ಬೆಂಗಳೂರು: ರನ್ ಸುಗ್ಗಿ ಕಾಣುತ್ತಿರುವ ಮಧ್ಯಮ ಕ್ರಮಾಂಕದ ಬ್ಯಾಟರ್ ಅಭಿನವ್ ಮನೋಹರ್ ಮತ್ತೊಮ್ಮೆ ಮಿಂಚಿನ ಅರ್ಧ ಶತಕ (ಔಟಾಗದೇ 76, 34ಎ) ಬಾರಿಸಿ ಶಿವಮೊಗ್ಗ ಲಯನ್ಸ್ ತಂಡ, ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿ ಪಂದ್ಯದಲ್ಲಿ ಗುಲ್ಬರ್ಗ ಮಿಸ್ಟಿಕ್ಸ್ ತಂಡವನ್ನು ಸೋಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಅವರ ಆಟದಲ್ಲಿ ಎರಡು ಬೌಂಡರಿಗಳ ಜೊತೆ 9 ಭರ್ಜರಿ ಸಿಕ್ಸರ್‌ಗಳಿದ್ದವು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಆಡಲು ಕಳಿಸಲ್ಪಟ್ಟ ಗುಲ್ಬರ್ಗ ತಂಡ 20 ಓವರುಗಳಲ್ಲಿ 5 ವಿಕೆಟ್‌ಗೆ 206 ರನ್‌ಗಳ ದೊಡ್ಡ ಮೊತ್ತವನ್ನೇ ಕಲೆಹಾಕಿತ್ತು. ಆದರೆ ಸೇರಿಗೆ ಸವ್ವಾಸೇರು ಎನ್ನುವಂತೆ ಆಡಿದ ಶಿವಮೊಗ್ಗ ಲಯನ್ಸ್ ಇನ್ನೂ ಐದು ಎಸೆತಗಳು ಉಳಿದಿರುವಂತೆ 4 ವಿಕೆಟ್‌ಗೆ 207 ರನ್ ಹೊಡೆದು ಸತತ ಮೂರನೇ ಗೆಲುವು ದಾಖಲಿಸಿತು.
ಮಿಸ್ಟಿಕ್ಸ್ ತಂಡಕ್ಕೆ ಆರಂಭ ಆಟಗಾರ ಹಾಗೂ ನಾಯಕ ದೇವದತ್ತ ಪಡಿಕ್ಕಲ್ (50, 35ಎ, 4x8, 6x1) ಮತ್ತು ಆರ್.ಸ್ಮರಣ್ (63, 30ಎ, 4x1, 6x7) ಅವರ ಅರ್ಧ ಶತಕಗಳು ಆಸರೆಯಾದವು. ಸ್ಮರಣ್ ಮೊದಲು ನಾಲ್ಕನೇ ವಿಕೆಟ್‌ಗೆ ವೈಶಾಖ ವಿಜಯಕುಮಾರ್ (38) ಜೊತೆ 32 ಎಸೆತಗಳಲ್ಲಿ 62 ರನ್ ಸೇರಿಸಿದರು. ನಂತರ ಐದನೇ ವಿಕೆಟ್‌ಗೆ ಪ್ರವೀಣ್ ದುಬೆ (ಔಟಾಗದೇ 24, 12ಎ) ಅವರೊಂದಿಗೆ ಕೇವಲ 26 ಎಸೆತಗಳಲ್ಲಿ 54 ರನ್ ಪೇರಿಸಿದರು.
ಆದರೆ ಈ ಮೊತ್ತವನ್ನು ಬೆನ್ನಟ್ಟಲು ಶಿವಮೊಗ್ಗ ತಂಡಕ್ಕೆ ನಿಹಾಲ್ ಅವರ ಭರ್ಜರಿ ಆಟ ನೆರವಾಯಿತು. ನಾಯಕ ನಿಹಾಲ್ ಉಳ್ಳಾಲ್ 32 ರನ್ ಮತ್ತು ರೋಹನ್ ನವೀನ್ ಅಜೇಯ 36 ರನ್‌ಗಳ (14 ಎಸೆತ, 4x3, 6x3) ಕೊಡುಗೆಯಿತ್ತರು. ಅಭಿನವ್ ಮತ್ತು ರೋಹನ್ ಮುರಿಯದ ಐದನೇ ವಿಕೆಟ್‌ಗೆ ಬರೇ 27 ಎಸೆತಗಳಲ್ಲಿ 74 ರನ್ ಜೊತೆಯಾಟವಾಡಿ ತಂಡವನ್ನು ಅಂತಿಮ ಓವರ್‌ನ ಮೊದಲ ಎಸೆತದಲ್ಲೇ ಗುರಿತಲುಪಿಸಿದರು.
ಸಂಕ್ಷಿಪ್ತ ಸ್ಕೋರು: ಗುಲ್ಬರ್ಗ ಮಿಸ್ಟಿಕ್ಸ್: 20 ಓವರುಗಳಲ್ಲಿ 5 ವಿಕೆಟ್‌ಗೆ 206 (ದೇವದತ್ತ ಪಡಿಕ್ಕಲ್ 50, ಸ್ಮರಣ್ ಆರ್. 63, ವೈಶಾಖ ವಿಜಯಕುಮಾರ್ 38, ಪ್ರವೀಣ್ ದುಬೆ ಔಟಾಗದೇ 28; ಡಿ. ಅಶೋಕ್ 24ಕ್ಕೆ2); ಶಿವಮೊಗ್ಗ ಲಯನ್ಸ್: 19.1 ಓವರುಗಳಲ್ಲಿ 4 ವಿಕೆಟ್‌ಗೆ 207 (ನಿಹಾಲ್ ಉಳ್ಳಾಲ್ 32, ಅಭಿನವ್ ಮನೋಹರ್ ಔಟಾಗದೇ 76, ರೋಹನ್ ನವೀನ್ ಔಟಾಗದೇ 36). ಪಂದ್ಯದ ಆಟಗಾರ: ಅಭಿನವ್ ಮನೋಹರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.