ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಮಂದಿರ ಶಿಲಾನ್ಯಾಸಕ್ಕೆ ಮೊಹಮ್ಮದ್ ಕೈಫ್‌ ಹರ್ಷ

ಕ್ರೀಡಾ ವಲಯದಿಂದ ಅಭಿನಂದನೆಗಳ ಮಹಾಪೂರ
Last Updated 5 ಆಗಸ್ಟ್ 2020, 15:59 IST
ಅಕ್ಷರ ಗಾತ್ರ

ನವದೆಹಲಿ: ’ಶ್ರೀರಾಮನು ಎಲ್ಲರಲ್ಲೂ ಒಳ್ಳೆಯದನ್ನು ಕಂಡ. ದ್ವೇಷಕ್ಕೆ ಆಸ್ಪದ ಕೊಡಲಿಲ್ಲ. ಅಲಹಾಬಾದ್‌ನಲ್ಲಿ ಹುಟ್ಟಿದ ನಾನು ಗಂಗಾ–ಜಮುನಾ ಸಂಸ್ಕೃತಿಯನ್ನು ಮೈಗೂಡಿಸಿಕೊಂಡೇ ಬೆಳೆದಿದ್ದೇನೆ. ಹಲವು ವರ್ಷಗಳಿಂದ ರಾಮಲೀಲಾ ನೋಡುತ್ತ ಎಲ್ಲರಿಗೂ ಒಳ್ಳೆಯದನ್ನು ಬಯಸುವ ಗುಣ ಕಲಿತಿದ್ದೇನೆ‘–

ಭಾರತ ತಂಡದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್‌ ಅವರ ಟ್ವೀಟ್ ಸಂದೇಶ ಇದು. ಅಯೋಧ್ಯೆಯಲ್ಲಿ ಬುಧವಾರ ರಾಮಮಂದಿರ ಶಿಲಾನ್ಯಾಸ ನಡೆದ ಬಗ್ಗೆ ಹಲವು ಕ್ರೀಡಾಪಟುಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಪ್ರಕಟಿಸಿದ್ದಾರೆ. ಅವರಲ್ಲಿ ಉತ್ತರಪ್ರದೇಶದ ಕೈಫ್ ಕೂಡ ಒಬ್ಬರು.

’ಸಂಸ್ಕೃತಿ, ಸಭ್ಯತೆ, ಶಾಂತಿ ಮತ್ತು ಸಹಬಾಳ್ವೆಯನ್ನು ರಾಮನಿಂದ ಕಲಿಯಬೇಕು. ದ್ವೇಷ ಬಿತ್ತುವ ದುಷ್ಕರ್ಮಿಗಳಿಗೆ ಆಸ್ಪದ ಕೊಡಬೇಡಿ. ಸದಾ ಪ್ರೀತಿ ಮತ್ತು ಏಕತೆಯಿಂದ ಬಾಳೋಣ‘ ಎಂದು ಕೈಫ್ ಬರೆದಿದ್ದಾರೆ.

ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್, ’ಇವತ್ತು ಉತ್ಸವದ ದಿನ. ಇತಿಹಾಸದ ಪುಸ್ತಕಗಳಲ್ಲಿ ಸದಾ ಕಾಲ ದಾಖಲಾಗುವಂತಹ ದಿನ ಇದು. ರಾಮಮಂದಿರದ ನಿರ್ಮಾಣದಲ್ಲಿ ಭಾಗಿಯಾದ ಎಲ್ಲರಿಗೂ ಅಭಿನಂದನೆಗಳು‘ ಎಂದು ಟ್ವೀಟ್ ಮಾಡಿದ್ದಾರೆ.

’ರಾಮ ಮಂದಿರ ಶಿಲಾನ್ಯಾಸಕ್ಕೆ ಕಾರಣಕರ್ತರಾದ ಎಲ್ಲರಿಗೂ ಅಭಿನಂದನೆಗಳು. ದೇಶದಲ್ಲಿ ಇದರಿಂದ ಶಾಂತಿ, ಸೌಹಾರ್ದತೆ ನೆಲೆಸುವಂತಾಗಲಿ‘ ಎಂದು ಕ್ರಿಕೆಟಿಗ ಸುರೇಶ್ ರೈನಾ ಹಾರೈಸಿದ್ಧಾರೆ.

’ಇದು ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ದಿನ. ರಾಮಮಂದಿರ ಶಿಲಾನ್ಯಾಸದಿಂದ ಭಕ್ತರ ಕನಸು ನನಸಾದಂತಾಗಿದೆ‘ ಎಂದು ಅಂತರರಾಷ್ಟ್ರೀಯ ಕುಸ್ತಿಪಟು ಬಜರಂಗ್ ಪುನಿಯಾ ಹೇಳಿದ್ದಾರೆ.

ಒಲಿಂಪಿಕ್ ಕುಸ್ತಿಪಟು ಸಾಕ್ಷಿ ಮಲಿಕ್, ’ರಾಮ ನಮ್ಮೆಲ್ಲರ ಅಸ್ತಿತ್ವದ ಸಂಕೇತ. ನಾವು ಸದಾ ಆರಾಧಿಸುವ ರಾಮನೇ ನಮ್ಮ ಜೀವನ‘ ಎಂದು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT