ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

2023 ಮರೆಯುವ ಮುನ್ನ: ಕ್ರಿಕೆಟ್‌ ಅಂಗಳದ ಸಿಹಿ–ಕಹಿ

Published 24 ಡಿಸೆಂಬರ್ 2023, 22:19 IST
Last Updated 24 ಡಿಸೆಂಬರ್ 2023, 22:19 IST
ಅಕ್ಷರ ಗಾತ್ರ

2023ರ ಆರಂಭವು ಏಕದಿನ ಕ್ರಿಕೆಟ್ ವಿಶ್ವಕಪ್ ಆಯೋಜನೆ ಮತ್ತು ಆತಿಥೇಯ ಭಾರತ ತಂಡದ ಪೂರ್ವಸಿದ್ಧತೆಗಳ ಕುರಿತ ಮಾತುಕತೆಗಳೊಂದಿಗೆ ಆಗಿತ್ತು. ನವೆಂಬರ್ 19ರವರೆಗೂ ಭಾರತದ ರೋಹಿತ್ ಶರ್ಮಾ ಬಳಗವು ಪ್ರಶಸ್ತಿ ಗೆಲುವಿನ ನೆಚ್ಚಿನ ತಂಡವೂ ಆಗಿತ್ತು. ಆದರೆ, ಕಿರೀಟ ಆಸ್ಟ್ರೇಲಿಯಾ ತಂಡದ ಮುಡಿಗೇರಿತು. ಭಾರತದ ಕೋಟ್ಯಂತರ ಕ್ರಿಕೆಟ್‌ ಅಭಿಮಾನಿಗಳ ಕನಸು ಅಹಮದಾಬಾದಿನ ಮೊಟೇರಾದಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನುಚ್ಚುನೂರಾಯಿತು.

ಅಕ್ಟೋಬರ್‌ 5ರಂದು ಆರಂಭವಾದ ಟೂರ್ನಿಯಲ್ಲಿ ಲೀಗ್ ಹಂತದ ಎಂಟು, ಕ್ವಾರ್ಟರ್‌ಫೈನಲ್ ಮತ್ತು ಸೆಮಿಫೈನಲ್ ಸೇರಿದಂತೆ ಎಲ್ಲ ಹತ್ತು ಪಂದ್ಯಗಳನ್ನೂ ರೋಹಿತ್ ಬಳಗ ಜಯಿಸಿತ್ತು. ಆದರೆ, ಫೈನಲ್‌ನಲ್ಲಿ ಎಡವಿತು. ಇದರೊಂದಿಗೆ ಕಳೆದ ಹತ್ತು ವರ್ಷಗಳಿಂದ ಭಾರತ ತಂಡವು ಅನುಭವಿಸುತ್ತಿರುವ ಐಸಿಸಿ ಟ್ರೋಫಿಗಳ ಬರ ಮುಂದುವರಿಯಿತು. ಈ ಸೋಲು ತಂದ ಆಘಾತ ಮತ್ತು ನಿರಾಶೆಯ ನೀರವ ಮೌನದ ಆಚೆಯೂ ಕೆಲವು ಆಟಗಾರರ ಸಾಧನೆಗಳು ಮನಕ್ಕೆ ಮುದ ನೀಡಿದವು. ರೋಹಿತ್ ನಾಯಕತ್ವ, ರಾಹುಲ್ ದ್ರಾವಿಡ್ ಅವರು ಮುಖ್ಯ ಕೋಚ್ ಸ್ಥಾನವನ್ನು ಯಶಸ್ವಿಯಾಗಿ ನಿರ್ವಹಿಸಿದ ರೀತಿ, ಗಾಯದಿಂದ ಚೇತರಿಸಿಕೊಂಡ ಕೆಲವೇ ದಿನಗಳ ನಂತರ ಕೆ.ಎಲ್. ರಾಹುಲ್ ವಿಕೆಟ್‌ಕೀಪಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಮಿಂಚಿದ್ದು ಮೆಚ್ಚುಗೆಗೆ ಪಾತ್ರವಾದವು. 2019ರ ಚಾಂಪಿಯನ್ ಇಂಗ್ಲೆಂಡ್ ನಾಕೌಟ್ ಹಂತಕ್ಕೆ ಅರ್ಹತೆಯನ್ನೂ ಗಳಿಸಲಿಲ್ಲ.

ವಿರಾಟ್ ಶತಕಗಳ ಅರ್ಧಶತಕ: ಭಾರತ ತಂಡದ ‘ರನ್ ಯಂತ್ರ’ ವಿರಾಟ್ ಕೊಹ್ಲಿಗೆ ದಾಖಲೆಗಳ ವರ್ಷ ಇದು. ದಿಗ್ಗಜ ಸಚಿನ್ ತೆಂಡೂಲ್ಕರ್‌ ಅವರ ‘ಶತಕಗಳ ಶತಕ’ ದಾಖಲೆಯನ್ನು ಮೀರಿ ನಿಲ್ಲುವ ಭರವಸೆಯನ್ನು ವಿರಾಟ್ ಮತ್ತಷ್ಟು ಗಟ್ಟಿಗೊಳಿಸಿದರು.

ಅವರು ಏಕದಿನ ಕ್ರಿಕೆಟ್ ಮಾದರಿಯಲ್ಲಿ 50ನೇ ಶತಕ ಗಳಿಸುವ ಮೂಲಕ ವಿಶ್ವದಾಖಲೆ ಬರೆದರು. ಸಚಿನ್ (49) ದಾಖಲೆಯನ್ನು ಮೀರಿ ನಿಂತರು. ಮುಂಬೈನಲ್ಲಿ ನಡೆದ ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ  ನ್ಯೂಜಿಲೆಂಡ್ ಎದುರು ವಿರಾಟ್ ಆ ಶತಕ ಹೊಡೆದರು. ಇದಲ್ಲದೇ ಟೂರ್ನಿಯಲ್ಲಿ ಅವರು ಅತಿ ಹೆಚ್ಚು ರನ್ ಗಳಿಸಿದ (765) ಬ್ಯಾಟರ್ ಕೂಡ ಆದರು. ಅದರಲ್ಲಿ ಒಟ್ಟು ಮೂರು ಶತಕ, ಆರು ಅರ್ಧಶತಕಗಳು ಸೇರಿವೆ. 35 ವರ್ಷದ ವಿರಾಟ್ ಏಕದಿನ ಕ್ರಿಕೆಟ್‌ನಲ್ಲಿ 13 ಸಾವಿರ ರನ್‌ಗಳ ಗಡಿ ದಾಟಿದರು. ಅತಿ ವೇಗವಾಗಿ ಈ ಸಾಧನೆ ಮಾಡಿದ ಆಟಗಾರನಾದರು.

ಶಮಿ ಮ್ಯಾಜಿಕ್: ಈ ಟೂರ್ನಿಯಲ್ಲಿ ಅತ್ಯಂತ ಹೆಚ್ಚು ಗಮನ ಸೆಳೆದ ಬೌಲರ್ ಭಾರತದ ಮೊಹಮ್ಮದ್ ಶಮಿ. ಒಟ್ಟು ಏಳು ಪಂದ್ಯಗಳನ್ನು ಆಡಿದ ಅವರು 24 ವಿಕೆಟ್‌ಗಳನ್ನು ಗಳಿಸಿದರು. ಟೂರ್ನಿಯಲ್ಲಿ ಅವರು ಮೊದಲ ನಾಲ್ಕು ಪಂದ್ಯಗಳಲ್ಲಿ ಆಡಿರಲಿಲ್ಲ. ಹಾರ್ದಿಕ್ ಪಾಂಡ್ಯ ಗಾಯಗೊಂಡು ಹೊರಬಿದ್ದ ನಂತರ ಅವರಿಗೆ ಸ್ಥಾನ ಲಭಿಸಿತ್ತು. ಶಮಿ ಮೂರು ಬಾರಿ 5 ವಿಕೆಟ್ ಗೊಂಚಲು ಗಳಿಸಿದರು.

ಮ್ಯಾಕ್ಸ್‌ವೆಲ್ ದಾಖಲೆ: ಈ ಬಾರಿಯ ವಿಶ್ವಕಪ್‌ನಲ್ಲಿ ನೋಡುಗರ ಮನದಲ್ಲಿ ಅಚ್ಚಳಿಯದೇ ಉಳಿದಿದ್ದು ಆಸ್ಟ್ರೇಲಿಯಾದ ಗ್ಲೆನ್‌ ಮ್ಯಾಕ್ಸ್‌ವೆಲ್ ಅವರ ದ್ವಿಶತಕದ ಇನಿಂಗ್ಸ್‌.

ಅಫ್ಗಾನಿಸ್ತಾನದ ಎದುರಿನ ಲೀಗ್ ಪಂದ್ಯದಲ್ಲಿ ಸೋಲಿನ ದವಡೆಯಲ್ಲಿ ಸಿಲುಕಿದ್ದ ಆಸ್ಟ್ರೇಲಿಯಾ ತಂಡಕ್ಕೆ ಗೆಲುವಿನ ಕಾಣಿಕೆ ನೀಡಿದ್ದರು ಮ್ಯಾಕ್ಸ್‌ವೆಲ್. ಸ್ನಾಯುಸೆಳೆತ ಮತ್ತು ಬೆನ್ನುನೋವಿನಲ್ಲಿಯೂ ಪಾದಚಲನೆಯೇ ಇಲ್ಲದ ಬ್ಯಾಟಿಂಗ್ ಮೂಲಕ ದ್ವಿಶತಕ ಗಳಿಸಿದ್ದರು. ಈ ಟೂರ್ನಿಯಲ್ಲಿ ಅಫ್ಗಾನಿಸ್ತಾನ ತಂಡವು ಇಂಗ್ಲೆಂಡ್, ಪಾಕಿಸ್ತಾನ ಮತ್ತು ಶ್ರೀಲಂಕಾದಂತಹ ಅನುಭವಿ ತಂಡಗಳಿಗೆ ಸೋಲಿನ ರುಚಿ ತೋರಿಸಿತ್ತು. ಒಂದೊಮ್ಮೆ ಆಸ್ಟ್ರೇಲಿಯಾ ಎದುರು ಜಯಿಸಿದ್ದರೆ ಅಫ್ಗನ್ ತಂಡಕ್ಕೆ ಸೆಮಿಫೈನಲ್ ಹಾದಿ ಸುಗಮವಾಗಿರುತ್ತಿತ್ತು.

ಮ್ಯಾಥ್ಯೂಸ್ ಟೈಮ್ಡ್‌ ಔಟ್: ಕ್ರಿಕೆಟ್ ಇತಿಹಾಸದಲ್ಲಿ ಮೊಟ್ಟಮೊದಲ ಟೈಮ್ಡ್‌ ಔಟ್ ವಿಕೆಟ್ ದಾಖಲಾಗಿದ್ದು ಈ ವಿಶ್ವಕಪ್‌ನಲ್ಲಿ. ಬಾಂಗ್ಲಾದೇಶ ಎದುರಿನ ಪಂದ್ಯದಲ್ಲಿ ಶ್ರೀಲಂಕಾದ ಏಂಜೆಲೊ ಮ್ಯಾಥ್ಯೂಸ್ ಅವರು ಕ್ರೀಸ್‌ಗೆ ಬಂದು ಬ್ಯಾಟಿಂಗ್ ಆರಂಭಿಸಲು ವಿಳಂಬ ಮಾಡಿದರು. ಇದನ್ನು ಬಾಂಗ್ಲಾದ ಆಟಗಾರರು ಅಪೀಲ್ ಮಾಡಿದಾಗ ಅಂಪೈರ್‌ಗಳು ಔಟ್ ನೀಡಿದರು. ಈ ಪ್ರಕರಣ ಬಹಳಷ್ಟು ಚರ್ಚೆಗೆ ಗ್ರಾಸವಾಯಿತು.

***

ವಿಶ್ವಕಪ್ ಬಿಟ್ಟರೆ ಭಾರತವು ಏಷ್ಯಾ ಕಪ್ ಜಯಿಸಿದ್ದು ಈ ಬಾರಿಯ ಪ್ರಮುಖ ಸಾಧನೆ. ದೇಶದ ಯುವ ಕ್ರಿಕೆಟ್ ತಂಡವು ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿತು. ಆದರೆ ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿ ಮತ್ತೆ ಮುಗ್ಗರಿಸಿತು. ಐಪಿಎಲ್‌ನಲ್ಲಿ ಈಬಾರಿಯೂ  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ರಶಸ್ತಿ ಗೆಲ್ಲಲಿಲ್ಲ. ಮಹೇಂದ್ರಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್‌ ಚಾಂಪಿಯನ್ ಆಯಿತು.

2024ರ ಐಪಿಎಲ್‌ಗಾಗಿ ನಡೆದ ಆಟಗಾರರ ಮಿನಿ ಹರಾಜು ಪ್ರಕ್ರಿಯೆಯಲ್ಲಿ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ (₹24.75 ಕೋಟಿ) ಟೂರ್ನಿಯ ಇತಿಹಾಸದಲ್ಲಿಯೇ ಅತಿ ಹೆಚ್ಚು ಮೌಲ್ಯ ಪಡೆದ ದಾಖಲೆ ಬರೆದರು. ಪ್ಯಾಟ್ ಕಮಿನ್ಸ್‌ ₹ 20.50 ಕೋಟಿ ಗಳಿಸಿದರು. ಇದಕ್ಕೂ ಮುನ್ನ ನಡೆದ ಟ್ರೇಡ್‌ನಲ್ಲಿ ಗುಜರಾತ್ ಟೈಟನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್‌ಗೆ ಸೇರ್ಪಡೆಯಾದರು. ರೋಹಿತ್ ಶರ್ಮಾ ಅವರಿಗೆ ನಾಯಕತ್ವದಿಂದ ವಿಶ್ರಾಂತಿ ನೀಡಿದ ಮುಂಬೈ ತಂಡವು ಪಾಂಡ್ಯಗೆ ಪಟ್ಟ ಕಟ್ಟಿತು. ಗುಜರಾತ್ ತಂಡಕ್ಕೆ ಶುಭಮನ್ ಗಿಲ್ ನಾಯಕರಾಗಿದ್ದಾರೆ. ದೇಶಿ ಕ್ರಿಕೆಟ್‌ನಲ್ಲಿ ಕರ್ನಾಟಕ ತಂಡವು ರಣಜಿ, ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮತ್ತು ವಿಜಯ್ ಹಜಾರೆ ಟೂರ್ನಿಗಳಲ್ಲಿ ಪ್ರಶಸ್ತಿ ಗೆಲ್ಲಲಿಲ್ಲ.

ಖ್ಯಾತನಾಮರ ನಿವೃತ್ತಿ

ಇಂಗ್ಲೆಂಡ್ ತಂಡದ ವೇಗಿ ಸ್ಟುವರ್ಟ್ ಬ್ರಾಡ್, ದಕ್ಷಿಣ ಆಫ್ರಿಕಾದ ಹಾಶೀಂ ಆಮ್ಲಾ, ಡ್ವೇನ್ ಪ್ರಿಟೊರಿಯಸ್, ಆಸ್ಟ್ರೇಲಿಯಾದ ಆ್ಯರನ್ ಫಿಂಚ್, ಭಾರತದ ಮುರಳಿ ವಿಜಯ್, ಅಂಬಟಿ ರಾಯುಡು, ಮನೋಜ್ ತಿವಾರಿ ಅವರು  ಕ್ರಿಕೆಟ್‌ಗೆ ವಿದಾಯ ಹೇಳಿದರು.

ವನಿತೆಯರ ಚಾರಿತ್ರಿಕ ಸಾಧನೆ

ಮಹಿಳೆಯರ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ತಂಡವು ಐತಿಹಾಸಿಕ ಸಾಧನೆ ಮಾಡಿತು. ತವರಿನಲ್ಲಿ ನಡೆದ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಎದುರಿನ ಟೆಸ್ಟ್‌ಗಳಲ್ಲಿ ಜಯಿಸಿತು. ಇಂಗ್ಲೆಂಡ್ ಎದುರು ಅತ್ಯಂತ ದೊಡ್ಡ ಅಂತರದ ಗೆಲುವಿನ ದಾಖಲೆ ಬರೆಯಿತು. ಆಸ್ಟ್ರೇಲಿಯಾ ಎದುರು ಚೊಚ್ಚಲ ಜಯ ಸಾಧಿಸಿತು. ಮಹಿಳಾ ತಂಡವು ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿತು.

ಅಗಲಿದ ಬಿಷನ್ ಸಿಂಗ್ ಬೇಡಿ

ವಿಶ್ವದ ಶ್ರೇಷ್ಠ ಸ್ಪಿನ್ನರ್‌ಗಳಲ್ಲಿ ಒಬ್ಬರಾದ ಬಿಷನ್ ಸಿಂಗ್ ಬೇಡಿ ನಿಧನರಾದರು. ಬೌಲರ್, ನಾಯಕ ಹಾಗೂ ಕೋಚ್ ಆಗಿ ಭಾರತದ ಕ್ರಿಕೆಟ್‌ಗೆ ಅವರು ನೀಡಿದ್ದ ಕಾಣಿಕೆಗಳು ಅವಿಸ್ಮರಣೀಯವಾದವು. ತಮ್ಮ ನೇರ, ನಿಷ್ಠುರ ನುಡಿಗಳಿಂದ ಬಿಸಿಸಿಐಗೆ ಚಾಟಿ ಬೀಸುತ್ತಿದ್ದ ಅವರು ಕ್ರಿಕೆಟ್ ಮತ್ತು ಕ್ರಿಕೆಟಿಗರ ಹಿತಕ್ಕಾಗಿ ಸದಾ ಹೋರಾಡಿದ್ದರು. ಭಾರತ ತಂಡವನ್ನು ಪ್ರತಿನಿಧಿಸಿದ್ದ ಸಲೀಂ ದುರಾನಿ ಕೂಡ ಇದೇ ವರ್ಷ ಅಗಲಿದರು.

ಜಿಂಬಾಬ್ವೆಯ ಆಲ್‌ರೌಂಡರ್ ಹೀತ್ ಸ್ಟ್ರೀಕ್ (49 ವರ್ಷ) ಮತ್ತು ಪಾಕಿಸ್ತಾನ ಇಜಾಜ್ ಭಟ್ ಕೂಡ ನಿಧನರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT