ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

IPL Auction | ಹರಾಜು ಪ್ರಕ್ರಿಯೆ ಕುರಿತು RCB ನಾಯಕ ಡು ಪ್ಲೆಸಿ ಹೇಳಿದ್ದೇನು?

Published : 20 ಡಿಸೆಂಬರ್ 2023, 12:35 IST
Last Updated : 20 ಡಿಸೆಂಬರ್ 2023, 12:35 IST
ಫಾಲೋ ಮಾಡಿ
Comments

ಬೆಂಗಳೂರು: ಮುಂದಿನ ವರ್ಷ ನಡೆಯಲಿರುವ ಐಪಿಎಲ್‌ ಟೂರ್ನಿಗಾಗಿ ದುಬೈನಲ್ಲಿ ಮಂಗಳವಾರ (ಡಿ.19ರಂದು) ನಡೆದ ಹರಾಜು ಪ್ರಕ್ರಿಯೆ ಕುರಿತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ನಾಯಕ ಫಾಫ್‌ ಡು ಪ್ಲೆಸಿ ಮಾತನಾಡಿದ್ದಾರೆ.

ಐಪಿಎಲ್‌–2024ರ ವೇಳೆಗೆ ತಂಡದ ಪ್ರದರ್ಶನದಲ್ಲಿ ಸುಧಾರಣೆ ತರುವುದರತ್ತ ಫ್ರಾಂಚೈಸಿ ಚಿತ್ತ ಹರಿಸಿತ್ತು ಎಂದಿರುವ ಅವರು, ಅತ್ಯುತ್ತಮ ಹಾಗೂ ಸಮತೋಲನದಿಂದ ಕೂಡಿದ ತಂಡ ರಚಿಸುವ ಕಾರ್ಯತಂತ್ರದೊಂದಿಗೆ ಹರಾಜಿನಲ್ಲಿ ಪಾಲ್ಗೊಳ್ಳಲಾಗಿತ್ತು ಎಂದು ತಿಳಿಸಿದ್ದಾರೆ.

'ಕಳೆದ ಆವೃತ್ತಿ ಮುಗಿದ ನಂತರ ನಾವು, ತವರಿನಲ್ಲಿ ಸುಧಾರಿತ ಪ್ರದರ್ಶನ ನೀಡಬೇಕಿದೆ ಎಂಬ ಬಗ್ಗೆ ಚಿಂತನೆ ನಡೆಸಿದ್ದೆವು. ಅದರಂತೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉತ್ತಮ ಪ್ರದರ್ಶನ ತೋರಲು, ತಂಡದಲ್ಲಿ ಯಾವ ರೀತಿಯ ಸುಧಾರಣೆಗಳನ್ನು ಕೈಗೊಳ್ಳಬೇಕು ಎಂದು ಚರ್ಚಿಸಿದ್ದೆವು' ಎಂದಿದ್ದಾರೆ.

ಸುಧಾರಣೆ ತರುವ ನಿಟ್ಟಿನಲ್ಲಿ, ತವರಿನಲ್ಲಿ ಚೆನ್ನಾಗಿ ಆಡಬಲ್ಲ ಬ್ಯಾಟರ್‌ ಮತ್ತು ಬೌಲರ್‌ಗಳನ್ನು ತಂಡಕ್ಕೆ ಸೇರಿಸಿಕೊಳ್ಳುವ ವಿಚಾರವಾಗಿಯೇ ಕಳೆದ ಎರಡು ತಿಂಗಳಿನಿಂದ ಯೋಜಿಸಲಾಗಿತ್ತು. ಅದರಂತೆ ಹರಾಜು ಪ್ರಕ್ರಿಯೆಯಲ್ಲಿ ಆಟಾರರನ್ನು ಖರೀದಿಸಲಾಗಿದೆ ಎಂದು ಪ್ಲೆಸಿ ಹೇಳಿದ್ದಾರೆ.

ತಂಡದ ಸಂಯೋಜನೆ ಬಗ್ಗೆ ಮುಖ್ಯ ಕೋಚ್‌ ಆ್ಯಂಡಿ ಫ್ಲವರ್‌ ಕೂಡ ಹರ್ಷ ವ್ಯಕ್ತಪಡಿಸಿದ್ದಾರೆ. 'ವಿರಾಟ್‌ ಕೊಹ್ಲಿ, ಫಾಫ್‌ ಡು ಪ್ಲೆಸಿ, ರಜತ್‌ ಪಟೀದಾರ್, ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರನ್ನೊಳಗೊಂಡ ಅಗ್ರ ಕ್ರಮಾಂಕ ಬಲಿಷ್ಠವಾಗಿದೆ. ಕ್ಯಾಮರೂನ್‌ ಗ್ರೀನ್‌, ಇನ್ನಷ್ಟು ಬಲ ತುಂಬಲಿದ್ದಾರೆ' ಎಂದಿದ್ದಾರೆ.

ಬಲಿಷ್ಠ ಬ್ಯಾಟಿಂಗ್ ಪಡೆ
ನಾಯಕ ಡು ಪ್ಲೆಸಿ, ವಿರಾಟ್‌ ಕೊಹ್ಲಿ, ಗ್ಲೆನ್‌ ಮ್ಯಾಕ್ಸ್‌ವೆಲ್‌, ರಜತ್‌ ಪಟೀದಾರ್, ಆಲ್‌ರೌಂಡರ್‌ ಕ್ಯಾಮರೂನ್‌ ಗ್ರೀನ್‌ ಅವರನ್ನೊಳಗೊಂಡ ಆರ್‌ಸಿಬಿ ಬ್ಯಾಟಿಂಗ್‌ ವಿಭಾಗ ಬಲಿಷ್ಠವಾಗಿದೆ.

ಬೌಲಿಂಗ್‌ ವಿಭಾಗವನ್ನೂ ಪ್ರಬಲವಾಗಿಸಲು ವೆಸ್ಟ್‌ಇಂಡೀಸ್‌ನ ಅಲ್ಜಾರಿ ಜೋಸೆಫ್‌ (₹ 11.5 ಕೋಟಿ), ನ್ಯೂಜಿಲೆಂಡ್‌ನ ಲಾಕಿ ಫರ್ಗ್ಯೂಸನ್‌  (₹ 2 ಕೋಟಿ) ಮತ್ತು ಇಂಗ್ಲೆಂಡ್‌ನ ಟಾಮ್ ಕರನ್‌  (₹ 1.5 ಕೋಟಿ) ಅವರನ್ನು ಖರೀದಿಸಲಾಗಿದೆ. ಭಾರತದವರೇ ಆದ ವೇಗಿ ಯಶ್‌ ದಯಾಳ್‌ (₹ 5 ಕೋಟಿ) ಮತ್ತು ಸ್ಪಿನ್‌ ಆಲ್‌ರೌಂಡರ್‌ ಸ್ವಪ್ನಿಲ್‌ ಸಿಂಗ್‌ (₹ 20 ಲಕ್ಷ) ಅವರನ್ನೂ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

2023ರ ಸಯ್ಯದ್‌ ಮುಷ್ತಾಕ್‌ ಅಲಿ ಟ್ರೋಪಿ ಪಂದ್ಯದಲ್ಲಿ 18 ಎಸೆತಗಳಲ್ಲಿ 61 ರನ್‌ ಸಿಡಿಸಿ ಸುದ್ದಿಯಾಗಿದ್ದ ವಿಕೆಟ್‌ಕೀಪರ್‌ ಬ್ಯಾಟರ್‌ ಸೌರವ್‌ ಚೌಹಾಣ್‌ (₹ 20 ಲಕ್ಷ) ಅವರನ್ನೂ ಕೊಂಡುಕೊಂಡಿದೆ.

ಜೋಸೆಫ್‌, ಫರ್ಗ್ಯೂಸನ್‌, ದಯಾಳ್‌, ಕರನ್‌ ಅವರಲ್ಲದೆ, ಮೊಹಮ್ಮದ್‌ ಸಿರಾಜ್‌, ರೀಸಿ ಟಾಪ್ಲೇ, ಆಕಾಶ್‌ ದೀಪ್‌, ಕರಣ್‌ ಶರ್ಮಾ, ವಿಜಯ್‌ಕುಮಾರ್‌ ವೈಶಾಕ್‌, ಮಯಾಂಕ್‌ ದಾಗರ್‌ ಅವರು ಆರ್‌ಸಿಬಿಯಲ್ಲಿರುವ ಪ್ರಮುಖ ಬೌಲರ್‌ಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT