ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಾನುರಾಗಿ ಕುರಿಯನ್

Last Updated 25 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಯಾವುದೇ ಗೌಜು ಗದ್ದಲವಿಲ್ಲದೆ ರಾಜ್ಯಸಭೆಯ ಉಪಸಭಾಪತಿಯಾಗಿ ಪಿ.ಜೆ. ಕುರಿಯನ್ (ಪಳ್ಳತ್ ಜೋಸೆಫ್ ಕುರಿಯನ್) ಇತ್ತೀಚೆಗೆ ಅವಿರೋಧವಾಗಿ ಆಯ್ಕೆಯಾದರು.

ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿ ಚುನಾವಣೆಯಲ್ಲಿ ನಡೆದ ರಾಜಕೀಯ ಪಕ್ಷಗಳ ಕಸರತ್ತು ನೋಡಿದವರಿಗೆ ಪಿ. ಜೆ. ಕುರಿಯನ್ ಎಂಬ ಅನುಭವಿ ರಾಜಕಾರಣಿಯ ಅವಿರೋಧ ಆಯ್ಕೆ ಅಚ್ಚರಿಯ ಬೆಳವಣಿಗೆಯಾಗಿ ಕಾಣದೇ ಇರದು.

ಉಪಸಭಾಪತಿ ಎನ್ನುವುದು ಅಷ್ಟೇನೂ ಮಹತ್ವದ ಹುದ್ದೆಯಲ್ಲದೇ ಇರಬಹುದು. ಆದರೆ ಸಭಾಪತಿಯ ಅನುಪಸ್ಥಿತಿಯಲ್ಲಿ ಸದನದ ಕಾರ್ಯಕಲಾಪಗಳನ್ನು ಮುನ್ನಡೆಸಿಕೊಂಡು ಹೋಗುವಲ್ಲಿ ಉಪಸಭಾಪತಿ ಪಾತ್ರ ಕಡಿಮೆಯದಲ್ಲ. ಕುರಿಯನ್ ಅಂತೂ ಅನುಭವಿ ರಾಜಕಾರಣಿ. `ಸದನದ ಕಾರ್ಯಕಲಾಪಗಳನ್ನು ಸುಸೂತ್ರವಾಗಿ ನಡೆಸಿಕೊಂಡು ಹೋಗುವ ಅಪಾರ ಅನುಭವ ಅವರಿಗಿದೆ~ ಎಂದು ಸ್ವತಃ ಪ್ರಧಾನಿಯೇ ಪ್ರಶಂಸಿಸಿದ್ದಾರೆ. `ಅವರ ಅವಿರೋಧ ಆಯ್ಕೆಗೆ ಮುಖದಲ್ಲಿನ ಮಂದಹಾಸ ಮತ್ತು ಸದಸ್ಯರು ಅವರ ಬಗ್ಗೆ ಹೊಂದಿರುವ ವಿಶ್ವಾಸವೇ ಕಾರಣ~ ಎಂದು ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಕೂಡ ಮೆಚ್ಚುಗೆಯ ಮಾತನ್ನಾಡಿದ್ದಾರೆ.

ದಿ. ಪಿ.ಜಿ.ಜೋಸೆಫ್ ಮತ್ತು ರೇಚೆಲ್ ಜೋಸೆಫ್ ಅವರ ಪುತ್ರನಾಗಿ 1941, ಮಾರ್ಚ್ 31 ರಂದು ಕೇರಳದ ಪತ್ತನಂತಿಟ್ಟ ಜಿಲ್ಲೆಯ ತಿರುವಲ್ಲ ಬಳಿಯ ಪುರಮಟ್ಟಂನಲ್ಲಿ ಜನಿಸಿದ ಕುರಿಯನ್, ಬಳಿಕ ಪಡುತ್ತೋಡ್‌ನಲ್ಲಿ ಬೆಳೆದರು. ವೆಣ್ಣಿಕ್ಕುಳಂ ಸೇಂಟ್ ಬಹನಾನ್ಸ್ ಪ್ರೌಢಶಾಲೆಯಲ್ಲಿನ ಶಿಕ್ಷಣದ ಬಳಿಕ ಕೋಳಂಚೇರಿ ಸೇಂಟ್ ಥಾಮಸ್ ಕಾಲೇಜಿನಿಂದ ಬಿಎಸ್ಸಿ ಪದವಿ ಪಡೆದರು. ಮಧ್ಯಪ್ರದೇಶದ ರೇವಾದಲ್ಲಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪಡೆದ ಕುರಿಯನ್ ಬಳಿಕ ತಾವು ಕಲಿತ ಅದೇ ಕೋಳಂಚೇರಿಯ ಸೇಂಟ್ ಥಾಮಸ್ ಕಾಲೇಜಿನಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಲು ಆರಂಭಿಸಿದರು.

 1970ರಲ್ಲಿ ಕಾಂಗ್ರೆಸ್ ಬ್ಲಾಕ್ ಸಮಿತಿ ಅಧ್ಯಕ್ಷರಾಗಿ ರಾಜಕೀಯ ಜೀವನ ಆರಂಭಿಸಿದ  ಕುರಿಯನ್ ಆರು ಬಾರಿ (ಐದು ಬಾರಿ ಮಾವೇಲಿಕ್ಕರದಿಂದ ಹಾಗೂ ಒಂದು ಬಾರಿ ಇಡುಕ್ಕಿಯಿಂದ) ಲೋಕಸಭಾ ಸದಸ್ಯರಾಗಿ ಕೇರಳವನ್ನು ಪ್ರತಿನಿಧಿಸಿದ್ದಾರೆ. ಉದ್ದಿಮೆ ಖಾತೆ ರಾಜ್ಯ ಸಚಿವ (1991-93), ವಾಣಿಜ್ಯ ಖಾತೆ ರಾಜ್ಯ ಸಚಿವರಾಗಿ ಹೆಚ್ಚುವರಿ ಹೊಣೆ  (1992-93) ಮತ್ತು ಅಸಾಂಪ್ರದಾಯಿಕ ಇಂಧನ ಮೂಲ (1995-96) ಸಚಿವರಾಗಿಯೂ ಸೇವೆ ಸಲ್ಲಿಸ್ದ್ದಿದಾರೆ. 2005ರಿಂದ ರಾಜ್ಯಸಭಾ ಸದಸ್ಯರಾಗಿದ್ದಾರೆ. 

ಕೇವಲ ರಾಜಕೀಯಕ್ಕೆ ಮಾತ್ರವಲ್ಲದೆ ವಿವಿಧ ಸಮಿತಿಗಳಿಗೂ ತಮ್ಮದೇ ಕೊಡುಗೆ ನೀಡಿದ್ದಾರೆ.  1995-96ರಲ್ಲಿ ದೆಹಲಿ ಐಐಟಿಯ ಆಡಳಿತ ಮಂಡಳಿಯ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಟೋಕಿಯೊ ಮೂಲದ ಜನಸಂಖ್ಯೆ ಮತ್ತು ಅಭಿವೃದ್ಧಿಗಾಗಿನ ಏಷ್ಯಾ ಸಂಸದೀಯರ ವೇದಿಕೆ (ಏಷ್ಯನ್ ಫೋರಂ ಆಫ್ ಪಾರ್ಲಿಮೆಂಟೇರಿಯನ್ಸ್ ಫಾರ್ ಪಾಪುಲೇಷನ್ ಆ್ಯಂಡ್ ಡೆವೆಲಪ್‌ಮೆಂಟ್) ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕುರಿಯನ್ ಒಬ್ಬ ಜನಾನುರಾಗಿ. ಆರು ಬಾರಿ ಸಂಸತ್ ಸದಸ್ಯರಾಗಿ ದೆಹಲಿಯಲ್ಲೇ ಜೀವನದ ಬಹುಪಾಲು ಕಳೆದರೂ ಪಡುತ್ತೋಡ್‌ನ ಜನ ಮಾತ್ರ ಕುರಿಯನ್ ಅವರನ್ನು ಮರೆತಿಲ್ಲ. ಅಂತೆಯೇ `ಪಾಪಚ್ಚನ್~ ಎಂದೇ ಊರ ಹಿರಿಯರು ಪ್ರೀತಿಯಿಂದ ಕರೆಯುವ ಕುರಿಯನ್ ಕೂಡ ತಮ್ಮ  ಊರನ್ನು ಮರೆತಿಲ್ಲ. ಕುರಿಯನ್ ಊರಿಗೆ ಬಂದರೆ ಸಾಕು, ರಸ್ತೆ ನಿರ್ಮಾಣ, ಸೇತುವೆ ನಿರ್ಮಾಣ ಹೀಗೆ ವಿವಿಧ ಬೇಡಿಕೆಗಳಿಗಾಗಿ ಕೈಯಲ್ಲಿ ಅರ್ಜಿ ಹಿಡಿದುಕೊಂಡು ಜನ ಸರತಿಯ ಸಾಲಿನಲ್ಲಿ ಅವರ ಮುಂದೆ ನಿಲ್ಲುತ್ತಾರೆ. ತಮ್ಮ ಬೇಡಿಕೆಗಳನ್ನು `ಕುರಿಯನ್ ಸರ್~ ಖಂಡಿತ ನೆರವೇರಿಸಿ ಕೊಡುತ್ತಾರೆ ಎಂಬ ಅಪಾರ ನಂಬಿಕೆ ಅವರಿಗೆ. 

 ಸಕ್ರಿಯ ರಾಜಕಾರಣಿಯಾದರೂ ಇತ್ತ ಊರಿನಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕುರಿಯನ್ ಅವರ ಸಾನಿಧ್ಯ ಇದ್ದೇ ಇರುತ್ತದೆ. ಖ್ಯಾತ ಆರನ್ಮುಳ ದೋಣಿ ಸ್ಪರ್ಧೆ ನಡೆದಾಗಲೆಲ್ಲ ಅಲ್ಲಿದ್ದು ಸ್ಪರ್ಧಾಳುಗಳಿಗೆ ಮತ್ತು ಆಯೋಜಕರಿಗೆ ಪ್ರೋತ್ಸಾಹ ನೀಡುತ್ತಾರೆ. 

 ಎಲ್ಲಾ ಧರ್ಮೀಯರೊಂದಿಗೆ ಉತ್ತಮ ಬಾಂಧವ್ಯ ಕಾಪಾಡುವಲ್ಲಿ ಕುರಿಯನ್ ಅವರದ್ದು ಎತ್ತಿದಕೈ. ನಾಯರ್ ಸರ್ವಿಸ್ ಸೊಸೈಟಿ (ಎನ್‌ಎಸ್‌ಎಸ್), ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ), ಚರ್ಚುಗಳು ಹಾಗೂ ಮುಸ್ಲಿಂ ಸಂಘಟನೆಗಳೊಂದಿಗೆ ಅವರು ನಿಕಟ ಸಂಪರ್ಕ ಹೊಂದಿದ್ದಾರೆ. ಪಂಪಾ ನದಿ ತೀರದಲ್ಲಿ ಪ್ರತೀ ವರ್ಷ ನಡೆಯುವ ಕ್ರೈಸ್ತರ ಖ್ಯಾತ ಮಾರಾಮಣ್ ಕನ್‌ವೆನ್ಶನ್ ವೇಳೆ ತೆಗೆದುಕೊಳ್ಳುವ ಅದೇ ಮುತುವರ್ಜಿ ಚೆರುಕೋಲ್‌ಪುಳ ಹಿಂದೂ ಕನ್‌ವೆನ್ಶನ್‌ನಲ್ಲೂ ಕಾಣಿಸುತ್ತದೆ. ಜೊತೆಗೆ ಎನ್‌ಎಸ್‌ಎಸ್ ಆಯೋಜಿಸುವ `ಮನ್ನಂ ಜಯಂತಿ ಆಚರಣೆ~ (ಎನ್‌ಎಸ್‌ಎಸ್ ಸ್ಥಾಪಕರಾದ ಮನ್ನತ್ ಪದ್ಮನಾಭನ್ ಅವರ ಜನ್ಮದಿನಾಚರಣೆ ) ಯಲ್ಲಿಯೂ ಅವರ ಪಾತ್ರ ಇದ್ದೇ ಇರುತ್ತದೆ. 

 ನೆಹರೂ ಕುಟುಂಬದ ನಂಬಿಗಸ್ಥರಾಗಿದ್ದ ಕುರಿಯನ್ ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಅವರಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಜೊತೆಗೂ ನಿಕಟ ಸಂಪರ್ಕ ಹೊಂದಿದ್ದಾರೆ. ರಾಜೀವ್‌ಗಾಂಧಿ ಒಮ್ಮೆ ಚುನಾವಣಾ ಪ್ರಚಾರಕ್ಕಾಗಿ ಕೇರಳದ ಚೆಂಗನ್ನೂರಿಗೆ ಬಂದಿದ್ದಾಗ `ಕುರಿಯನ್ ಅವರ ಸಲಹೆ ನನಗೆ ದೆಹಲಿಯಲ್ಲಿ ಅಗತ್ಯವಿದೆ~ ಎಂದು ಹೇಳಿದ್ದರಂತೆ. ಅದನ್ನು ಅಕ್ಷರಶಃ ಪಾಲಿಸಿದ ಮಾವೇಲಿಕ್ಕರದ ಜನ ಅವರನ್ನು ಆರಿಸಿ ಲೋಕಸಭೆಗೆ ಕಳುಹಿಸಿದ್ದರು. ಅವರ ಸೌಮ್ಯ ಸ್ವಭಾವ ಕಾಂಗ್ರೆಸ್‌ಗೆ ಬಹು ದೊಡ್ಡ ಆಸ್ತಿ ಎಂದು ತಿಳಿದೇ ಪಕ್ಷ ಅವರನ್ನು ಮುಖ್ಯ ಸಚೇತಕನನ್ನಾಗಿ 1998ರಲ್ಲಿ ನೇಮಿಸಿತ್ತು.

ಇತ್ತೀಚೆಗೆ ಎರ್ನಾಕುಳಂನಲ್ಲಿ ನಡೆದ ಕಾಂಗ್ರೆಸ್ ಸಭೆಯೊಂದಲ್ಲಿ ಭಾಗವಹಿಸಿದ್ದ ಕೇಂದ್ರ ಸಚಿವ ಜೈರಾಂ ರಮೇಶ್, `ಸಂಸದೀಯ ಚರ್ಚೆಗಳು ನಡೆಯುವ ವೇಳೆ ಕೆಲವೊಮ್ಮೆ ಮುಂದಿನ ದಾರಿ ಕಾಣದಿದ್ದಾಗ ನಾವು ಕುರಿಯನ್ ಅವರ ಮುಖ ನೋಡುತ್ತಿದ್ದೆವು. ಯಾವುದೇ ವಿಷಯವಾಗಿರಲಿ ಪ್ರಯೋಗಿಸಬೇಕಾದ ಅಸ್ತ್ರಗಳೆಲ್ಲೂ ಅವರ ಬತ್ತಳಿಕೆಯಲ್ಲಿ ಇ್ದ್ದದೇ ಇರುತ್ತಿತ್ತು ಎಂಬ ನಂಬಿಕೆಯಿಂದಲೇ ನಾವು ಅವರತ್ತ ನೋಡುತ್ತಿದ್ದೆವು~ ಎಂದು ಕುರಿಯನ್ ಅವರ ಅಪಾರ ಜ್ಞಾನವನ್ನು ಎತ್ತಿ ಹೇಳಿದ್ದರು. ಪ್ರವಾಸಪ್ರಿಯರಾದ ಕುರಿಯನ್ ಹಲವು ದೇಶಗಳಿಗೂ ಪ್ರವಾಸ ಕೈಗೊಂಡಿದ್ದಾರೆ.

ಬಿಡದ ಕಳಂಕ
 1996ರಲ್ಲಿ ನಡೆದ ಇಡೀ ಕೇರಳವನ್ನೇ ಬೆಚ್ಚಿ ಬೀಳಿಸಿದ್ದ `ಸೂರ‌್ಯನೆಲ್ಲಿ ಲೈಂಗಿಕ ಹಗರಣ~ ಪ್ರಕರಣದಲ್ಲಿ ಪಿ. ಜೆ. ಕುರಿಯನ್ ಅವರ ಹೆಸರೂ ಕೇಳಿಬಂದಿತ್ತಲ್ಲದೆ ಅವರ ವಿರುದ್ಧ ಕ್ರಿಮಿನಲ್ ಕೇಸು ದಾಖಲಾಗಿತ್ತು. ಕುರಿಯನ್ ಅವರ ಸುದೀರ್ಘ ಅವಧಿಯ ರಾಜಕಾರಣದಲ್ಲಿ ಈ ಪ್ರಕರಣ ಕಪ್ಪು ಚುಕ್ಕೆ ಎಂದೇ ಹೇಳಬಹುದು. ಅಂದು ನರಸಿಂಹರಾವ್ ಸಚಿವ ಸಂಪುಟದಲ್ಲಿದ್ದ ಪಿ. ಜೆ. ಕುರಿಯನ್ ಇಡುಕ್ಕಿಯ ವಿಶ್ರಾಂತಿ ಗೃಹದಲ್ಲಿ ತನ್ನ ಮೇಲೆ ಅತ್ಯಾಚಾರ ನಡೆಸಿದ್ದರು ಎಂದು ಪ್ರಕರಣದ ಬಲಿಪಶುವಾಗಿದ್ದ 15ರ ಹರೆಯದ ಬಾಲಕಿ ಕುರಿಯನ್ ವಿರುದ್ಧ ದೂರು ನೀಡಿದ್ದಳು. ಪ್ರಕರಣದಲ್ಲಿ ಕುರಿಯನ್ ಮೇಲ್ನೋಟಕ್ಕೆ ಆರೋಪಿ ಎಂದು ಕಂಡುಬರುತ್ತಿರುವುದಾಗಿ ಕೆಳನ್ಯಾಯಾಲಯ ತೀರ್ಪು ನೀಡಿದ್ದರೂ ಬಳಿಕ ನಡೆದ ಉನ್ನತ ಮಟ್ಟದ ಪೊಲೀಸ್ ತನಿಖೆಯಿಂದ ಕುರಿಯನ್ ನಿರ್ದೋಷಿ ಎಂದು ಸಾಬೀತಾಗಿತ್ತಲ್ಲದೆ ಕೊನೆಗೆ ಅವರು ಪ್ರಕರಣದಿಂದ ದೋಷಮುಕ್ತಿಗೊಂಡಿದ್ದರು.

1968ರಲ್ಲಿ ಸೂಸನ್ ಅವರನ್ನು ವಿವಾಹವಾದ ಕುರಿಯನ್ ಅವರಿಗೆ ಚೆನ್ನೈನಲ್ಲಿ ನೆಲೆಸಿರುವ ಶೈನಿ ಹಾಗೂ ಬೆಂಗಳೂರಿನಲ್ಲಿ ನೆಲೆಸಿರುವ ಬಿಂದು ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅಳಿಯಂದಿರು: ಜಾನ್‌ಮ್ಯಾಥ್ಯೂ ಮತ್ತು ಸಂಜಯ್ ಚೆರಿಯನ್.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT