ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಕೋವಿಡ್‌ಗೆ ಕ್ರಿಕೆಟ್ ಸೆಡ್ಡು.. ಇಂದಿನಿಂದ ಚುಟುಕು ಕ್ರಿಕೆಟ್ ಹಬ್ಬ

Last Updated 8 ಏಪ್ರಿಲ್ 2021, 21:05 IST
ಅಕ್ಷರ ಗಾತ್ರ

‘ಮನರಂಜನೆಯ ಗಣಿ’ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವಿಂಟಿ –20 ಮುಂದೆ ಈ ವರ್ಷ ಕೊರೊನಾ ವೈರಸ್‌ ‘ಎರಡನೇ ಅಲೆ’ಯನ್ನು ಮೀರಿ ನಿಲ್ಲುವ ಸವಾಲು ಇದೆ.

ಶುಕ್ರವಾರ ಚೆನ್ನೈನಲ್ಲಿ ಆರಂಭವಾಗಲಿರುವ 14ನೇ ಆವೃತ್ತಿಯ ಐಪಿಎಲ್ ಮೇ 30ರವರೆಗೂ ಆರು ತಾಣಗಳಲ್ಲಿ ಆಯೋಜನೆಗೊಂಡಿದೆ. ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಜೊತೆ ಜೊತೆಗೆ ಕ್ರಿಕೆಟ್‌ ಜ್ವರವೂ ಏರುವ ನಿರೀಕ್ಷೆ ಮೂಡಿದೆ.

ಹೋದ ವರ್ಷ ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯ ಹೆಚ್ಚಳದಿಂದಾಗಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಟೂರ್ನಿ ನಡೆಸಲಾಗಿತ್ತು. ಆದರೆ, ಈ ಬಾರಿ ಸ್ವದೇಶದದಲ್ಲಿಯೇ ಟೂರ್ನಿಯನ್ನು ಯಶಸ್ವಿಯಾಗಿ ಸಂಘಟಿಸುವ ವಿಶ್ವಾಸದಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಇದೆ.

ಕಳೆದ ಎರಡು ವಾರಗಳಲ್ಲಿ ಮುಂಬೈನ ವಾಂಖೆಡೆ ಕ್ರೀಡಾಂಗಣ ಸಿಬ್ಬಂದಿ, ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ದೇವದತ್ತ ಪಡಿಕ್ಕಲ್, ಡೆಲ್ಲಿ ಕ್ಯಾಪಿಟಲ್ಸ್‌ನ ಅಕ್ಷರ್ ಪಟೇಲ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಇದರಿಂದಾಗಿ ಟೂರ್ನಿಯ ಆಯೋಜನೆ ಏರುಪೇರಾಗುವ ಆತಂಕವೂ ಮೂಡಿತ್ತು. ಆದರೆ ಪೂರ್ವನಿರ್ಧರಿತ ವೇಳಾಪಟ್ಟಿ ಮತ್ತು ತಾಣಗಳಲ್ಲಿಯೇ ಟೂರ್ನಿ ಆಯೋಜನೆ ಮಾಡಲು ಬಿಸಿಸಿಐ ನಿರ್ಧರಿಸಿದೆ.

ತಟಸ್ಥ ತಾಣ; ಪ್ರೇಕ್ಷಕರಿಗಿಲ್ಲ ಪ್ರವೇಶ: ಐಪಿಎಲ್ ಇತಿಹಾಸದಲ್ಲಿ ಇದುವರೆಗೆ ಮೂರು ಬಾರಿ ವಿದೇಶದಲ್ಲಿ ಟೂರ್ನಿ ಆಯೋಜಿಸಲಾಗಿದೆ. ಆದರೆ, ದೇಶದಲ್ಲಿ ನಡೆದ ಯಾವುದೇ ಆವೃತ್ತಿಯಲ್ಲಿಯೂ ತಟಸ್ಥ ತಾಣದಲ್ಲಿ ಪಂದ್ಯಗಳು ನಡೆದಿರಲಿಲ್ಲ. ಆದರೆ ಈ ಸಲ ಟೂರ್ನಿಯಲ್ಲಿರುವ ಎಂಟೂ ತಂಡಗಳು ತಮ್ಮ ತವರಿನ ಅಂಗಳದಲ್ಲಿ ಒಂದೂ ಪಂದ್ಯವನ್ನು ಆಡುವುದಿಲ್ಲ.

ಬಯೋಬಬಲ್ ನಿಯಮ ಜಾರಿ ಮಾಡಲು ಸುಲಭವಾಗುವಂತೆ ಹಾಗೂ ತಂಡಗಳ ಪ್ರಯಾಣದ ಹೊರೆಯನ್ನು ತಪ್ಪಿಸಲು ಈ ರೀತಿಯ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಆರು ತಂಡಗಳಲ್ಲಿ ಪಂದ್ಯಗಳನ್ನು ಹಂಚಲಾಗಿದೆ. ಫೈನಲ್ ಪಂದ್ಯವು ಅಹಮದಾಬಾದಿನಲ್ಲಿ ನಡೆಯಲಿದೆ. ಇದಲ್ಲದೇ ಯಾವುದೇ ಕ್ರೀಡಾಂಗಣಕ್ಕೂ ಪ್ರೇಕ್ಷಕರು ಮತ್ತು ಮಾಧ್ಯಮದವರಿಗೆ ಪ್ರವೇಶ ಇಲ್ಲ.

ಅತಿ ದೊಡ್ಡ ಸವಾಲು: ಹೋದ ವರ್ಷದ ಜುಲೈ ತಿಂಗಳಲ್ಲಿ ಕ್ರಿಕೆಟ್ ಚಟುವಟಿಕೆಗಳು ಮರುಆರಂಭವಾದವು. ಇಂಗ್ಲೆಂಡ್‌ನಲ್ಲಿ ವೆಸ್ಟ್ ಇಂಡೀಸ್ ಟೆಸ್ಟ್‌ ಸರಣಿ ಆಡುವ ಮೂಲಕ ಕೊರೊನಾ ಕಾಲಘಟ್ಟದ ಕ್ರಿಕೆಟ್‌ ಆರಂಭವಾಗಿತ್ತು. ಆದರೆ, ಕೋವಿಡ್ ಪ್ರಕರಣಗಳು ಏರುಗತಿಯಲ್ಲಿದ್ದ ಕಾರಣ ಭಾರತದಲ್ಲಿ ಈ ವರ್ಷದ ಜನವರಿ ಅಂತ್ಯದವರೆಗೂ ಅಂತರರಾಷ್ಟ್ರೀಯ ಕ್ರಿಕೆಟ್ ಚಟುವಟಿಕೆಗಳು ನಡೆಯಲಿಲ್ಲ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್, ಟಿ20 ಮತ್ತು ಏಕದಿನ ಕ್ರಿಕೆಟ್ ಸರಣಿಗಳು ಯಶಸ್ವಿಯಾಗಿ ನಡೆದವು. ಚೆನ್ನೈ, ಆಹಮದಾಬಾದ್‌ ಮತ್ತು ಪುಣೆಯಲ್ಲಿ ಆ ಸರಣಿಗಳ ಪಂದ್ಯಗಳು ನಡೆದವು. ಬಯೋಬಬಲ್ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜಾರಿ ಮಾಡುವಲ್ಲಿ ಆಡಳಿತವು ಯಶಸ್ವಿಯಾಯಿತು. ಅದರಿಂದ ಆತ್ಮವಿಶ್ವಾಸದಲ್ಲಿರುವ ಮಂಡಳಿಗೆ ಆತಂಕವೂ ಇದೆ. ಏಕೆಂದರೆ 53 ದಿನಗಳ ಐಪಿಎಲ್‌ನಲ್ಲಿ 200ಕ್ಕೂ ಹೆಚ್ಚು ಆಟಗಾರರು, ಅಷ್ಟೇ ಸಂಖ್ಯೆಯ ನೆರವು ಸಿಬ್ಬಂದಿ, ಕ್ರೀಡಾಂಗಣ ಸಿಬ್ಬಂದಿ ಮತ್ತಿತರ ಅಧಿಕಾರಿಗಳನ್ನು ಬಯೋಬಬಲ್‌ನಲ್ಲಿಯೇ ನಿಭಾಯಿಸುವುದು ದೊಡ್ಡ ಸವಾಲಾಗಲಿದೆ ಎಂದು ಬಿಸಿಸಿಐನ ಕೆಲವು ಅಧಿಕಾರಿಗಳು ಹೇಳಿದ್ದಾರೆ.

‘ಸೋಲು ಮತ್ತು ಗೆಲುವು ಆಟದ ಭಾಗ. ಈ ಬಾರಿ ಪ್ರಶಸ್ತಿ ಯಾರೇ ಗೆಲ್ಲಲಿ, ಯಾವುದೇ ಅವಘಡವಿಲ್ಲದೇ ಟೂರ್ನಿ ಮುಗಿದರೆ ಅದೇ ದೊಡ್ಡ ಜಯ’ ಎಂದು ಐಪಿಎಲ್ ಆಡಳಿತ ಸಮಿತಿಯ ಪದಾಧಿಕಾರಿಯೊಬ್ಬರು ಹೇಳುತ್ತಾರೆ.

ಹಣದ ಹರಿವಿನ ನಿರೀಕ್ಷೆ: ಈ ಬಾರಿಯ ಐಪಿಎಲ್‌ನಿಂದ ಬಿಸಿಸಿಐಗೆ ಸುಮಾರು ನಾಲ್ಕು ಸಾವಿರ ಕೋಟಿ ರೂಪಾಯಿ ಆದಾಯ ಲಭಿಸುವ ಸಾಧ್ಯತೆ ಇದೆ. ವಿವೊ ಮೊಬೈಲ್ ಮತ್ತೆ ತನ್ನ ಪ್ರಾಯೋಜಕತ್ವದ ಹಕ್ಕುಗಳನ್ನು ಪಡೆದುಕೊಂಡಿದೆ. ಉಳಿದಂತೆ ಹೊಸ ಸಹಪ್ರಾಯೋಜಕರು ಕೂಡ ಕೈಜೋಡಿಸಿದ್ದಾರೆ. ಹೋದ ವರ್ಷಕ್ಕಿಂತ ಶೇ 25ರಷ್ಟು ಹೆಚ್ಚು ಪ್ರಮಾಣದಲ್ಲಿ ಪ್ರಾಯೋಜಕತ್ವದ ಮಟ್ಟ ಸುಧಾರಣೆಗೊಂಡಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಅಲ್ಲದೇ ಫ್ರಾಂಚೈಸಿಗಳಿಗೂ ಹೋದ ಬಾರಿಗಿಂತ ಶೇ 15–20ರಷ್ಟು ಹೆಚ್ಚು ಲಾಭವಾಗುವ ನಿರೀಕ್ಷೆ ಮೂಡಿದೆ. ಹೋದ ವರ್ಷ ಪೆಟ್ಟು ತಿಂದಿದ್ದ ಆರ್ಥಿಕತೆಯು ನಿಧಾನವಾಗಿ ಚೇತರಿಕೆಯತ್ತ ಸಾಗುತ್ತಿದೆ. ಈ ಹಂತದಲ್ಲಿ ಮಾರುಕಟ್ಟೆಯಲ್ಲಿ ತಮ್ಮ ಉತ್ಪನ್ನಗಳಿಗೆ ಪ್ರಚಾರ ಗಿಟ್ಟಿಸಿಕೊಂಡು ವಹಿವಾಟನ್ನು ವೃದ್ಧಿಸಿಕೊಳ್ಳಲು ಉದ್ಯಮಗಳು ಕೂಡ ಐಪಿಎಲ್‌ ಮೇಲೆ ಕಣ್ಣಿಟ್ಟಿವೆ. ಇನ್ನೊಂದೆಡೆ ಕ್ರಿಕೆಟ್‌ಪ್ರಿಯರು ತಮ್ಮ ನೆಚ್ಚಿನ ಆಟಗಾರರನ್ನು ಒಂದೇ ವೇದಿಕೆಯಲ್ಲಿ ನೋಡಿ ಸಂತಸಪಡಲು ತುದಿಗಾಲಿನಲ್ಲಿ ನಿಂತಿದ್ದಾರೆ.

ನಾಲ್ವರು ವಿಕೆಟ್‌ಕೀಪರ್‌ಗಳು ನಾಯಕರು!
ಈ ಬಾರಿಯ ಐಪಿಎಲ್ ವಿಶೇಷವೆಂದರೆ ನಾಲ್ಕು ತಂಡಗಳಿಗೆ ವಿಕೆಟ್‌ಕೀಪರ್‌–ಬ್ಯಾಟ್ಸ್‌ಮನ್‌ಗಳದ್ದೇ ಸಾರಥ್ಯ. ಈ ಮೊದಲು ಚೆನ್ನೈ ಸೂಪರ್ ಕಿಂಗ್ಸ್‌ಗೆ ಮಹೇಂದ್ರಸಿಂಗ್ ಧೋನಿ ಮತ್ತು ಪಂಜಾಬ್ ಕಿಂಗ್ಸ್‌ಗೆ ಕೆ.ಎಲ್. ರಾಹುಲ್ ನಾಯಕರಾಗಿದ್ದರು.

ಇದೀಗ ಈ ಸಾಲಿಗೆ ರಿಷಭ್ ಪಂತ್ ಮತ್ತು ಸಂಜು ಸ್ಯಾಮ್ಸನ್ ಸೇರಿದ್ದಾರೆ. ಈಚೆಗೆ ಇಂಗ್ಲೆಂಡ್ ಎದುರಿನ ಸರಣಿಯಲ್ಲಿ ಗಾಯಗೊಂಡ ಶ್ರೇಯಸ್ ಅಯ್ಯರ್ ಈ ಬಾರಿ ಐಪಿಎಲ್‌ನಲ್ಲಿ ಆಡುವುದಿಲ್ಲ. ಆದ್ದರಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಾಯಕತ್ವದ ಹೊಣೆಯನ್ನು ರಿಷಭ್‌ಗೆ ನೀಡಲಾಗಿದೆ.

ರಾಜಸ್ಥಾನ್ ರಾಯಲ್ಸ್‌ ತಂಡಕ್ಕೆ ಈ ಮೊದಲು ನಾಯಕರಾಗಿದ್ದವರು ಈ ವರ್ಷ ಬೇರೆ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದ್ದರಿಂದ ಕೇರಳದ ಹುಡುಗ ಸಂಜು ಸ್ಯಾಮ್ಸನ್ ನಾಯಕರಾಗಿದ್ದಾರೆ.

ಧೋನಿಗೆ ಕೊನೆಯ ಐಪಿಎಲ್?
ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರಸಿಂಗ್ ಧೋನಿ ಅವರಿಗೆ ಇದು ಕೊನೆಯ ಐಪಿಎಲ್ ಎಂದು ಹೇಳಲಾಗುತ್ತಿದೆ.

ಹೋದ ವರ್ಷ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಐಪಿಎಲ್‌ನಲ್ಲಿ ಮಾತ್ರ ಆಡುವುದಾಗಿ ತಿಳಿಸಿದ್ದರು. ಇಡೀ ವರ್ಷದಲ್ಲಿ ಎಲ್ಲಿಯೂ ಕ್ರಿಕೆಟ್ ಆಡದೇ ಕೇವಲ ಐಪಿಎಲ್‌ನಲ್ಲಿ ಕಣಕ್ಕಿಳಿಯುವುದು ಕಷ್ಟವಾಗಬಹುದು ಎಂದು ಹಲವು ಹಿರಿಯ ಕ್ರಿಕೆಟಿಗರು ಅಭಿಪ್ರಾಯಪಟ್ಟಿದ್ದರು.ಇದೀಗ ಧೋನಿ ಈ ಸವಾಲನ್ನು ಮೀರಿ ಬೆಳೆಯುವರೇ ಎಂಬ ಕುತೂಹಲ ಕ್ರಿಕೆಟ್‌ ವಲಯದಲ್ಲಿ ಮೂಡಿದೆ.

ಕಳೆದ ವರ್ಷ ಚೆನ್ನೈ ತಂಡವು ಪ್ಲೇ ಆಫ್ ಹಂತ ಪ್ರವೇಶಿಸಿರಲಿಲ್ಲ. ಐಪಿಎಲ್‌ ಇತಿಹಾಸದಲ್ಲಿಯೇ ತಂಡವು ಅತ್ಯಂತ ಕಳಪೆ ಆಟವಾಡಿತ್ತು. ಇದೀಗ ಪುಟಿದೇಳುವ ಭರವಸೆಯಲ್ಲಿ ತಂಡವಿದೆ. ಒಂದೊಮ್ಮೆ ಈ ಸಲ ಚೆನ್ನೈ ಪ್ರಶಸ್ತಿ ಜಯಿಸಿದರೆ, ಧೋನಿ ಅವರು ಐಪಿಎಲ್‌ಗೂ ವಿದಾಯ ಹೇಳುವ ಸಂಭವವಿದೆ ಎನ್ನಲಾಗುತ್ತಿದೆ.

ವರದಿ: ಗಿರೀಶ್ ದೊಡ್ಡಮನಿ, ವಿಕ್ರಂ ಕಾಂತಿಕೆರೆ, ಬಸವರಾಜ್‌ ದಳವಾಯಿ

ಆಧಾರ: ಐಪಿಎಲ್‌ ವೆಬ್‌ಸೈಟ್
ಆಧಾರ: ಐಪಿಎಲ್‌ ವೆಬ್‌ಸೈಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT