ಮುಂಬೈ: ಭಾರತ ಮತ್ತು ಪಾಕಿಸ್ತಾನ ತಂಡಗಳು ಸೆಪ್ಟೆಂಬರ್ 2ರಂದು ಕ್ಯಾಂಡಿಯಲ್ಲಿ ನಡೆಯುವ ಏಷ್ಯಾ ಕಪ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಬುಧವಾರ ಬಿಡುಗಡೆ ಮಾಡಿರುವ ವೇಳಾಪಟ್ಟಿಯ ಪ್ರಕಾರ ಭಾರತ ಮತ್ತು ಪಾಕ್ ಗುಂಪು ಹಂತದಲ್ಲಿ ಮುಖಾಮುಖಿಯಾಗಲಿವೆ.
ಟೂರ್ನಿಯಲ್ಲಿ ಎರಡು ಗುಂಪುಗಳಿವೆ. ಎ ಗುಂಪಿನಲ್ಲಿ ಭಾರತ, ಪಾಕಿಸ್ತಾನ ಮತ್ತು ನೇಪಾಳ ತಂಡಗಳಿವೆ. ಬಿ ಗುಂಪಿನಲ್ಲಿ ಅಫ್ಗಾನಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳು ಆಡಲಿವೆ.
ಉದಯೋನ್ಮುಖ ತಂಡವಾಗಿರುವ ನೇಪಾಳ ಗುಂಪು ಹಂತದಲ್ಲಿ ಭಾರತ ಹಾಗೂ ಪಾಕ್ ವಿರುದ್ಧ ಗೆಲುವು ಸಾಧಿಸುವುದು ಕಠಿಣವಾಗಿದೆ. ಆದ್ದರಿಂದ ಭಾರತ ಮತ್ತು ಪಾಕ್ ಮೊದಲ ಹಾಗೂ ಎರಡನೇ ಸ್ಥಾನ ಪಡೆದು ಸೂಪರ್ ನಾಲ್ಕರ ಹಂತ ಪ್ರವೇಶಿಸುವುದು ಬಹುತೇಕ ಖಚಿತ. ಆಗ ಈ ತಂಡಗಳು ಸೆ 10ರಂದು ಕೊಲಂಬೊದಲ್ಲಿ ಮುಖಾಮುಖಿಯಾಗುತ್ತವೆ.
ಈ ಹಂತದಲ್ಲಿ ಭಾರತ ಮತ್ತು ಪಾಕ್ ತಂಡಗಳು ಮೊದಲ ಹಾಗೂ ಎರಡನೇ ಸ್ಥಾನ ಗಳಿಸಿದರೆ ಫೈನಲ್‌ನಲ್ಲಿಯೂ ಹಣಾಹಣಿ ನಡೆಸಬಹುದು.
ಟೂರ್ನಿಯ ನಾಲ್ಕು ಪಂದ್ಯಗಳು ಮಾತ್ರ ಪಾಕಿಸ್ತಾನದಲ್ಲಿ ನಡೆಯಲಿವೆ. ಉಳಿದೆಲ್ಲ ಪಂದ್ಯಗಳೂ ಶ್ರೀಲಂಕಾದಲ್ಲಿ ಆಯೋಜನೆಗೊಂಡಿವೆ. ಭಾರತ ತಂಡವು ಎಲ್ಲ ಪಂದ್ಯಗಳನ್ನೂ ಲಂಕಾದಲ್ಲಿಯೇ ಆಡಲಿದೆ.
ವೇಳಾಪಟ್ಟಿ
ದಿನಾಂಕ; ಪಂದ್ಯ; ತಾಣ
ಆ. 30;ಪಾಕಿಸ್ತಾನ–ನೇಪಾಳ;ಮುಲ್ತಾನ್
ಆ, 31;ಬಾಂಗ್ಲಾದೇಶ–ಶ್ರೀಲಂಕಾ;ಕ್ಯಾಂಡಿ
ಸೆ. 2;ಭಾರತ–ಪಾಕಿಸ್ತಾನ;ಕ್ಯಾಂಡಿ
ಸೆ.3;ಬಾಂಗ್ಲಾ–ಅಫ್ಗಾನಿಸ್ತಾನ;ಲಾಹೋರ್
ಸೆ.4;ಭಾರತ–ನೇಪಾಳ;ಕ್ಯಾಂಡಿ
ಸೆ.5;ಶ್ರೀಲಂಕಾ–ಅಫ್ಗಾನಿಸ್ತಾನ;ಲಾಹೋರ್
* ಸೂಪರ್ 4 ಹಂತದ ಪಂದ್ಯಗಳು ಸೆ. 6ರಿಂದ 15ರವರೆಗೆ ನಡೆಯಲಿವೆ. ಸೆ 17ರಂದು ಫೈನಲ್ ಕೊಲಂಬೊದಲ್ಲಿ ನಡೆಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.