ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿನ್‌, ರಾಹುಲ್‌, ಗಂಗೂಲಿಗೆ ಬ್ಯಾಟ್ ಸಿದ್ಧಪಡಿಸುತ್ತಿದ್ದ ಬೆಂಗಳೂರಿನ ಭಂಡಾರಿ

ಕ್ರಿಕೆಟ್‌ ಲಹರಿ
Last Updated 13 ಮೇ 2019, 1:57 IST
ಅಕ್ಷರ ಗಾತ್ರ

ಅರವತ್ತರ ಆಸುಪಾಸಿನಲ್ಲಿರುವ ಆ ಕನ್ನಡಕಧಾರಿ ವ್ಯಕ್ತಿಯ ಸುತ್ತಮುತ್ತ ಬ್ಯಾಟ್‌ಗಳ ರಾಶಿ. ಒಂದೊಂದು ಬ್ಯಾಟ್‌ನಲ್ಲಿಯೂ ಭಾರತದ ಮತ್ತು ಕರ್ನಾಟಕ ಕ್ರಿಕೆಟ್‌ನ ಭವಿಷ್ಯ ನಿರೀಕ್ಷೆಗಳು. ಇತಿಹಾಸದ ಮೆಲುಕುಗಳು ಇಣಕುತ್ತವೆ. ಆ ಅಂಗಡಿಯ ತುಂಬೆಲ್ಲ ಕಟ್ಟಿಗೆಯ ಸೊಗಡು ಮೂಗಿಗೆ ಅಡರುತ್ತದೆ.

ಬೆಳಿಗ್ಗೆಯಿಂದ ಸಂಜೆಯವರೆಗೂ ಆ ವ್ಯಕ್ತಿ ಒಂದೊಂದೇ ಬ್ಯಾಟ್‌ ಕೈಯಲ್ಲಿ ಹಿಡಿದು ಅದರ ಅಂಚುಗಳನ್ನು ತೀಕ್ಷ್ಣ ಕಣ್ಣುಗಳಿಂದ ಪರೀಕ್ಷಿಸುತ್ತಾರೆ. ಅದರ ಮೇಲೆ ಏನೋ ಬರೆಯುತ್ತಾರೆ. ಪಕ್ಕಕ್ಕಿಡುತ್ತಾರೆ. ಮತ್ತೆ ಆ ಒಕ್ಕಣೆಗಳನ್ನೆಲ್ಲ ಒಂದು ಕಡೆ ದಾಖಲಿಸಿ ವರ್ಕ್‌ಶಾಪ್‌ಗೆ ಹೋಗಿ. ಆ ಬ್ಯಾಟ್‌ಗಳ ತೂಕ ಇಳಿಸುತ್ತಾರೆ. ಸಮತೋಲನಗೊಳಿಸುತ್ತಾರೆ. ತೃಪ್ತಿ ನಗು ಅವರ ಮುಖದ ಮೇಲೆ ಮೂಡಿದರೆ, ಆ ಬ್ಯಾಟ್‌ನಿಂದ ಆಡುವ ಹುಡುಗ ರನ್‌ಗಳನ್ನು ಹರಿಸುವ ನಿರೀಕ್ಷೆ ಗಾಢವಾಗುತ್ತದೆ.

ಹೌದು; ಅವರು ರಾಮ್‌ ಭಂಡಾರಿ. ಬೆಂಗಳೂರಿನ ಉತ್ತರಹಳ್ಳಿ ಸರ್ಕಲ್‌ನಲ್ಲಿರುವ ‘ಸ್ಪೋರ್ಟ್ಸ್‌ಫಾರೆವರ್’ ಮಳಿಗೆಯಲ್ಲಿ ಪ್ರತಿನಿತ್ಯವೂ ಇದೇ ದೃಶ್ಯ ಕಾಣುತ್ತದೆ. ಅವರ ಕೈಚಳಕದಲ್ಲಿ ಸಿದ್ಧಗೊಂಡ ಬ್ಯಾಟ್‌ಗಳಲ್ಲಿ ದಿಗ್ಗಜರಾದ ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ಸೌರವ್‌ ಗಂಗೂಲಿ, ಮಹೇಂದ್ರಸಿಂಗ್ ಧೋನಿ, ಸೇರಿದಂತೆ ಹಲವರು ಸಿಕ್ಸರ್ ಸಿಡಿಸಿದ್ದಾರೆ. ರನ್‌ಗಳ ಗುಡ್ಡೆ ಹಾಕಿದ್ದಾರೆ. ಇದೀಗ ಮುಕ್ತಾಯವಾದ ಐಪಿಎಲ್‌ನಲ್ಲಿ ಆಡಲು ಬೆಂಗಳೂರಿಗೆ ಬಂದಿದ್ದ ಬಹುತೇಕ ಆಟಗಾರರು ಭಂಡಾರಿ ಅವರಿಂದ ತಮ್ಮ ಬ್ಯಾಟ್‌ಗಳಿಗೆ ಮಂತ್ರಸ್ಪರ್ಶ ಮಾಡಿಕೊಂಡು ಹೋಗಿದ್ದಾರೆ. ಅದರಲ್ಲಿ ಭಾರತದ ಕೆಲವು ಆಟಗಾರರು ವಿಶ್ವಕಪ್ ಟೂರ್ನಿಗಾಗಿ ಬ್ಯಾಟ್‌ ಸಾಣೆ ಹಿಡಿಸಿಕೊಂಡು ಹೋಗಿದ್ದಾರೆ.

ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮಾ, ಕೆಎಲ್. ರಾಹುಲ್ ಅವರಿಗೆ ಬ್ಯಾಟ್‌ ಸಿದ್ಧಗೊಳಿಸಿಕೊಟ್ಟು ಸೈ ಎನಿಸಿಕೊಂಡಿದ್ದಾರೆ. ಭಂಡಾರಿ. ಕನ್ನಡದಲ್ಲಿ ಸ್ಪಷ್ಟವಾಗಿ ಮಾತನಾಡುವ ಅವರು ಮೂಲತಃ ಬಿಹಾರದವರು. 1999–2000ರಲ್ಲಿ ಬೆಂಗಳೂರಿಗೆ ಕೆಲಸಕ್ಕಾಗಿ ಬಂದವರು.

‘ಬಿಹಾರದಲ್ಲಿ ನಮ್ಮದು ಬಡಗಿ ವೃತ್ತಿಯ ಮನೆತನ. ನನ್ನ ಅಜ್ಜ ಕಾರ್ಪೆಂಟರ್ ಆಗಿದ್ದವರು. ನಾನು ಶಾಲೆಗೆ ಹೋಗಿ ಬಂದು ಅವರಿಗೆ ಕೆಲಸದಲ್ಲಿಸಹಾಯ ಮಾಡುತ್ತಿದ್ದೆ. ಆಗ ಈ ವೃತ್ತಿಯ ಸೂಕ್ಷ್ಮತೆಗಳು ಅರಿವಿಲ್ಲದೆಯೇ ಕರಗತವಾದವು. ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದೆ. ಇಲ್ಲಿ ಕೆಲವು ಸ್ನೇಹಿತರೊಂದಿಗೆ ಕ್ರಿಕೆಟ್ಆಡುತ್ತಿದ್ದೆ. ಫುಟ್‌ಬಾಲ್, ವಾಲಿಬಾಲ್ ಕೂಡ ಆಡಿದೆ. ಆದರೆ ಮನೆಯಲ್ಲಿ ಬಡತನ, ಮಾರ್ಗದರ್ಶನ ಕೊರತೆ ಇತ್ತು. ಆದ್ದರಿಂದ ಕ್ರೀಡೆಯಲ್ಲಿ ಬೆಳೆಯಲು ಸಾಧ್ಯವಾಗಲಿಲ್ಲ. ಆದರೆ, ಆರ್‌ಸಿಬಿ ಮಣಿ ಅವರಿಂದ ಕರಾಟೆ ಕಲಿತೆ. ಅವರು ನನ್ನನ್ನು ಬಹಳವಾಗಿ ಪ್ರಭಾವಿಸಿದ ಗುರುಗಳು. ಅದೊಮ್ಮೆ ಕ್ರಿಕೆಟ್ ಬ್ಯಾಟ್ ಮಾಡುವುದನ್ನು ಕಲಿತೆ. ಆಟಗಾರನ ದೇಹದ ಎತ್ತರ, ತೂಕ ಮತ್ತು ಶೈಲಿಗೆ ಹೊಂದುವಂತಹ ಬ್ಯಾಟ್‌ ತಯಾರಿಸುತ್ತಿದ್ದೆ. ಅದನ್ನು ಶಾಲೆ, ಕ್ಲಬ್‌ಗಳ ಆಟಗಾರರನ್ನು ಒಯ್ಯುತ್ತಿದ್ದರು. ಸಫಲರಾಗುತ್ತಿದ್ದರು. ರಾಹುಲ್ ದ್ರಾವಿಡ್ ಅವರೂ ರಣಜಿ ಆಡುವಾಗ ನನ್ನಲ್ಲಿಯೇ ಬ್ಯಾಟ್‌ ಮಾಡಿಸಿಕೊಂಡಿದ್ದರು. ಮುಂದೆ ಅವರು ರಾಷ್ಟ್ರೀಯ ತಂಡಕ್ಕೆ ಹೋದರು. ಒಮ್ಮೆ ಎನ್‌ಸಿಎ ಗೆ ಬಂದಾಗ ನನ್ನನ್ನು ಕರೆಸಿದರು. ತಮ್ಮ ಬಳಿಯಿದ್ದ ಬ್ಯಾಟ್‌ ಗಳನ್ನು ನನಗೆ ನೀಡಿ, ಸರಿಹೊಂದಿಸಿ ಕೊಡಿ ಎಂದರು. ಮಾಡಿಕೊಟ್ಟೆ. ಪ್ರತಿ ಸಲವೂ ಇದೇ ರೀತಿಯಾಗಿದ್ದನ್ನು ಉಳಿದ ಆಟಗಾರರು ಗಮನಿಸಿದರು. ರಾಹುಲ್ ಕೂಡ ಯಶಸ್ವಿಯಾಗಿದ್ದರು. ಬಾಯಿಂದ ಬಾಯಿಗೆ ನನ್ನ ಬಗ್ಗೆ ವಿಷಯ ಹರಡಿತು’ ಎಂದು ರಾಮ್ ನೆನಪಿಸಿಕೊಳ್ಳುತ್ತಾರೆ.

‘ಸಚಿನ್‌ ತೆಂಡೂಲ್ಕರ್ ಅವರು ದೊಡ್ಡ ಆಟಗಾರ. ಆದರೆ, ಅಷ್ಟೇ ಸರಳ ವ್ಯಕ್ತಿ. ಬೆಂಗಳೂರಿಗೆ ಬಂದಾಗಲೆಲ್ಲ ನನ್ನ ಬಳಿ ಬ್ಯಾಟ್‌ ಫಿನಿಷಿಂಗ್‌ ಮಾಡಿಕೊಳ್ಳುತ್ತಿದ್ದರು. ಅವರಿರುವ ಜಾಗಕ್ಕೆ ಹೋಗಿ ಬ್ಯಾಟ್ ತರುತ್ತಿದ್ದೆ. 2007ರಲ್ಲಿ ಮಾಡಿಕೊಟ್ಟಿದ್ದ ಬ್ಯಾಟ್‌ನಲ್ಲಿ ಏಷ್ಯಾ ಕಪ್ ಟೂರ್ನಿಯಲ್ಲಿ ಅವರು ಶತಕ ಬಾರಿಸಿದ್ದರು. ಆ ನಂತರ ಅವರು ನಿರಂತರವಾಗಿ ನನ್ನ ಬಳಿ ಬ್ಯಾಟ್ ಮಾಡಿಸುತ್ತಿದ್ದರು. ಎಷ್ಟೇ ದಿನಗಳ ನಂತರ ಭೇಟಿಯಾದರೂ ಹೆಸರು ಹಿಡಿದು ಕರೆದು ಮಾತನಾಡಿಸುತ್ತಿದ್ದರು. ಅದು ಖುಷಿಯ ಸಂಗತಿ’ ಎಂದು ಹೆಮ್ಮೆ ಪಡುತ್ತಾರೆ ರಾಮ್.

ಆಟಗಾರರಿಗೆ ಕೌಶಲದ ಜೊತೆಗೆ ಸೂಕ್ತವಾದ ಬ್ಯಾಟ್ ಕೂಡ ಇರುವುದು ಮುಖ್ಯ. ಪ್ರತಿಯೊಬ್ಬ ಆಟಗಾರನಿಗೂ ವಿಭಿನ್ನ ತೂಕದ ಬ್ಯಾಟ್‌ಗಳು ಬೇಕು. ಆದರ, ಬ್ಯಾಟ್‌ನ ಯಾವ ಭಾಗದಲ್ಲಿ ಎಷ್ಟು ತೂಕ ಇಡಬೇಕು ಎಂಬುದು ಮಹತ್ವದ ವಿಷಯ. ಸ್ವಲ್ಪ ಏರುಪೇರಾದರೂ ಆಟ ಕೆಡುವುದು ಖಚಿತ. ಮಹೇಂದ್ರಸಿಂಗ್ ಧೋನಿ ಮತ್ತು ಹಾರ್ದಿಕ್ ಪಾಂಡ್ಯ ಇಬ್ಬರೂ ಸ್ಫೋಟಕ ಬ್ಯಾಟ್ಸ್‌ಮನ್‌ಗಳೇ. ಆದರೆ, ಧೋನಿ ಬಳಸುವ ಬ್ಯಾಟ್ ಹಾರ್ದಿಕ್ ಅವರಿಗಿಂತ ಹೆಚ್ಚು ತೂಕದ್ದು. ಏಕೆಂದರೆ, ಇಬ್ಬರ ದೇಹದಾರ್ಢ್ಯವೂ ವಿಭಿನ್ನ. ಅದೇ ರೀತಿ ಸಚಿನ್, ವಿರಾಟ್, ಸೆಹ್ವಾಗ್, ರೋಹಿತ್ ಅವರ ಬ್ಯಾಟ್‌ಗಳೂ ವಿಭಿನ್ನ ಈಗಿನ ಬಹುತೇಕ ಬ್ಯಾಟ್ಸ್‌ಮನ್‌ಗಳು 1000 ರಿಂದ 1250 ಗ್ರಾಮ್‌ಗಳವರೆಗಿನ ತೂಕದ ಬ್ಯಾಟ್ ಬಳಸುತ್ತಾರೆ.

ಇತ್ತೀಚೆಗೆ ನಡೆದ ಐಪಿಎಲ್‌ನಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ ಆರ್‌ಸಿಬಿಯ ಎಬಿ ಡಿವಿಲಿಯರ್ನ್ ಕೂಡ ಭಂಡಾರಿ ಅವರ ಬಳಿ ತಮ್ಮ ಬ್ಯಾಟ್‌ ಫಿನಿಷಿಂಗ್ ಮಾಡಿಸಿದ್ದರು.‌

‘ಬೆಂಗಳೂರಿನಲ್ಲಿ ಆಡುವ ಪ್ರತಿಯೊಬ್ಬ ಅಂತರರಾಷ್ಟ್ರೀಯ ಆಟಗಾರನೂ ನನ್ನ ಬಳಿ ಬರುತ್ತಾರೆ. ಇತ್ತೀಚೆಗೆ ಕೆಲವು ಆಟಗಾರರು ನನ್ನಿಂದ ಮಾಡಿಸಿದ ಬ್ಯಾಟ್‌ ಅನ್ನು ಕಂಪನಿಗಳಿಗೆ ಕಳಿಸುತ್ತಾರೆ. ಅಲ್ಲಿ ಅದೇ ರೀತಿಯ ಬ್ಯಾಟ್ ಸಿದ್ಧ ಪಡಿಸಿಕೊಳ್ಳುತ್ತಾರೆ. ಆದರೆ ಅಲ್ಲಿ ಅದು ಅವರಿಗೆ ಹೊಂದಾಣಿಕೆ ಆಗದೇ ಮತ್ತೆ ನನ್ನ ಬಳಿ ಮರಳಿ ಬಂದಿದ್ದಾರೆ. ಈ ವೃತ್ತಿಯಲ್ಲಿ ದುಡ್ಡಿಗಿಂತ ಹೆಚ್ಚು ಹೆಸರು ಗಳಿಸಿದ್ದೇನೆ. ಆಟಗಾರರು ಸಫಲರಾದಾಗ ಖುಷಿಯಾಗುತ್ತದೆ. 2011ರ ವಿಶ್ವಕಪ್‌ನಲ್ಲಿ ಯುವರಾಜ್ ಸಿಂಗ್, ಧೋನಿ, ಸಚಿನ್ ಆಡಿದ್ದ ಬ್ಯಾಟ್‌ಗಳಿಗೆ ನಮ್ಮ ಫಿನಿಷಿಂಗ್ ಇತ್ತು. ಅದಕ್ಕಿಂತ ದೊಡ್ಡ ತೃಪ್ತಿ ಏನು ಬೇಕು?’ ಎಂದು ನಸುನಗು ಬೀರುತ್ತಾರೆ ರಾಮ್.

ಅವರ ಇಬ್ಬರು ಮಕ್ಕಳಾದ ನರೇಂದ್ರ ಭಂಡಾರಿ ಮತ್ತ ದಶರಥ ಭಂಡಾರಿ ಅವರು ತಮ್ಮ ಕಾಲೇಜು ಮತ್ತು ಶಾಲೆಗಳ ತಂಡಕ್ಕೆ ಕ್ರಿಕೆಟ್ ಆಡುತ್ತಿದ್ದಾರೆ. ಕೆಎಸ್‌ಸಿಎ ಲೀಗ್‌ ಟೂರ್ನಿಗಳಲ್ಲಿಯೂ ಆಡಿದ್ದಾರೆ.

‘ಅವರಿಬ್ಬರೂ ಒಳ್ಳೆಯ ಆಲ್‌ರೌಂಡರ್‌ಗಳು. ಈಗಿನ ಪೈಪೋಟಿಯಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಅವಕಾಶ ಸಿಕ್ಕರೆ ಆಡಲಿ’ ಎಂದು ಹೇಳುವ ರಾಮ್, ‘ನನ್ನ ಪ್ರಭಾವ ಬಳಸಿ ಅವರು ದೊಡ್ವವರಾಗುವುದು ಬೇಡ. ಆಟವಾಡಿ ಬೆಳೆಯಲಿ’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT