ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Ball Tampering | 'ಪಾಠ ಕಲಿಸಬೇಡಿ': ರೋಹಿತ್‌ಗೆ ಮತ್ತೆ ಇಂಜಮಾಮ್ ತಿರುಗೇಟು

Published 28 ಜೂನ್ 2024, 13:06 IST
Last Updated 28 ಜೂನ್ 2024, 13:06 IST
ಅಕ್ಷರ ಗಾತ್ರ

ಬೆಂಗಳೂರು: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತೀಯ ಆಟಗಾರರ ವಿರುದ್ಧ ಚೆಂಡು ವಿರೂಪಗೊಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್, ಮಗದೊಮ್ಮೆ ವಾಗ್ದಾಳಿ ನಡೆಸಿದ್ದಾರೆ.

ಭಾರತದ ನಾಯಕ ರೋಹಿತ್ ಶರ್ಮಾ ಹೇಳಿಕೆಗೆ ತಿರುಗೇಟು ನೀಡಿರುವ ಇಂಜಮಾಮ್, 'ಖಂಡಿತವಾಗಿಯೂ ಮನಸ್ಸನ್ನು ನಾವು ತೆರೆದು ನೋಡಲಿದ್ದೇವೆ. ಪಾಠ ಹೇಳಿ ಕೊಟ್ಟವರಿಗೆ ಪಾಠ ಕಲಿಸಬೇಡಿ' ಎಂದು ಹೇಳಿದ್ದಾರೆ.

ಪಾಕಿಸ್ತಾನದ 24 ನ್ಯೂಸ್ ಚಾನೆಲ್‌ನ 'ವರ್ಲ್ಡ್ ಕಪ್ ಹಂಗಾಮಾ' ಕಾರ್ಯಕ್ರಮದಲ್ಲಿ ಈ ಕುರಿತು ಮಾತನಾಡಿರುವ ಇಂಜಮಾಮ್, 'ಮೊದಲನೇಯದಾಗಿ ಚೆಂಡು ರಿವರ್ಸ್ ಸ್ವಿಂಗ್ ಆಗುತ್ತಿದೆ ಎಂಬುದನ್ನು ರೋಹಿತ್ ಶರ್ಮಾ ಒಪ್ಪಿಕೊಂಡಿದ್ದಾರೆ. ಅಂದರೆ ನಾವು ಹೇಳಿರುವುದು ಸರಿಯಾಗಿಯೇ ಇದೆ' ಎಂದು ಹೇಳಿದ್ದಾರೆ.

'ಎರಡನೇಯದಾಗಿ ಚೆಂಡು ರಿವರ್ಸ್ ಸ್ವಿಂಗ್ ಹೇಗೆ ಆಗುತ್ತೇ, ಎಷ್ಟು ಬಿಸಿಲಿನಲ್ಲಿ ಆಗುತ್ತೇ, ಯಾವ ಪಿಚ್‌ನಲ್ಲಿ ಆಗುತ್ತದೆ ಎಂಬುದನ್ನು ರೋಹಿತ್ ಶರ್ಮಾ ನಮಗೆ ಹೇಳುವ ಅಗತ್ಯವಿಲ್ಲ. ಜಗತ್ತಿಗೆ ಅದನ್ನು ಹೇಳಿಕೊಟ್ಟವರಿಗೆ ಹೇಳಿಕೊಡುವ ಅಗತ್ಯವಿಲ್ಲ. ಈ ರೀತಿಯ ಮಾತು ಉತ್ತಮವಲ್ಲ ಎಂದು ಅವರಿಗೆ (ರೋಹಿತ್) ಹೇಳಿ' ಎಂದು ಉತ್ತರಿಸಿದ್ದಾರೆ.

'ಭಾರತೀಯ ಆಟಗಾರರು ಚೆಂಡನ್ನು ಅದೇನೋ ಮಾಡುತ್ತಿದ್ದಾರೆ. ಈ ಕುರಿತು ಅಂಪೈರ್ ಗಮನ ಹರಿಸುವಂತೆ ನಾನು ಸಲಹೆ ನೀಡಿದ್ದೆ' ಎಂದು ಇಂಜಮಾಮ್ ತಮ್ಮ ಹೇಳಿಕೆ ಕುರಿತು ಸ್ಪಷ್ಟನೆ ನೀಡಿದ್ದಾರೆ.

'15ನೇ ಓವರ್‌ನಲ್ಲಿ ರಿವರ್ಸ್ ಸ್ವಿಂಗ್ ಆಗುತ್ತಿದೆ. ಅಂಪೈರ್‌ಗಳು ಕಣ್ಣು ತೆರೆದು ನೋಡಿ ಎಂದು ಹೇಳಿದ್ದೆ. ಈಗಲೂ ಅಂಪೈರ್‌ಗಳಿಗೆ ಅದನ್ನೇ ಹೆೇಳುತ್ತೇನೆ. ಏನಾಗುತ್ತಿದೆ ಅಂತಾ ನೋಡಿ! ಅಂಪೈರ್‌ಗಳು ಮನಸ್ಸು ಜತೆಗೆ ಕಣ್ಣು ಸಹ ತೆರೆದು ನೋಡಲಿ' ಎಂದು ಹೇಳಿದ್ದಾರೆ.

ಈ ಮೊದಲು ಚೆಂಡು ವಿರೂಪದ ಆರೋಪ ಮಾಡಿದ್ದ ಇಂಜಮಾಮ್‌ಗೆ ರೋಹಿತ್ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದರು. 'ಇದಕ್ಕೆ ಏನು ಉತ್ತರ ನೀಡಲಿ? ಇಷ್ಟು ಬಿಸಿಲಿನ ವಾತಾವರಣದಲ್ಲಿ ಆಡುವಾಗ ವಿಕೆಟ್ ಕೂಡ ಒಣಗಿರುತ್ತದೆ. ಎಲ್ಲ ತಂಡಗಳ ಬೌಲರ್‌ಗಳು ರಿವರ್ಸ್ ಸ್ವಿಂಗ್ ಮಾಡುತ್ತಾರೆ. ಎಲ್ಲರಿಗೂ ಸಮಾನವಾಗಿದೆ. ನಮಗೆ ಮಾತ್ರ ಏಕೆ? ಕೆಲವೊಮ್ಮೆ ಬುದ್ಧಿಶಕ್ತಿ ಉಪಯೋಗಿಸಬೇಕಾಗುತ್ತದೆ. ಮನಸ್ಸು ತೆರೆದು ನೋಡಲಿ. ಯಾವ ಪರಿಸ್ಥಿತಿಯಲ್ಲಿ ಆಡುತ್ತಿದ್ದೇವೆ ಎಂಬುದನ್ನು ಅರಿತುಕೊಳ್ಳಬೇಕಾಗುತ್ತದೆ. ಇಂಗ್ಲೆಂಡ್ ಅಥವಾ ಆಸ್ಟ್ರೇಲಿಯಾದಲ್ಲಿ ಪಂದ್ಯ ನಡೆಯುತ್ತಿಲ್ಲ' ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT