ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಹಲ್ ಬಾಲ್ಕನಿ ಪ್ರಕರಣ: ತಪ್ಪಿತಸ್ಥನಿಗೆ ಶಿಕ್ಷೆಯಾಗಲಿ, ರವಿಶಾಸ್ತ್ರಿ

ಇದು ತಮಾಷೆಯಲ್ಲ, ಗಂಭೀರವಾಗಿ ಪರಿಗಣಿಸಬೇಕಾದ ವಿಷಯ: ರವಿಶಾಸ್ತ್ರಿ
Last Updated 9 ಏಪ್ರಿಲ್ 2022, 13:57 IST
ಅಕ್ಷರ ಗಾತ್ರ

ಮುಂಬೈ: ಲೆಗ್‌ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರನ್ನು ಒಂಬತ್ತು ವರ್ಷಗಳ ಹಿಂದೆ ಹೋಟೆಲ್‌ ಬಾಲ್ಕನಿಯಲ್ಲಿ ನೇತಾಡುವಂತೆ ಮಾಡಿದ್ದ ಆಟಗಾರನನ್ನು ನಿಷೇಧ ಶಿಕ್ಷೆಗೊಳಪಡಿಸಬೇಕು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಕ್ರಿಕೆಟ್ ವೀಕ್ಷಕ ವಿವರಣೆಗಾರ ರವಿಶಾಸ್ತ್ರಿ ಆಗ್ರಹಿಸಿದ್ದಾರೆ.

2013ರ ಐಪಿಎಲ್‌ನಲ್ಲಿ ತಾವು ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡುತ್ತಿದ್ದ ಸಂದರ್ಭದ ಘಟನೆಯನ್ನು ಚಾಹಲ್ ಯೂಟ್ಯೂಬ್‌ ವಾಹಿನಿಯಲ್ಲಿ ಹಂಚಿಕೊಂಡಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ.

ಬೆಂಗಳೂರಿನಲ್ಲಿ ನಡೆದಿದ್ದ ಪಂದ್ಯದ ನಂತರದ ಔತಣಕೂಟದ ಸಂದರ್ಭದಲ್ಲಿ ಕುಡಿದ ಮತ್ತಿನಲ್ಲಿದ್ದ ಮುಂಬೈ ತಂಡದ ಆಟಗಾರನೊಬ್ಬ ಚಾಹಲ್ ಅವರನ್ನು 15ನೇ ಮಹಡಿಯ ಬಾಲ್ಕನಿಯಿಂದ ನೇತಾಡುವಂತೆ ಮಾಡಿದ್ದ. ಅದರಿಂದಾಗಿ ತಾವು ಪ್ರಾಣಭಯ ಎದುರಿಸಿದ್ದಾಗಿ ಚಾಹಲ್ ಬಹಿರಂಗಪಡಿಸಿದ್ದರು. ಈ ವಿಷಯದ ಕುರಿತು ಶಾಸ್ತ್ರಿ ಪ್ರತಿಕ್ರಿಯಿಸಿದ್ದಾರೆ.

‘ಇದು ತಮಾಷೆಯ ಪ್ರಸಂಗವಲ್ಲ. ನಕ್ಕು ಮರೆಯುವಂತಿಲ್ಲ. ಆ ವ್ಯಕ್ತಿ ಯಾರೆಂದು ನನಗೆ ಗೊತ್ತಿಲ್ಲ. ಆದರೆ ಆತನ ಬುದ್ಧಿ ಸ್ಥಿಮಿತದಲ್ಲಿರಲಿಲ್ಲ ಎನ್ನುವುದು ಖಚಿತ. ಒಬ್ಬರ ಪ್ರಾಣಕ್ಕೆ ಕುತ್ತು ತಂದಿದ್ದು ಹೌದು. ಇದು ನಿಜಕ್ಕೂ ಗಂಭೀರವಾದ ವಿಷಯ‘ ಎಂದು ಶಾಸ್ತ್ರಿ ಇಎಸ್‌ಪಿಎನ್‌ ಕ್ರಿಕ್‌ಇನ್ಫೋ ವೆಬ್‌ಸೈಟ್‌ನಲ್ಲಿ ಹೇಳಿದ್ದಾರೆ.

‘ಇಂತಹ ಘಟನೆಯ ಕುರಿತು ನನ್ನ ಜೀವನದಲ್ಲಿ ಮೊದಲ ಬಾರಿ ಕೇಳಿದ್ದೇನೆ. ಈಗ ಇಂತಹ ಘಟನೆ ನಡೆದಿದ್ದರೆ ತಪ್ಪಿತಸ್ಥನಿಗೆ ಜೀವಮಾನ ನಿಷೇಧ ಶಿಕ್ಷೆ ವಿಧಿಸಲಾಗುತ್ತಿತ್ತು. ಈ ಘಟನೆಯನ್ನೂ ತನಿಖೆಗೆ ಒಳಪಡಿಸಬೇಕು. ತಪ್ಪಿತಸ್ಥ ಆಟಗಾರನನ್ನು ನಿಷೇಧಿಸಬೇಕು. ಆತನ ಮಾನಸಿಕ ಸ್ಥಿತಿ ಸುಧಾರಣೆಗೆ ಪುನಶ್ಚೇತನ ಶಿಬಿರಕ್ಕೆ ಕಳುಹಿಸಬೇಕು’ ಎಂದು ಶಾಸ್ತ್ರಿ ಹೇಳಿದ್ದಾರೆ.

‘ಚಾಹಲ್ ಪ್ರಕರಣವು ಎಲ್ಲರಿಗೂ ಪಾಠವಾಗಬೇಕು. ಇಂತಹ ಘಟನೆಗಳು ನಡೆದಾಗ ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಬೇಕು. ಆಟಗಾರರು ತಮ್ಮನ್ನು ಬುಕ್ಕಿಗಳು ಸಂಪರ್ಕಿಸಿದಾಗ ಭ್ರಷ್ಟಾಚಾರ ತಡೆ ಘಟಕಕ್ಕೆ ತಿಳಿಸುವ ಮಾದರಿಯಲ್ಲಿಯೇ ಇಂತಹ ಪ್ರಕರಣಗಳಲ್ಲಿ ಕೂಡ ಜಾಗರೂಕತೆ ವಹಿಸಬೇಕು‘ ಎಂದರು.

ಈ ವರ್ಷ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಚಾಹಲ್ ಆಡುತ್ತಿದ್ದಾರೆ. ಅವರು ತಂಡದ ಯುಟ್ಯೂಬ್‌ನಲ್ಲಿ ಪ್ರಸಾರವಾದ ಕಾರ್ಯಕ್ರಮದಲ್ಲಿ ಸಹ ಆಟಗಾರರಾದ ಆರ್. ಆಶ್ವಿನ್ ಮತ್ತು ಕರುಣ್ ನಾಯರ್ ಅವರೊಂದಿಗೆ ಈ ವಿಷಯ ಹಂಚಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT