ಸೋಮವಾರ, ಜನವರಿ 20, 2020
18 °C

ನಾಲ್ಕು ದಿನಗಳ ಟೆಸ್ಟ್: ದಿಗ್ಗಜ ಕ್ರಿಕೆಟಿಗರ ವಿರೋಧ

ರಾಯಿಟರ್ಸ್‌/ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಅಂತರರಾಷ್ಟ್ರೀಯ ಕ್ರಿಕಟ್ ಸಮಿತಿಯು ಟೆಸ್ಟ್ ಪಂದ್ಯಗಳನ್ನು ನಾಲ್ಕು ದಿನಗಳಿಗೆ ಸೀಮಿತಗೊಳಿಸಲು ಹೊರಟಿರುವುದು ಸರಿಯಲ್ಲ. ಈಗಿರುವ ಮಾದರಿಯನ್ನೇ ಮುಂದುವರಿಸಬೇಕು ಎಂದು ಅಂತರರಾಷ್ಟ್ರೀಯ ಕ್ರಿಕೆಟಿಗರ ಸಂಸ್ಥೆಗಳ ಫೆಡರೇಷನ್  (ಎಫ್‌ಐಸಿಎ) ಮತ್ತು ಹಲವು ದಿಗ್ಗಜ ಆಟಗಾರರು  ಆಗ್ರಹಿಸಿದ್ದಾರೆ.

‘ವಿಶ್ವದ ಬೇರೆ ಬೇರೆ ದೇಶಗಳಲ್ಲಿರುವ ಆಟಗಾರರೊಂದಿಗೆ ಚರ್ಚೆ ನಡೆಸಿದ್ದೇವೆ. ಜಾಗತಿಕಮಟ್ಟದ ಸಮೀಕ್ಷೆ ಸಂಘಟಿಸಿದ್ದು, ಅದರಲ್ಲಿ ನಾಲ್ಕು ದಿನಗಳ ಮಾದರಿಗೆ ವಿರೋಧವೇ ವ್ಯಕ್ತವಾಗಿದೆ. ಸಾಂಪ್ರದಾಯಿಕ ಮಾದರಿಯನ್ನು (ಐದು ದಿನಗಳು) ಬದಲಿಸಬಾರದೆಂಬ ಆಗ್ರಹಗಳು ಕೇಳಿಬಂದಿವೆ’ ಎಂದು ಎಫ್‌ಐಸಿಎ  ಪ್ರಕಟಣೆಯಲ್ಲಿ ತಿಳಿಸಿದೆ.

2017ರಲ್ಲಿ ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ನಡುವಣ ಪಂದ್ಯದ ಸಂದರ್ಭದಲ್ಲಿ ನಾಲ್ಕು ದಿನಗಳ ಪರಿಕಲ್ಪನೆಯನ್ನು ಐಸಿಸಿ ವ್ಯಕ್ತಪಡಿಸಿತ್ತು. ಹೋದ ಕೆಲವು ವರ್ಷಗಳಲ್ಲಿ ಬಹಳಷ್ಟು ಟೆಸ್ಟ್ ಪಂದ್ಯಗಳು ಐದನೇ ದಿನದವರೆಗೆ ಹೋಗುತ್ತಿಲ್ಲ. ಅದಕ್ಕೂ ಮೊದಲೇ ಮುಗಿಯುತ್ತಿವೆ. ಅದರಿಂದಾಗಿ ಐಸಿಸಿಯು ಮಾರ್ಚ್‌ನಲ್ಲಿ ನಡೆಯಲಿರುವ ಸಭೆಯಲ್ಲಿ ಈ ವಿಷಯವನ್ನು ಗಂಭೀರವಾಗಿ ಚರ್ಚೆ ನಡೆಸಲು ಯೋಜಿಸಿದೆ. ಆದರೆ. ಸಚಿನ್ ತೆಂಡೂಲ್ಕರ್, ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಅತ್ಯಂತ ಶ್ರೀಮಂತ ಮತ್ತು ಪ್ರಭಾವಿ ಕ್ರಿಕೆಟ್ ಮಂಡಳಿಯಾಗಿರುವ ಬಿಸಿಸಿಐ ಇದುವರೆಗೂ ಈ ಕುರಿತು ಯಾವುದೇ ಹೇಳಿಕೆ ನೀಡಿಲ್ಲ.

‘ಕ್ಯಾಲೆಂಡರ್ ವರ್ಷದಲ್ಲಿ ಮತ್ತಷ್ಟು ಪಂದ್ಯಗಳನ್ನು ಸೇರ್ಪಡೆ ಮಾಡಲು ನಾಲ್ಕು ದಿನಗಳ ಮಾದರಿಯಿಂದ ಅನುಕೂಲವಾಗುತ್ತದೆಯೆಂದು ಐಸಿಸಿ ಹೇಳುತ್ತಿದೆ. ಆದರೆ ಎಷ್ಟು ಪಂದ್ಯಗಳನ್ನು ಹೊಸದಾಗಿ ಸೇರ್ಪಡೆ ಮಾಡಲು ಸಾಧ್ಯ ಎಂಬುದು ಮುಖ್ಯ. ಬೆರಳೆಣಿಕಯಷ್ಟು ಪಂದ್ಯಗಳನ್ನು ಸೇರಿಸಲು ಸಾಂಪ್ರದಾಯಿಕವಾದ ಮಾದರಿಯನ್ನು ಬದಲಿಸುವುದು ಸೂಕ್ತವಲ್ಲ’ ಎಂದು ಎಫ್‌ಐಸಿಎ ಅಭಿಪ್ರಾಯಪಟ್ಟಿದೆ.

‘ಮಾದರಿ ಬದಲಾವಣೆಗೆ ಕಾರಣಗಳ ಕುರಿತು ಆಟಗಾರರ ವಲಯದಲ್ಲಿ ಸ್ಪಷ್ಟ ಜಾಗೃತಿ ಮೂಡಿಸಬೇಕು. ಒಂದೊಮ್ಮೆ ಎಲ್ಲರಿಗೂ ಸಮ್ಮತವಾದರೆ ಮುಂದುವರಿಯಬೇಕು. ಅದುವರೆಗೂ ಐದು ದಿನಗಳ ಮಾದರಿಗೇ ನಮ್ಮ ಬೆಂಬಲ’ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು