ಭಾನುವಾರ, ಜುಲೈ 3, 2022
24 °C
ಫಾಲೋಆನ್ ಹೇರುವ ಬದಲು ತಾನೇ ಎರಡನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್

IND vs ENG 1st Test: ಭಾರತ 337ಕ್ಕೆ ಆಲೌಟ್, ಭಾರಿ ಮುನ್ನಡೆಯತ್ತ ಇಂಗ್ಲೆಂಡ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ತಂಡವು 337 ರನ್‌ಗಳಿಗೆ ಆಲೌಟ್ ಆಗಿದೆ.

ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ ತಂಡವು ನಾಲ್ಕನೇ ದಿನದಾಟದ ಭೋಜನ ವಿರಾಮದ ವೇಳೆಗೆ ಮೊದಲ ವಿಕೆಟ್ ಕಳೆದುಕೊಂಡಿದೆ.

ಮೂರನೇ ದಿನದಾಟ ಮುಕ್ತಾಯದ ವೇಳೆ 6 ವಿಕೆಟ್‌ಗಳನ್ನು ಕಳೆದುಕೊಂಡು 257 ರನ್ ಗಳಿಸಿದ್ದ ಭಾರತ ತಂಡಕ್ಕೆ ನಾಲ್ಕನೇ ದಿನದಾಟದಲ್ಲಿ ಹೆಚ್ಚು ಮೊತ್ತ ಗಳಿಸುವುದು ಸಾಧ್ಯವಾಗಲಿಲ್ಲ. ವಾಷಿಂಗ್ಟನ್ ಸುಂದರ್ ಅವರ ಅಜೇಯ 85 ರನ್‌ಗಳ ಹೊರತಾಗಿಯೂ ಭಾರತ ತಂಡ ಫಾಲೋಆನ್‌ ತಪ್ಪಿಸಲು ಇನ್ನೂ 42 ರನ್ ಬೇಕಿದ್ದಾಗಲೇ ಆಲೌಟ್ ಆಯಿತು. ಆದರೆ, ಅತಿಥೇಯ ತಂಡಕ್ಕೆ ಫಾಲೋಆನ್ ಹೇರುವ ಬದಲು ತಾನೇ ಎರಡನೇ ಇನ್ನಿಂಗ್ಸ್ ಆಡಿ ಮುನ್ನಡೆ ಅಂತರ ಹೆಚ್ಚಿಸುವತ್ತ ಇಂಗ್ಲೆಂಡ್ ಗಮನಹರಿಸಿತು.

ಮೂರನೇ ದಿನದಾಟದಲ್ಲಿ ಇಂಗ್ಲೆಂಡ್‌ನ ಆಫ್‌ಸ್ಪಿನ್ನರ್‌ ಡಾಮಿನಿಕ್‌ ಬೆಸ್‌ ಅವರು ಭಾರತ ತಂಡದ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಪಡೆದು ತಂಡವು ಬೃಹತ್ ಮೊತ್ತ ಪೇರಿಸದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದರು. ಇಂಗ್ಲೆಂಡ್‌ನ 578 ರನ್‌ಗಳಿಗೆ ‍ಪ್ರತಿಯಾಗಿ ಬ್ಯಾಟಿಂಗ್‌ ಆರಂಭಿಸಿದ್ದ ಭಾರತ ತಂಡ ಕೇವಲ 73 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಕ್ರೀಸ್‌ಗೆ ಬಂದ ರಿಷಭ್ ಪಂತ್‌ ಲೀಲಾಜಾಲವಾಗಿ ಬ್ಯಾಟ್‌ ಬೀಸಿದ್ದರು. ತಂಡ ಸಂಕಷ್ಟದಲ್ಲಿದ್ದರೂ ಬಿರುಸಾಗಿ ರನ್‌ ಗಳಿಸಿದ್ದ ಅವರು, ಟೀಂ ಇಂಡಿಯಾದ ಇನಿಂಗ್ಸ್‌ಗೆ ಬಲ ತುಂಬಿದ್ದರು. ಕೇವಲ 88 ಎಸೆತಗಳಲ್ಲಿ 5 ಸಿಕ್ಸರ್‌, 9 ಬೌಂಡರಿ ಸಹಿತ 91 ರನ್‌ ಬಾರಿಸಿ ಶತಕದ ಹೊಸ್ತಿಲಲ್ಲಿ ವಿಕೆಟ್‌ ಒಪ್ಪಿಸಿದ್ದರು. ಅವರಿಗೆ ಉತ್ತಮ ಬೆಂಬಲ ನೀಡಿದ್ದ ಚೇತೇಶ್ವರ ಪೂಜಾರ 73 ರನ್ ಗಳಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು