಯಾಗಿ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತಿದೆ.

ಅನೇಕ ಸೃಜನಶೀಲ, ಜನಪಯೋಗಿ ಕಾರ್ಯಕ್ರಮಗಳನ್ನು ನಾಡಿನಾದ್ಯಂತ ನೀಡುತ್ತಾ ತನ್ನದೇ ಛಾಪು ಮೂಡಿಸಿದೆ. `ನಮ್ಮ ಜೀವನ ಇಡೀ ವಿಶ್ವಕ್ಕೆ ಸಂದೇಶವಿದ್ದಂತೆ. ಹೀಗಾಗಿ ಅದನ್ನು ಸ್ಫೂರ್ತಿದಾಯಕವಾಗಿಸಿಕೊಳ್ಳಬೇಕು~ ಎನ್ನುತ್ತಾರೆ ನಿರಂತರ ತಂಡದ ಕಲಾವಿದರು.

`ನಿರಂತರ~ ಅನೇಕ ಜನಪರ ಹೋರಾಟಗಳಲ್ಲೂ ತನ್ನನ್ನು ತೊಡಗಿಸಿಕೊಂಡಿದೆ. ಚಾಮಲಾಪುರ ಉಷ್ಣವಿದ್ಯುತ್ ಸ್ಥಾವರ ವಿರೋಧಿ ಚಳವಳಿಯಲ್ಲಿ ಯೋಜನೆಯ ದುಷ್ಪರಿಣಾಮಗಳ ಕುರಿತು ಬೀದಿನಾಟಕ ಹಾಗೂ ಸಾಕ್ಷ್ಯಚಿತ್ರಗಳ ಮೂಲಕ ಜನರಲ್ಲಿ ಅರಿವು ಮೂಡಿಸಿದೆ.

ಬಾಗಲಕೋಟೆ ಜಿಲ್ಲೆಯಲ್ಲಿ ನಡೆದ ಕರ್ನಾಟಕದ ಮೊತ್ತ ಮೊದಲ ಮಳೆನೀರು ಸಂಗ್ರಹಣೆ ಕುರಿತಾದ ಜಲಜಾಥಾ ನಡೆಸಿದೆ. ಕರ್ನಾಟಕದಾದ್ಯಂತ ಬಸವಣ್ಣನ ವಚನಗಳನ್ನಾಧರಿಸಿದ  ಮಹತ್ವಾಕಾಂಕ್ಷೆ  `ಕೂಡಲಸಂಗಮ~ ದೃಶ್ಯರೂಪಕದ 75 ಪ್ರದರ್ಶನಗಳನ್ನು ನೀಡಿದೆ.

ರೈತರ ಸಮಸ್ಯೆ ಕುರಿತಾದ ಬಾದಲ್ ಸರ್ಕಾರ್ ಅವರ `ಭೋಮ~ ನಾಟಕವನ್ನೂ ಯಶಸ್ವಿಯಾಗಿ ಪ್ರದರ್ಶಿಸಿರುವ ಹೆಗ್ಗಳಿಕೆಯೂ ಇದಕ್ಕಿದೆ.

ಜನಪದ ಮಹಾಕಾವ್ಯ ಜುಂಜಪ್ಪ ವಾಚನಾಭಿನಯ ಹಾಗೂ ಬಾದಲ್ ಸರ್ಕಾರ್  ಅವರ ಪಿ.ಗಂಗಾಧರಸ್ವಾಮಿ ನಿರ್ದೇಶನದ  `ಮೆರವಣಿಗೆ~ ನಾಟಕ ಪ್ರದರ್ಶನವೂ ನಿರಂತರದ ವೈಶಿಷ್ಟ್ಯಪೂರ್ಣ ಸಾಧನೆಯಲ್ಲಿ ಒಂದು ಮಹತ್ವದ ಮೈಲಿಗಲ್ಲು. 

ಪ್ರತಿವರ್ಷ ಕಾಲೇಜು ವಿದ್ಯಾರ್ಥಿಗಳಿಗಾಗಿ `ಸಹಜರಂಗ~ ಎಂಬ ರಂಗತರಬೇತಿ ಶಿಬಿರವನ್ನೂ ಆಯೋಜಿಸಿಕೊಂಡು ಬರುತ್ತಿದೆ. ರಂಗಭೂಮಿಯನ್ನುಪರದೆಯಾಗಿಟ್ಟುಕೊಂಡು ನಮ್ಮತನದ, ನೆಲ, ಜಲ, ಜನಪದ, ಸಂಸ್ಕೃತಿಯನ್ನು ಹೊಸ ತಲೆಮಾರಿನೊಂದಿಗೆ ಮುಖಾಮುಖಿಯಾಗಿಸುವ ಪ್ರಯತ್ನವೇ ಈ ಸಹಜರಂಗದ ಮುಖ್ಯ ಧ್ಯೇಯವಾಗಿದೆ.
ಚೆನ್ನಕೇಶವ ನಿರ್ದೇಶನದ ಕಾವ್ಯಗಳನ್ನಾಧರಿಸಿದ `ಇದೆ...ಇತ್ತು...ಇರುತ್ತದೆ~ಯನ್ನು ಪ್ರದರ್ಶಿಸಿದೆ.

ಖ್ಯಾತ ರಂಗ ನಿರ್ದೇಶಕರಾದ ಚಿದಂಬರರಾವ್ ಜಂಬೆ ಅವರ   ನಿರ್ದೇಶನದಲ್ಲಿ ಚೀನಿ ನಾಟಕಕಾರ ಲಾವೋಶೆಯವರ `ಟೀ ಹೌಸ್~ ನಾಟಕ ಪ್ರದರ್ಶನವನ್ನು ಯಶಸ್ವಿಯಾಗಿ ನಡೆಸಿದೆ.

ಅಂತರರಾಜ್ಯ ಸಾಂಸ್ಕೃತಿಕ ಕೊಡುಕೊಳ್ಳುವಿಕೆಯ ನಿಟ್ಟಿನಲ್ಲಿ ಮಣಿಪುರದ ಕನ್ಹಯ್ಯಾಲಾಲ್ ಅವರ ಕಲಾಕ್ಷೇತ್ರ ತಂಡದ `ಬಿಜಲಿ ಪಪ್ಪೆಟ್~ ಹಾಗೂ ಛತ್ತೀಸ್‌ಗಡದ  ಬಸ್ತಾರ್ ಬ್ಯಾಂಡ್ ಪ್ರದರ್ಶನವನ್ನೂ ಆಯೋಜಿಸಿ ಸೈ ಎನ್ನಿಸಿಕೊಂಡಿದೆ.

ಭಿನ್ನವಿಭಿನ್ನ ನಾಟಕ ಹಾಗೂ ಪ್ರಯೋಗ ಶೈಲಿಯನ್ನು ಒಂದೆಡೆ ಪ್ರಯೋಗಿಸುವ  ನಿರಂತರ ರಂಗ ಉತ್ಸವವನ್ನು ಪ್ರತಿವರ್ಷ ನಡೆಸಿಕೊಂಡು ಬರುತ್ತಿರುವುದು ಇದರ ಮತ್ತೊಂದು ವಿಶೇಷ.

ಪರಿಸರ ಪಕ್ಷಿಗಳ ಅರಿವು ಮೂಡಿಸುವ ಮಕ್ಕಳ ಗೀತೆಗಳ `ಹಾರೋಣ ಬಾ~ ಪುಸ್ತಕ ಹೊರತರುವ ಮೂಲಕ ಶಿಶು ಸಾಹಿತ್ಯಕ್ಕೂ ತನ್ನ ಕೊಡುಗೆ ನೀಡಿದೆ.      

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT