ಮುಂಬೈ: ಅಹಮದಾಬಾದಿನ ನರೇಂದ್ರ ಮೋದಿ ಕ್ರೀಡಾಂಗಣವು ಈ ಸಲದ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ.
ವಿಶ್ವದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣವೆಂಬ ಹೆಗ್ಗಳಿಕೆಯ ಈ ಮೈದಾನದಲ್ಲಿ ನವೆಂಬರ್ 19ರಂದು ಫೈನಲ್ ಪಂದ್ಯ ನಡೆಯಲಿದೆ. ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ಲೀಗ್ ಪಂದ್ಯವೂ ಅಕ್ಟೋಬರ್ 15ರಂದು ಇದೇ ಮೈದಾನದಲ್ಲಿ ಆಯೋಜನೆಗೊಂಡಿದೆ.
ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮಂಗಳವಾರ ವಿಶ್ವಕಪ್ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿತು. ಟೂರ್ನಿ ಆರಂಭಕ್ಕೆ ಬರೋಬ್ಬರಿ 100 ದಿನಗಳು ಬಾಕಿ ಉಳಿದಿವೆ. ಪಂದ್ಯಗಳಿಗೆ ಆತಿಥ್ಯ ವಹಿಸಲಿರುವ 12 ರಾಜ್ಯ ಸಂಸ್ಥೆಗಳ ಸಭೆಯು ಸೋಮವಾರ ನಡೆದಿತ್ತು.
ಅಕ್ಟೋಬರ್ 5ರಂದು ಉದ್ಘಾಟನೆ ಪಂದ್ಯವೂ ಅಹಮದಾಬಾದಿನಲ್ಲಿ ನಡೆಯಲಿದೆ. 2019ರ ವಿಶ್ವಕಪ್ ಚಾಂಪಿಯನ್ ಇಂಗ್ಲೆಂಡ್ ಮತ್ತು ರನ್ನರ್ಸ್ ಅಪ್ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ.
1 ಲಕ್ಷ, 32 ಸಾವಿರ ಪ್ರೇಕ್ಷಕರ ಆಸನ ಸಾಮರ್ಥ್ಯ ಈ ಕ್ರೀಡಾಂಗಣಕ್ಕೆ ಇದೆ. ಮೆಲ್ಬರ್ನ್ ಕ್ರಿಕೆಟ್ ಕ್ರೀಡಾಂಗಣ (ಎಂಸಿಜಿ) ಕ್ಕಿಂತಲೂ 32 ಸಾವಿರ ಆಸನ ಸಾಮರ್ಥ್ಯ ಇಲ್ಲಿ ಹೆಚ್ಚು ಇದೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ (ನ.15 ಮತ್ತು ಕೋಲ್ಕತ್ತ ಈಡನ್ ಗಾರ್ಡನ್‌ನಲ್ಲಿ (ನ.16) ಸೆಮಿಫೈನಲ್ ಪಂದ್ಯಗಳು ನಡೆಯಲಿವೆ.
ಆತಿಥೇಯ ಭಾರತ ತಂಡವು ತನ್ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಕಣಕ್ಕಿಳಿಯಲಿದೆ. ಅಕ್ಟೋಬರ್ 8ರಂದು ಚೆನ್ನೈನಲ್ಲಿ ಪಂದ್ಯ ನಡೆಯುವುದು.
ಗುವಾಹಟಿ ಸೇರಿದಂತೆ ಒಟ್ಟು 12 ಸ್ಥಳಗಳನ್ನು ನಿಗದಿ ಮಾಡಲಾಗಿದೆ. ಅಭ್ಯಾಸ ಲೀಗ್ ಹಂತದ ಪಂದ್ಯಗಳು ಬೆಂಗಳೂರು, ಹೈದರಾಬಾದ್, ಅಹಮದಾಬಾದ್, ಧರ್ಮಶಾಲಾ, ನವದೆಹಲಿ, ಚೆನ್ನೈ, ಲಖನೌ, ಪುಣೆ, ಮುಂಬೈ ಹಾಗೂ ಕೋಲ್ಕತ್ತದಲ್ಲಿ ನಡೆಯಲಿವೆ. ಗುವಾಹಟಿ ಮತ್ತು ತಿರುವನಂತಪುರದಲ್ಲಿ ಸೆಪ್ಟೆಂಬರ್ 29ರಿಂದ ಅಕ್ಟೋಬರ್ 3ರವರೆಗೆ ಅಭ್ಯಾಸ ಪಂದ್ಯಗಳು ನಡೆಯಲಿವೆ.
ಆತಿಥೇಯ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ಅಫ್ಗಾನಿಸ್ತಾನ, ನ್ಯೂಜಿಲೆಂಡ್, ಬಾಂಗ್ಲಾದೇಶ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ ತಂಡಗಳು ಟೂರ್ನಿಗೆ ನೇರ ಅರ್ಹತೆ ಗಳಿಸಿವೆ. ಅರ್ಹತಾ ಸುತ್ತಿನ ಮೂಲಕ ಇನ್ನೆರಡು ತಂಡಗಳು ಪ್ರವೇಶ ಪಡೆಯಲಿವೆ. ಜಿಂಬಾಬ್ವೆಯಲ್ಲಿ ಕ್ವಾಲಿಫೈಯರ್ ಸುತ್ತಿನ ಪಂದ್ಯಗಳು ನಡೆಯಲಿವೆ.
ವಿಶ್ವಕಪ್ ಮಾಜಿ ವಿಜೇತರಾದ ವೆಸ್ಟ್ ಇಂಡೀಸ್, ಶ್ರೀಲಂಕಾ ಸೇರಿದಂತೆ ಐರ್ಲೆಂಡ್, ನೇಪಾಳ, ನೆದರ್ಲೆಂಡ್ಸ್, ಒಮನ್, ಸ್ಕಾಟ್ಲೆಂಡ್, ಯುಎಇ, ಅಮೆರಿಕ ಮತ್ತು ಜಿಂಬಾಬ್ವೆ ತಂಡಗಳು ಅರ್ಹತಾ ಸುತ್ತಿನಲ್ಲಿವೆ.
ಮುಖ್ಯ ಸುತ್ತಿನಲ್ಲಿ 10 ತಾಣಗಳಲ್ಲಿ ಪಂದ್ಯಗಳು
ಅಹಮದಾಬಾದಿನಲ್ಲಿ ಉದ್ಘಾಟನೆ ಹಾಗೂ ಫೈನಲ್ ಪಂದ್ಯಗಳು
12 ವರ್ಷಗಳ ನಂತರ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯ
ರೌಂಡ್ ರಾಬಿನ್ ಲೀಗ್ ಸುತ್ತಿನಲ್ಲಿ 45 ಪಂದ್ಯಗಳು ಪ್ರಶಸ್ತಿಗಾಗಿ ಹತ್ತು ತಂಡಗಳ ಹಣಾಹಣಿ
ಮುಂಬೈ, ಕೋಲ್ಕತ್ತದಲ್ಲಿ ಸೆಮಿಫೈನಲ್ ಪಂದ್ಯಗಳು
ಅಹಮದಾಬಾದಿನಲ್ಲಿ ಭಾರತ–ಪಾಕಿಸ್ತಾನ ಸೆಣಸಾಟ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.