ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL Auction 2024: ಆರ್‌ಸಿಬಿ ತಂಡದ ಸಂಯೋಜನೆಗೆ ಡುಪ್ಲೆಸಿ ಸಂತಸ

Published 20 ಡಿಸೆಂಬರ್ 2023, 23:30 IST
Last Updated 20 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಸಮತೋಲನವಿರುವ ತಂಡವನ್ನು ಕಣಕ್ಕಿಳಿಸುವ ಮುಖ್ಯ ಉದ್ದೇಶಕ್ಕೆ ಸರಿಹೊಂದುವಂತಹ ಆಟಗಾರರನ್ನು ಬಿಡ್‌ನಲ್ಲಿ ಆಯ್ಕೆ ಮಾಡಲಾಗಿದೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಫ್ ಡುಪ್ಲೆಸಿ ಹೇಳಿದ್ದಾರೆ.

ಮಂಗಳವಾರ ದುಬೈನಲ್ಲಿ ನಡೆದ ಮಿನಿ ಹರಾಜಿನಲ್ಲಿ ಆರ್‌ಸಿಬಿಯು ವೆಸ್ಟ್ ಇಂಡೀಸ್ ಬೌಲರ್ ಅಲ್ಜಾರಿ ಜೋಸೆಫ್ (₹ 11.50 ಕೋಟಿ), ನ್ಯೂಜಿಲೆಂಡ್‌ನ ಲಾಕಿ ಫರ್ಗ್ಯುಸನ್ (₹ 2 ಕೋಟಿ), ಭಾರತದ ಬೌಲರ್ ಯಶ್ ದಯಾಳ್ (₹ 5 ಕೋಟಿ), ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಮಿಂಚಿದ್ದ ವಿಕೆಟ್‌ಕೀಪರ್ ಸೌರವ್ ಚೌಹಾಣ್ (₹ 20 ಲಕ್ಷ) ಮತ್ತು ಆಲ್‌ರೌಂಡರ್ ಸ್ವಪ್ನಿಲ್ ಸಿಂಗ್ (₹ 20 ಲಕ್ಷ)  ಅವರನ್ನು ಖರೀದಿಸಿತ್ತು.

‘ಫ್ರ್ಯಾಂಚೈಸಿಯ ಭವಿಷ್ಯದ ಬೆಳವಣಿಗೆ ಕುರಿತು ನಾವು ಆಂತರಿಕವಾಗಿ ಬಹಳಷ್ಟು ಮಾತುಕತೆ ಮಾಡಿದ್ದೇವೆ. ಹರಾಜು ಪ್ರಕ್ರಿಯೆಗೂ ಮುನ್ನ ಬಹಳಷ್ಟು ಪೂರ್ವತಯಾರಿ ಮುಖ್ಯವಾಗಿತ್ತು. ಪ್ರತಿಯೊಂದು ವಿಭಾಗವನ್ನು ಬಲಪಡಿಸುವ ಕುರಿತು ಸೂಕ್ಷ್ಮವಾಗಿ ಚಿಂತನೆ ನಡೆಸಲಾಗಿದೆ’ ಎಂದು ಡುಪ್ಲೆಸಿ ಹೇಳಿದ್ದಾರೆ.

‘ಕಳೆದ ಬಾರಿಯ ಆವೃತ್ತಿಯ ನಂತರ ನಡೆಸಿದ ಅವಲೋಕನದಲ್ಲಿ ತಂಡವನ್ನು ಮತ್ತಷ್ಟು ಬಲಗೊಳಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಯೋಜನೆ ಮಾಡಿದೆವು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಷ್ಟೇ ಅಲ್ಲ, ಅದರಾಚೆಯೂ ಉತ್ತಮವಾಗಿ ಆಡುವಂತಹ ತಂಡ ಸಿದ್ಧವಾಗಬೇಕೆಂದು ಪ್ರಯತ್ನಿಸಿದ್ದೇವೆ’ ಎಂದರು.

ಪಂದ್ಯದ ಸಂಯೋಜನೆಯ ಕುರಿತು ಸಂತಸ ವ್ಯಕ್ತಪಡಿಸಿರುವ ಮುಖ್ಯ ಕೋಚ್ ಆ್ಯಂಡಿ ಫ್ಲವರ್, ‘ಬಳಗವು ನಿಜಕ್ಕೂ ಬಲಿಷ್ಠವಾಗಿದೆ. ಅದರಲ್ಲೂ ಬ್ಯಾಟಿಂಗ್‌ನಲ್ಲಿ ಅಗ್ರ ನಾಲ್ಕರಲ್ಲಿ ವಿರಾಟ್ ಕೊಹ್ಲಿ, ಫಫ್, ರಜತ್ ಪಾಟೀದಾರ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಇದ್ದಾರೆ. ಕ್ಯಾಮರಾನ್ ಗ್ರೀನ್ ಅವರು ಬ್ಯಾಟಿಂಗ್‌ನಲ್ಲಿ ಕೂಡ ಶಕ್ತಿ ತುಂಬಬಲ್ಲರು‘ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT