ಚೆನ್ನೈ: ಆಸ್ಟ್ರೇಲಿಯಾ ವಿರುದ್ದ ಚೆನ್ನೈಯಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಸೋಲು ಅನುಭವಿಸಿದ ಭಾರತ ತವರಿನಲ್ಲಿ ಸರಣಿ ಸೋಲಿನ ಮುಖಭಂಗಕ್ಕೊಳಗಾಗಿದೆ.
ಅಂತಿಮ ಏಕದಿನದಲ್ಲಿ 21 ರನ್ ಅಂತರದ ಗೆಲುವು ದಾಖಲಿಸಿದ ಸ್ಟೀವ್ ಸ್ಮಿತ್ ನಾಯಕತ್ವದ ಕಾಂಗರೂ ಪಡೆ 2-1ರ ಅಂತರದಲ್ಲಿ ಸರಣಿ ಗೆಲುವು ದಾಖಲಿಸಿದೆ.
ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ 49 ಓವರ್‌ಗಳಲ್ಲಿ 269 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.
ಬಳಿಕ ಗುರಿ ಬೆನ್ನಟ್ಟಿದ ಭಾರತ, ವಿರಾಟ್ ಕೊಹ್ಲಿ (54) ಅರ್ಧಶತಕದ ಹೊರತಾಗಿಯೂ 49.1 ಓವರ್‌ಗಳಲ್ಲಿ 248 ರನ್‌ಗಳಿಗೆ ಆಲೌಟ್ ಆಯಿತು.
72 ಎಸೆತಗಳನ್ನು ಎದುರಿಸಿದ ಕೊಹ್ಲಿ ಎರಡು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 54 ರನ್ ಗಳಿಸಿದರು.
ಹಾರ್ದಿಕ್ ಪಾಂಡ್ಯ ಆಲ್‌ರೌಂಡ್ ಪ್ರದರ್ಶನ ನೀಡಿದರೂ (40 ರನ್ ಹಾಗೂ 3 ವಿಕೆಟ್) ಯಾವುದೇ ಪ್ರಯೋಜನ ಆಗಲಿಲ್ಲ.
ಶುಭಮನ್ ಗಿಲ್ 37, ಕೆ.ಎಲ್. ರಾಹುಲ್ 32, ನಾಯಕ ರೋಹಿತ್ ಶರ್ಮಾ 30 ರನ್ ಗಳಿಸಿದರು.
ಸೂರ್ಯಕುಮಾರ್ ಕುಮಾರ್ ಸತತ ಮೂರನೇ ಸಲವೂ ಗೋಲ್ಡನ್ ಡಕ್ ಔಟ್ ಆದರು.
ಆಸ್ಟ್ರೇಲಿಯಾದ ಪರ ಆ್ಯಡಂ ಜಾಂಪಾ ನಾಲ್ಕು ಹಾಗೂ ಅಶ್ಟನ್ ಅಗರ್ ಎರಡು ವಿಕೆಟ್ ಕಬಳಿಸಿದರು.
ಈ ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ, ಯಾವುದೇ ಬ್ಯಾಟರ್ ಅರ್ಧಶತಕ ಗಳಿಸದ ಹೊರತಾಗಿಯೂ ಸವಾಲಿನ ಮೊತ್ತ ಪೇರಿಸಲು ಯಶಸ್ವಿಯಾಯಿತು.
ಮಿಚೆಲ್ ಮಾರ್ಷ್ 47, ಅಲೆಕ್ಸ್ ಕ್ಯಾರಿ 38, ಟ್ರಾವಿಸ್ ಹೆಡ್ 33, ಮಾರ್ನಸ್ ಲಾಬುಶೇನ್ 28, ಸೀನ್ ಅಬಾಟ್ 26, ಮಾರ್ಕಸ್ ಸ್ಟೋಯಿನಿಸ್ 25, ಆಶ್ಟನ್ ಅಗರ್ 17, ಮಿಚೆಲ್ ಸ್ಟಾರ್ಸ್ 10 ಹಾಗೂ ಆ್ಯಡಂ ಜಾಂಪಾ ಅಜೇಯ 10 ರನ್ ಗಳಿಸಿದರು.
ನಾಯಕ ಸ್ಟೀವ್ ಮಿತ್ ಖಾತೆ ತೆರೆಯುವಲ್ಲಿ ವಿಫಲರಾದರು. ಭಾರತದ ಪರ ಹಾರ್ದಿಕ್ ಪಾಂಡ್ಯ ಹಾಗೂ ಕುಲದೀಪ್ ಯಾದವ್ ತಲಾ ಮೂರು ಮತ್ತು ಮೊಹಮ್ಮದ್ ಸಿರಾಜ್ ಹಾಗೂ ಅಕ್ಷರ್ ಪಟೇಲ್ ತಲಾ ಎರಡು ವಿಕೆಟ್‌ಗಳನ್ನು ಗಳಿಸಿದರು.
ಮೊದಲ ಏಕದಿನ ಪಂದ್ಯದಲ್ಲಿ ಭಾರತ ಜಯಿಸಿದ್ದರೆ ಅಂತಿಮ ಎರಡು ಪಂದ್ಯಗಳಲ್ಲಿ ಸೋಲಿನ ಮುಖಭಂಗಕ್ಕೊಳಗಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.