ಶನಿವಾರ, ಡಿಸೆಂಬರ್ 7, 2019
24 °C
ಸರಣಿ ಸಮಬಲಕ್ಕೆ ಇಂಗ್ಲೆಂಡ್ ಪ್ರಯತ್ನ

ಆ್ಯಷಸ್‌: ಸೋಲಿನಿಂದ ಪಾರಾಗಲು ವೇಡ್ ಹೋರಾಟ

Published:
Updated:
Prajavani

ಲಂಡನ್: ಆತಿಥೇಯ ಇಂಗ್ಲೆಂಡ್‌ಗೆ ಸರಣಿ ಸಮ ಮಾಡಿಕೊಳ್ಳುವ ಛಲ. ಅದೇ ಪ್ರವಾಸಿ ಆಸ್ಟ್ರೇಲಿಯಾಕ್ಕೆ ಈ ಪಂದ್ಯ ಡ್ರಾ ಮಾಡಿಕೊಂಡು ಸರಣಿ ಗೆಲ್ಲುವ ಗುರಿ.

ಹೌದು; ಈ ಎರಡೂ ತಂಡಗಳು ಛಲದ ಹೋರಾಟದಿಂದಾಗಿ ಆ್ಯಷಸ್ ಸರಣಿಯ ಕೊನೆಯ ಪಂದ್ಯವು ರೋಚಕ ಘಟ್ಟದಲ್ಲಿ ಬಂದು ನಿಂತಿದೆ. ಕೆನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ಪಂದ್ಯದ ನಾಲ್ಕನೇ ದಿನವಾದ ಭಾನುವಾರ 399 ರನ್‌ಗಳ ಗುರಿ ಬೆನ್ನತ್ತಿರುವ ಆಸ್ಟ್ರೇಲಿಯಾ ತಂಡವು 64 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 221 ರನ್‌ ಗಳಿಸಿದೆ. ಎಲ್ಲ ಪಂದ್ಯಗಳಲ್ಲಿಯೂ ಮಿಂಚಿದ್ದ ಸ್ಟೀವ್ ಸ್ಮಿತ್ ಇಲ್ಲಿ ಕೇವಲ 23 ರನ್ ಗಳಿಸಿ ಔಟಾದರು.

ಆದರೆ  ಮ್ಯಾಥ್ಯೂ ವೇಡ್  (ಬ್ಯಾಟಿಂಗ್ 96) ತಂಡಕ್ಕೆ ಆಸರೆಯಾಗಿದ್ದಾರೆ. ತಂಡದ ಸೋಲು ತ‍ಪ್ಪಿಸಲು ದಿಟ್ಟ ಹೋರಾಟ ನಡೆಸಿದರು.

ಗುರಿ ಬೆನ್ನಟ್ಟಿದ ಪ್ರವಾಸಿ ತಂಡಕ್ಕೆ ಸ್ಟುವರ್ಟ್‌ ಬ್ರಾಡ್ (43ಕ್ಕೆ3) ಆರಂಭದಲ್ಲಿಯೇ ಪೆಟ್ಟು ಕೊಟ್ಟರು. ಇದರಿಂದಾಗಿ  ಆಸ್ಟ್ರೇಲಿಯಾ ತಂಡದ ಯೋಜನೆ ಬುಡಮೇಲಾಯಿತು. ಮಾರ್ಕಸ್ ಹ್ಯಾರಿಸ್, ಡೇವಿಡ್ ವಾರ್ನರ್ ಮತ್ತು ಸ್ಮಿತ್ ಅವರ ವಿಕೆಟ್‌ಗಳನ್ನು ಬ್ರಾಡ್ ಕಬಳಿಸಿದರು. ಇದರಿಂದಾಗಿ  ಇಂಗ್ಲೆಂಡ್‌ ತಂಡದಲ್ಲಿ ಜಯದ ಆಸೆ ಚಿಗುರಿತು. ಇನ್ನೊಂದೆಡೆ ಜ್ಯಾಕ್ ಲೀಚ್ ಕೂಡ ಎರಡು ವಿಕೆಟ್ ಗಳಿಸಿ ಪೆಟ್ಟು ನೀಡಿದರು. ಆದರೆ, ವೇಡ್ ಅಡ್ಡಗಾಲು ಹಾಕಿದರು. 

ಇಂಗ್ಲೆಂಡ್ ನೆಲದಲ್ಲಿ 2001ರ ನಂತರ ಆಸ್ಟ್ರೇಲಿಯಾವು ಆ್ಯಷಸ್ ಕಪ್ ಗೆದ್ದಿಲ್ಲ. ಈ ಸರಣಿಯಲ್ಲಿ 2–1ರಿಂದ  ಮುಂದಿದೆ.

ಒಂದೊಮ್ಮೆ ಇಲ್ಲಿ ಸೋತರೆ ಇಂಗ್ಲೆಂಡ್ ಸರಣಿ ಸಮ ಮಾಡಿಕೊಳ್ಳುವುದು. ಪಂದ್ಯ ಡ್ರಾ ಆದರೆ ಅಥವಾ ಆಸ್ಟ್ರೇಲಿಯಾ ಗೆದ್ದರೆ ಟಿಮ್ ಪೇನ್ ಬಳಗವು ಇತಿಹಾಸ ಬರೆಯುವುದು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌: ಇಂಗ್ಲೆಂಡ್: 294, ಆಸ್ಟ್ರೇಲಿಯಾ: 225; ದ್ವಿತೀಯ ಇನಿಂಗ್ಸ್‌: ಇಂಗ್ಲೆಂಡ್: 329; ಆಸ್ಟ್ರೇಲಿಯಾ: 64 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 221 (ಡೇವಿಡ್ ವಾರ್ನರ್ 11, ಮಾರ್ನಸ್ ಲಬುಷೇನ್ 14, ಸ್ಟೀವನ್ ಸ್ಮಿತ್ 23, ಮ್ಯಾಥ್ಯೂ ವೇಡ್ ಬ್ಯಾಟಿಂಗ್ 96, ಮಿಚೆಲ್ ಮಾರ್ಷ್ 24, ಟಿಮ್ ಪೇನ್ 21, ಸ್ಟುವರ್ಟ್ ಬ್ರಾಡ್ 40ಕ್ಕೆ3, ಜ್ಯಾಕ್ ಲೀಚ್ 44ಕ್ಕೆ2 ಜೋ ರೂಟ್ 11ಕ್ಕೆ1)

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು