ಹದಿಹರೆಯದ ತರುಣ ತರುಣಿಯರು ರೂಪಾಯಿ– ಡಾಲರ್ಗಳ ಗಣಿತದಲ್ಲಿ ಮುಳುಗಿರುವಾಗ, ಒಂಟಿ ಪಥಿಕನಂತೆ ಕಾಣುವ ಇಮ್ರಾನ್ ‘ವಟರ್ ವಟರ್...’ ಎನ್ನುವ ಕಪ್ಪೆಗಳ ಬೆನ್ನುಬಿದ್ದಿದ್ದಾರೆ! ಪಕ್ಷಿಗಳು, ಕಪ್ಪೆಗಳು ಸೇರಿದಂತೆ ಅಳಿವಿನಂಚಿನ ಅನೇಕ ಜೀವವೈವಿಧ್ಯಗಳ ಕುರಿತ ಮಾಹಿತಿ ಈ ತರುಣನ ನಾಲಗೆ ತುದಿಯಲ್ಲಿದೆ. ಕಪ್ಪೆಗಳ ಕುರಿತ ಅವರ ಅಧ್ಯಯನ, ಪರಿಸರದ ಜೊತೆಗೆ ಮನುಷ್ಯ ಹೊಂದಿರಬೇಕಾದ ಸೌಹಾರ್ದ ಸಂಬಂಧದ ಅಗತ್ಯವನ್ನು ಎತ್ತಿತೋರಿಸುವಂತಿದೆ.

ಆಗಿನ್ನೂ ಆ ಹುಡುಗನಿಗೆ ನಾಲ್ಕರ ಹರೆಯ. ರಸ್ತೆ ಮೇಲೆ ನಡೆಯುವಾಗ ಮುಗ್ಗರಿಸಿದರೆ ಸಾವರಿಸಿಕೊಳ್ಳಲು ಆಗದ ಪುಟ್ಟ ಹೆಜ್ಜೆ. ಅಜ್ಜ ಕಾಡಿಗೆ ಹೊರಡುವ ಸುಳಿವು ಸಿಕ್ಕರೆ ಸಾಕು, ‘ನಾನೂ ಬರುವೆ’ ಎಂದು ರಚ್ಚೆ ಹಿಡಿಯುತ್ತಿದ್ದ. ತನ್ನ ಸುತ್ತಲೂ ನೆಲವನ್ನು ತಬ್ಬಿನಿಂತಿದ್ದ ಅಪಾರ ಕಾನನವನ್ನು ಸುತ್ತುವುದೆಂದರೆ ಸಿಹಿ ಸವಿದಷ್ಟು ಪುಳಕ. ಅಜ್ಜನ ಜತೆ ಕಾಡು ಸುತ್ತುತ್ತಲೇ ಗಿಡ–ಮರಗಳನ್ನು ಪ್ರೀತಿಸಿದ. ಗೆಳೆಯರ ಸಹವಾಸ ಬಿಟ್ಟು ಶಾಲೆಗೆ ರಜೆ ಇದ್ದಾಗಲೆಲ್ಲ ಕಾಡು–ಬೆಟ್ಟ ಸುತ್ತುತ್ತಿದ್ದ. ಹಳ್ಳದ ಅಂಚಿನಲ್ಲಿ ಕುಳಿತು ಗಾಳ ಹಾಕಿ ಮೀನು ಹಿಡಿಯುವ ಹಳ್ಳಿ ಹುಡುಗರ ಒಡನಾಟ ಬೆಳೆಯಿತು. ಈ ಆಸೆ–ಹವ್ಯಾಸಗಳೇ ಆತನಿಗೆ ಉಭಯಚರಗಳ ಅಧ್ಯಯನಕ್ಕೆ ತಳಪಾಯ ಹಾಕಿಕೊಟ್ಟಿತು.

ಇದು ಕಪ್ಪೆಗಳ ಬಗ್ಗೆ ಅಧ್ಯಯನದಲ್ಲಿ ತೊಡಗಿರುವ ಇಮ್ರಾನ್ ಪಟೇಲ್ ಅವರ ಅಧ್ಯಯನ–ಆಸಕ್ತಿಗಳು. ಇವನ್ನೆಲ್ಲಾ ಗಮನಿಸಿಸುತ್ತಾ ಹೋದಂತೆ ಇಮ್ರಾನ್ ಅವರ ಕುರಿತ ಆಸಕ್ತಿದಾಯಕ ಅಂಶಗಳು ಅನಾವರಣಗೊಳ್ಳುತ್ತವೆ. ಸುಮಾರು 65ಕ್ಕೂ ಹೆಚ್ಚಿನ ಜಾತಿಯ ಕಪ್ಪೆಗಳ ಬಗ್ಗೆ ಅಧ್ಯಯನ ನಡೆಸಿರುವ ಇಮ್ರಾನ್, ಕಪ್ಪೆಗಳ ಜೀವನ ಶೈಲಿ ಹಾಗೂ ಆಹಾರ ಕ್ರಮದ ಮಾಹಿತಿಕೋಶ ಎಂದರೆ ಕ್ಲೀಷೆಯಲ್ಲ.

ಅಂದಹಾಗೆ, ಶಬ್ದದಿಂದ ನಿಶ್ಶಬ್ದದೆಡೆಗಿನ ಬಾಲ್ಯದ ತುಡಿತ ಅವರನ್ನು ಮೌನ ಕಣಿವೆಯೆಡೆಗೆ ಸೆಳೆಯಿತು. ಗೆಳೆಯರೆಲ್ಲ ಕಾಂಕ್ರೀಟ್ ಕಾಡಿನೊಳಗೆ ನುಗ್ಗಿ ಹಣದ ಹಿಂದೆ ಹೊರಟರೆ ಇಮ್ರಾನ್ ಒಂಟಿ ಪಥಿಕನಂತೆ ಹಸಿರು ಕಾನನದ ಒಳಹೊಕ್ಕು ಮೌನಜೀವಿಗಳ ಸಖ್ಯ ಬೆಳೆಸಿಕೊಂಡರು. ಗಂಟೆಗಟ್ಟಲೇ ತಾಳ್ಮೆಯಿಂದ ಮರೆಯಲ್ಲಿ ಅವಿತು ನಿಂತು ಕ್ಯಾಮೆರಾ ಕಣ್ಣಿನಲ್ಲಿ ಉಭಯ ವಾಸಿಗಳನ್ನು ಅಭ್ಯಸಿಸಿದರು.
ಇಮ್ರಾನ್ ಮೂಲತಃ ಶಿವಮೊಗ್ಗ ಜಿಲ್ಲೆಯವರಾದರೂ ಶಿರಸಿಯ ಮಣ್ಣಿನಲ್ಲಿ ಆಡಿ ಬೆಳೆದವರು. ಸದ್ಯ ಉತ್ತರ ಕನ್ನಡ ಜಿಲ್ಲೆ ಶಿರಸಿ ಸಮೀಪದ ಮಳಗಿಯಲ್ಲಿರುವ ಧಾರವಾಡ ಕೃಷಿ ವಿಶ್ವವಿದ್ಯಾಲಯ ವ್ಯಾಪ್ತಿಯ ಅರಣ್ಯ ಕಾಲೇಜಿನ ಸಂಶೋಧನಾ ಕೇಂದ್ರದಲ್ಲಿ ಅಂತಿಮ ವರ್ಷದ ಪದವಿ ಓದುತ್ತಿದ್ದಾರೆ.

ಕಪ್ಪೆಗಳ ಬೆನ್ನುಬಿದ್ದು...
ಬೆಳಿಗ್ಗೆ ಕಾಲೇಜಿನಲ್ಲಿ ಪ್ರಾಧ್ಯಾಪಕರ ಪಾಠ ಕೇಳುವ ಇಮ್ರಾನ್ ತಮ್ಮ ಕಾರ್ಯಚಟುವಟಿಕೆಗೆ ಆಯ್ದುಕೊಳ್ಳುವುದು ಕತ್ತಲು ಕವಿದ ಇರುಳನ್ನು. ಕತ್ತಲಾವರಿಸಿದ ಮೇಲೆ ಉಭಯಚರಗಳ ಹುಡುಕಾಟ ನಡೆಸುವ ಅವರು ರಾತ್ರಿ 2 ಗಂಟೆಯಾದರೂ ಸರಿ, ಅವುಗಳ ಚಿತ್ರ ಸೆರೆಹಿಡಿಯದೇ, ಅವುಗಳ ಬದುಕಿನ ಕ್ರಮವನ್ನು ನೋಡದೇ ವಿರಮಿಸುವುದಿಲ್ಲ. ಈಗಾಗಲೇ 30ಕ್ಕೂ ಹೆಚ್ಚು ಜಾತಿಯ ಕಪ್ಪೆಗಳ ಜೀವನ ಪದ್ಧತಿ, ಆಹಾರ ಕ್ರಮ, ವಾಸಸ್ಥಾನದ ವಿವರ ಅವರಿಗೆ ಅಲೆದಾಟದಿಂದ ದಕ್ಕಿದೆ. ಇನ್ನೂ 35 ಜಾತಿಯ ಕಪ್ಪೆಗಳ ಕುರಿತು ಹೆಚ್ಚಿನ ಅಧ್ಯಯನದಲ್ಲಿ ತೊಡಗಿದ್ದಾರೆ.

ಉಭಯವಾಸಿಗಳ ಮೇಲೆ ಕಣ್ಣು!
ಮಳೆಗಾಲ ಕಪ್ಪೆಗಳ ಸಂಭ್ರಮದ ಕಾಲ. ಮಳೆಯ ಮುನ್ಸೂಚನೆ ಕೊಡುವ ಕಪ್ಪೆಗಳು ಶಾಂತ ಜೀವಿಗಳು. ಪಟ್ಟಣದ ಗದ್ದಲದಲ್ಲಿ ಅವು ಕಾಣಸಿಗುವುದು ವಿರಳ. ಆದರೆ ನೀರಿನ ಗುಂಡಿಯ ಕಡೆಗೆ ಕಣ್ಣು ಹಾಯಿಸಿದರೆ ಕಪ್ಪೆಗಳ ದರ್ಶನವಾಗುತ್ತದೆ. ಕಪ್ಪೆಗಳ ಜೀವನಕ್ರಮವನ್ನು ಸೂಕ್ಷ್ಮವಾಗಿ ಗಮನಿಸಿದರೆ ಅನೇಕ ಕುತೂಹಲಕರ ಅಂಶಗಳು ಕಾಣಿಸುತ್ತವೆ. ಹುಲ್ಲುಗಾವಲಿನ ನೆಲದಲ್ಲಿ ನೆಲೆಸುವ ಚಿಕ್ಕ ಗಾತ್ರದ ಕ್ರಿಕೆಟ್ ಕಪ್ಪೆಗಳನ್ನು (ranalimnocharis) ಗಮನಿಸಿ– ಮಳೆಗಾಲದಲ್ಲಿ ಅವು ಸಾಮೂಹಿಕ ಗಾಯನ ನಡೆಸುತ್ತವೆ. ಮೊದಲ ಮಳೆಗೆ ಅವುಗಳ ಸಂತಾನೋತ್ಪತ್ತಿ ಪ್ರಾರಂಭವಾಗುತ್ತದೆ. ಎರಡು ಧ್ವನಿಕೋಶಗಳ ಮೂಲಕ ನೋಡುಗರನ್ನು ಸೆಳೆಯುತ್ತವೆ. ಅರ್ಧನಾರೀಶ್ವರನನ್ನು ನೆನಪಿಸುವ ಮಧ್ಯಮ ಗಾತ್ರದ ದ್ವಿಬಣ್ಣದ ಕಪ್ಪೆಗಳು (bi– coloured frog, ranacurtipes) ಹಳದಿ ಹಾಗೂ ಕಪ್ಪುಮಿಶ್ರಿತ ಮೈಬಣ್ಣ ಹೊಂದಿರುತ್ತವೆ. ಪಶ್ಚಿಮಘಟ್ಟದ ಕಾಡಿನಲ್ಲಿ ಕಾಣಸಿಗುವ ಇವು ಸಾಮಾನ್ಯವಾಗಿ ನದಿ–ತೊರೆಯ ದಡದ ಸಮೀಪ ಈಜಾಡುತ್ತಿರುತ್ತವೆ. Marbled Ramnella (ramanellamormorata) ಇದು ವಿನಾಶದ ಅಂಚಿನಲ್ಲಿರುವ ಕಪ್ಪೆಯ ಪ್ರಬೇಧ. ಮರದ ಪೊಟರೆ, ತೇವಾಂಶವಿರುವ ಭೂಮಿಯಲ್ಲಿ ಮಾತ್ರ ಕಂಡು ಬರುವ ಇವು ಗೆದ್ದಲನ್ನು ತಿಂದು ಜೀವಿಸುತ್ತವೆ.

ಬಿಲದಲ್ಲಿ ವಾಸಿಸುವ ಕಪ್ಪೆಗಳ ಜಾತಿಗೆ ಸೇರುವ ಇಂಡಿಯನ್ ಬೊರೊವಿಂಗ್ ಫ್ರಾಗ್ (sphaerotheabreviceps) ತನ್ನ ಬಹುತೇಕ ಬದುಕನ್ನು ಭೂಮಿಯ ಒಡಲಲ್ಲಿ ಅಜ್ಞಾತವಾಗಿ ಕಳೆಯುತ್ತದೆ. ಸಂತಾನವೃದ್ಧಿ ವೇಳೆಗೆ ಮಾತ್ರ ಇವು ನೆಲದ ಮೇಲೆ ಕಾಣಸಿಗುವುದು.
ಈಜುಗಾರ ಕಪ್ಪೆಗಳು ನೀರಿನ ಸೆಲೆಯ ಸಮೀಪದಲ್ಲೇ ಸಂಸಾರ ಹೂಡುತ್ತವೆ. ಮೇಲ್ಮುಖದಲ್ಲಿ ಕಣ್ಣು, ಮೂಗಿನ ಹೊಳ್ಳೆ ಹೊಂದಿರುವ ಇವು ನೀರಿನಲ್ಲಿದ್ದರೂ ಸರಾಗವಾಗಿ ಉಸಿರಾಡಬಲ್ಲವು. ಇದೇ ಜಾತಿಗೆ ಸೇರಿದ ಸ್ಕಿಟರಿಂಗ್ ಕಪ್ಪೆಗಳು (euphlyctiscyanophlyctis) ಸಾಮಾನ್ಯವಾಗಿ ಎಲ್ಲೆಡೆ ಕಾಣಸಿಗುತ್ತವೆ. ಇನ್ನಾವುದೋ ಪ್ರಾಣಿಯ ಚಲನವಲನದ ಸದ್ದು ಕೇಳಿದರೆ ಸಾಕು ಥಟ್ಟನೆ ನೀರಿಗೆ ಜಿಗಿಯುತ್ತವೆ. ‘ಕಪ್ಪೆಯ ಕಾಲಿನ ಉದ್ಯಮಕ್ಕೆ ಬಲಿಯಾಗಿ ಸ್ಕಿಟರಿಂಗ್ ಕಪ್ಪೆಗಳು ಕಣ್ಮರೆಯಾಗುವುದನ್ನು ಗಮನಿಸಿದ ಭಾರತ ಸರ್ಕಾರ ಈ ಉದ್ಯಮವನ್ನು ನಿಷೇಧಿಸಿದೆ’ ಎನ್ನುವ ಇಮ್ರಾನ್ ವಿವಿಧ ಜಾತಿಯ ಕಪ್ಪೆಗಳ ಜೀವನ ಚಿತ್ರಣವನ್ನು ತುಣುಕು ತುಣುಕಾಗಿ ಕಟ್ಟಿಕೊಡುತ್ತಾರೆ.

ಕಪ್ಪೆಗಳ ಬಗ್ಗೆ ಮಾತನಾಡುತ್ತಾ ಹೋದರೆ ಇಮ್ರಾನ್ ತಾಸುಗಟ್ಟಲೆ ಬಿಡುವಿಲ್ಲದೇ ಹೇಳುವರು. ಕಪ್ಪೆಗಳಲ್ಲೇ ದೊಡ್ಡ ಕುಳಗಳು ‘ಇಂಡಿಯನ್ ಬುಲ್ ಫ್ರಾಗ್’ (hoplobatrachustigerinus). ಪಶ್ಚಿಮ ಘಟ್ಟದಲ್ಲಿ ಬಹುವಾಗಿ ಕಾಣುವ ಇವು 6 ಇಂಚು ಗಾತ್ರದವರೆಗೆ ಬೆಳವಣಿಗೆ ಹೊಂದುತ್ತವೆ. ವಿವಿಧ ಉದ್ಯಮಗಳಿಗೆ ತಲೆದಂಡವಾಗುವ ಕಪ್ಪೆಗಳಲ್ಲಿ ಇವು ಮೊದಲ ಸ್ಥಾನದಲ್ಲಿವೆ. ಮರದ ಮೇಲೆ ವಾಸಿಸುವ ಕಪ್ಪೆಗಳು ಸಾಮಾನ್ಯವಾಗಿ ದೊಡ್ಡ ಕಣ್ಣು ಹೊಂದಿರುತ್ತವೆ. ಕಾಮನ್ ಇಂಡಿಯನ್ ಬುಲ್ ಫ್ರಾಗ್ (polypedatesmaculatus) ಹಗಲಿನಲ್ಲಿ ಕಪಾಟು, ಪುಸ್ತಕಗಳ ರಾಶಿ, ಷೂ ಇಂಥ ಸಣ್ಣಪುಟ್ಟ ಸ್ಥಳಗಳಲ್ಲಿ ಅವಿತುಕೊಳ್ಳುತ್ತದೆ. ಒಂದು ಸ್ಥಳದಲ್ಲಿ ಭದ್ರ ನೆಲೆ ಕಂಡರೆ ಇವನ್ನು ತಳ್ಳಿದರೂ ಮತ್ತೆ ಹಿಂದೆಯೇ ಓಡಿಬಂದು ಅವಿತುಕೊಳ್ಳುತ್ತವೆ. ಕಪ್ಪೆಗಳ ಉಳಿವಿನ ಬಗ್ಗೆ ಇಮ್ರಾನ್ ಅವರಿಗೆ ಇನ್ನಿಲ್ಲದ ಕಾಳಜಿ.

‘ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮನೆ ಮಾಡಿರುವ ನೂರಾರು ಜಾತಿಯ ಕಪ್ಪೆಗಳ ಬಗ್ಗೆ ಅಧ್ಯಯನ ನಡೆಸಿ ದಾಖಲಿಸಬೇಕಾಗಿದೆ. ಹುಲಿಯ ಬಗೆಗೆ ಸಾಕಷ್ಟು ಸಂಶೋಧನೆಗಳು ನಡೆದಿವೆ. ಕಾಡಿನ ಒಂದೊಂದು ಜೀವಿಯ ಕುರಿತು ನೂರಾರು ಬರಹಗಳಿವೆ. ಆದರೆ ಉಭಯಜೀವಿ ಕಪ್ಪೆಗಳ ಕಡೆಗೆ ಗಮನವಿಟ್ಟವರು ಕೆಲವೇ ಮಂದಿ. ಪರಿಸರದ ಬದಲಾವಣೆಗೆ ಮೊದಲು ಬಲಿಯಾಗುವ ಜೀವಿ ಈ ಉಭಯಚರ. ಪರಿಸರ ಮಾಲಿನ್ಯ ಕೂಡ ಇವುಗಳ ಸಂತತಿ ಯನ್ನು ವಿನಾಶಕ್ಕೆ ತಲುಪಿಸಿದೆ. ಪಶ್ಚಿಮ ಘಟ್ಟದಲ್ಲಿ 138 ಜಾತಿಯ ವಿನಾಶದ ಅಂಚಿನಲ್ಲಿರುವ ಕಪ್ಪೆಗಳಿವೆ. 20 ಜಾತಿಯ ಕಪ್ಪೆಗಳು ಸಾಮಾನ್ಯವಾಗಿ ಎಲ್ಲೆಡೆ ಕಾಣಸಿಗುತ್ತವೆ’ ಎನ್ನುವ ಇಮ್ರಾನ್, ತಾವು ಸೆರೆ ಹಿಡಿದ ಅಪರೂಪದ ಕಪ್ಪೆಗಳ ಚಿತ್ರಗಳನ್ನು ಎದುರಿಗಿಡುತ್ತಾರೆ.

ಅಜ್ಜನ ಬಳುವಳಿ
ಅಂದಹಾಗೆ, ಇಮ್ರಾನ್ ಅವರು ಕಾಡು ಮತ್ತು ಪ್ರಾಣಿಗಳ ಸಖ್ಯ ಬೆಳೆಸಲು ಅವರ ಬಾಲ್ಯದ ಕ್ಷಣಗಳೇ ಕಾರಣ. ಅರಣ್ಯ ಇಲಾಖೆಯಲ್ಲಿ ಆರ್ಎಫ್ಒ ಆಗಿದ್ದ ಅಜ್ಜ ಅಬ್ದುಲ್ ಲತೀಫ್ ಮರೋಲ್ ಹಾಗೂ ಅರಣ್ಯ ಇಲಾಖೆಯ ನಿವೃತ್ತ ಅಧಿಕಾರಿ ಅಪ್ಪ ಎ.ಎಂ. ಪಟೇಲ್ ಅವರುಗಳು ಬಾಲಕ ಇಮ್ರಾನ್ನನ್ನು ಕಾಡಿನ ಸಖ್ಯದ ದಾರಿಯಲ್ಲಿ ನಡೆಸಿದರು. ‘ಅಜ್ಜನ ಪ್ರಭಾವ ಎಷ್ಟಿತ್ತೆಂದರೆ ಎಲ್ಕೆಜಿ ಬಾಲಕನಿರುವಾಗ ಸಹಪಾಠಿಗಳು ಆಟ ಆಡೋಣವೆಂದರೆ ಅರಣ್ಯ ಇಲಾಖೆ ಅಧಿಕಾರಿ ಪಾತ್ರಕ್ಕೆ ಒತ್ತಾಯಿಸುತ್ತಿದ್ದೆ. ಇಲ್ಲವಾದರೆ ಆಟಕ್ಕೆ ಒಲ್ಲೆ ಎನ್ನುತ್ತಿದ್ದೆ. ಈಗ ಇಲಾಖೆ ಮೇಲಿನ ಪ್ರೀತಿ ದೂರವಾಗಿದೆ. ಅರಣ್ಯದ ನಂಟು ಹೆಚ್ಚಾಗಿದೆ. ನಾನು ಹೋಗುತ್ತಿದ್ದ ಪಟ್ಟಣದ ಇಂಗ್ಲಿಷ್ ಮಾಧ್ಯಮ ಶಾಲೆಯ ಗೆಳೆಯರಿಗೆ ಕಾಡು, ಬೆಟ್ಟ ಇವೆಲ್ಲ ಬೋರು ಎನಿಸುತ್ತಿತ್ತು. ನನಗೆ ಬೇರೊಂದು ಆಟ–ಲೋಕ ರುಚಿಸಲೇ ಇಲ್ಲ. ಹಳ್ಳಿಯ ಹುಡುಗರ ಜೊತೆ ನೇರಳೆ ಹಣ್ಣು ಕೊಯ್ಯಲು ಕಾಡಿಗೆ ಹೋಗುತ್ತಿದ್ದೆ. ಮುಂಗಾರು ಮಳೆಯ ಹೊತ್ತಿಗೆ ತೊರೆಯ ಅಂಚಿಗೆ ಕುಳಿತು ಮೀನು ಹಿಡಿಯುವಾಗ ಜಿಗಿದು ಮಾಯವಾಗುವ ಬಣ್ಣದ ಕಪ್ಪೆಗಳು ನನ್ನನ್ನು ಸೆಳೆದವು. ಕಪ್ಪೆ ಹಿಡಿದು ಮನೆಗೆ ತಂದರೆ ವಾಸನೆ ಎಂದು ಬೈಯುವ ಅಮ್ಮ, ಬಿಟ್ಟರೂ ಬಿಡಲೊಲ್ಲೆ ಎಂಬ ನಾನು. ಇದಕ್ಕೆ ಸಾಕ್ಷಿಯಾಗುವವರು ಅಪ್ಪ. ಈಗ ನನಗೆ ನಿತ್ಯ ಬೆಳಿಗ್ಗೆ ಕನಿಷ್ಠ ಒಂದು ಗಂಟೆಯಾದರೂ ಪ್ರಾಣಿಗಳ ಒಡನಾಟ ಬೇಕೇ ಬೇಕು’ ಎಂದು ಬಾಲ್ಯದ ನೆನಪುಗಳನ್ನು ಇಮ್ರಾನ್ ಚಪ್ಪರಿಸುತ್ತಾರೆ.

‘ಪದವಿ ಪೂರ್ವ ಶಿಕ್ಷಣ ತಲುಪುವ ಹೊತ್ತಿಗೆ ಕಾಡಿನ ಸಮಸ್ಯೆಯ ಸಂಕೀರ್ಣತೆ ಅರ್ಥವಾಯಿತು. ನಾವಿರುವುದು ಕಾಡಿನ ದೇಶದಲ್ಲಿ ಎಂಬುದು ಬರೀ ಭ್ರಮೆ, ಕಾಡು ಉಳಿದಿರುವುದು ಶೇ 1ರಷ್ಟು ಮಾತ್ರ ಎನ್ನುತ ಕಹಿ ಸತ್ಯ ಅರಗಿಸಿಕೊಳ್ಳಲಾಗಲಿಲ್ಲ. ಅರಣ್ಯ ಇಲಾಖೆ ಮೇಲಿನ ಸೆಳೆತ ಕಡಿದುಹೋಯಿತು. ಇಲಾಖೆಗೆ ಸೀಮಿತಗೊಳಿಸಿಕೊಂಡರೆ ನಾವು ನಿಂತ ನೀರಿನಂತೆ ಎಂದು ನಿರ್ಧರಿಸಿ ಸಂಶೋಧನೆಯ ದಾರಿ ಹಿಡಿದೆ. ಮುಂದೆ ಎಂ.ಎಸ್ಸಿ (ವನ್ಯಜೀವಿ) ಪದವಿ ಮಾಡುವ ಆಸೆಯಿದೆ. ನಂತರ ಪೂರ್ಣಾವಧಿಯಾಗಿ ವನ್ಯಜೀವಿ ಸಂರಕ್ಷಣೆಯಲ್ಲಿ ತೊಡಗಿಕೊಳ್ಳುವ ಹಂಬಲವಿದೆ. ಮಾನವ ಮತ್ತು ಕಾಡುಪ್ರಾಣಿಗಳ ನಡುವಿನ ಸಂಘರ್ಷ ತಡೆಗಟ್ಟುವ ಮಾದರಿಗಳು ಇಂದಿನ ಅಗತ್ಯವಾಗಿದೆ. ಪ್ರಾಣಿಗಳ ದಾರಿಯನ್ನು ನಾವು ಬಿಟ್ಟುಕೊಟ್ಟಾಗ ಮಾತ್ರ ಅವು ನಮ್ಮ ನಾಡಿಗೆ ಬರುವುದನ್ನು ನಿಲ್ಲಿಸುತ್ತವೆ. ಈ ದಿಸೆಯಲ್ಲಿ ಕೆಲಸ ಮಾಡುವ ಯೋಚನೆಯಿದೆ’ ಎಂದು ಇಮ್ರಾನ್ ತಮ್ಮ ಮುಂದಿನ ಯೋಜನೆ ವಿವರಿಸಿದರು.

ಅರಣ್ಯ ಕಾಲೇಜಿನ ಪ್ರೊ. ಶ್ರೀಧರ ಭಟ್ಟ ಇಮ್ರಾನ್ ಆಸಕ್ತಿಗೆ ವೈಜ್ಞಾನಿಕ ತಳಪಾಯ ಹಾಕಿಕೊಟ್ಟವರು. ಕಪ್ಪೆಗಳ ಜತೆ ಜತೆಯಲ್ಲಿಯೇ ಇಮ್ರಾನ್ 170 ಹಕ್ಕಿಗಳು, ಅವುಗಳ ಚರ್ಯೆ, ಹಲವಾರು ಜಾತಿಯ ಚಿಟ್ಟೆಗಳು, ಸಸ್ತನಿಗಳ ಕುರಿತ ವಿವರಗಳು ಇಮ್ರಾನ್ರ ನಾಲಗೆ ತುದಿಯಲ್ಲಿವೆ.

ಕಳೆದ 4 ವರ್ಷಗಳಿಂದ ದಾಂಡೇಲಿ, ಮಹಾರಾಷ್ಟ್ರದಲ್ಲಿ ಹುಲಿ ಗಣತಿಯ ಕಾರ್ಯದಲ್ಲಿ ಭಾಗಿಯಾಗಿರುವ ಅವರ ಅನೇಕ ಲೇಖನಗಳು ಇಂಗ್ಲಿಷ್ ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ. ವನ್ಯಜೀವಿ ಸಂರಕ್ಷಣೆಯಲ್ಲಿ ಇನ್ನಷ್ಟು ತೊಡಗಿಕೊಳ್ಳಲು ಪ್ರೇರಣೆಯಾಗಿ ಕೇಂದ್ರ ಸರ್ಕಾರ ಅಧೀನದಲ್ಲಿರುವ ವನ್ಯಜೀವಿ ಅಕ್ರಮ ತಡೆಗಟ್ಟಲು ಶ್ರಮಿಸುತ್ತಿರುವ ಸಂಸ್ಥೆಯೊಂದು ಇಮ್ರಾನ್ ಅವರನ್ನು ಇತ್ತೀಚೆಗಷ್ಟೇ ನೇಮಕ ಮಾಡಿಕೊಂಡಿದೆ. ಕರ್ನಾಟಕ ಜೀವವೈವಿಧ್ಯ ಮಂಡಳಿ ಕೈಗೆತ್ತಿಕೊಂಡಿರುವ ಗ್ರಾಮ ಪಂಚಾಯ್ತಿ ಮಟ್ಟದ ನೆಲ–ಜಲ ದಾಖಲೀಕರಣ, ಸಮೀಕ್ಷೆ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಬಿಡುವು ಸಿಕ್ಕಾಗ ವಿದ್ಯಾರ್ಥಿಗಳು, ಸಾರ್ವಜನಿಕರಲ್ಲಿ ವನ್ಯಜೀವಿ ಸಂರಕ್ಷಣೆಯ ಅರಿವು ಮೂಡಿಸುವ ಶಿಬಿರಗಳನ್ನು ಸಹ ನಡೆಸುತ್ತಾರೆ. ಇಮ್ರಾನ್ ಅವರ ಪರಿಸರ ಪ್ರೀತಿಯನ್ನು ನೋಡುತ್ತಿದ್ದರೆ, ‘ಹೆಚ್ಚಲಿ ಇವರ ರಸಬಳ್ಳಿ’ ಎಂದು ಯಾರಿಗಾದರೂ ಅನ್ನಿಸುವುದು ಸಹಜ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.