ಸೋಮವಾರ, ಫೆಬ್ರವರಿ 17, 2020
15 °C

ಅಕ್ಕನ ಸಾವಿನ ನೋವನ್ನು ನುಂಗಿ ಬಾಂಗ್ಲಾದೇಶಕ್ಕೆ ಮೊದಲ ವಿಶ್ವಕಪ್ ಗೆದ್ದುಕೊಟ್ಟ ಅಲಿ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಢಾಕಾ: 19 ವರ್ಷದೊಳಗಿನವರ ವಿಶ್ವಕಪ್‌ ಟೂರ್ನಿಯಲ್ಲಿ ಗೆಲುವು ಸಾಧಿಸಿರುವ ಬಾಂಗ್ಲಾದೇಶದ ಆಟಗಾರರು, ತಮ್ಮ ದೇಶಕ್ಕೆ ಮೊದಲ ವಿಶ್ವಕಪ್‌ ಗೆದ್ದು ಕೊಟ್ಟು ಸಂಭ್ರಮಿಸಿದ್ದಾರೆ. ಆದರೆ, ಉಳಿದೆಲ್ಲ ಆಟಗಾರರು ಕೇವಲ ಎದುರಾಳಿ ತಂಡದ ಆಟಗಾರರೊಂದಿಗೆ ಮಾತ್ರವೇ ಸೆಣಸುತ್ತಿದ್ದರೆ, ತಂಡ ಮುನ್ನಡೆಸಿದ್ದ 18 ವರ್ಷ ಅಕ್ಬರ್‌ ಅಲಿ ಮಾತ್ರ ತಮ್ಮ ಅಕ್ಕನ ಸಾವಿನ ನೋವಿನೊಂದಿಗೂ ಸೆಣಸಿ ಚಾಂಪಿಯನ್‌ ಎನಿಸಿದ್ದಾರೆ.

ಬಾಂಗ್ಲಾದೇಶದ ಪ್ರಮುಖ ಪತ್ರಿಕೆ ‘ಪ್ರೊಥೋಮ್‌ ಅಲೊ’ ಮಾಡಿರುವ ವರದಿ ಪ್ರಕಾರ, ಅಕ್ಬರ್‌ ಅಲಿಯ ಹಿರಿಯ ಸಹೋದರಿ ಖಾದಿಜಾ ಖಾತುನ ಜನವರಿ 22 ರಂದು ಹೆರಿಗೆ ಸಂದರ್ಭದಲ್ಲಿ ಮೃತಪಟ್ಟಿದ್ದಾರೆ. ಈ ಸುದ್ದಿ ತಿಳಿಸಿದರೆ, ಮಗನ ಪ್ರದರ್ಶನದ ಮೇಲೆ ಪರಿಣಾಮ ಬೀರಬಹುದು ಎಂದೆಣಿಸಿದ್ದ ಕುಟುಂಬದವರು, ಆತ ಮನೆಗೆ ಮರಳಿದ ನಂತರ ತಿಳಿಸುವ ಆಲೋಚನೆಯಲ್ಲಿದ್ದರು.

ಆದರೆ, ಅಕ್ಬರ್‌ ತಮ್ಮ ಸಹೋದರನಿಂದ ವಿಷಯ ತಿಳಿದುಕೊಂಡು ದುಃಖಿಸಿದ್ದರು.

ಈ ಬಗ್ಗೆ ಮಾತನಾಡಿರುವ ಅಕ್ಬರ್‌ ತಂದೆ, ‘ಅಲಿಯನ್ನು ಅವನ ಅಕ್ಕ ತುಂಬಾ ಪ್ರೀತಿಸುತ್ತಿದ್ದಳು. ಅವನೂ ಬಹಳ ಹಚ್ಚಿಕೊಂಡಿದ್ದ. ಹೀಗಾಗಿ ಈ ವಿಷಯವನ್ನು ಆತನಿಗೆ ಹೇಗೆ ತಿಳಿಸಬೇಕು ಎಂಬುದೇ ನಮಗೆ ಗೊತ್ತಾಗಿರಲಿಲ್ಲ. ಅಷ್ಟು ಧೈರ್ಯವೂ ನಮಗಿರಲಿಲ್ಲ’ ಎಂದಿದ್ದಾರೆ.

ಮುಂದುವರಿದು, ‘ಅವನಿಗೆ ಇದನ್ನು ಹೇಳುವುದು ನಮಗೆ ಇಷ್ಟವಿರಲಿಲ್ಲ. ಆದರೆ, ಪಾಕಿಸ್ತಾನ ವಿರುದ್ಧದ ಲೀಗ್‌ ಪಂದ್ಯ ಮುಗಿದ ಬಳಿಕ ಕರೆ ಮಾಡಿದ್ದ ಅವನು ತನ್ನ ಸೋದರನಿಂದ ವಿಚಾರ ತಿಳಿದುಕೊಂಡಿದ್ದ’ ಎಂದು  ಬೇಸರ ಪಟ್ಟುಕೊಂಡಿದ್ದಾರೆ.

ಇದನ್ನೂ ಓದಿ: ಮೈದಾನದಲ್ಲೇ ಉರುಳಾಡಿ, ಉದ್ಧಟತನ ತೋರಿದ ಚಾಂಪಿಯನ್ನರು: ‘ಐಸಿಸಿಯಿಂದ ಗಂಭೀರ ಕ್ರಮ’

ಬಾಂಗ್ಲಾದೇಶ ಮತ್ತು ಪಾಕಿಸ್ತಾನ ನಡುವಣ ಪಂದ್ಯವು ಜನವರಿ 24 ರಂದು ನಡೆದಿತ್ತು.

ಭಾನುವಾರ ನಡೆದ ಫೈನಲ್‌ ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾದೇಶ ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ಕೇವಲ 177 ರನ್‌ ಗಳಿಗೆ ಕುಸಿದಿತ್ತು. ಈ ಮೊತ್ತ ಬೆನ್ನಟ್ಟಿದ ಬಾಂಗ್ಲಾ ತಂಡ 42.1 ಓವರ್‌ಗಳಲ್ಲಿ 170 ರನ್ ಗಳಿಸಿದ್ದಾಗ ಮಳೆ ಸುರಿಯಿತು.

ಹೀಗಾಗಿ ಡಕ್ವರ್ಥ್‌ ಲೂಯಿಸ್‌ ನಿಯಮದನ್ವಯ ಬಾಂಗ್ಲಾಗೆ 3 ವಿಕೆಟ್‌ ಜಯ ಘೋಷಿಸಲಾಯಿತು.

ಬಾಂಗ್ಲಾದೇಶ ಇದುವರೆಗೆ ಐಸಿಸಿಯ ಯಾವುದೇ ಟ್ರೋಫಿಗಳನ್ನು ಗೆದ್ದಿರಲಿಲ್ಲ. ಹಾಗಾಗಿ ಈ ಪ್ರಶಸ್ತಿಯು ಬಾಂಗ್ಲಾದೇಶದ ಕ್ರಿಕೆಟ್‌ ಬೆಳವಣಿಗೆಗೆ ಕಾರಣವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ದಕ್ಷಿಣ ಆಫ್ರಿಕಾದಿಂದ ವಾಪಸ್‌ ಆಗುತ್ತಿದ್ದಂತೆ ಸಾರ್ವಜನಿಕ ಸಮಾರಂಭದ ಮೂಲಕ ತಂಡವನ್ನು ಸ್ವಾಗತಿಸಲು ಅಲ್ಲಿನ ಸರ್ಕಾರ ನಿರ್ಧರಿಸಿದೆ.

ಟ್ರೋಫಿಯೊಂದಿಗೆ ಬಾಂಗ್ಲಾದೇಶ ತಂಡ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು