ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಧಿಕಾ ರಾಗ ಸೌಗಂಧಿಕ

Last Updated 31 ಮೇ 2011, 19:30 IST
ಅಕ್ಷರ ಗಾತ್ರ

`ಹಗಲೋ ಇರುಳೋ
ನನಗೊಂದು ತೋರದಿಂದು
ಏನೋ ನೋವು
ಮನದಲ್ಲಿ ನಿಂತು ನೀ ಕಾಡಿರಲು...~

`ಮಯೂರ~ ಚಿತ್ರದ ಈ ವಿಷಾದ ಗೀತೆ ಮಹಾಗುರು ಹಂಸಲೇಖ ಅವರ ಮನಸ್ಸನ್ನೂ ಕಾಡಿತು. ಹೀಗೆ ಕಾಡಲು ಕಾರಣವಾಗಿದ್ದು ಶ್ರುತಿಬದ್ಧವಾಗಿ ಆಲಾಪದೊಂದಿಗೆ ಮೂಡಿಬಂದ ಸುಶ್ರಾವ್ಯ ಗಾಯನ.

ಆ ಗಾಯನ ಮೆಚ್ಚಿ `ಬೆಸ್ಟ್ ಪರ್‌ಫಾರ್‌ಮೆನ್ಸ್ ಆಫ್ ದಿ ಡೇ~ ಪ್ರಶಸ್ತಿಯನ್ನೂ ಕೊಟ್ಟರು.ಹೀಗೆ ನಾದಬ್ರಹ್ಮನೂ ತಲೆದೂಗುವಂತೆ ಎದೆ ತುಂಬಿ ಹಾಡಿದ ಮರಿ ಕೋಗಿಲೆಯೇ `ರಾಧಿಕಾ ಐ ಭಟ್~.

ಹೌದು, ಈ ಟೀವಿ ವಾಹಿನಿಯಲ್ಲಿ ಮೂಡಿ ಬರುವ `ಎದೆ ತುಂಬಿ ಹಾಡುವೆನು~ ಸಂಗೀತ ಸ್ಪರ್ಧೆಯಲ್ಲಿ ವೈವಿಧ್ಯಮಯ ಗೀತೆಗಳನ್ನು ಹಾಡಿ ಗಾನಬ್ರಹ್ಮ ಎಸ್‌ಪಿಬಿ ಅವರ ಮೆಚ್ಚುಗೆಗೂ ಪಾತ್ರರಾದ ರಾಧಿಕಾ  ಸಾಂಸ್ಕೃತಿಕ ನಗರಿ ಮೈಸೂರಿನವರು.

ಮೈಸೂರಿನಲ್ಲಿ ನಡೆದ ದಸರಾ ವಸ್ತುಪ್ರದರ್ಶನದಲ್ಲಿ ರಾಧಿಕಾ ತನ್ನ ಮೂರುವರೆ ವಯಸ್ಸಿನಲ್ಲಿ ಮೊದಲ ಬಾರಿಗೆ 5-12ವರ್ಷದೊಳಗಿನ ಗುಂಪಿನವರ ಜೊತೆ ಸ್ಪರ್ಧಿಸಿ `ಇದು ಬಾಪೂಜಿ ಬೆಳಗಿದ ಭಾರತ~ ಹಾಡಿ ತೃತೀಯ ಪ್ರಶಸ್ತಿ ಗಳಿಸಿದ್ದರು.
 
1ನೇ ತರಗತಿಯಲ್ಲಿದ್ದಾಗ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ವತಿಯಿಂದ ನಡೆಯುವ ರಾಜ್ಯ ಮಟ್ಟದ ಭಾವಗೀತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದರು.ಹೀಗೆ ರಾಧಿಕಾ ಚಿಕ್ಕವಯಸ್ಸಿನಲ್ಲೇ ತನ್ನ ಸಂಗೀತ ಪ್ರತಿಭೆಯನ್ನು ಸಾಬೀತು ಪಡಿಸಿದ್ದರು.
 
ಮೊದಲಿಗೆ ವಸಂತ ಅವರಲ್ಲಿ ದೇವರ ನಾಮಗಳನ್ನು ಕಲಿತು, ವಿದುಷಿ ಪದ್ಮಅವರಲ್ಲಿ ಕೆಲಕಾಲ ಅಭ್ಯಾಸ ಮಾಡಿ ನಂತರ ಎಂ.ಎಲ್.ಭಾರತಿ ಅವರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದರು. 10 ವರ್ಷದಿಂದ ಸುನೀತಾ ಚಂದ್ರಶೇಖರ್ ಅವರಲ್ಲಿ ಸುಗಮ ಸಂಗೀತ ಕಲಿಯುತ್ತಿದ್ದಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತ ಜೂನಿಯರ್ ಪರೀಕ್ಷೆಯಲ್ಲಿ ಶೇ 86 ಮತ್ತು ಸೀನಿಯರ್ ಪರೀಕ್ಷೆಯಲ್ಲಿ ಶೇ 74 ಫಲಿತಾಂಶದೊಂದಿಗೆ ತೇರ್ಗಡೆಯಾಗಿದ್ದಾರೆ.

`ವಂದನೆ ವಂದನೆ ಸಾಧನೆ ತೋರಿದ...~
ರಾಧಿಕಾ ಅವರು ರಾಜು ಅನಂತಸ್ವಾಮಿಯವರ `ಭಾವ ಸಂಗಮ~, ಚಂದನ ವಾಹಿನಿಯ `ಸ್ವರಮಾಧುರ್ಯ~, ಉದಯ ವಾಹಿನಿಯ `ಹಾಡು ಬಾ ಕೋಗಿಲೆ~, ಜೀ ವಾಹಿನಿಯ `ಸರಿಗಮಪ ಚಾಲೆಂಜ್~ ಮುಂತಾದ ಹೆಸರಾಂತ ಸಂಗೀತ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಬಹುಮಾನ, ಸನ್ಮಾನಗಳಿಗೆ ಪಾತ್ರರಾಗಿದ್ದಾರೆ.

ಸಿರಿಗೆರೆ ಮಠದ ತರಳಬಾಳು ಹುಣ್ಣಿಮೆ ಕಾರ್ಯಕ್ರಮ, ಸಂಗೀತ ಕಟ್ಟಿ ನೇತೃತ್ವದಲ್ಲಿ `ಬೇಂದ್ರೆ ಗೀತ ಯಾತ್ರೆ~, ಕಂಸಾಳೆ ರಾಮಣ್ಣನವರ ಮೇಳಗಳಲ್ಲಿ ತಮ್ಮ ಸಂಗೀತ ಸುಧೆಯನ್ನು ಉಣಬಡಿಸಿದ್ದಾರೆ. ಪ್ರವೀಣ್ ಗೋಡ್ಖಿಂಡಿ, ಪ್ರವೀಣ್ ಡಿ.ರಾವ್, ಪುತ್ತೂರು ನರಸಿಂಹನಾಯಕ್, ಆನೂರು ಅನಂತಕೃಷ್ಣ ಮುಂತಾದವರ ಸಂಗೀತ ಕಾರ್ಯಾಗಾರಗಳಲ್ಲಿ ಭಾಗವಹಿಸಿ ಉತ್ತಮ ತರಬೇತಿಯನ್ನೂ ಪಡೆದಿದ್ದಾರೆ.

ರಾಧಿಕಾ ಅವರ ತಂದೆ ಕೆ.ಈಶ್ವರ ಭಟ್.  ತಾಯಿ ಸುಧಾ. ಪ್ರಸಕ್ತ ವರ್ಷ ಶೇ 84 ಅಂಕಗಳೊಂದಿಗೆ ದ್ವಿತೀಯ ಪಿಯು ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ರಾಧಿಕಾ ಕಾನೂನು ಪದವಿ ಪಡೆಯುವ ಆಕಾಂಕ್ಷಿಯಾಗಿದ್ದಾರೆ.
 
ಸಿನಿಮಾಗಳಲ್ಲಿ ಅಭಿನಯಿಸಲು ಅವಕಾಶ ದೊರೆತರೂ ಒಪ್ಪದೆ, ಶ್ರೇಷ್ಠ ಗಾಯಕಿ ಆಗಬೇಕು ಎಂಬ ಹಂಬಲದಿಂದ ಪ್ರತಿನಿತ್ಯ ಶ್ರದ್ಧೆಯಿಂದ ಅಭ್ಯಾಸ ಮಾಡುತ್ತಾ ಸಂಗೀತವನ್ನೇ ಉಸಿರಾಗಿಸಿಕೊಂಡಿದ್ದಾರೆ. ಇವರಿಗೆ ಮಹಮ್ಮದ್ ರಫಿ, ಲತಾ ಮಂಗೇಶ್ಕರ್, ಎಸ್ಪಿಬಿ ಮೆಚ್ಚಿನ ಗಾಯಕರು.

ಮಂದ್ರ, ತಾರಕ ಸ್ಥಾನಗಳೆರಡರಲ್ಲೂ ಶ್ರುತಿಬದ್ಧವಾಗಿ ಹಾಡುವ ರಾಧಿಕಾ ಅವರು ರಾಕ್ ಗೀತೆಗಳನ್ನು ಸರಾಗವಾಗಿ ಹಾಡುತ್ತಾರೆ. ಭಾವ ಪ್ರಧಾನ ಗೀತೆಗಳಿಗೆ ಮತ್ತಷ್ಟು ಜೀವ ತುಂಬಿ  ಕೇಳುಗರ ಹೃನ್ಮನ ತಣಿಯುವಂತೆ ಹಾಡಬೇಕು ಎಂಬ ಅಭಿಲಾಷೆ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT