ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯಾ ಕಪ್ ಟೂರ್ನಿಗೆ ಟೀಮ್ ಇಂಡಿಯಾ ಆಯ್ಕೆ: ಕನ್ನಡಿಗ ರಾಹುಲ್‌, ಕೃಷ್ಣಗೆ ಸ್ಥಾನ

Published 21 ಆಗಸ್ಟ್ 2023, 9:17 IST
Last Updated 21 ಆಗಸ್ಟ್ 2023, 9:17 IST
ಅಕ್ಷರ ಗಾತ್ರ

ನವದೆಹಲಿ: ವಿಕೆಟ್‌ ಕೀಪರ್– ಬ್ಯಾಟರ್‌ ಕೆ.ಎಲ್‌.ರಾಹುಲ್ ಮತ್ತು ಮಧ್ಯಮ ಕ್ರಮಾಂಕದ ಆಟಗಾರ ಶ್ರೇಯಸ್‌ ಅಯ್ಯರ್‌ ಅವರು ಸೋಮವಾರ ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿಗೆ ಪ್ರಕಟಿಸಲಾದ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಪ್ರತಿಭಾನ್ವಿತ ಬ್ಯಾಟರ್‌ ತಿಲಕ್‌ ವರ್ಮಾ ಮೊದಲ ಬಾರಿ ಏಕದಿನ ತಂಡದಲ್ಲಿ ಅವಕಾಶ ಪಡೆದಿದ್ದಾರೆ.

ಐರ್ಲೆಂಡ್‌ ವಿರುದ್ಧ ಹಾಲಿ ಸರಣಿಗೆ ಪುನರಾಗಮನ ಮಾಡಿರುವ ಕನ್ನಡಿಗ ಪ್ರಸಿದ್ಧ ಕೃಷ್ಣ ಅವರೂ ತಂಡದಲ್ಲಿದ್ದಾರೆ.

ರಾಹುಲ್ ಮತ್ತು ಅಯ್ಯರ್ ಅವರ ದೈಹಿಕ ಅರ್ಹತೆಯ ಬಗ್ಗೆಯ ಪ್ರಶ್ನೆಗಳು ಮೂಡಿದ್ದವು. ರಾಹುಲ್‌ ತೊಡೆಯ ಶಸ್ತ್ರಚಿಕಿತ್ಸೆಗೆ ಮತ್ತು ಅಯ್ಯರ್‌ ಬೆನ್ನಿನ ಸರ್ಜರಿಗೆ ಒಳಗಾಗಿದ್ದರು. ಅಯ್ಯರ್‌, ಮಾರ್ಚ್‌ನಲ್ಲಿ ಕೊನೆಯ ಬಾರಿ (ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌) ಆಡಿದ್ದರೆ, ರಾಹುಲ್‌ ಮೇ ತಿಂಗಳಲ್ಲಿ ಕೊನೆಯ ಬಾರಿ (ಐಪಿಎಲ್‌) ಆಡಿದ್ದರು.

ಅ‌ಯ್ಯರ್‌ ಪೂರ್ಣವಾಗಿ ಫಿಟ್‌ ಆಗಿದ್ದಾರೆ. ಆದರೆ ರಾಹುಲ್‌ ಅವರಿಗೆ ಇತ್ತೀಚೆಗೆ ಸಣ್ಣ ಮಟ್ಟಿಗೆ ನೋವು ಕಾಣಿಸಿಕೊಂಡಿದೆ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್‌ ಅಗರಕರ್‌ ಅವರು ತಂಡ ಪ್ರಕಟಿಸಿದ ನಂತರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

‘ರಾಹುಲ್‌ ಅವರಿಗೆ ಆಗಿರುವ ನೋವಿಗೂ, ಹಿಂದಿನ ಶಸ್ತ್ರಚಿಕಿತ್ಸೆಗೂ ಸಂಬಂಧವಿಲ್ಲ. ನಾವು ಅವರು ಟೂರ್ನಿ ಆರಂಭದ ವೇಳೆ ಫಿಟ್‌ ಆಗಬಹುದೆಂದು ನಿರೀಕ್ಷಿಸಿದ್ದೇವೆ. ಆರಂಭದಲ್ಲಿ ಅಲ್ಲದಿದ್ದರೂ ಎರಡು ಅಥವಾ ಮೂರನೇ ಪಂದ್ಯದ ವೇಳೆಗಾದರೂ ಅವರು ಲಭ್ಯರಾಗಬಹುದು. ಮೀಸಲು ವಿಕೆಟ್‌ ಕೀಪರ್‌ ಆಗಿ ಸಂಜು ಸ್ಯಾಮ್ಸನ್‌ ಅವರು ಶ್ರೀಲಂಕಾಕ್ಕೆ ತಂಡದ ಜೊತೆ ಪ್ರಯಾಣಿಸಲಿದ್ದಾರೆ ಎಂದು ಹೇಳಿದರು.

ಭಾರತ ಸೆ. 2ರಂದು ಪಾಕಿಸ್ತಾನ ವಿರುದ್ಧ ಮೊದಲ ಪಂದ್ಯ ಆಡಲಿದೆ. ರಾಹುಲ್‌ ಆ ಪಂದ್ಯದಲ್ಲಿ ಆಡುವ ಸಾಧರ್ಯತೆ ಕಡಿಮೆ.

ವೆಸ್ಟ್‌ ಇಂಡೀಸ್‌ ವಿರುದ್ಧ ಚೊಚ್ಚಲ ಸರಣಿಯಲ್ಲಿ ಸ್ಪೂರ್ತಿಯುತ ಪ್ರದರ್ಶನ ನೀಡಿದ್ದ ತಿಲಕ್‌ ವರ್ಮಾ ಅವರು ನಿರೀಕ್ಷೆಯಂತೆ ಅವಕಾಶ ಪಡೆದಿದ್ದಾರೆ.

ಸ್ಥಾನ ಕಳೆದುಕೊಂಡ ಅನುಭವಿ ಆಟಗಾರ ಎಂದರೆ ಯಜುವೇಂದ್ರ ಚಾಹಲ್‌. ಹೀಗಾಗಿ ಕುಲದೀಪ್ ಯಾದವ್ ತಂಡದ ಏಕೈಕ ರಿಸ್ಟ್‌ ಸ್ಪಿನ್ನರ್‌ ಆಗಿದ್ದಾರೆ. ಅಕ್ಷರ್‌ ಪಟೇಲ್ ಮತ್ತು ರವೀಂದ್ರ ಜಡೇಜಾ ಇತರ ಸ್ಪಿನ್‌ ಆಯ್ಕೆಗಳು.

ರನ್‌ ಬರ ಎದುರಿಸುತ್ತಿರುವ ಸೂರ್ಯಕುಮಾರ್‌ ಯಾದವ್ ಅವರು ಏಕದಿನ ಕ್ರಿಕೆಟ್‌ನಲ್ಲಿ ರನ್ ಬರ ಎದುರಿಸುತ್ತಿದ್ದರೂ ಸ್ಥಾನ ಉಳಿಸಿಕೊಂಡಿದ್ದಾರೆ.

ಭಾರತದ ಎಲ್ಲ ಪಂದ್ಯಗಳೂ ಶ್ರೀಲಂಕಾದಲ್ಲಿ ನಡೆಯಲಿವೆ. ಆತಿಥೇಯ ಪಾಕಿಸ್ತಾನ ತವರಿನಲ್ಲಿ ನಾಲ್ಕು ಪಂದ್ಯಗಳನ್ನು ಆಡಲಿದೆ.

‘ವೆಸ್ಟ್‌ ಇಂಡೀಸ್‌ನಲ್ಲಿ ತಿಲಕ್‌ ವರ್ಮಾ ಅವರಲ್ಲಿ ಉತ್ತಮ ಪ್ರದರ್ಶನ ನೀಡಿ ಭರವಸೆ ಮೂಡಿಸಿರುವುದರ ಜೊತೆಗೆ ಸಂಯಮವನ್ನೂ ತೋರಿದ್ದಾರೆ. ಹೀಗಾಗಿ ಇನ್ನಷ್ಟು ಅವಕಾಶಗಳನ್ನು ನೀಡಲಾಗುತ್ತಿದೆ. ಅವರು ಎಡಗೈ ಆಟಗಾರ ಬೇರೆ’ ಎಂದು ಅಗರಕರ್‌, ವರ್ಮಾ ಆಯ್ಕೆಯನ್ನು ವಿಶ್ಲೇಷಿಸಿದ್ದಾರೆ.

ಅಗರಕರ್‌ ಜೊತೆಗಿದ್ದ ನಾಯಕ ರೋಹಿತ್‌ ಶರ್ಮಾ ಮಾತನಾಡಿ, ‘ಯಾರಿಗೂ ಬಾಗಿಲು ಮುಚ್ಚಿಲ್ಲ. ವಿಶ್ವಕಪ್‌ಗೆ ಲೆಗ್‌ ಸ್ಪಿನ್ನರ್‌ ಚಾಹಲ್‌ ಅಗತ್ಯ ಎಂದು ಅನಿಸಿದಲ್ಲಿ ಅವರಿಗೆ ಹೇಗೆ ಅವಕಾಶ ಮಾಡಿಕೊಡಬಹುದೆಂದು ಯೋಚಿಸುತ್ತೇವೆ. ಆಫ್‌ ಸ್ಪಿನ್ನರ್‌ಗಳಾದ ವಾಷಿಂಗ್ಟನ್‌ ಸುಂದರ್ ಮತ್ತು ಆರ್‌.ಅಶ್ವಿನ್‌ ಅವರಿಗೂ ಇದು ಅನ್ವಯ’ ಎಂದರು.

ತಂಡ ಹೀಗಿದೆ: ರೋಹಿತ್‌ ಶರ್ಮಾ (ನಾಯಕ), ಶುಭಮನ್ ಗಿಲ್‌, ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್‌, ಇಶಾನ್‌ ಕಿಶನ್, ಸೂರ್ಯಕುಮಾರ್ ಯದವ್, ತಿಲಕ್‌ ವರ್ಮಾ, ಕೆ.ಎಲ್‌.ರಾಹುಲ್‌, ಹಾರ್ದಿಕ್‌ ಪಾಂಡ್ಯ (ಉಪ ನಾಯಕ), ಜಸ್‌ಪ್ರೀತ್‌ ಬುಮ್ರಾ, ರವೀಂದ್ರ ಜಡೇಜಾ, ಶಾರ್ದೂಲ್‌ ಠಾಕೂರ್‌, ಅಕ್ಷರ್‌ ಪಟೇಲ್‌, ಕುಲದೀಪ್‌ ಯಾದವ್, ಮೊಹಮ್ಮದ್‌ ಶಮಿ, ಮೊಹಮ್ಮದ್ ಸಿರಾಜ್‌, ಪ್ರಸಿದ್ಧ ಕೃಷ್ಣ ಮತ್ತು ಸಂಜು ಸ್ಯಾಮ್ಸನ್‌ (ರಾಹುಲ್‌ ಅವರಿಗೆ ಬ್ಯಾಕಪ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT