ಮಂಗಳವಾರ, ನವೆಂಬರ್ 24, 2020
19 °C
ಮುಂಬೈ ವಿರುದ್ಧ ಗೆದ್ದ ರಾಜಸ್ಥಾನ ರಾಯಲ್ಸ್; ಸಂಜು ಸ್ಯಾಮ್ಸನ್‌, ಹಾರ್ದಿಕ್ ಪಾಂಡ್ಯಗೆ ಅರ್ಧಶತಕ

ಸ್ಟೋಕ್ಸ್‌ ಶತಕ ತಂದೆಗೆ ಸಮರ್ಪಣೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ದುಬೈ: ಕ್ಯಾನ್ಸರ್ ಜೊತೆ ಹೋರಾಡುತ್ತಿರುವ ತಂದೆಗೆ ಶತಕವನ್ನು ಸಮರ್ಪಿಸಿರುವ ರಾಜಸ್ಥಾನ ರಾಯಲ್ಸ್ ತಂಡದ ಬೆನ್ ಸ್ಟೋಕ್ಸ್‌ ತಂದೆಯ ಕಾಯಿಲೆ ವಾಸಿಯಾಗಲು ಪ್ರಾರ್ಥಿಸುತ್ತಿರುವ ಕುಟುಂಬದವರಿಗೆ ತಮ್ಮ ಅಮೋಘ ಇನಿಂಗ್ಸ್ ಸ್ವಲ್ಪ ಮಟ್ಟಿಗೆ ಸಾಂತ್ವನ ತಂದಿರುವ ಸಾಧ್ಯತೆ ಇದೆ ಎಂದು ನುಡಿದಿದ್ದಾರೆ.

ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಸ್ಟೋಕ್ಸ್ (ಔಟಾಗದೆ 107; 60 ಎಸೆತ, 14 ಬೌಂಡರಿ, 3 ಸಿಕ್ಸರ್) ಅವರ ಅಮೋಘ ಆಟದ ಬಲದಿಂದ ರಾಜಸ್ಥಾನ ರಾಯಲ್ಸ್ ತಂಡ ಮುಂಬೈ ಇಂಡಿಯನ್ಸ್ ಎದುರು ಎಂಟು ವಿಕೆಟ್‌ಗಳ ಜಯ ಸಾಧಿಸಿತ್ತು. ಈ ಮೂಲಕ ಪ್ಲೇ ಆಫ್ ಕನಸನ್ನು ಜೀವಂತವಾಗಿ ಉಳಿಸಿಕೊಂಡಿತ್ತು. ಐಪಿಎಲ್‌ನಲ್ಲಿ ವೈಯಕ್ತಿಕ ಎರಡನೇ ಶತಕ ಸಿಡಿಸಿದ (2017ರಲ್ಲಿ ಅಜೇಯ 103) ಸ್ಟೋಕ್ಸ್ ಸಂಭ್ರಮದ ಜೊತೆ ತಂದೆಯನ್ನು ಸ್ಮರಿಸಿಕೊಂಡಿದ್ದರು. 

ನ್ಯೂಜಿಲೆಂಡ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ತಂದೆ ಜೇಡ್ ಸ್ಟೋಕ್ಸ್‌ ಜೊತೆ ಇದ್ದ ಬೆನ್‌ ಸ್ಟೋಕ್ಸ್ ತಡವಾಗಿ ಬಂದು ತಂಡವನ್ನು ಸೇರಿಕೊಂಡಿದ್ದರು. ಹೀಗಾಗಿ ಮೊದಲ ಆರು ಪಂದ್ಯಗಳಲ್ಲಿ ಅಡಲು ಸಾಧ್ಯವಾಗಲಿಲ್ಲ. ನ್ಯೂಜಿಲೆಂಡ್‌ನಲ್ಲಿ ಜನಿಸಿದ ಬೆನ್‌ ಸ್ಟೋಕ್ಸ್ ಆಗಸ್ಟ್‌ನಲ್ಲಿ ಪಾಕಿಸ್ತಾನ ಎದುರು ನಡೆದಿದ್ದ ಟೆಸ್ಟ್ ಸರಣಿಯಲ್ಲೂ ಆಡಿರಲಿಲ್ಲ. 

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಮುಂಬೈ ಏಳು ರನ್ ಗಳಿಸುವಷ್ಟರಲ್ಲಿ ಕ್ವಿಂಟನ್ ಡಿಕಾಕ್ ವಿಕೆಟ್ ಕಳೆದುಕೊಂಡಿತ್ತು. ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್ ಎರಡನೇ ವಿಕೆಟ್‌ಗೆ 83 ರನ್ ಸೇರಿಸಿದರು. ಇಶಾನ್ ಕಿಶನ್ ಔಟಾದ ನಂತರ ಬಂದ ಸೌರಭ್ ತಿವಾರಿ ಕೂಡ ಉತ್ತಮ ಬ್ಯಾಟಿಂಗ್ ಮಾಡಿದರು. ಆದರೆ ಓವರ್‌ಗಳು ಸಾಗುತ್ತಲೇ ಇದ್ದವು. ಹೀಗಾಗಿ ಸವಾಲಿನ ಮೊತ್ತ ಪೇರಿಸಲು ತಂಡಕ್ಕೆ ಸಾಧ್ಯವಾಗುವುದೋ ಇಲ್ಲವೋ ಎಂಬ ಆತಂಕ ಕಾಡಿತ್ತು. ಆದರೆ ಕೊನೆಯ ಓವರ್‌ಗಳಲ್ಲಿ ಹಾರ್ದಿಕ್ ಪಾಂಡ್ಯ ಭರ್ಜರಿ ಬ್ಯಾಟಿಂಗ್ ಮಾಡಿದರು. 21 ಎಸೆತಗಳಲ್ಲಿ ಏಳು ಸಿಕ್ಸರ್‌ ಮತ್ತು ಎರಡು ಬೌಂಡರಿಗಳೊಂದಿಗೆ ಅವರು 60 ರನ್ ಕಲೆ ಹಾಕಿದರು. ಹೀಗಾಗಿ ತಂಡದ ಖಾತೆಯಲ್ಲಿ 195 ರನ್‌ಗಳು ಸೇರಿದವು.

152 ರನ್‌ಗಳ ಜೊತೆಯಾಟ

ಗುರಿ ಬೆನ್ನತ್ತಿದ ರಾಜಸ್ಥಾನ ರಾಯಲ್ಸ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ ಮತ್ತು ಮೂರನೇ ಕ್ರಮಾಂಕದ ಸ್ಟೀವನ್ ಸ್ಮಿತ್ ಬೇಗನೇ ಔಟಾದರು. ಈ ಸಂದರ್ಭದಲ್ಲಿ ಜೊತೆಗೂಡಿದ ಬೆನ್ ಸ್ಟೋಕ್ಸ್ ಮತ್ತು ಸಂಜು ಸ್ಯಾಮ್ಸನ್ (54; 31 ಎ, 4 ಬೌಂ, 3 ಸಿ) ಮೂರನೇ ವಿಕೆಟ್‌ಗೆ 152 ರನ್‌ಗಳನ್ನು ಸೇರಿಸಿ ಮುಂಬೈಗೆ ನಿರಾಸೆ ಮೂಡಿಸಿದರು.

ಬ್ಲ್ಯಾಕ್‌ ಲೈವ್ಸ್‌ ಮ್ಯಾಟರ್‌ಗೆ ಹಾರ್ದಿಕ್ ಬೆಂಬಲ

ಪಂದ್ಯದಲ್ಲಿ ಅಮೋಘ ಅರ್ಧಶತಕ ಗಳಿಸಿದ ಹಾರ್ದಿಕ್ ಪಾಂಡ್ಯ ಕಪ್ಪು ಜನಾಂಗದವರ ಮೇಲಿನ ದೌರ್ಜನ್ಯ ಪ್ರತಿಭಟಿಸಿ ನಡೆಯುತ್ತಿರುವ ಬ್ಲ್ಯಾಕ್‌ ಲೈವ್ಸ್‌ ಮ್ಯಾಟರ್ ಅಭಿಯಾನಕ್ಕೆ ಬೆಂಬಲ ಸೂಚಿಸಿದರು. ಸಂಭ್ರಮದಲ್ಲಿದ್ದ ಅವರು ಮೊಣಕಾಲೂರಿ ಬಲಗೈಯನ್ನು ಮೇಲೆತ್ತಿದರು. ಇದು, ಬ್ಲ್ಯಾಕ್‌ ಲೈವ್ಸ್‌ ಮ್ಯಾಟರ್ ಅಭಿಯಾನದ ಸಂಕೇತವಾಗಿದೆ. ಪಂದ್ಯದ ನಂತರ ಈ ಚಿತ್ರವನ್ನು ಹಾಕಿ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದರ ಬಗ್ಗೆ ಟ್ವೀಟ್ ಮಾಡಿದ್ದಾರೆ. ಅಭಿಯಾನಕ್ಕೆ ಐಪಿಎಲ್‌ನಲ್ಲಿ ಅವಕಾಶ ಇಲ್ಲದೇ ಇರುವುದು ಬೇಸರದ ವಿಷಯ ಎಂದು ಸನ್‌ರೈಸರ್ಸ್ ಹೈದರಾಬಾದ್‌ ತಂಡದ ಜೇಸನ್ ಹೋಲ್ಡರ್ ಕಳೆದ ವಾರ ಹೇಳಿದ್ದರು.

ಸಂಕ್ಷಿಪ್ತ ಸ್ಕೋರು: ಮುಂಬೈ ಇಂಡಿಯನ್ಸ್: 20 ಓವರ್‌ಗಳಲ್ಲಿ 5ಕ್ಕೆ 195 (ಇಶಾನ್ ಕಿಶನ್ 37; ಸೂರ್ಯಕುಮಾರ್ ಯಾದವ್ 40, ಸೌರಭ್ ತಿವಾರಿ 34, ಹಾರ್ದಿಕ್ ಪಾಂಡ್ಯ ಔಟಾಗದೆ 60; ಜೊಫ್ರಾ ಆರ್ಚರ್ 31ಕ್ಕೆ2, ಕಾರ್ತಿಕ್ ತ್ಯಾಗಿ 45ಕ್ಕೆ1, ಶ್ರೇಯಸ್ ಗೋಪಾಲ್ 30ಕ್ಕೆ2); ರಾಜಸ್ಥಾನ ರಾಯಲ್ಸ್‌: 18.2 ಓವರ್‌ಗಳಲ್ಲಿ 2ಕ್ಕೆ 196 (ರಾಬಿನ್ ಉತ್ತಪ್ಪ 13, ಬೆನ್ ಸ್ಟೋಕ್ಸ್ ಔಟಾಗದೆ 107, ಸ್ಟೀವನ್ ಸ್ಮಿತ್ 11, ಸಂಜು ಸ್ಯಾಮ್ಸನ್ 54; ಜೇಮ್ಸ್ ಪ್ಯಾಟಿನ್ಸನ್ 40ಕ್ಕೆ2). ಫಲಿತಾಂಶ: ರಾಜಸ್ಥಾನ ರಾಯಲ್ಸ್‌ಗೆ 8 ವಿಕೆಟ್‌ಗಳ ಜಯ; ಪಂದ್ಯಶ್ರೇಷ್ಠ: ಬೆನ್ ಸ್ಟೋಕ್ಸ್.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು