ಶನಿವಾರ, ಜೂನ್ 6, 2020
27 °C

ಐಪಿಎಲ್‌ಗಾಗಿ ವಿಶ್ವಕಪ್ ಮುಂದೂಡಿಕೆ ಬಯಸುವುದಿಲ್ಲ: ಅರುಣ್ ಸಿಂಗ್ ಧುಮಾಲ್‌

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಆ‌ಸ್ಟ್ರೇಲಿಯಾದಲ್ಲಿ ನಡೆಯಬೇಕಾಗಿರುವ ಟ್ವೆಂಟಿ–20 ವಿಶ್ವಕಪ್ ಟೂರ್ನಿಯನ್ನು ಐಪಿಎಲ್‌ಗಾಗಿ ಮುಂದೂಡುವಂತೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಯತ್ನಿಸುವುದಿಲ್ಲ. ಆದರೆ ವಿಶ್ವಕಪ್ ಮುಂದೂಡುವ ಪ್ರಸಂಗ ಎದುರಾದರೆ ಅಕ್ಟೋಬರ್–ನವೆಂಬರ್‌ನಲ್ಲಿ ಐಪಿಎಲ್ ನಡೆಸಲು ಮುಂದಾಗಲಿದೆ.

ಬಿಸಿಸಿಐ ಖಜಾಂಚಿ ಅರುಣ್ ಸಿಂಗ್ ಧುಮಾಲ್ ಸುದ್ದಿಸಂಸ್ಥೆಗೆ ಈ ವಿಷಯ ತಿಳಿಸಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾದ ಮಾಧ್ಯಮಗಳಲ್ಲಿ ಪ್ರಕಟಗೊಂಡಿರುವ ವರದಿಗಳಿಗೆ ತಿರುಗೇಟು ನೀಡಿದ್ದಾರೆ. ವಿಶ್ವಕಪ್ ಮುಂದೂಡುವಂತೆ ಮಾಡಲು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಮೇಲೆ ಪ್ರಭಾವಿ ಬಿಸಿಸಿಐ ಒತ್ತಡ ಹೇರುವ ಸಾಧ್ಯತೆ ಇದೆ ಎಂದು ಅಲ್ಲಿನ ಮಾಧ್ಯಮಗಳು ಅಭಿಪ್ರಾಯಪಟ್ಟಿದ್ದವು. 

‘ಮಿಲಿಯನ್ ಡಾಲರ್ ಬೇಬಿ’ ಎಂದೇ ಕರೆಯಲಾಗುವ ಐಪಿಎಲ್‌ ಟೂರ್ನಿಯನ್ನು ಕೊರೊನಾ ಹಾವಳಿಯಿಂದಾಗಿ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಅಕ್ಟೋಬರ್ 18ರಂದು ಆರಂಭಗೊಳ್ಳಬೇಕಾಗಿರುವ ವಿಶ್ವಕಪ್ ಬಗ್ಗೆ ಇನ್ನೂ ಅನಿಶ್ಚಿತ ಸ್ಥಿತಿ ಮುಂದುವರಿದಿದೆ. ಮುಂದಿನ ವಾರ ನಡೆಯಲಿರುವ ಐಸಿಸಿ ಸಭೆಯಲ್ಲಿ ವಿಶ್ವಕಪ್ ಕುರಿತು ಚರ್ಚೆ ನಡೆಯಲಿದ್ದು ಈ ಸಂದರ್ಭದಲ್ಲಿ ಟೂರ್ನಿ ಮುಂದೂಡುವುದಕ್ಕಾಗಿ ಒತ್ತಡ ಹೇರುವುದಿಲ್ಲ ಎಂದು ಧುಮಾಲ್ ಹೇಳಿದ್ದಾರೆ.

‘ಟೂರ್ನಿ ಮುಂದೂಡುವಂತೆ ಐಸಿಸಿಯನ್ನು ಒತ್ತಾಯಿಸುವ ಅಗತ್ಯವೇನಿದೆ. ಸಭೆಯ ನಿರ್ಧಾರ ಏನು ಎಂದು ನೋಡಿಕೊಂಡು ಮುಂದಿನ ಕಾರ್ಯಕ್ರಮಗಳನ್ನು ಯೋಜಿಸಲಾಗುವುದು. ಟೂರ್ನಿ ನಡೆಸಲು ಸಾಧ್ಯ ಎಂದು ಆಸ್ಟ್ರೇಲಿಯಾ ಸರ್ಕಾರಕ್ಕೆ ಅನಿಸಿದರೆ ಮುಂದುವರಿಯಲಿ. ನಾವಾಗಿ ಯಾವುದೇ ರೀತಿಯ ಶಿಫಾರಸು ಮಾಡುವುದಿಲ್ಲ’ ಎಂದು ಧುಮಾಲ್ ವಿವರಿಸಿದರು.

ಆಸ್ಟ್ರೇಲಿಯಾದಲ್ಲಿ ಕೊರೊನಾ ವೈರಸ್ ನಿಧಾನಗತಿಯಲ್ಲಿ ಹಬ್ಬುತ್ತಿದೆ. ಪ್ರಯಾಣದ ನಿರ್ಬಂಧಗಳನ್ನು ಸಡಿಲಿಸಲಾಗುತ್ತಿದೆ. ಆದರೂ 16 ತಂಡಗಳು ಪಾಲ್ಗೊಳ್ಳುವ ವಿಶ್ವಕಪ್ ಟೂರ್ನಿ ಆಯೋಜಿಸುವುದು ದೊಡ್ಡ ಸವಾಲು. ಟೂರ್ನಿ ನಡೆದರೂ ಪ್ರೇಕ್ಷಕರಿಗೆ ಅವಕಾಶ ಇರುವುದಿಲ್ಲ. ಆದ್ದರಿಂದ ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದು ಕುತೂಹಲದ ಪ್ರಶ್ನೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು