ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2021: ಆಸೀಸ್ ಆಟಗಾರರನ್ನು ಲಂಕಾ ಅಥವಾ ಮಾಲ್ಡೀವ್ಸ್‌ಗೆ ಏರ್‌ಲಿಫ್ಟ್?

Last Updated 5 ಮೇ 2021, 11:01 IST
ಅಕ್ಷರ ಗಾತ್ರ

ಸಿಡ್ನಿ: ಕೋವಿಡ್-19 ಸಾಂಕ್ರಾಮಿಕ ರೋಗವು ತೀವ್ರವಾಗಿ ಹರಡಿರುವ ಹಿನ್ನೆಲೆಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಯ ಟೂರ್ನಿಯನ್ನು ಸ್ಥಗಿತಗೊಳಿಸಲಾಗಿದ್ದು, ಅನಿರ್ದಿಷ್ಟ ಅವಧಿಗೆ ಮುಂದೂಡಲಾಗಿದೆ. ಈಗ ಭಾರತದಲ್ಲಿ ಸಿಲುಕಿರುವ ಆಸ್ಟ್ರೇಲಿಯಾ ಆಟಗಾರರನ್ನು ವಿಶೇಷ ವಿಮಾನದ ಮೂಲಕ ಶ್ರೀಲಂಕಾ ಅಥವಾ ಮಾಲ್ಡೀವ್ಸ್‌ಗೆ ರವಾನಿಸಲು ಬಿಸಿಸಿಐ ಸಿದ್ಧತೆ ನಡೆಸುತ್ತಿದೆಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ.

ವಿದೇಶಿ ಆಟಗಾರರನ್ನು ಸುರಕ್ಷಿತವಾಗಿ ವಾಪಾಸು ಕಳುಹಿಸಲಾಗುವುದು ಎಂದು ಬಿಸಿಸಿಐ ಭರವಸೆ ನೀಡಿತ್ತು. ಈ ಕುರಿತಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಜೊತೆಗೂ ಹೊಂದಾಣಿಕೆ ಮಾಡಿಕೊಳ್ಳುತ್ತಿದೆ.

ಮೇ 15ರ ವರೆಗೆ ಭಾರತದಿಂದ ಪ್ರಯಾಣಕ್ಕೆ ಆಸ್ಟ್ರೇಲಿಯಾ ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ಸದ್ಯ ಆಟಗಾರರಿಗೆ ಹಿಂತಿರುಗುವುದು ಕಷ್ಟಸಾಧ್ಯವೆನಿಸಿದೆ. ಈ ಹಿನ್ನೆಲೆಯಲ್ಲಿ ಚಾರ್ಟರ್ ವಿಮಾನ ಮುಖಾಂತರ ಮಾಲ್ಡೀವ್ಸ್ ಅಥವಾ ಶ್ರೀಲಂಕಾಗೆ ಕಳುಹಿಸಲು ತಯಾರಿ ನಡೆಸುತ್ತಿದೆ.

ಐಪಿಎಲ್‌ನಲ್ಲಿ ಭಾಗವಹಿಸಿದ ಆಸ್ಟ್ರೇಲಿಯಾದ ಎಲ್ಲರನ್ನು ಭಾರತದಿಂದ ಹೊರಗೆ ರವಾನಿಸಲು ಬಿಸಿಸಿಐ ಯೋಜನೆ ರೂಪಿಸಿಕೊಳ್ಳುತ್ತಿದೆ. ಅಲ್ಲಿ ಅವರು ತಂಗಲಿದ್ದು, ಬಳಿಕ ಆಸ್ಟ್ರೇಲಿಯಾಕ್ಕೆ ಸುರಕ್ಷಿತವಾಗಿ ಮರಳಲಿದ್ದಾರೆ ಎಂದು ತಿಳಿಸಿದೆ.

ಐಪಿಎಲ್ ಜೀವ ಸುರಕ್ಷಾ ಕವಚವನ್ನು ಬೇಧಿಸಿದ್ದ ಕೊರೊನಾವೈರಸ್ ಆಟಗಾರರಲ್ಲೂ ಕಾಣಿಸಿಕೊಂಡಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಬಿಸಿಸಿಐ, ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿಯನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಲು ನಿರ್ಧರಿಸಿತ್ತು.

ಆಟಗಾರರು, ತರಬೇತುದಾರರು ಹಾಗೂ ವೀಕ್ಷಕಾ ವಿವರಣೆಗಾರರು ಸೇರಿದಂತೆ 14ರಷ್ಟು ಮಂದಿ ಐಪಿಎಲ್ ನಿಲುಗಡೆಯೊಂದಿಗೆ ಭಾರತದಲ್ಲೇ ಉಳಿದುಕೊಳ್ಳವಂತಾಗಿದೆ.

ಏತನ್ಮಧ್ಯೆ ಕೋವಿಡ್ ಸೋಂಕು ದೃಢಗೊಂಡಿರುವ ಹಿನ್ನೆಲೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟಿಂಗ್ ತರಬೇತುದಾರ ಮೈಕ್ ಹಸ್ಸಿ, ಭಾರತದಲ್ಲೇ 10 ದಿನಗಳ ಕ್ವಾರಂಟೈನ್ ವಾಸವನ್ನು ಪೂರ್ಣಗೊಳಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT