ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

T20 World Cup | IND vs AFG: ವಿರಾಟ್ ದಾಖಲೆ ಸರಿಗಟ್ಟಿದ ಸೂರ್ಯ, ಭಾರತ ಅಜೇಯ ಓಟ

Published 21 ಜೂನ್ 2024, 2:16 IST
Last Updated 21 ಜೂನ್ 2024, 2:16 IST
ಅಕ್ಷರ ಗಾತ್ರ

ಬಾರ್ಬಾಡೋಸ್: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ಸೂಪರ್ ಎಂಟರ ಹಂತದ ಒಂದನೇ ಗುಂಪಿನ ಪಂದ್ಯದಲ್ಲಿ ಅಫ್ಗಾನಿಸ್ತಾನ ವಿರುದ್ಧ ಭಾರತ 47 ರನ್ ಅಂತರದ ಗೆಲುವು ದಾಖಲಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತ, ಸೂರ್ಯಕುಮಾರ್ ಯಾದವ್ (53) ಹಾಗೂ ಹಾರ್ದಿಕ್ ಪಾಂಡ್ಯ (32) ಉಪಯುಕ್ತ ಬ್ಯಾಟಿಂಗ್ ನೆರವಿನಿಂದ ಎಂಟು ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತು. ಅಫ್ಗಾನಿಸ್ತಾನದ ಪರ ನಾಯಕ ರಶೀದ್ ಖಾನ್ (26ಕ್ಕೆ 3) ಹಾಗೂ ಫಜಲ್‌ಹಕ್ ಫರೂಕಿ (33ಕ್ಕೆ 3) ತಲಾ ಮೂರು ವಿಕೆಟ್ ಗಳಿಸಿದರು.

ಈ ಗುರಿ ಬೆನ್ನಟ್ಟಿದ ಅಫ್ಗನ್, 20 ಓವರ್‌ಗಳಲ್ಲಿ 134 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಅಜ್ಮತ್‌ಉಲ್ಲಾ ಒಮರ್‌ಝೈ ಗರಿಷ್ಠ 26 ರನ್ ಗಳಿಸಿದರು. ಭಾರತದ ಪರ ಜಸ್‌ಪ್ರೀತ್ ಬುಮ್ರಾ (7ಕ್ಕೆ 3) ಹಾಗೂ ಅರ್ಷದೀಪ್ ಸಿಂಗ್ (36ಕ್ಕೆ 3) ತಲಾ ಮೂರು ಮತ್ತು ಕುಲದೀಪ್ ಯಾದವ್ ಎರಡು ವಿಕೆಟ್ ಗಳಿಸಿದರು.

ವಿರಾಟ್ ದಾಖಲೆ ಸರಿಗಟ್ಟಿದ ಸೂರ್ಯ...

28 ಎಸೆತಗಳಲ್ಲಿ 53 ರನ್ (3 ಸಿಕ್ಸರ್, 5 ಬೌಂಡರಿ) ಗಳಿಸಿದ ಸೂರ್ಯಕುಮಾರ್ ಯಾದವ್ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇದು ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಸೂರ್ಯಕುಮಾರ್‌ಗೆ ದೊರೆತಿರುವ 15ನೇ ಪಂದ್ಯಶ್ರೇಷ್ಠ ಪುರಸ್ಕಾರ ಆಗಿದೆ. ಆ ಮೂಲಕ ವಿರಾಟ್ ಕೊಹ್ಲಿ ದಾಖಲೆಯನ್ನು ಸರಿಗಟ್ಟಿದ್ದಾರೆ. ಸೂರ್ಯ 64 ಪಂದ್ಯಗಳಲ್ಲೇ ಈ ಸಾಧನೆ ಮಾಡಿದ್ದಾರೆ.

ಭಾರತದ ಅಜೇಯ ಓಟ...

ಪ್ರಸಕ್ತ ಸಾಗುತ್ತಿರುವ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಅಜೇಯ ಓಟ ಮುಂದುವರಿಸಿದೆ. 'ಎ' ಗುಂಪಿನಲ್ಲಿ ಸತತ ಮೂರು ಪಂದ್ಯಗಳಗಲ್ಲಿ ಭಾರತ ಗೆಲುವು ಸಾಧಿಸಿದ್ದರೆ ಒಂದು ಪಂದ್ಯ ಮಳೆಯಿಂದಾಗಿ ರದ್ದುಗೊಂಡಿತ್ತು.

ಅಲ್ಲದೆ ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 2023 ಡಿಸೆಂಬರ್‌ನಿಂದ 2024 ಜೂನ್ ವರೆಗಿನ ಅವಧಿಯಲ್ಲಿ ಟೀಮ್ ಇಂಡಿಯಾ ಸತತ ಎಂಟನೇ ಗೆಲುವು ದಾಖಲಿಸಿದೆ.

ಬೂಮ್ರಾ ಮಿಂಚು: 4-1-7-3

ನಾಲ್ಕು ಓವರ್‌ಗಳಲ್ಲಿ ಏಳು ರನ್ ಮಾತ್ರ ಬಿಟ್ಟುಕೊಟ್ಟಿರುವ ಜಸ್‌ಪ್ರೀತ್ ಬೂಮ್ರಾ ಮೂರು ವಿಕೆಟ್ ಕಬಳಿಸಿ ಮಿಂಚಿದರು. ಇದರಲ್ಲಿ ಒಂದು ಮೇಡನ್ ಓವರ್ ಸೇರಿತ್ತು. ಆ ಮೂಲಕ ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಕಡಿಮೆ ರನ್ ಬಿಟ್ಟುಕೊಟ್ಟ ಭಾರತದ ಎರಡನೇ ಬೌಲರ್ ಎನಿಸಿದರು.

ಟೂರ್ನಿಯಲ್ಲಿ ಮೊದಲ ಸಿಕ್ಸರ್ ಗಳಿಸಿದ ಕೊಹ್ಲಿ...

ಪ್ರಸಕ್ತ ಸಾಗುತ್ತಿರುವ ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಮೂರು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿರುವ ವಿರಾಟ್ ಕೊಹ್ಲಿ ಟೂರ್ನಿಯಲ್ಲಿ ಮೊದಲ ಸಿಕ್ಸರ್ ಗಳಿಸಿ ಸಂಭ್ರಮಿಸಿದರು. ವಿರಾಟ್ ಅವರ ಸಿಕ್ಸರ್, 2022ರ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ವೇಗದ ಬೌಲರ್ ಹ್ಯಾರಿಸ್ ರವೂಫ್ ಅವರ ದಾಳಿಯಲ್ಲಿ ಬಾರಿಸಿದ ಸಿಕ್ಸರ್‌ಗೆ ಹೋಲುವಂತಿತ್ತು. ಈ ಕುರಿತು ಐಸಿಸಿ ವಿಡಿಯೊದಲ್ಲಿ ಉಲ್ಲೇಖಿಸಿದೆ.

ಮುಂದಿನ ಸವಾಲು ಬಾಂಗ್ಲಾದೇಶ...

ಮುಂದಿನ ಪಂದ್ಯದಲ್ಲಿ ಭಾರತ ತಂಡವು ಜೂನ್ 22 ಶನಿವಾರದಂದು ಬಾಂಗ್ಲಾದೇಶದ ಸವಾಲನ್ನು ಎದುರಿಸಲಿದೆ. ಈ ಪಂದ್ಯ ಆ್ಯಂಟಿಗುವಾದಲ್ಲಿ ನಡೆಯಲಿದೆ. ಜೂನ್ 24ರಂದು ಸೂಪರ್ ಎಂಟರಲ್ಲಿ ಭಾರತ ತನ್ನ ಕೊನೆಯ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಸೇಂಟ್ ಲೂಯಿಸಿಯಾದಲ್ಲಿ ಆಡಲಿದೆ.

ಭಾರತ vs ಅಫ್ಗಾನಿಸ್ತಾನ ಮ್ಯಾಚ್ ಹೈಲೈಟ್ಸ್ ಇಲ್ಲಿ ವೀಕ್ಷಿಸಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT