ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿರಾಟ್ ಶತಕ ಗಳಿಸಿದರೂ ಸೋಲು; ಸ್ಟ್ರೈಕ್‌ರೇಟ್‌ ಬಗ್ಗೆ ಚರ್ಚಿಸುತ್ತೇವೆ ಎಂದ ಕೋಚ್

Published 7 ಏಪ್ರಿಲ್ 2024, 7:18 IST
Last Updated 7 ಏಪ್ರಿಲ್ 2024, 7:18 IST
ಅಕ್ಷರ ಗಾತ್ರ

ಜೈಪುರ: ರಾಜಸ್ಥಾನ ರಾಯಲ್ಸ್‌ ಎದುರು ಶನಿವಾರ (ಏ.5) ರಾತ್ರಿ ನಡೆದ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಗಳಿಸಿದ ಅಮೋಘ ಶತಕದ ಹೊರತಾಗಿಯೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡ ಸೋಲು ಕಂಡಿದೆ. ಪಂದ್ಯದ ಬಳಿಕ ಮಾತನಾಡಿರುವ ಮುಖ್ಯ ಕೋಚ್‌ ಆ್ಯಂಡಿ ಫ್ಲವರ್, ತಂಡದ ಬ್ಯಾಟಿಂಗ್‌ ಸ್ಟ್ರೈಕ್‌ರೇಟ್‌ ಕುರಿತು ಚರ್ಚಿಸುತ್ತೇವೆ ಎಂದಿದ್ದಾರೆ.

ಜೈಪುರದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ, ಕೊಹ್ಲಿಯ ಅತ್ಯುತ್ತಮ ಇನಿಂಗ್ಸ್‌ ಬಲದಿಂದ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 183 ರನ್ ಗಳಿಸಿತ್ತು. 

ಗುರಿ ಬೆನ್ನತ್ತಿದ ರಾಯಲ್ಸ್‌, ಇನ್ನೂ 5 ಎಸೆತ ಬಾಕಿ ಇರುವಂತೆಯೇ 189 ರನ್ ಗಳಿಸಿ, ಜಯದ ನಗೆ ಬೀರಿತು. ಆರಂಭಿಕ ಬ್ಯಾಟರ್‌ ಜೋಸ್‌ ಬಟ್ಲರ್ (100 ರನ್‌) ಹಾಗೂ ನಾಯಕ ಸಂಜು ಸ್ಯಾಮ್ಸನ್ (69 ರನ್‌) ಆರ್‌ಸಿಬಿ ಬೌಲರ್‌ಗಳೆದುರು ಲೀಲಾಜಾಲವಾಗಿ ಬ್ಯಾಟ್‌ ಬೀಸಿದರು.

ಬಟ್ಲರ್, ಪಂದ್ಯ ಗೆಲ್ಲಲು ಒಂದು ರನ್‌ ಬೇಕಿದ್ದಾಗ ಸಿಕ್ಸರ್‌ ಸಿಡಿಸಿ ಶತಕ ಪೂರೈಸಿಕೊಂಡರೆ, ಸ್ಯಾಮ್ಸನ್ ಅರ್ಧಶತಕ ಬಾರಿಸಿ ಮಿಂಚಿದರು.

ಹೀಗಾಗಿ, ಐಪಿಎಲ್‌ನಲ್ಲಿ ದಾಖಲೆಯ 8ನೇ ಶತಕ ಗಳಿಸಿದ ಕೊಹ್ಲಿಯ ಆಟ ಆರ್‌ಸಿಬಿಗೆ ಜಯ ತಂದುಕೊಡಲು ಸಾಕಾಗಲಿಲ್ಲ.

ಪಂದ್ಯದ ಬಳಿಕ ಮಾತನಾಡಿದ ಫ್ಲವರ್, 'ನಾವು ಐದರಲ್ಲಿ ಒಂದು ಪಂದ್ಯ ಗೆದ್ದಿದ್ದೇವೆ. ಯಾವುದೇ ತಂಡ ಈ ಸ್ಥಿತಿಯಲ್ಲಿರಲು ಬಯಸುವುದಿಲ್ಲ. ನಮ್ಮ ಬ್ಯಾಟಿಂಗ್‌ ವಿಭಾಗದಲ್ಲಿ ಸಮಸ್ಯೆ ಇದೆ. ವಿರಾಟ್‌ ಕೊಹ್ಲಿ ಅದ್ಭುತ ಲಯದಲ್ಲಿದ್ದಾರೆ. ಆದರೆ, ಉಳಿದವರು ಲಯ ಕಂಡುಕೊಳ್ಳಲು ಹಾಗೂ ಆತ್ಮವಿಶ್ವಾಸದಿಂದ ಆಡಲು ಹೆಣಗಾಡುತ್ತಿದ್ದಾರೆ' ಎಂದಿದ್ದಾರೆ.

'ಆಟಗಾರರು ದೃಢವಾಗಿ ಹಾಗೂ ಆತ್ಮವಿಶ್ವಾಸದಿಂದ ಕಣಕ್ಕಿಳಿಯಲು ನಮ್ಮಿಂದ ಏನೆಲ್ಲ ಮಾಡಲು ಸಾಧ್ಯವೋ ಅದನ್ನು ಮಾಡಲು ಪ್ರಯತ್ನಿಸುತ್ತಿದ್ದೇವೆ. ನೀವೇ ನೋಡಿದಂತೆ ಈ ಪಂದ್ಯವು ಏಕಪಕ್ಷೀಯವಾಗಿ ಸಾಗಿತು. ಎದುರಾಳಿ ಮೇಲೆ ಒತ್ತಡ ಹೇರಲು ನಮ್ಮ ಆಟಗಾರರು ಲಯಕ್ಕೆ ಮರಳಿ, ವಿಶ್ವಾಸದಿಂದ ಆಡಬೇಕಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.

ಸ್ಟ್ರೈಕ್‌ರೇಟ್‌ ಬಗ್ಗೆ ಚರ್ಚೆ
ಆರ್‌ಸಿಬಿ ಪರ ಇನಿಂಗ್ಸ್‌ ಆರಂಭಿಸಿದ ಕೊಹ್ಲಿ ಹಾಗೂ ನಾಯಕ ಫಫ್‌ ಡು ಪ್ಲೆಸಿ, 14 ಓವರ್‌ಗಳಲ್ಲಿ 125 ರನ್ ಗಳಿಸಿ ಉತ್ತಮ ಆರಂಭ ನೀಡಿದರು.

ಪ್ಲೆಸಿ 33 ಎಸೆತಗಳಲ್ಲಿ 44 ರನ್‌ ಗಳಿಸಿ ಔಟಾದ ನಂತರವೂ, ಕೊಹ್ಲಿ ಚುರುಕಾಗಿ ರನ್‌ ಗಳಿಸಿದರು. ಮೊದಲ 40 ಎಸೆತಗಳಲ್ಲಿ 53 ರನ್‌ ಗಳಿಸಿದ್ದ ಅವರು, ನಂತರ ಎದುರಿಸಿದ 32 ಎಸೆತಗಳಲ್ಲಿ 60 ರನ್‌ ಬಾರಿಸಿದರು. ಆದರೆ, ಉಳಿದವರು ಅಬ್ಬರಿಸಲಿಲ್ಲ. ಹೀಗಾಗಿ, ಆರ್‌ಸಿಬಿ ಮೊತ್ತ 185ರ ಗಡಿ ದಾಟಲಿಲ್ಲ.

ಒಟ್ಟು 72 ಎಸೆತಗಳನ್ನು ಎದುರಿಸಿದ ಕೊಹ್ಲಿ, 156.94ರ ಸ್ಟ್ರೈಕ್‌ರೇಟ್‌ನಲ್ಲಿ 113 ರನ್‌ ಗಳಿಸಿದರು. ಅವರ ಇನಿಂಗ್ಸ್‌ನಲ್ಲಿ, 4 ಬೌಂಡರಿ ಹಾಗೂ 12 ಸಿಕ್ಸರ್‌ ಇದ್ದವು. ಉಳಿದ ಬ್ಯಾಟರ್‌ಗಳು 48 ಎಸೆತಗಳಲ್ಲಿ ಗಳಿಸಿದ್ದು 59 ರನ್‌ ಮಾತ್ರ. 11 ರನ್‌ ಇತರೆ ರೂಪದಲ್ಲಿ ಬಂದವು.

ಹೀಗಾಗಿಯೇ ಫ್ಲವರ್‌ ಅವರು, ತಂಡದ ರನ್‌ ಗಳಿಕೆ ಗತಿ ಬಗ್ಗೆ ಚರ್ಚಿಸಲಾಗುವುದು ಎಂದಿದ್ದಾರೆ.

'ಸ್ಟ್ರೈಕ್‌ರೇಟ್‌ ಹಾಗೂ ಆಕ್ರಮಣಕಾರಿ ಆಟದ ಬಗ್ಗೆ ಚರ್ಚೆ ನಡೆಸುತ್ತೇವೆ. ಇವು ಟಿ20 ಆಟದ ಭಾಗವಾಗಿವೆ. ಆಕ್ರಮಣಕಾರಿ ಆಟದ ಮಟ್ಟವು, ನಿರ್ದಿಷ್ಟ ಮಿತಿಗಳನ್ನು ಮೀರಿದ್ದಾಗಿರಬೇಕು ಹಾಗೂ ಎದುರಾಳಿ ಆಟಗಾರರ ಮೇಲೆ ಒತ್ತಡ ಉಂಟುಮಾಡುವಂತಿರಬೇಕು' ಎಂದಿದ್ದಾರೆ.

'ಮುಖ್ಯವಾಗಿ, ಇಂದು ಆಡಿದಂತಹ ಪಿಚ್‌ಗಳಲ್ಲಿ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾಗಬೇಕು. ವಿರಾಟ್‌ ಹೊರತುಪಡಿಸಿ ನಮ್ಮ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಅಂತಹ ಸ್ಫೋಟಕ ಆಟ ಆಡಲಿಲ್ಲ' ಎಂದು ಅಭಿಪ್ರಾಯಪಟ್ಟಿದ್ದಾರೆ.

'ಆದಾಗ್ಯೂ, ಆಟಗಾರರು ಆ ನಿಟ್ಟಿನಲ್ಲಿ ಪ್ರಯತ್ನ ಮಾಡಲಿಲ್ಲ ಎಂದೇನಲ್ಲ. ಸಾಧ್ಯವಾದಷ್ಟು ಮಾಡಿದ್ದಾರೆ. ಆ ಸಂದರ್ಭದಲ್ಲಿ ಬೀಸಾಟವಾಡಲು ಸಾಧ್ಯವಾಗಿಲ್ಲ' ಎಂದು ಸಮರ್ಥಿಸಿಕೊಂಡಿರುವ ಅವರು, 'ಸ್ಫೋಟಕ ಆಟವಾಡುವಂತೆ ಆಟಗಾರರನ್ನು ಉತ್ತೇಜಿಸಬೇಕಿದೆ' ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT