ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಶ್ವಿನ್, ಮಿಥಾಲಿಗೆ 'ಖೇಲ್ ರತ್ನ' ಪ್ರಶಸ್ತಿಗೆ ಶಿಫಾರಸು ಮಾಡಲಿರುವ ಬಿಸಿಸಿಐ

ಕೆ.ಎಲ್ ರಾಹುಲ್‌ಗೆ 'ಅರ್ಜುನ ಪ್ರಶಸ್ತಿ'ಗೆ ಶಿಫಾರಸುಗೈಯಲಿರುವ ಬಿಸಿಸಿಐ
Last Updated 30 ಜೂನ್ 2021, 16:55 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಅತ್ಯುನ್ನತ್ತ ಕ್ರೀಡಾ ಗೌರವವಾದ 'ರಾಜೀವ್ ಗಾಂಧಿ ಖೇಲ್ ರತ್ನ' ಪ್ರಶಸ್ತಿಗೆ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮತ್ತು ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕ ಮಿಥಾಲಿ ರಾಜ್ ಅವರ ಹೆಸರನ್ನು ಶಿಫಾರಸು ಮಾಡಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರ್ಧರಿಸಿದೆ.

ಅದೇ ಹೊತ್ತಿಗೆ 'ಅರ್ಜುನ ಪ್ರಶಸ್ತಿ' ಗೌರವಕ್ಕಾಗಿ ಕನ್ನಡಿಗ ಕೆ.ಎಲ್. ರಾಹುಲ್, ಅನುಭವಿ ಎಡಗೈ ಬ್ಯಾಟ್ಸ್‌ಮನ್ ಶಿಖರ್ ಧವನ್ ಹಾಗೂ ಬಲಗೈ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ ಹೆಸರನ್ನು ಶಿಫಾರಸು ಮಾಡಲು ಬಿಸಿಸಿಐ ನಿರ್ಧರಿಸಿದೆ.

ಅರ್ಜುನ ಪ್ರಶಸ್ತಿಗಾಗಿ ಯಾವುದೇ ಮಹಿಳಾ ಆಟಗಾರ್ತಿಯನ್ನು ನಾಮನಿರ್ದೇಶನ ಮಾಡಿಲ್ಲ. ಮಿಥಾಲಿ ರಾಜ್ ಅವರನ್ನು ದೇಶದ ಅತ್ಯುನ್ನತ್ತ ಕ್ರೀಡಾ ಪ್ರಶಸ್ತಿ ಖೇಲ್ ರತ್ನಪ್ರಶಸ್ತಿಗೆ ಶಿಫಾರಸು ಮಾಡಲಾಗುವುದು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

38 ವರ್ಷದ ಮಿಥಾಲಿ ಕಳೆದ ವಾರವಷ್ಟೇ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 22 ವರ್ಷಗಳನ್ನು ಪೂರ್ಣಗೊಳಿಸಿದ್ದರು. ಅಲ್ಲದೆ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು 7,000ಕ್ಕೂ ಹೆಚ್ಚು ರನ್ ಗಳಿಸಿದ ಖ್ಯಾತಿಗೂ ಪಾತ್ರರಾಗಿದ್ದಾರೆ. ಮಿಥಾಲಿ ರಾಜ್ 2003ರಲ್ಲಿ ಅರ್ಜುನ ಪ್ರಶಸ್ತಿ ಮತ್ತು 2015ರಲ್ಲಿ 'ಪದ್ಮ ಶ್ರೀ' ಪ್ರಶಸ್ತಿಗೆ ಭಾಜನರಾಗಿದ್ದರು.

ಅತ್ತ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪರ ಸ್ಥಿರ ಪ್ರದರ್ಶನ ಕಾಯ್ದುಕೊಂಡಿರುವ ಅಶ್ವಿನ್, 79 ಪಂದ್ಯಗಳಲ್ಲಿ 413 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಹಾಗೆಯೇ ಏಕದಿನದಲ್ಲಿ 150 ಹಾಗೂ ಟಿ20ನಲ್ಲಿ 42 ವಿಕೆಟ್‌ಗಳನ್ನು ಪಡೆದಿದ್ದಾರೆ. ಅಶ್ವಿನ್ ಅವರಿಗೆ 2014ರಲ್ಲಿ ಅರ್ಜುನ ಪ್ರಶಸ್ತಿ ಒಲಿದಿತ್ತು.

35 ವರ್ಷದ ಧವನ್ ಪ್ರಸ್ತುತ ಶ್ರೀಲಂಕಾ ಪ್ರವಾಸದಲ್ಲಿರುವ ಭಾರತ ತಂಡದ ಕಪ್ತಾನರಾಗಿ ಆಯ್ಕೆಯಾಗಿದ್ದಾರೆ. 142 ಏಕದಿನ ಪಂದ್ಯಗಳಲ್ಲಿ 5,977 ರನ್ ಕಲೆ ಹಾಕಿದ್ದಾರೆ. ಹಾಗೆಯೇ ಟೆಸ್ಟ್ ಹಾಗೂ ಏಕದಿನಗಳಲ್ಲಿ ಅನುಕ್ರಮವಾಗಿ 2,315 ಹಾಗೂ 1,673 ರನ್ ಗಳಿಸಿದ್ದಾರೆ.

ಕರ್ನಾಟಕದ 29 ವರ್ಷದ ಕೆ.ಎಲ್. ರಾಹುಲ್, 36 ಟೆಸ್ಟ್, 38 ಏಕದಿನ ಹಾಗೂ 48 ಟಿ20 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಅಲ್ಲದೆ ಟೆಸ್ಟ್ ಹಾಗೂ ಏಕದಿನದಲ್ಲಿ ತಲಾ ಐದು ಮತ್ತು ಟಿ20ನಲ್ಲಿ ಎರಡು ಶತಕಗಳನ್ನು ದಾಖಲಿಸಿದ್ದಾರೆ. ಈ ಒಲಿಂಪಿಕ್ ವರ್ಷದಲ್ಲಿ ಅವರನ್ನು ಕ್ರೀಡಾ ಸಚಿವಾಲಯ ನೇಮಿಸಿದ ಸಮಿತಿಯು ಅರ್ಜುನ ಪ್ರಶಸ್ತಿಗೆ ಆಯ್ಕೆ ಮಾಡುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಚೆಟ್ರಿಗೆ ಖೇಲ್ ರತ್ನ: ಭಾರತ ಫುಟ್‌ಬಾಲ್ ತಂಡದ ನಾಯಕ ಸುನೀಲ್ ಚೆಟ್ರಿ ಅವರಿಗೆ ಖೇಲ್‌ ರತ್ನ ಮತ್ತು ಮಹಿಳಾ ಫುಟ್‌ಬಾಲ್ ತಂಡದ ಬಾಲಾ ದೇವಿ ಅವರಿಗೆ ಅರ್ಜುನ ಪುರಸ್ಕಾರ ನೀಡುವಂತೆ ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ (ಎಐಎಫ್‌ಎಫ್‌) ಕೇಂದ್ರ ಸರ್ಕಾರಕ್ಕೆ ನಾಮನಿರ್ದೇಶನ ಸಲ್ಲಿಸಿದೆ. ಕೋಚ್ ಗ್ಯಾಬ್ರಿಯಲ್ ಜೋಸೆಫ್ ಅವರಿಗೆ ದ್ರೋಣಾಚಾರ್ಯ ಪುರಸ್ಕಾರ ನೀಡುವಂತೆಯೂ ಶಿಫಾರಸು ಮಾಡಲಾಗಿದೆ.

ನೀರಜ್‌ ನಾಮನಿರ್ದೇಶನ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸುವ ಭರವಸೆ ಮೂಡಿಸಿರುವ ಜಾವೆಲಿನ್ ಥ್ರೋ ಅಥ್ಲೀಟ್ ನೀರಜ್ ಚೋಪ್ರಾ ಅವರಿಗೆ ಖೇಲ್ ರತ್ನ ನೀಡಿ ಗೌರವಿಸಲು ಭಾರತ ಅಥ್ಲೆಟಿಕ್ಸ್ ಫೆಡರೇಷನ್ ಶಿಫಾರಸು ಮಾಡಿದೆ. ಒಡಿಶಾ ಸರ್ಕಾರವು ಮಂಗಳವಾರ ಮಹಿಳಾ ಅಥ್ಲೀಟ್ ದ್ಯುತಿ ಚಾಂದ್ ಅವರ ನಾಮನಿರ್ದೇಶನ ಮಾಡಿತ್ತು.

ವಿವಿಧ ಕ್ರೀಡಾ ಫೆಡರೇಷನ್‌ಗಳು ತಮ್ಮ ಕ್ರೀಡಾಪಟುಗಳ ನಾಮನಿರ್ದೇಶನವನ್ನು ಬುಧವಾರ ಸಲ್ಲಿಸಿವೆ. ವಿವರ ಇಂತಿವೆ;

ಭಾರತ ಕುಸ್ತಿ ಫೆಡರೇಷನ್: ರವಿ ದಹಿಯಾ, ದೀಪಕ್ ಪೂನಿಯಾ, ಸರಿತಾ ಮೊರ್, ಅನ್ಷು ಮಲಿಕ್ ( ಅರ್ಜುನ ಪ್ರಶಸ್ತಿ).

ಭಾರತ ರಾಷ್ಟ್ರೀಯ ರೈಫಲ್ ಸಂಸ್ಥೆ: ಅಂಕುರ್ ಮಿತ್ತಲ್, ಅಂಜುಮ್ ಮೌದ್ಗಿಲ್ (ರಾಜೀವಗಾಂಧಿ ಖೇಲ್ ರತ್ನ), ಇಳವೆನಿಲ ವಾಳರಿವನ್, ಅಭಿಷೇಕ್ ವರ್ಮಾ, ಓಂಪ್ರಕಾಶ್ ಮಿತ್ರಾವಳ್ (ಅರ್ಜುನ ಪ್ರಶಸ್ತಿ).

ಭಾರತ ಟೇಬಲ್ ಟೆನಿಸ್ ಫೆಡರೇಷನ್: ಅಚಂತ ಶರತ್ ಕಮಲ್ (ಖೇಲ್ ರತ್ನ), ಸೌಮ್ಯದೀಪ್ ರಾಯ್ (ದ್ರೋಣಾಚಾರ್ಯ ಪುರಸ್ಕಾರ), ಸುತೀರ್ಥ ಮುಖರ್ಜಿ, ಐಹಿಕಾ ಮುಖರ್ಜಿ, ಮಾನವ್ ಠಕ್ಕರ್ (ಅರ್ಜುನ ಪ್ರಶಸ್ತಿ).

ಇಂಡಿಯನ್ ಗಾಲ್ಫ್ ಯೂನಿಯನ್: ಶುಭಂಕರ್ ಶರ್ಮಾ (ಖೇಲ್ ರತ್ನ), ಉದಯನ್ ಮಾನೆ, ರಶೀದ್ ಖಾನ್, ದೀಕ್ಷಾ ದಾಗರ್ (ಅರ್ಜುನ ಪ್ರಶಸ್ತಿ).

ಭಾರತ ಆರ್ಚರಿ ಸಂಸ್ಥೆ: ಜ್ಯೋತಿ ಸುರೇಖಾ (ಖೇಲ್ ರತ್ನ), ಲಿಂಬಾರಾಮ್, ಲೋಕೇಶ್ ಚಂದ್ ಪಾಲ್ (ದ್ರೋಣಾಚಾರ್ಯ), ಮುಸ್ಕಾನ್ ಕಿರಾರ್, (ಅರ್ಜುನ ಪ್ರಶಸ್ತಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT