ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

T20WC ಜಯಿಸಿ ಟಿ–20 ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕೊಹ್ಲಿ, ರೋಹಿತ್ ವಿದಾಯ

Published 30 ಜೂನ್ 2024, 2:34 IST
Last Updated 30 ಜೂನ್ 2024, 2:34 IST
ಅಕ್ಷರ ಗಾತ್ರ

ಬ್ರಿಡ್ಜ್‌ಟೌನ್(ಬಾರ್ಬಡೋಸ್): ಟೀಮ್ ಇಂಡಿಯಾದ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರಾದ ನಾಯಕ ರೋಹಿತ್ ಶರ್ಮಾ ಮತ್ತು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಟಿ–20 ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ.

ಟಿ–20 ವಿಶ್ವಕಪ್‌ ಟೂರ್ನಿಯ ರೋಚಕ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 7 ರನ್‌ಗಳಿಂದ ಮಣಿಸಿ ಟ್ರೋಫಿ ಎತ್ತಿ ಹಿಡಿದ ಬೆನ್ನಲ್ಲೇ ಈ ದಿಗ್ಗಜ ಕ್ರಿಕೆಟಿಗರು ನಿವೃತ್ತಿ ಹೇಳಿದ್ದಾರೆ.

ಈ ಪಂದ್ಯದಲ್ಲಿ 76 ರನ್‌ಗಳ ಅಮೂಲ್ಯ ಕೊಡುಗೆ ನೀಡಿ, ಅತ್ಯಧಿಕ ರನ್ ಗಳಿಸಿದ ಆಟಗಾರನಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ಕೂಡಲೇ ಕೊಹ್ಲಿ ಟಿ–20 ಕ್ರಿಕೆಟ್‌ನಿಂದ ನಿರ್ಗಮಿಸುತ್ತಿರುವುದಾಗಿ ಘೋಷಿಸಿದರು. ಅದ್ಬುತ ಕೌಶಲ್ಯವಿರುವ ಮುಂದಿನ ಪೀಳಿಗೆಯು ಟಿ–20 ಕ್ರಿಕೆಟ್ ಅನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲಿದೆ. ಅವರು ಭಾರತದ ಧ್ವಜವನ್ನು ಎತ್ತರದಲ್ಲಿ ಇರಿಸಲಿದ್ದಾರೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು.

‘ಇದು ನನ್ನ ಕೊನೆಯ ಟಿ–20 ವಿಶ್ವಕಪ್ ಆಗಿದೆ. ಹೊಸ ಪೀಳಿಗೆ ಬರುವ ಸಮಯವಿದು. ಎರಡು ವರ್ಷಗಳ ಅವಧಿಯಲ್ಲಿ ಅತ್ಯದ್ಭುತ ಕ್ರಿಕೆಟಿಗರು ಭಾರತಕ್ಕಾಗಿ ಆಡುತ್ತಿದ್ದಾರೆ. ಅವರೆಲ್ಲರೂ ಟಿ–20 ಕ್ರಿಕೆಟ್‌ನಲ್ಲಿ ತಂಡವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲಿದ್ದಾರೆ. ಐಪಿಎಲ್‌ನಲ್ಲಿ ನೋಡಿದಂತೆ ಟೀಮ್ ಇಂಡಿಯಾದಲ್ಲಿ ಅದ್ಭುತಗಳನ್ನು ಸೃಷ್ಟಿಸಲಿದ್ದಾರೆ’ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

‘ಕೃತಜ್ಞತಯಿಂದ ನಾನು ತಲೆ ಬಾಗಿಸುತ್ತೇನೆ. ಅತ್ಯಂತ ಪ್ರಮುಖ ದಿನದಲ್ಲಿ ತಂಡಕ್ಕಾಗಿ ನಾನು ನನ್ನ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿರುವುದಕ್ಕೆ ನನಗೆ ಹೆಮ್ಮೆ ಎನಿಸುತ್ತಿದೆ’ ಎಂದೂ ಕೊಹ್ಲಿ ಹೇಳಿದ್ದಾರೆ.

ಇದರ ಬೆನ್ನಲ್ಲೇ, ರೋಹಿತ್ ಶರ್ಮಾ ಸಹ ಟಿ–20 ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಪ್ರಕಟಿಸಿದರು. ನಾನು ಈ ಮಾದರಿ ಕ್ರಿಕೆಟ್‌ನಲ್ಲಿ ಏನು ಸಾಧಿಸಬೇಕೆಂದುಕೊಂಡಿದ್ದೆನೊ ಅದನ್ನು ಸಾಧಿಸಿದ್ದೇನೆ. ಈಗ ನಿವೃತ್ತಿಯ ಸಮಯ ಎಂದು ಹೇಳಿದರು.

ಪಂದ್ಯದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಯಕ ರೋಹಿತ್ ಶರ್ಮಾ, ‘ಇದು ನನ್ನ ಕೊನೆಯ ಟಿ–20 ಕ್ರಿಕೆಟ್ ಪಂದ್ಯ. ವಿದಾಯಕ್ಕೆ ಇದಕ್ಕಿಂತ ಒಳ್ಳೆಯ ಸಮಯ ಸಿಗುವುದಿಲ್ಲ. ನಾವು ಈ ಟ್ರೋಫಿ ಗೆಲ್ಲುವುದು ಅತ್ಯಂತ ಅವಶ್ಯಕವಾಗಿತ್ತು. ಪದಗಳಲ್ಲಿ ಹೇಳುವ ಅಸಾಧ್ಯ’ಎಂದಿದ್ದಾರೆ.

‘ಯಾವುದನ್ನು ನಾನು ಬಯಸಿದ್ದೆನೊ ಅದು ಆಗಿದೆ. ನನ್ನ ಜೀವನದಲ್ಲಿ ನಾಯಕನಾಗಿ ಐಸಿಸಿ ಟ್ರೋಫಿ ಗೆಲ್ಲದೆ ತುಂಬಾ ಹತಾಶನಾಗಿದ್ದೆ. ನಾವು ಈ ಬಾರಿ ಆ ಗೆರೆಯನ್ನು ದಾಟಿದ್ದಕ್ಕೆ ಸಂತಸವಾಗಿದೆ’ಎಂದೂ ಹೇಳಿದ್ದಾರೆ.

ರೋಹಿತ್ ನಾಯಕತ್ವದಲ್ಲೇ ಏಕದಿನ ಕ್ರಿಕೆಟ್ ವಿಶ್ವಕಪ್ ಫೈನಲ್ ತಲುಪಿದ್ದ ಭಾರತ ತಂಡ ಆಸ್ಟ್ರೇಲಿಯಾ ಎದುರು ಸೋಲನುಭವಿಸಿತ್ತು. ಆಗಲೂ ಈ ದಿಗ್ಗಜ ಆಟಗಾರರೂ ಸೇರಿದಂತೆ ತಂಡ ತೀವ್ರ ನಿರಾಸೆ ಅನುಭವಿಸಿತ್ತು.

159 ಟಿ–20 ಕ್ರಿಕೆಟ್ ಪಂದ್ಯಗಳನ್ನು ಆಡಿರುವ ರೋಹಿತ್ ಶರ್ಮಾ, 4231 ರನ್ ಕಲೆ ಹಾಕಿದ್ದಾರೆ. 5 ಶತಕ ಮತ್ತು 32 ಅರ್ಧಶತಕ ಸಿಡಿಸಿದ್ದಾರೆ.

125 ಟಿ–20 ಪಂದ್ಯಗಳನ್ನು ಆಡಿರುವ ಕೊಹ್ಲಿ 4188 ರನ್ ಗಳಿಸಿದ್ದಾರೆ. 48.69ರ ಸರಾಸರಿಯಲ್ಲಿ ಅವರು ರನ್ ಗಳಿಸಿದ್ದು, 122 ರನ್ ಅವರ ಅತ್ಯಧಿಕ ಮೊತ್ತವಾಗಿದೆ. ಏಕೈಕ ಶತಕ ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT