ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗದ ಮಹಾ ಗುರು ಬಿಕೆಎಸ್‌ ಅಯ್ಯಂಗಾರ್

ವ್ಯಕ್ತಿ ಸ್ಮರಣೆ
Last Updated 23 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

‘ಹಿ ರೋರ್ಸ್‌ ಲೈಕ್‌ ಎ ಲಯನ್‌’ (ಅವರು ಸಿಂಹದಂತೆ ಗರ್ಜಿಸುತ್ತಾರೆ) ಇದು ಅವರ ಶಿಷ್ಯರೆಲ್ಲರ ಮಾತು, ಅನುಭವ. ಅವರು ಯೋಗ ತರಗತಿ ಆರಂಭಿಸಿದಾಗ ಯೋಗಕ್ಕೆ ಭಾರತದ ಒಳಗೇ ಅಂಥ ಗೌರವವಿರಲಿಲ್ಲ. ಇನ್ನು ವಿದೇಶಗಳ ಮಾತೇನು?. ಯೋಗಕ್ಕೆ ಬೆಲೆ, ಮೌಲ್ಯ ಎರಡೂ ತಂದು ಕೊಟ್ಟ ಪದ್ಮಭೂಷಣ ಬೆಳ್ಳೂರು ಕೃಷ್ಣಮಾಚಾರ್ ಸುಂದರರಾಜ ಅಯ್ಯಂಗಾರ್ ಅವರು ಇತ್ತೀಚೆಗೆ ವಿಧಿವಶರಾದರು (ಆ. 20).

ಯೋಗವೆಂದರೆ ಕೇವಲ ಆಸನಗಳ ತರಗತಿ, ಅಭ್ಯಾಸಗಳಲ್ಲ. ಅದೊಂದು ಜೀವನ ವಿಧಾನ ಎಂಬುದನ್ನು ವಿಶ್ವಕ್ಕೆ  ತೋರಿಸಿದ ಮಹಾನ್‌ ಯೋಗ ಗುರು ಬಿಕೆಎಸ್‌.

ಯಾರು ಬೇಕಾದರೂ ಯೋಗ ಕಲಿಯಬಹುದು, ಅದಕ್ಕೆ ಜಾತಿ, ಧರ್ಮ, ಲಿಂಗ, ವಯಸ್ಸು, ರಾಷ್ಟ್ರೀಯತೆಗಳ ಸರಹದ್ದುಗಳಿಲ್ಲ ಎಂಬುದು ಅವರ ದೃಢ ವಿಶ್ವಾಸ. ‘ಯೋಗ ಎಲ್ಲರಿಗೆ’ ಇದು ಅಯ್ಯಂಗಾರ್ ಸೂತ್ರ. ಯೋಗಾಚಾರ್ಯ ಪತಂಜಲಿಯ ‘ಪಾತಂಜಲ ಯೋಗಸೂತ್ರಗಳು’ ಅವರಿಗೆ ದಾರಿದೀಪ. ಅವನು ಬೋಧಿಸಿದ ಅಷ್ಟಾಂಗ ಯೋಗವನ್ನೇ ಇವರೂ ಸಾವಿರಾರು ಯೋಗ ಶಿಕ್ಷಕರಿಗೆ ಕಲಿಸಿಕೊಟ್ಟರು. ಅವರ ಮೂಲಕ ಹಬ್ಬಿದ ಈ ಯೋಗ ‘ಅಯ್ಯಂಗಾರ್ ಯೋಗ’ ಎಂದು ಪ್ರಸಿದ್ಧವಾಗಿದೆ. ಹೀಗೆ ಇಪ್ಪತ್ತು, ಇಪ್ಪತ್ತೊಂದನೇ ಶತಮಾನದಲ್ಲಿ ಯೋಗ ಕಲಿಕೆಯ ಮೇಲೆ ವಿಶಿಷ್ಟ ಮುದ್ರೆ ಒತ್ತಿದವರು ಬಿಕೆಎಸ್‌.

ಬಿಕೆಎಸ್‌ ಜನಿಸಿದ್ದು ಕೋಲಾರದ ಬೆಳ್ಳೂರಿನಲ್ಲಿ. ತಂದೆ ಕೃಷ್ಣಮಾಚಾರ್‌ ಶಾಲಾ ಶಿಕ್ಷಕರು. ಹಾಗಾಗಿ ಕಲಿಸುವ ಕಲೆಯನ್ನು ತಂದೆಯಿಂದ ಇವರು ಹೀರಿಕೊಂಡಿದ್ದರು. ಬಾಲ್ಯದಲ್ಲಿ ಬಿಕೆಎಸ್‌ ಅವರ ದೇಹ ರೋಗಗಳ ಗೂಡು. ಮಲೇರಿಯಾ, ಟೈಫಾಯ್ಡ್, ಟಿ.ಬಿ (ಕ್ಷಯ) ಮೂರೂ ಇದ್ದವು! ಆಗ ಇನ್ನೂ ಅವರು ಯೋಗವನ್ನು ಕಲಿತಿರಲಿಲ್ಲ.

‘ನನ್ನ ತೋಳು ಕೃಶವಾಗಿತ್ತು, ಕಾಲುಗಳು ಸುರುಟಿಕೊಂಡಿದ್ದವು, ಹೊಟ್ಟೆ ಉಬ್ಬರಿಸಿಕೊಂಡಿತ್ತು. ತಲೆ ಕೆಳಗೆ ಜೋತು ಬೀಳುತ್ತಿತ್ತು, ಕಷ್ಟಪಟ್ಟು ಪ್ರಯತ್ನಪೂರ್ವಕವಾಗಿ ತಲೆ ಎತ್ತಬೇಕಿತ್ತು’ ಎಂದು ಅವರೇ ಮುಂದೆ ನೆನಪಿಸಿಕೊಂಡಿದ್ದಾರೆ.
ಮುಂದೆ ಅವರ ಪಾಲಿಗೆ ದೇಹವೇ ದೇವಾಲಯವಾಯಿತು, ಯೋಗವೇ ಅವರ ನಿತ್ಯ ಪ್ರಾರ್ಥನೆಯಾಯಿತು.

ಬಿಕೆಎಸ್‌ ಅವರ ಬದುಕು ಬದಲಾದದ್ದು ಅವರ 16ನೇ ವಯಸ್ಸಿನಲ್ಲಿ. ಗುರು ಟಿ.ಕೃಷ್ಣಮಾಚಾರ್‌ ಅವರಿಂದ ಯೋಗ ಕಲಿಯತೊಡಗಿದ ಮೇಲೆ. ಎರಡು ವರ್ಷ ಯೋಗ ಕಲಿಯುವಷ್ಟರಲ್ಲಿ ಗುರು ಇವರನ್ನು ಬೇರೆಯವರಿಗೆ ಯೋಗ ಕಲಿಸು ಎಂದು ಪುಣೆಗೆ ಕಳುಹಿಸಿದರು. ಇವರಿಗೆ ಇಂಗ್ಲಿಷ್‌ ಮಾತನಾಡಲು  ಬರುತ್ತಿತ್ತು ಎಂಬುದೂ ಒಂದು ಕಾರಣ.

ಇಲ್ಲಿಂದ ಬಿಕೆಎಸ್‌ ವಿಕಾಸ ಮೊದಲುಗೊಂಡಿತು. ಅವರು ಹಂತ ಹಂತವಾಗಿ ಯೋಗವನ್ನು ಸಾಧನೆ ಮಾಡುವುದರ ಜತೆ ಒಂದೇ ಸಮನೆ ಯೋಗದ ಸೂಕ್ಷ್ಮಗಳನ್ನು ತಮ್ಮೊಳಗೆ ತುಂಬಿಕೊಂಡರು.

ಅವರ ಮನೆ ಪೂರ್ತಿ ಯೋಗಮಯ. ಇವರನ್ನು ಮದುವೆಯಾದಾಗ ಪತ್ನಿ ರಮಾಮಣಿ ಅವರಿಗೆ 16 ವಯಸ್ಸು, ಈ ದಂಪತಿಗೆ ಐವರು ಹೆಣ್ಣು ಮಕ್ಕಳು, ಒಬ್ಬ ಮಗ. ಮಕ್ಕಳ ಪೈಕಿ ಗೀತಾ, ಪ್ರಶಾಂತ್್ ಯೋಗಕ್ಕೆ ತಮ್ಮನ್ನು ಮೀಸಲಿರಿಸಿಕೊಂಡರು.

ಒಮ್ಮೆ ಯೆಹೂಡಿ ಮೆನುಹಿನ್ ಎಂಬ ಪ್ರಸಿದ್ಧ ವಯಲಿನ್‌ ವಾದಕರನ್ನು ಭೇಟಿ ಮಾಡಿ ಅವರಿಗೆ ಯೋಗದ ಮಹತ್ವ ತಿಳಿಸಬೇಕೆಂದು ಬಿಕೆಎಸ್‌ ಬಯಸಿದರು. ಬಹಳ ದಣಿದಿದ್ದ ವಾದಕ ಇವರಿಗೆ ಕೇವಲ ಐದು ನಿಮಿಷ ಸಮಯ ಕೊಟ್ಟರು. ಅಂದಿನ ಆ ಭೇಟಿ ಮೂರು ಗಂಟೆಗಳಿಗೆ ಹಿಗ್ಗಿತು! ಬಿಕೆಎಸ್‌ ಯೆಹೂಡಿಯವರಿಗೆ ಆರಾಮವಾಗಲು ಆಸನ ಹೇಳಿಕೊಟ್ಟರು. ಅದರಂತೆ ಮಾಡಿದ ಆತ ಒಂದು ಗಂಟೆ ಇವರೆದುರಿಗೇ ಸುಖವಾಗಿ ಮಲಗಿಬಿಟ್ಟರು. ಉಲ್ಲಾಸದಿಂದ ಎದ್ದವರೇ ಯೋಗದ ಕುರಿತು ಎರಡು ತಾಸು ಅಯ್ಯಂಗಾರ್ ಹೇಳುವುದನ್ನು ಕೇಳಿಸಿಕೊಂಡರು.

ಮುಂದೆ ಮೆನುನ್‌ ಸಂಪರ್ಕದಿಂದ ಇವರ ಕೀರ್ತಿ ಯುರೋಪ್‌ ಮತ್ತು ಅಮೆರಿಕದ ಸಾವಿರಾರು ಜನರಿಗೆ ಹಬ್ಬಿ, ಅವರೆಲ್ಲಾ ಬಿಕೆಎಸ್‌ ಶಿಷ್ಯರಾದರು. ಯೆಹೂಡಿ ಮೆನುಹಿನ್್‌ ಇವರನ್ನು ಗುರು ಎಂದೇ ಸ್ವೀಕರಿಸಿದ್ದರು. 1954ರಲ್ಲಿ ಸ್ವಿಟ್ಜರ್‌ಲ್ಯಾಂಡ್‌ಗೆ ಅವರನ್ನು ಯೆಹೂಡಿ ಆಹ್ವಾನಿಸಿದ್ದರು. ಅಲ್ಲಿಂದ ಬಿಕೆಎಸ್‌ ಹೊರಡುವಾಗ ಒಂದು ವಾಚ್‌ ಕಾಣಿಕೆ ನೀಡಿದ. ‘ನನ್ನ ಅತ್ಯುತ್ತಮ ವಯಲಿನ್‌ ಗುರು, ಬಿಕೆಎಸ್‌ ಅಯ್ಯಂಗಾರ್ ಅವರಿಗೆ’ ಎಂದು ವಾಚಿನ ಹಿಂಬದಿ ಕೆತ್ತಿಸಿದ್ದ! ಸಂಗೀತ ಕಛೇರಿಗಳ ಗುಣಮಟ್ಟ ಯೋಗಾಭ್ಯಾಸದಿಂದ ಹೆಚ್ಚುತ್ತದೆ ಎಂಬ ನಂಬಿಕೆ ಅವನಲ್ಲಿ ಮೊಳೆಯಿತು.

ಬಿಕೆಎಸ್‌ ಅವರ ದಿನಚರಿ ಬಹಳ ಕಟ್ಟುನಿಟ್ಟಿನದು.ಮುಂಜಾನೆ 4ಕ್ಕೆ ಏಳುತ್ತಿದ್ದರು, ಒಂದೂವರೆ ಗಂಟೆ ಪ್ರಾಣಾಯಾಮ ಮಾಡುತ್ತಿದ್ದರು. ಬಳಿಕ ಯೋಗ ತರಗತಿಗಳು. ಅದು ಇಲ್ಲದಿದ್ದರೆ ಒಂಬತ್ತೂವರೆ ತನಕ ಸ್ವತಃ ಅಭ್ಯಾಸ ಮಾಡುತ್ತಿದ್ದರು. ಸರಳ ಆಹಾರ ಸೇವನೆ ಬಳಿಕ ಮಧ್ಯಾಹ್ನ ಅವರ ಕಚೇರಿಯ ಗ್ರಂಥಾಲಯಕ್ಕೆ ಬಂದು ಕೂರುತ್ತಿದ್ದರು. ಲೇಖನ, ಬರವಣಿಗೆ ಎಲ್ಲಾ ಇಲ್ಲೆ.

ಕರ್ನಾಟಕದಿಂದ ಕಲಿಯಲು ಪುಣೆಗೆ ಬಂದ ಶಿಷ್ಯರು ಎಂದರೆ ಅವರಿಗೆ ಅಪಾರ ಅಭಿಮಾನ. ತಾನೂ ಗ್ರಂಥಾಲಯದಲ್ಲಿ ಕುಳಿತು ಈ ಸಮಯದಲ್ಲಿ ಓದುತ್ತಿರುವಾಗ ತಾವು ಕಾಫಿ ಕುಡಿಯುವ ಸಮಯದಲ್ಲಿ ಗುರುಗಳು ನನಗೂ ಒಂದು ಲೋಟ ಕಾಫಿ ತರಿಸಿಕೊಡುತ್ತಿದ್ದರು ಎಂದು ಅಭಿಮಾನದಿಂದ ಅವರ ಬೆಂಗಳೂರು ಮೂಲದ ಶಿಷ್ಯರೊಬ್ಬರು ಭಾವುಕವಾಗಿ ನೆನಪಿಸಿಕೊಳ್ಳುತ್ತಾರೆ.

ಯಾರೇ ಕಾಗದ ಬರೆದಿರಲಿ, ಅದಕ್ಕೆ ಕೂಡಲೇ ಮರು ಉತ್ತರವನ್ನು ಅವರು ಕೈಯಿಂದಲೇ ಬರೆಯುತ್ತಿದ್ದರು. ಉತ್ತರ ಬಯಸಿದವನಿಗೆ ಮೂರು ದಿನಗಳ ಒಳಗೆ ಒಂದು ಕಾರ್ಡ್‌ ಖಂಡಿತ ಬರುತ್ತಿತ್ತು.

ಸಂಜೆ ಮನೆಯ ಹೊರಗೆ ಕುರ್ಚಿ ಹಾಕಿಕೊಂಡು ಬರುತ್ತಿದ್ದ ಸಂದರ್ಶಕರನ್ನು ಮಾತನಾಡಿಸುತ್ತಿದ್ದರು.
ನಂತರ ಟಿ.ವಿ. ನೋಡುತ್ತಿದ್ದ ಅಯ್ಯಂಗಾರ್ ಅವರಿಗೆ ಧಾರಾವಾಹಿ, ಕ್ರಿಕೆಟ್‌ನಲ್ಲೂ ಆಸಕ್ತಿ ಇತ್ತೆಂದು ಅವರ ಆತ್ಮೀಯರು ನೆನಪಿಸಿಕೊಳ್ಳುತ್ತಾರೆ.

ಕೇವಲ ಜಿಡ್ಡು ಕೃಷ್ಣಮೂರ್ತಿ, ತೆಂಡುಲ್ಕರ್‌ ಮುಂತಾದ ಲೋಕ ಪ್ರಸಿದ್ಧರಿಗಲ್ಲದೇ ಅಕ್ಷರಶಃ ಸಾವಿರಾರು ಮಂದಿ ದೈಹಿಕ ಮಾನಸಿಕ ತೊಂದರೆ ಅನುಭವಿಸುತ್ತಿದ್ದ ಅನಾಮಿಕರಿಗೆ ಅವರು ಯೋಗದ ಮೂಲಕ ಆನಂದ ನೀಡಿದರು. ಯೋಗದಿಂದ ರೋಗ ನಿವಾರಣೆ ಸಾಧ್ಯ ಎಂಬುದು ಅವರ ಸೂತ್ರ. ಸ್ವತಃ ಅವರ ಬದುಕೇ ಇದಕ್ಕೆ ಜೀವಂತ ಉದಾಹರಣೆ.

ಅವರು ನೊಡಲು ಕೆದರಿದ ಕೂದಲು, ವಿಶಾಲ ಶರೀರ, ಪೊದೆಪೊದೆಯಾದ ಹುಬ್ಬುಗಳನ್ನು ಹೊಂದಿದ್ದರು. ಆದರೆ ಹೃದಯದಲ್ಲಿ ಮಾತ್ರ ಮಗುವಿನಂತೆ ಇದ್ದರು. ಆಧುನಿಕ ಜೀವನಶೈಲಿಯಿಂದಾಗಿ ನಿದ್ರಾಹೀನತೆಯಿಂದ ಬಳಲುತ್ತಿದ್ದವರಿಗೆ ಅವರು ನಿಜಕ್ಕೂ ಆಪತ್ಬಾಂಧವರಾಗಿದ್ದರು.

ಪತಂಜಲಿಯ ದಾರಿಯಲ್ಲಿ ನಡೆದ ಈ ಕನ್ನಡಿಗರು ಕೊನೆ ತನಕ ಹುಟ್ಟೂರಿನ ಬಗ್ಗೆ ಅಪಾರ ಅಭಿಮಾನ ಇಟ್ಟುಕೊಂಡಿದ್ದರು. ಅವರನ್ನು ಈ ಕಾಲದ ಯೋಗ ಆಚಾರ್ಯ, ಆಧ್ಯಾತ್ಮಿಕ ಗುರು ಎಂದು ಕಾಣುವವರ ಸಂಖ್ಯೆ ಅಪಾರವಾಗಿದೆ. ತನ್ನ ದೈಹಿಕ ಮಿತಿ ಮೀರಲು ಹೊರಟ ಕರ್ನಾಟಕದ ಹುಡುಗನೊಬ್ಬ ಲಕ್ಷಾಂತರ ಜನರ ಬದುಕಿಗೆ ‘ಯೋಗ ಪ್ರವೇಶ’ ಮಾಡಿಸಿದ್ದು ಒಂದು ವಿಶೇಷ ವಿದ್ಯಮಾನ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT