ಮಂಗಳವಾರ, ಆಗಸ್ಟ್ 16, 2022
21 °C
ಆಸ್ಟ್ರೇಲಿಯಾ ವಿರುದ್ಧ ಭಾರತ ಸವಾಲಿನ ಮೊತ್ತ

AUSvsIND: ಪಾಂಡ್ಯ, ಜಡೇಜ ಬಿರುಸಿನ ಬ್ಯಾಟಿಂಗ್, ಆಸ್ಟ್ರೇಲಿಯಾಗೆ 303 ರನ್‌ ಗುರಿ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

Hardik pandya

ಕ್ಯಾನಬೆರ‍್ರಾ: ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜ ಅವರ ಬಿರುಸಿನ ಬ್ಯಾಟಿಂಗ್‌, ಅರ್ಧಶತಕಗಳ ನೆರವಿನಿಂದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯದಲ್ಲಿ ಭಾರತ ತಂಡವು ಸವಾಲಿನ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಗಿದೆ. ಟಾಸ್‌ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 302 ರನ್‌ ಗಳಿಸಿದೆ. ಆಸ್ಟ್ರೇಲಿಯಾಗೆ 303 ಗೆಲುವಿನ ಗುರಿ ನೀಡಿದೆ.

ಸರಣಿಯ ಮೊದಲೆರಡು ಪಂದ್ಯದಲ್ಲಿ ಗೆಲುವು ಸಾಧಿಸಿರುವ ಆಸ್ಟ್ರೇಲಿಯಾವು ಸರಣಿ ಕ್ಲೀನ್ ಸ್ವೀಪ್ ಮಾಡುವ ತವಕದಲ್ಲಿದ್ದು, ಅದನ್ನು ತಡೆಯುವ ಸವಾಲು ವಿರಾಟ್ ಕೊಹ್ಲಿ ಬಳಗಕ್ಕಿದೆ. ಆದರೆ ಟಾಸ್‌ ಗೆದ್ದು ಬ್ಯಾಟಿಂಗ್‌ ಆರಂಭಿಸಿದ ಭಾರತ ತಂಡಕ್ಕೆ ಹೇಳಿಕೊಳ್ಳುವಂತಹ ಆರಂಭಿಕ ಜತೆಯಾಟ ದೊರೆಯಲಿಲ್ಲ. ತಂಡದ ಮೊತ್ತ 26 ಆಗಿರುವಾಗ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ (16 ರನ್, 27 ಎಸೆತ) ಅವರು ಶಾನ್ ಅಬಾಟ್ ಬೌಲಿಂಗ್‌ನಲ್ಲಿ ಆ್ಯಷ್ಟನ್ ಆಗರ್ ಅವರಿಗೆ ಕ್ಯಾಚ್ ನೀಡಿ ಪೆವಿಲಿಯನ್‌ಗೆ ತೆರಳಿದರು.

ಸರಣಿಯ ಮೊದಲೆರಡು ಪಂದ್ಯದಲ್ಲಿ ಆಡಲು ಅವಕಾಶ ದೊರೆಯದೆ, ಈ ಪಂದ್ಯದಲ್ಲಿ ಆರಂಭಿಕನಾಗಿ ಕ್ರೀಸ್‌ಗಿಳಿದ ಶುಭಮನ್ ಗಿಲ್ ಅವರಿಗೂ ದೊಡ್ಡ ಮೊತ್ತ ಪೇರಿಸುವುದು ಸಾಧ್ಯವಾಗಲಿಲ್ಲ. ಅವರು 33 ರನ್‌ (39 ಎಸೆತ) ಗಳಿಸಿ ಅಗರ್ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದರು.

ನಾಯಕ ವಿರಾಟ್‌ ಕೊಹ್ಲಿ ಉತ್ತಮ ಆಟದೊಂದಿಗೆ (63 ರನ್, 78 ಎಸೆತ) ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ಯುವ ಸುಳಿವು ನೀಡಿದರು. ಆದರೆ ತಂಡದ ಮೊತ್ತ 152 ಆಗಿದ್ದಾಗ ಹ್ಯಾಜಲ್‌ವುಡ್ ಬೌಲಿಂಗ್‌ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು.

ಕೊಹ್ಲಿ ಅತಿವೇಗದ 12,000 ರನ್: ಕೊಹ್ಲಿ ಅವರು ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗದಲ್ಲಿ 12,000 ರನ್ ಗಳಿಸಿದ ಬ್ಯಾಟ್ಸ್‌ಮನ್ ಎಂಬ ದಾಖಲೆ ನಿರ್ಮಿಸಿದರು. ಕೇವಲ 242 ಇನ್ನಿಂಗ್ಸ್‌ಗಳಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. ಇದರೊಂದಿಗೆ, ಸಚಿನ್ ತೆಂಡೂಲ್ಕರ್ ಅವರ 17 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ. ಸಚಿನ್ ಅವರು 2003ರಲ್ಲಿ ತಮ್ಮ 300ನೇ ಇನ್ನಿಂಗ್ಸ್‌ನಲ್ಲಿ 12,000 ರನ್ ಗಡಿ ದಾಟಿದ್ದರು.

ಇದನ್ನೂ ಓದಿ: 

ಕಳೆದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಕೆ.ಎಲ್.ರಾಹುಲ್ (5 ರನ್, 11 ಎಸೆತ) ಸಹ ಈ ಬಾರಿ ವಿಫಲರಾದರು.

ಪಾಂಡ್ಯ, ಜಡೇಜ ಬಿರುಸಿನ ಬ್ಯಾಟಿಂಗ್

ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜ ಅವರು ಬಿರುಸಿನ ಬ್ಯಾಟಿಂಗ್‌ ಮೂಲಕ ತಂಡಕ್ಕೆ ನೆರವಾದರು. ಪಾಂಡ್ಯ ಅವರು 76 ಎಸೆತಗಳಲ್ಲಿ 92 ರನ್ ಹಾಗೂ ಜಡೇಜ 50 ಎಸೆತಗಳಲ್ಲಿ 66 ರನ್‌ ಗಳಿಸಿದರು. ಕೊನೆಯ ನಾಲ್ಕು ಓವರ್‌ಗಳಲ್ಲಿ ಈ ಜೋಡಿ ಆಸ್ಟ್ರೇಲಿಯಾ ಬೌಲರ್‌ಗಳನ್ನು ದಂಡಿಸಿ 59 ರನ್‌ ಗಳಿಸಿದರು. ಇದು ತಂಡಕ್ಕೆ ಸವಾಲಿನ ಮೊತ್ತ ಪೇರಿಸುವಲ್ಲಿ ನೆರವಾಯಿತು.

ಆಸ್ಟ್ರೇಲಿಯಾ ತಂಡದ ಪರ ಜೋಶ್ ಹ್ಯಾಜಲ್‌ವುಡ್ 10 ಓವರ್‌ಗಳಲ್ಲಿ 66 ರನ್ ನೀಡಿ 1 ವಿಕೆಟ್ ಪಡೆದರು. ಶಾನ್ ಅಬಾಟ್ 10 ಓವರ್‌ಗಳಲ್ಲಿ 84 ರನ್ ನೀಡಿ 1 ವಿಕೆಟ್ ಪಡೆದರು. ಆ್ಯಷ್ಟನ್ ಆಗರ್ 10 ಓವರ್‌ಗಳಲ್ಲಿ 44 ರನ್‌ ನೀಡಿ 2 ವಿಕೆಟ್ ಪಡೆದರೆ, ಆ್ಯಡಂ ಜಂಪಾ 10 ಓವರ್‌ಗಳಲ್ಲಿ 45 ರನ್ ನೀಡಿ 1 ವಿಕೆಟ್ ಪಡೆದರು.

ಟೀಮ್ ಇಂಡಿಯಾ ನಾಲ್ಕು ಬದಲಾವಣೆಗಳೊಂದಿಗೆ ಈ ಪಂದ್ಯದಲ್ಲಿ ಕಣಕ್ಕಿಳಿದಿದ್ದರೆ ಆಸ್ಟ್ರೇಲಿಯಾ ತಂಡದಲ್ಲಿಯೂ ಮೂರು ಬದಲಾವಣೆ ಮಾಡಲಾಗಿದೆ. ಭಾರತ ತಂಡದಲ್ಲಿ ಮಾಯಾಂಕ್ ಅಗರ್ವಾಲ್, ನವದೀಪ್ ಸೈನಿ, ಮೊಹಮ್ಮದ್ ಶಮಿ ಮತ್ತು ಯುಜುವೇಂದ್ರ ಚಾಹಲ್ ಬದಲಿಗೆ ತಂಗರಸು ನಟರಾಜನ್, ಶುಭ್‌ಮನ್‌ ಗಿಲ್, ಶಾರ್ದುಲ್ ಠಾಕೂರ್ ಮತ್ತು ಕುಲದೀಪ್ ಯಾದವ್ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾ ತಂಡದಲ್ಲಿ ಗಾಯಗೊಂಡ ಡೇವಿಡ್ ವಾರ್ನರ್, ಪ್ಯಾಟ್ ಕಮ್ಮಿನ್ಸ್ ಮತ್ತು ಮಿಚೆಲ್ ಸ್ಟಾರ್ಕ್ ಅವರ ಬದಲಿಗೆ ಕ್ಯಾಮೆರಾನ್ ಗ್ರೀನ್, ಸೀನ್ ಅಬಾಟ್ ಮತ್ತು ಆಷ್ಟನ್ ಅಗರ್ ಆಡುತ್ತಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು