ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯೂಜಿಲೆಂಡ್ vs ಪಾಕ್ | ಬಾಬರ್ ಶತಕ ಪಾಕ್‌ಗೆ ಜಯ: ಕಿವೀಸ್‌ಗೆ ಮೊದಲ ಆಘಾತ

ಪಾಕಿಸ್ತಾನ ಶಾಹೀನ್ ಆಫ್ರಿದಿಗೆ ಮೂರು ವಿಕೆಟ್; ನಿಶಾಮ್, ಗ್ರ್ಯಾಂಡ್‌ಹೋಮ್ ಆಟ ವ್ಯರ್ಥ
Last Updated 27 ಜೂನ್ 2019, 2:44 IST
ಅಕ್ಷರ ಗಾತ್ರ

ಬರ್ಮಿಂಗಂ (ಪಿಟಿಐ): ಬುಧವಾರ ಬಾಬರ್ ಆಜಂ ಗಳಿಸಿದ ಶತಕದ ಬಿರುಸಿಗೆ ನ್ಯೂಜಿಲೆಂಡ್ ತಂಡದ ಅಜೇಯ ಓಟಕ್ಕೆ ತಡೆ ಬಿದ್ದಿತು.

ಬಾಬರ್ (ಔಟಾಗದೆ 101, 127ಎಸೆತ, 11ಬೌಂಡರಿ) ಆಟದ ಬಲದಿಂದ ಪಾಕಿಸ್ತಾನ ತಂಡವು 6 ವಿಕೆಟ್‌ಗಳಿಂದ ನ್ಯೂಜಿಲೆಂಡ್ ವಿರುದ್ಧ ಜಯಿಸಿತು. ಕೇನ್ ವಿಲಿಯಮ್ಸನ್‌ ಬಳಗವು ಟೂರ್ನಿಯಲ್ಲಿ ಇದೇ ಮೊದಲ ಬಾರಿ ಸೋಲಿನ ಕಹಿ ಅನುಭವಿಸಿತು.

ಎಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕಿವೀಸ್ 50 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 237 ರನ್‌ ಗಳಿಸಿತು. ಗುರಿ ಬೆನ್ನಟ್ಟಿದ ಪಾಕ್ ತಂಡವು 49.1 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 241 ರನ್‌ ಗಳಿಸಿತು. ಏಳನೇ ಪಂದ್ಯವಾಡಿದ ಪಾಕಿಸ್ತಾನಕ್ಕೆ ಇದು ಮೂರನೇ ಜಯ. ಬಾಬರ್‌ಗೆ ವಿಶ್ವಕಪ್‌ನಲ್ಲಿ ಇದು ಮೊದಲ ಶತಕ.

ಪಾಕ್ ತಂಡವು ಆರಂಭದಲ್ಲಿಯೇ ಆಘಾತ ಅನುಭವಿಸಿತ್ತು. ಫಖ್ರ್ ಜಮಾನ್ ಮತ್ತು ಇಮಾಮ್ ಉಲ್ ಹಕ್ ಮತ್ತೊಮ್ಮೆ ವೈಫಲ್ಯದ ಹಾದಿ ಹಿಡಿದರು. ಆದರೆ ಈ ಹಂತದಲ್ಲಿ ಕ್ರೀಸ್‌ಗೆ ಬಂದ ಬಾಬರ್ ಆಜಂ ತಾಳ್ಮೆಯಿಂದ ಆಡಿದರು. ಆಕರ್ಷಕ ಹೊಡೆತಗಳನ್ನು ಆಡಿ ಅಭಿಮಾನಿಗಳ ಮನಗೆದ್ದರು. ಅವರು ಮೊಹಮ್ಮದ್ ಹಫೀಜ್ (32 ರನ್) ಅವರೊಂದಿಗೆ ಮೂರನೇ ವಿಕೆಟ್ ಜೊತೆಯಾಟದಲ್ಲಿ 66 ರನ್‌ ಗಳಿಸಿದರು. ನಂತರ ಹ್ಯಾರಿಸ್ ಸೊಹೈಲ್ (68; 76ಎಸೆತ, 5ಬೌಂಡರಿ, 2ಸಿಕ್ಸರ್) ಅವರೊಂದಿಗೆ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 126 ರನ್‌ ಗಳಿಸಿ ತಂಡದ ಗೆಲುವಿಗೆ ಕಾರಣರಾದರು.

ನಿಶಾಮ್–ಗ್ರ್ಯಾಂಡ್‌ಹೋಮ್ ಮಿಂಚು: ಪಾಕ್ ತಂಡದ ಎಡಗೈ ವೇಗಿ ಶಾಹೀನ್ (28ಕ್ಕೆ3) ಬೌಲಿಂಗ್‌ಗೆ ತತ್ತರಿಸಿದ್ದ ನ್ಯೂಜಿಲೆಂಡ್ 26.2 ಓವರ್‌ಗಳಲ್ಲಿ 83 ರನ್‌ಗಳಿಗೆ ಐದು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆಗ ಜೊತೆಗೂಡಿದ ಜೇಮ್ಸ್ ನಿಶಾಮ್‌ (ಔಟಾಗದೆ 97; 112ಎಸೆತ, 5ಬೌಂಡರಿ, 3ಸಿಕ್ಸರ್) ಮತ್ತು ಕಾಲಿನ್ ಗ್ರ್ಯಾಂಡ್‌ಹೋಮ್ (64; 71ಎಸೆತ, 6ಬೌಂಡರಿ, 1ಸಿಕ್ಸರ್) ಆರನೇ ವಿಕೆಟ್ ಜೊತೆಯಾಟದಲ್ಲಿ 132 ರನ್ ಗಳಿಸಿದರು.

ನಿಶಾಮ್ 77 ಎಸೆತಗಳಲ್ಲಿ ಅರ್ಧಶತಕದ ಗಡಿ ಮುಟ್ಟಿದರು. ಗ್ರ್ಯಾಂಡ್‌ಹೋಮ್ 66 ಎಸೆತಗಳಲ್ಲಿ 50 ರನ್‌ ಗಳಿಸಿದರು. ನಿಶಾಮ್‌ ಮೂರು ಆಕರ್ಷಕ ಸಿಕ್ಸರ್‌ಗಳನ್ನೂ ಸಿಡಿಸಿದರು. 48ನೇ ಓವರ್‌ನಲ್ಲಿ ಗ್ರ್ಯಾಂಡ್‌ಹೋಮ್ ರನ್‌ಔಟ್ ಆಗುವುದರೊಂದಿಗೆ ಅಮೋಘ ಜೊತೆಯಾಟ ಮುರಿದುಬಿದ್ದಿತು. ಆದರೆ, ನಿಶಾಮ್ ಔಟಾಗದೇ ಉಳಿದರು.

ನಿಶಾಮ್ ಕ್ರೀಸ್‌ಗೆ ಬಂದಾಗ ಇನ್ನೊಂದು ಬದಿಯಲ್ಲಿ ನಾಯಕ ಕೇನ್ ವಿಲಿಯಮ್ಸನ್ ಇದ್ದರು. ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿ ಮೊಹಮ್ಮದ್ ಅಮೀರ್ ಎಸೆತಕ್ಕೆ ಮಾರ್ಟಿನ್ ಗಪ್ಟಿಲ್ ಔಟಾದರು. ನಂತರ ಮಿಂಚಿದ ಶಾಹೀನ್ ಸ್ವಿಂಗ್ ದಾಳಿಗೆ ಕಾಲಿನ್ ಮನ್ರೊ, ರಾಸ್ ಟೇಲರ್, ಮತ್ತು ಟಾಮ್ ಲಥಾಮ್ ಪೆವಿಲಿಯನ್‌ಗೆ ಮರಳಿದ್ದರು. ಆದರೆ, ಹೋದ ಎರಡೂ ಪಂದ್ಯಗಳಲ್ಲಿ ಶತಕಗಳನ್ನು ಗಳಿಸಿದ್ದ ಕೇನ್ ಇದ್ದಿದ್ದರಿಂದ ತಂಡವು ಚೇತರಿಸಿಕೊಳ್ಳುವ ನಿರೀಕ್ಷೆ ಇತ್ತು. ಅವರು ಇಲ್ಲಿಯೂ ಉತ್ತಮ ಲಯದಲ್ಲಿದ್ದರು. ನಿಶಾಮ್ ಜೊತೆಗೆ ಐದನೇ ವಿಕೆಟ್‌ಗೆ 36 ರನ್‌ಗಳನ್ನು ಮಾತ್ರ ಸೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT