ಶುಕ್ರವಾರ, ಜೂನ್ 18, 2021
22 °C

ನಿವೃತ್ತಿ ವಿಷಯ ತಡವಾಗಿ ಬಿಸಿಸಿಐಗೆ ತಿಳಿಸಿದ ಸುರೇಶ್ ರೈನಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ನಿಗದಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಸುರೇಶ್ ರೈನಾ ಭಾರತ ತಂಡದ ಪ್ರಮುಖ ಆಲ್‌ರೌಂಡರ್ ಆಗಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿರುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಅವರು ತಮ್ಮ ನಿವೃತ್ತಿಯ ವಿಷಯವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿದ ಮರುದಿನವಷ್ಟೇ ಅಧಿಕೃತವಾಗಿ ತಿಳಿಸಿದ್ದಾರೆ ಎಂದು ಹೇಳಿದೆ.

ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಶನಿವಾರ ಸಂಜೆ ದಿಢೀರ್ ಆಗಿ ನಿವೃತ್ತಿ ಘೋಷಿಸಿದ್ದರು. ಇದರ ಬೆನ್ನಲ್ಲೇ ರೈನಾ ತಾವು ಕೂಡ ನಿವೃತ್ತರಾಗಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸಿದ್ದರು. ಆದರೆ ಅವರು ಬಿಸಿಸಿಐಗೆ ಭಾನುವಾರವಷ್ಟೇ ಈ ವಿಷಯ ತಿಳಿಸಿದ್ದಾರೆ ಮಂಡಳಿ ಸೋಮವಾರ ಪ್ರಕಟಣೆಯಲ್ಲಿ ಹೇಳಿದೆ. ಆಟಗಾರರು ಬಿಸಿಸಿಐಗೆ ಮಾಹಿತಿ ನೀಡಿ ನಂತರ ನಿವೃತ್ತಿ ಘೋಷಿಸುವುದು ವಾಡಿಕೆ.

ಎಡಗೈ ಬ್ಯಾಟ್ಸ್‌ಮನ್‌ ಹಾಗೂ ಆ‍ಫ್‌ಸ್ಪಿನ್ನರ್ ರೈನಾ 13 ವರ್ಷ ಭಾರತದ ‍ಪರವಾಗಿ ಆಡಿದ್ದು ಅಲ್ಪ ಕಾಲ ನಾಯಕನಾಗಿಯೂ ಕಾರ್ಯನಿರ್ವಹಿಸಿದ್ದಾರೆ. ‘ಅವರ ನಾಯಕತ್ವದಲ್ಲಿ ಭಾರತ ತಂಡ ವೆಸ್ಟ್ ಇಂಡೀಸ್‌ನಲ್ಲಿ ನಡೆದ ಏಕದಿನ ಸರಣಿಯಲ್ಲಿ 3–2ರ ಜಯ ಸಾಧಿಸಿತ್ತು. ಬಾಂಗ್ಲಾದೇಶ ವಿರುದ್ಧ 2–0 ಅಂತರದಲ್ಲಿ ಸರಣಿ ಗೆದ್ದಿತ್ತು. ಜಿಂಬಾಬ್ವೆ ಎದುರಿನ ಟ್ವೆಂಟಿ–20 ಸರಣಿಯಲ್ಲೂ 2–0 ಗೆಲುವು ದಾಖಲಿಸಿತ್ತು’ ಎಂದು ಪ್ರಕಟಣೆಯಲ್ಲಿ ನೆನಪಿಸಿಕೊಳ್ಳಲಾಗಿದೆ.

ಪದಾರ್ಪಣೆಯ ಟೆಸ್ಟ್ ಪಂದ್ಯದಲ್ಲಿ ಶತಕ ಗಳಿಸಿರುವ ರೈನಾ ಮೂರೂ ಮಾದರಿಗಳಲ್ಲಿ ಶತಕ ಸಿಡಿಸಿದ ಭಾರತದ ಮೊದಲ ಆಟಗಾರನೂ ಆಗಿದ್ದಾರೆ. ವಿದೇಶಿ ನೆಲದಲ್ಲೇ ಅವರ ಶತಕಗಳು ಬಂದಿವೆ ಎಂಬುದು ವಿಶೇಷ.

ನಿವೃತ್ತಿ ಘೋಷಿಸಿರುವ ರೈನಾ ಕುರಿತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮೆಚ್ಚುಗೆಯ ಮಾತುಗಳನ್ನಾಡಿದ್ದು ‘ಭಾರತದ ಏಕದಿನ ಕ್ರಿಕೆಟ್‌ಗೆ ರೈನಾ ನೀಡಿರುವ ಕಾಣಿಕೆ ಗಮನಾರ್ಹ. ಕೆಳ ಕ್ರಮಾಂಕದಲ್ಲಿ ಕ್ರೀಸ್‌ಗೆ ಇಳಿದು ತಂಡದ ಗೆಲುವಿಗೆ ನೆರವಾಗುವ ಇನಿಂಗ್ಸ್ ಕಟ್ಟಲು ವಿಶೇಷ ಪ್ರತಿಭೆ ಇರಬೇಕು. ಅದನ್ನು ಸುರೇಶ್ ರೈನಾ ಸಿದ್ಧಿಸಿಕೊಂಡಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಮತ್ತು ಯುವರಾಜ್ ಸಿಂಗ್ ಅವರ ಜೊತೆಗೂಡಿ ಅವರು ಭಾರತಕ್ಕೆ ಭದ್ರ ಮಧ್ಯಮ ಕ್ರಮಾಂಕವನ್ನು ಸಜ್ಜುಗೊಳಿಸಿದ್ದಾರೆ’ ಎಂದು ಗಂಗೂಲಿ ಹೇಳಿದ್ದಾರೆ.

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ‘ಸುರೇಶ್ ರೈನಾ ಟ್ವೆಂಟಿ–20 ಕ್ರಿಕೆಟ್‌ಗೆ ಸಂಬಂಧಿಸಿ ಅದ್ಭುತ ಪ್ರತಿಭೆ. ಫೀಲ್ಡಿಂಗ್‌ನಲ್ಲೂ ಚುರುಕುತನ ಪ್ರದರ್ಶಿಸಿ ಕ್ರಿಕೆಟ್‌ ಜಗತ್ತನ್ನು ಅವರು ಮುದಗೊಳಿಸಿದ್ದಾರೆ. 2011ರ ವಿಶ್ವಕಪ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಗೆಲುವಿಗೆ ಅವರು ನೀಡಿದ ಕಾಣಿಗೆ ಸ್ಮರಣಾರ್ಹ. ಅವರ ನಿವೃತ್ತಿ ಜೀವನ ಸುಖಮಯವಾಗಿರಲಿ’ ಎಂದು ಹಾರೈಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು