ಮಂಗಳವಾರ, ಜನವರಿ 18, 2022
27 °C

ಆ್ಯಷಸ್ ಸರಣಿ: ಸೋಲು ತಪ್ಪಿಸಿಕೊಂಡ ಇಂಗ್ಲೆಂಡ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿಡ್ನಿ (ಎಎಫ್‌ಪಿ/ಎಪಿ): ಈ ಬಾರಿಯ ಆ್ಯಷಸ್ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಸತತ ನಿರಾಶೆ ಅನುಭವಿಸಿದ್ದ ಇಂಗ್ಲೆಂಡ್ ತಂಡ ನಾಲ್ಕನೇ ಟೆಸ್ಟ್‌ನಲ್ಲಿ ಸೋಲಿನ ದವಡೆಯಿಂದ ತಪ್ಪಿಸಿಕೊಂಡಿತು.

388 ರನ್‌ಗಳ ಕಠಿಣ ಗುರಿಯನ್ನು ಬೆನ್ನಟ್ಟಿದ ಪ್ರವಾಸಿ ಇಂಗ್ಲೆಂಡ್ ತಂಡವು 102 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 270 ರನ್ ಗಳಿಸಿ ಪಂದ್ಯವನ್ನು ಡ್ರಾ ಮಾಡಿಕೊಂಡಿತು.  ಆರಂಭಿಕ ಬ್ಯಾಟರ್ ಜ್ಯಾಕ್ ಕ್ರಾಲಿ (77; 100ಎ, 4X13) ಮತ್ತು ಬೆನ್ ಸ್ಟೋಕ್ಸ್‌ (60; 123ಎ, 4X10, 6X1) ಅರ್ಧಶತಕಗಳನ್ನು ದಾಖಲಿಸುವ ಮೂಲಕ ತಂಡದ ಸೋಲು ತಪ್ಪಿಸುವಲ್ಲಿ ಯಶಸ್ವಿಯಾದರು.

ಐದು ಪಂದ್ಯಗಳ ಸರಣಿಯಲ್ಲಿ ಈಗಾಗಲೇ ಆತಿಥೇಯ ಆಸ್ಟ್ರೇಲಿಯಾ ತಂಡವು 3–0ಯಿಂದ ಮುನ್ನಡೆ ಸಾಧಿಸಿದೆ.

ನಾಲ್ಕನೇ ದಿನದಾಟದ ಮುಕ್ತಾಯಕ್ಕೆ ವಿಕೆಟ್ ನಷ್ಟವಿಲ್ಲದೇ 30 ರನ್ ಗಳಿಸಿದ್ದ ಇಂಗ್ಲೆಂಡ್ ಆರಂಭಿಕ ಜೋಡಿ ಕ್ರಾಲಿ ಮತ್ತು ಹಸೀಬ್ ಹಮೀದ್ ಭಾನುವಾರ ಆಟ ಮುಂದುವರಿಸಿದರು.

ಸ್ಕಾಟ್ ಬೊಲ್ಯಾಂಡ್ (30ಕ್ಕೆ3) ಮತ್ತು ಸ್ಪಿನ್ನರ್ ನೇಥನ್ ಲಯನ್ (28ಕ್ಕೆ2) ಅವರ ಶಿಸ್ತಿನ ದಾಳಿಯ ಮುಂದೆ ಸೋಲು ತಪ್ಪಿಸಿಕೊಳ್ಳಲು ಇಂಗ್ಲೆಂಡ್ ಬ್ಯಾಟಿಂಗ್ ಪಡೆಯು ಹರಸಾಹಸ ಪಡಬೇಕಾಯಿತು. 74 ರನ್‌ಗಳಾಗುವಷ್ಟರಲ್ಲಿ ಹಮೀದ್ ಮತ್ತು ಡೇವಿಡ್ ಮಲಾನ್ ಪೆವಿಲಿಯನ್ ಸೇರಿದಾಗ ತಂಡದಲ್ಲಿ ಆತಂಕ ಎದುರಾಗಿತ್ತು. ತಂಡದ ಮೊತ್ತ 100 ರ ಗಡಿ ದಾಟುವ ಮುನ್ನವೇ ಕ್ರಾಲಿ ಕೂಡ ಔಟಾದರು. ನಾಯಕ ಜೋ ರೂಟ್ ಮತ್ತು ಸ್ಟೋಕ್ಸ್‌ ನಾಲ್ಕನೇ ವಿಕೆಟ್‌ ಜೊತೆಯಾಟದಲ್ಲಿ 60 ರನ್‌ ಸೇರಿಸಿದರು. 

ರೂಟ್ ಔಟಾದ ನಂತರ ಜಾನಿ ಬೆಸ್ಟೊ (41; 105ಎ) ಮತ್ತು ದಿನದಾಟದ ಕೊನೆಯ ಹಂತದಲ್ಲಿ ಜ್ಯಾಕ್ ಲೀಚ್ (26; 34ಎ) ತಂಡವು ಕುಸಿಯದಂತೆ ನೋಡಿಕೊಂಡರು. ಬ್ಯಾಟರ್‌ಗಳು ರನ್‌ ಗಳಿಕೆಗಿಂತ ಎಸೆತಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಎದುರಿಸುವತ್ತ ಗಮನ ಹರಿಸಿದರು. ಇಂಗ್ಲೆಂಡ್‌ನ ತಾಳ್ಮೆ ಮತ್ತು ರಕ್ಷಣಾತ್ಮಕ ತಂತ್ರಕ್ಕೆ ಫಲ ಸಿಕ್ಕಿತು. ಮತ್ತೊಂದು ಹೀನಾಯ ಸೋಲಿನ ಅವಮಾನ ತಪ್ಪಿತು.

ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ ಆಸ್ಟ್ರೇಲಿಯಾದ ಉಸ್ಮಾನ್ ಖ್ವಾಜಾ ಅವರಿಗೆ ಪಂದ್ಯಶ್ರೇಷ್ಠ ಗೌರವ ಒಲಿಯಿತು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್, ಆಸ್ಟ್ರೇಲಿಯಾ: 8ಕ್ಕೆ 416 ಡಿಕ್ಲೆರ್ಡ್, ಇಂಗ್ಲೆಂಡ್: 294, ಎರಡನೇ ಇನಿಂಗ್ಸ್: 6ಕ್ಕೆ265 ಡಿಕ್ಲೆರ್ಡ್, ಇಂಗ್ಲೆಂಡ್: 102 ಓವರ್‌ಗಳಲ್ಲಿ 9ಕ್ಕೆ270 (ಜ್ಯಾಕ್ ಕ್ರಾಲಿ 77, ಜೋ ರೂಟ್ 24, ಬೆನ್ ಸ್ಟೋಕ್ಸ್‌ 60, ಜಾನಿ ಬೆಸ್ಟೊ 41, ಜ್ಯಾಕ್ ಲೀಚ್ 26, ಪ್ಯಾಟ್ ಕಮಿನ್ಸ್ 80ಕ್ಕೆ2, ಸ್ಕಾಟ್ ಬೊಲ್ಯಾಂಡ್ 30ಕ್ಕೆ3, ನೇಥನ್ ಲಯನ್ 28ಕ್ಕೆ2) ಫಲಿತಾಂಶ: ಡ್ರಾ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು