ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG | ಇಂದಿನಿಂದ ನಾಲ್ಕನೇ ಟೆಸ್ಟ್: ಸರಣಿ ಮುನ್ನಡೆಗೆ ವಿರಾಟ್ ಪಡೆಯ ಚಿತ್ತ

ಅಜಿಂಕ್ಯ ರಹಾನೆಗೆ ವಿಶ್ರಾಂತಿ ಸಾಧ್ಯತೆ
Last Updated 1 ಸೆಪ್ಟೆಂಬರ್ 2021, 19:31 IST
ಅಕ್ಷರ ಗಾತ್ರ

ಲಂಡನ್: ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಕ್ರಿಕೆಟ್ ಸರಣಿಯ ಐತಿಹಾಸಿಕ ಸಾಧನೆ ಮಾಡಬೇಕಾದರೆ ಭಾರತ ತಂಡವು ಗುರುವಾರ ಆರಂಭವಾಗಲಿರುವ ನಾಲ್ಕನೇ ಟೆಸ್ಟ್‌ನಲ್ಲಿ ಜಯಿಸಲೇಬೇಕಾದ ಒತ್ತಡದಲ್ಲಿದೆ.

ಅದಕ್ಕಾಗಿ ತಂಡದಲ್ಲಿ ಕೆಲವು ಪ್ರಮುಖ ಬದಲಾವಣೆಗಳೊಂದಿಗೆ ವಿರಾಟ್ ಕೊಹ್ಲಿ ಬಳಗವು ಕಣಕ್ಕಿಳಿಯು ಸಾಧ್ಯತೆ ಇದೆ. ಅದರಲ್ಲೂ ಬ್ಯಾಟಿಂಗ್ ವೈಫಲ್ಯಕ್ಕೆ ಪರಿಹಾರ ಕಂಡುಕೊಳ್ಳುವತ್ತ ಚಿತ್ತ ನೆಟ್ಟಿದೆ. ಮಧ್ಯಮ ಕ್ರಮಾಂಕದಲ್ಲಿ ಪದೇ ಪದೇ ವಿಫಲರಾಗುತ್ತಿರುವ ಉಪನಾಯಕ ಅಜಿಂಕ್ಯ ರಹಾನೆ ಅವರನ್ನು ಕಣಕ್ಕಿಳಿಸುವುದು ಅನುಮಾನವಾಗಿದೆ.

ಲಾರ್ಡ್ಸ್‌ನಲ್ಲಿ ನಡೆದಿದ್ದ ಎರಡನೇ ಟೆಸ್ಟ್‌ನಲ್ಲಿ ಅಮೋಘ ಜಯ ಸಾಧಿಸಿದ್ದ ಭಾರತ ತಂಡವು ನಂತರ ಹೆಡಿಂಗ್ಲೆಯಲ್ಲಿ ನಡೆದ ಟೆಸ್ಟ್‌ನಲ್ಲಿ ಸೋಲಿನ ಆಘಾತ ಎದುರಿಸಿತ್ತು. ಅದರಿಂದಾಗಿ ಸರಣಿಯು 1–1ರಿಂದ ಸಮಸ್ಥಿತಿಯಲ್ಲಿದೆ. ಇನ್ನೆರಡು ಪಂದ್ಯಗಳು ಬಾಕಿ ಇವೆ.

ಹೆಡಿಂಗ್ಲೆ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ವಿರಾಟ್ ಬಳಗವು 78 ರನ್‌ಗಳಿಸಿ ಆಲೌಟ್ ಆಗಿತ್ತು. ಎರಡನೇ ಇನಿಂಗ್ಸ್‌ನಲ್ಲಿ ರೋಹಿತ್ ಶರ್ಮಾ ಅರ್ಧಶತಕ ಗಳಿಸಿದ್ದರು. ಚೇತೇಶ್ವರ್ ಪೂಜಾರ ಶತಕದಂಚಿನಲ್ಲಿ ಎಡವಿದ್ದರೂ ಲಯಕ್ಕೆ ಮರಳಿದ್ದು ಸಮಾಧಾನದ ಸಂಗತಿ. ವಿರಾಟ್ ಕೂಡ ಅರ್ಧಶತಕ ಗಳಿಸಿದ್ದರು. ಆದರೆ ಇತ್ತೀಚಿನ ಪಂದ್ಯಗಳಲ್ಲಿ ಅವರ ಬ್ಯಾಟಿಂಗ್ ಫಾರ್ಮ್ ಸ್ಥಿರವಾಗಿಲ್ಲ. ಅಲ್ಲದೇ ಸುಮಾರು ಒಂದೂವರೆ ವರ್ಷದಿಂದ ಅವರು ಒಂದೂ ಶತಕ ದಾಖಲಿಸಿಲ್ಲ.

ಆದರೆ, ಅಜಿಂಕ್ಯ ಲಯಕ್ಕೆ ಮರಳುವಲ್ಲಿ ವಿಫಲರಾಗಿದ್ದರು. ಕಳೆದ ಐದು ಇನಿಂಗ್ಸ್‌ನಲ್ಲಿ ಅವರು ಕೇವಲ 95 ರನ್‌ಗಳನ್ನು ಗಳಿಸಿದ್ದಾರೆ. ಒಂದೊಮ್ಮೆ ಅವರನ್ನು ಕೈಬಿಟ್ಟರೆ, ಹನುಮವಿಹಾರಿ ಕಣಕ್ಕಿಳಿಯಬಹುದು. ಅವರು ಆಫ್‌ಸ್ಪಿನ್ ಬೌಲಿಂಗ್ ಮಾಡುವುದು ಕೂಡ ತಂಡಕ್ಕೆ ಅನುಕೂಲವಾಗಬಹುದು. ಸೂರ್ಯಕುಮಾರ್ ಯಾದವ್‌ ಅವರಿಗೆ ಪದಾರ್ಪಣೆ ಮಾಡುವ ಅವಕಾಶ ಸಿಕ್ಕರೂ ಅಚ್ಚರಿಯಿಲ್ಲ.

ಆರಂಭಿಕ ಬ್ಯಾಟ್ಸ್‌ಮನ್ ಕೆ.ಎಲ್. ರಾಹುಲ್ ಈ ಸರಣಿಯಲ್ಲಿ ಶತಕ ಹೊಡೆದಿರುವ ಏಕೈಕ ಭಾರತೀಯ ಆಟಗಾರ. ಅವರಿಗೆ ಇಲ್ಲಿ ಮತ್ತೊಂದು ಅವಕಾಶ ಸಿಗುವುದು ಬಹುತೇಕ ಖಚಿತ. ಏಳನೇ ಕ್ರಮಾಂಕದಲ್ಲಿ ಒಂದಿಷ್ಟು ರನ್‌ಗಳ ಕಾಣಿಕೆ ನೀಡುತ್ತಿರುವ ರವೀಂದ್ರ ಜಡೇಜ, ಸರಣಿಯಲ್ಲಿ ಕೇವಲ ಎರಡು ವಿಕೆಟ್ ಗಳಿಸಿದ್ದಾರೆ. ಓವಲ್ ಕ್ರೀಡಾಂಗಣದ ಪಿಚ್ ಸ್ಪಿನ್ನರ್‌ಗಳಿಗೆ ಬೆಂಬಲ ನೀಡುವುದೇ ಹೆಚ್ಚು. ಆದ್ದರಿಂದ ಜಡೇಜ ಅವರನ್ನು ಉಳಿಸಿಕೊಳ್ಳಲು ತಂಡದ ವ್ಯವಸ್ಥಾಪನ ಮಂಡಳಿ ಮನಸ್ಸು ಮಾಡಬಹುದು. ಅಲ್ಲದೇ ಆಫ್‌ ಸ್ಪಿನ್ನರ್ ಆರ್. ಅಶ್ವಿನ್ ಅವರಿಗೂ ಅವಕಾಶ ನೀಡಬಹುದು.

ಆದರೆ, ನಾಲ್ವರು ಮಧ್ಯಮವೇಗಿಗಳನ್ನು ಕಣಕ್ಕಿಳಿಸಿದರೆ, ಇಬ್ಬರು ಸ್ಪಿನ್ನರ್‌ಗಳಲ್ಲಿ ಒಬ್ಬರಿಗಷ್ಟೇ ಅವಕಾಶ ಸಿಗಬಹುದು. ಈ ಪಂದ್ಯದಲ್ಲಿ ಇಶಾಂತ್ ಶರ್ಮಾಗೆ ವಿಶ್ರಾಂತಿ ನೀಡಿ, ಶಾರ್ದೂಲ್ ಠಾಕೂರ್‌ಗೆ ಮಣೆ ಹಾಕಬಹುದು.

ಆತಿಥೇಯ ಇಂಗ್ಲೆಂಡ್ ತಂಡದ ಬೌಲಿಂಗ್ ಅಮೋಘವಾಗಿದೆ. ಜಿಮ್ಮಿ ಆ್ಯಂಡರ್ಸನ್, ಒಲಿ ರಾಬಿನ್ಸನ್, ಕ್ರಿಸ್ ವೋಕ್ಸ್‌ ಮತ್ತು ಮಾರ್ಕ್ ವುಡ್ ಈಗಾಗಲೇ ತಮ್ಮ ಸ್ವಿಂಗ್ ಅಸ್ತ್ರಗಳ ಪ್ರಭಾವವನ್ನು ಭಾರತ ತಂಡಕ್ಕೆ ತೋರಿಸಿದ್ದಾರೆ. ಆದರ, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯ ತಂಡಕ್ಕೆ ಚಿಂತೆಯ ವಿಷಯವಾಗಿದೆ. ಜೋ ರೂಟ್ ಕಳೆದ ಮೂರು ಪಂದ್ಯಗಳಲ್ಲಿ ಶತಕ ಬಾರಿಸಿ ಆ ಕೊರತೆಯನ್ನು ತುಂಬಿಕೊಟ್ಟಿದ್ದರೆ.

ಮೊಯಿನ್‌ ಅಲಿ ಉಪನಾಯಕ
ಆಲ್‌ರೌಂಡರ್ ಮೋಯಿನ್ ಅಲಿ ಅವರನ್ನು ಇಂಗ್ಲೆಂಡ್ ತಂಡದ ಉಪನಾಯಕರನ್ನಾಗಿ ನೇಮಕ ಮಾಡಲಾಗಿದೆ. ಜೋಸ್ ಬಟ್ಲರ್ ಅವರು ನಾಲ್ಕನೇ ಟೆಸ್ಟ್‌ನಲ್ಲಿ ಆಡುತ್ತಿಲ್ಲ. ಅದ್ದರಿಂದ ಅವರ ಬದಲಿಗೆ ಅಲಿಗೆ ಹೊಣೆ ನೀಡಲಾಗಿದೆ.

ಪಂದ್ಯ ಆರಂಭ: ಮಧ್ಯಾಹ್ನ 3.30 (ಭಾರತೀಯ ಕಾಲಮಾನ)

ನೇರಪ್ರಸಾರ: ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT