ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PAK vs AUS: 12 ವರ್ಷಗಳ ಹಿಂದಿನ ದಾಖಲೆ ಮುರಿದ ಸ್ಟೀವ್ ಸ್ಮಿತ್

Last Updated 24 ಮಾರ್ಚ್ 2022, 13:16 IST
ಅಕ್ಷರ ಗಾತ್ರ

ಲಾಹೋರ್: ಆಸ್ಟ್ರೇಲಿಯಾದ ಬಲಗೈ ಬ್ಯಾಟರ್ ಸ್ಟೀವ್ ಸ್ಮಿತ್, ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ವೇಗದಲ್ಲಿ 8,000 ರನ್ ಗಳಿಸಿದ ಬ್ಯಾಟರ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಈ ಮೂಲಕ 12 ವರ್ಷಗಳ ಹಿಂದಿನ ದಾಖಲೆ ಮುರಿದಿದ್ದಾರೆ.

ಲಾಹೋರ್‌ನಲ್ಲಿ ಪಾಕಿಸ್ತಾನ ವಿರುದ್ಧ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಹಸನ್ ಅಲಿ ದಾಳಿಯಲ್ಲಿ ಬೌಂಡರಿ ಬಾರಿಸಿದ ಸ್ಮಿತ್ ಸ್ಮರಣೀಯ ದಾಖಲೆ ಬರೆದರು.

32 ವರ್ಷದ ಸ್ಮಿತ್ 151ನೇ ಇನ್ನಿಂಗ್ಸ್‌ನಲ್ಲಿ (85ನೇ ಟೆಸ್ಟ್) 8,000 ರನ್‌ಗಳ ಮೈಲಿಗಲ್ಲು ತಲುಪಿದ್ದಾರೆ. 12 ವರ್ಷಗಳ ಹಿಂದೆ ಕೊಲಂಬೊದಲ್ಲಿ ಭಾರತದ ವಿರುದ್ಧದ ಪಂದ್ಯದಲ್ಲಿ ಶ್ರೀಲಂಕಾದ ಮಾಜಿ ಆಟಗಾರ ಕುಮಾರ ಸಂಗಕ್ಕಾರ (152ನೇ ಇನ್ನಿಂಗ್ಸ್) ದಾಖಲೆ ಬರೆದಿದ್ದರು. ಇದನ್ನೀಗ ಸ್ಮಿತ್ ಮೀರಿಸಿದ್ದಾರೆ.

ಒಟ್ಟಾರೆಯಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ 8,000 ರನ್ ಗಳಿಸಿದ ವಿಶ್ವದ 33ನೇ ಹಾಗೂ ಆಸ್ಟ್ರೇಲಿಯಾದ ಏಳನೇ ಬ್ಯಾಟರ್ ಎನಿಸಿದ್ದಾರೆ.

2010ರಲ್ಲಿ ಲಾರ್ಡ್ಸ್ ಮೈದಾನದಲ್ಲಿ ಪಾಕಿಸ್ತಾನ ವಿರುದ್ಧವೇ ಲೆಗ್ ಸ್ಪಿನ್ ಬೌಲರ್ ಆಗಿ ಟೆಸ್ಟ್ ವೃತ್ತಿ ಜೀವನಕ್ಕೆ ಕಾಲಿಟ್ಟ ಸ್ಮಿತ್, ಬಳಿಕ ಪರಿಪೂರ್ಣ ಬ್ಯಾಟರ್ ಆಗಿ ಹೊರಹೊಮ್ಮಿದ್ದರು.

ಕ್ರಿಕೆಟ್‌ನ ದೀರ್ಘ ಪ್ರಕಾರದಲ್ಲಿ 60.10ರ ಸರಾಸರಿಯಲ್ಲಿ 8,010 ರನ್ ಗಳಿಸಿರುವ ಸ್ಮಿತ್, ತಮ್ಮ ಖಾತೆಯಲ್ಲಿ 27 ಶತಕಗಳನ್ನು ಹೊಂದಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗದ 8,000 ರನ್ ಸಾಧನೆ (ಇನ್ನಿಂಗ್ಸ್):
1. ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ): 151
2. ಕುಮಾರ ಸಂಗಕ್ಕಾರ (ಶ್ರೀಲಂಕಾ): 152
3. ಸಚಿನ್ ತೆಂಡೂಲ್ಕರ್ (ಭಾರತ): 154
4. ಸರ್ ಗ್ಯಾರಿ ಸೋಬರ್ಸ್ (ವೆಸ್ಟ್‌ಇಂಡೀಸ್): 157
5. ರಾಹುಲ್ ದ್ರಾವಿಡ್ (ಭಾರತ): 158

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT