ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಸ್ಟ್‌ ಆಲ್‌ರೌಂಡರ್‌ಗಳ ಕ್ರಮಾಂಕಪಟ್ಟಿ: ಅಗ್ರಸ್ಥಾನಕ್ಕೆ ಬೆನ್‌ ಸ್ಟೋಕ್ಸ್‌

ವೆಸ್ಟ್‌ ಇಂಡೀಸ್‌ನ ಜೇಸನ್‌ ಹೋಲ್ಡರ್‌ ಎರಡನೇ ಸ್ಥಾನಕ್ಕೆ
Last Updated 21 ಜುಲೈ 2020, 12:20 IST
ಅಕ್ಷರ ಗಾತ್ರ

ದುಬೈ : ವೆಸ್ಟ್‌ ಇಂಡೀಸ್‌ ವಿರುದ್ಧ ಎರಡನೇ ಟೆಸ್ಟ್‌ನಲ್ಲಿ ಪಂದ್ಯ ಗೆಲ್ಲಿಸುವಂಥ ಆಟವಾಡಿದ ಇಂಗ್ಲೆಂಡ್‌ ಉಪ ನಾಯಕ ಬೆನ್‌ ಸ್ಟೋಕ್ಸ್‌, ಟೆಸ್ಟ್‌ ಆಲ್‌ರೌಂಡರ್‌ಗಳ ಕ್ರಮಾಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಇದುವರೆಗೆ ಅಗ್ರಪಟ್ಟದಲ್ಲಿದ್ದ ವೆಸ್ಟ್‌ ಇಂಡೀಸ್‌ ನಾಯಕ ಜೇಸನ್‌ ಹೋಲ್ಡರ್‌ ಎರಡನೇ ಸ್ಥಾನಕ್ಕಿಳಿದಿದ್ದಾರೆ ಎಂದು ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕೌನ್ಸಿಲ್‌ ಮಂಗಳವಾರ ತಿಳಿಸಿದೆ.

ಸೋಮವಾರ ಮುಕ್ತಾಯಗೊಂಡ ಎರಡನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 176 ರನ್‌ಗಳ ಭರ್ಜರಿ ಶತಕ ಸಿಡಿಸಿದ್ದ ಸ್ಟೋಕ್ಸ್‌ ಎರಡನೇ ಇನಿಂಗ್ಸ್‌ನಲ್ಲಿ ಔಟಾಗದೇ 78 ರನ್‌ ಗಳಿಸಿದ್ದರು. ಪಂದ್ಯದಲ್ಲಿ ಮೂರು ವಿಕೆಟ್‌ ಕೂಡ ಸಂಪಾದಿಸಿದ್ದ ಅವರಿಗೆ ಅರ್ಹವಾಗಿ ಪಂದ್ಯದ ಪುರುಷೋತ್ತಮ ಗೌರವ ಪ್ರಾಪ್ತಿಯಾಗಿತ್ತು. ಇನ್ನೊಂದು ಟೆಸ್ಟ್‌ ಉಳಿದಿರುವಂತೆ ಸರಣಿ 1–1ರಲ್ಲಿ ಸಮನಾಗಿತ್ತು.

ಹೋಲ್ಡರ್‌ 18 ತಿಂಗಳ ಕಾಲ ಅಗ್ರಪಟ್ಟ ಅಲಂಕರಿಸಿದ್ದರು.

ಅಜಾನುಬಾಹು ಆ್ಯಂಡ್ರೂ ಫ್ಲಿಂಟಾಫ್‌ ಅವರ ನಂತರ ಅಗ್ರಸ್ಥಾನಕ್ಕೇರಿದ ಮೊದಲ ಇಂಗ್ಲೆಂಡ್‌ ಆಟಗಾರ ಎಂಬ ಹಿರಿಮೆಯೂ 29 ವರ್ಷದ ಸ್ಟೋಕ್ಸ್‌ ಅವರದಾಯಿತು. ಫ್ಲಿಂಟಾಫ್‌ 2006ರ ಮೇ ತಿಂಗಳಲ್ಲಿ ಅಗ್ರಮಾನ್ಯ ಟೆಸ್ಟ್‌ ಆಲ್‌ರೌಂಡರ್‌ ಎನಿಸಿದ್ದರು.

ಅವರ 497 ಪಾಯಿಂಟ್‌ಗಳ ಸರಾಸರಿ ರೇಟಿಂಗ್‌, 2008ರ ನಂತರ ಟೆಸ್ಟ್ ಆಲ್‌ರೌಂಡರ್‌ ಒಬ್ಬರು ಗಳಿಸಿದ ಅತ್ಯಧಿಕ ರೇಟಿಂಗ್‌ ಎನಿಸಿದೆ. ದಕ್ಷಿಣ ಆಫ್ರಿಕದ ಶ್ರೇಷ್ಠ ಆಲ್‌ರೌಂಡರ್‌ ಎನಿಸಿರುವ ಜಾಕ್ವೆಸ್‌ ಕಾಲಿಸ್‌,2008ರ ಏಪ್ರಿಲ್‌ನಲ್ಲಿ 517 ಪಾಯಿಂಟ್ಸ್‌ ಹೊಂದಿದ್ದರು.

ಟೆಸ್ಟ್‌ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲೂ ಸ್ಟೋಕ್ಸ್‌ ಮೂರನೇ ಸ್ಥಾನಕ್ಕೇರಿದ್ದಾರೆ, ಭಾರತದ ವಿರಾಟ್‌ ಕೊಹ್ಲಿ ಮತ್ತು ಅಗ್ರಸ್ಥಾನದಲ್ಲಿರುವ ಆಸ್ಟ್ರೇಲಿಯಾದ ಸ್ಟೀವ್‌ ಸ್ಮಿತ್‌ ಮಾತ್ರ ಸ್ಟೋಕ್ಸ್‌ ಅವರಿಗಿಂತ ಮುಂದೆ ಇದ್ದಾರೆ.

ಶುಕ್ರವಾರ ಮ್ಯಾಂಚೆಸ್ಟರ್‌ನಲ್ಲಿ ಆರಂಭವಾಗುವ ಮೂರನೇ ಟೆಸ್ಟ್‌ಗೆ ಎರಡೇ ದಿನ ಉಳಿದಿರುವಂತೆ, ತಾವು ಗಾಯಾಳಾಗಿಲ್ಲ ಎಂದು ಸ್ಟೋಕ್ಸ್‌ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ. ಸೋಮವಾರ ಪಂದ್ಯದ ಕೊನೆಯ ಹಂತದಲ್ಲಿ ಅವರು ಓವರ್‌ ಪೂರೈಸಿರಲಿಲ್ಲ. ಇದು ಇಂಥ ಭಾವನೆ ಮೂಡಿಸಿತ್ತು.

‘ದೇಹ ಸ್ವಲ್ಪ ಸೆಟೆದುಕೊಂಡಂತೆ ಅನಿಸಿತು. ಇದನ್ನು ಬ್ರಾಡಿ (ಸ್ಟುವರ್ಟ್‌ ಬ್ರಾಡ್‌) ಅವರಿಗೆ ತಿಳಿಸಿದಾಗ ‘ತಕ್ಷಣಕ್ಕೆ ನಿಲ್ಲಿಸು ಎಂದಿದ್ದಾಗಿ’ ಸ್ಟೋಕ್ಸ್‌ ಹೇಳಿದ್ದಾರೆ.

‘ಪಾಕಿಸ್ತಾನ ವಿರುದ್ಧ 3–4 ವರ್ಷಗಳ ಹಿಂದೆ ಆಡುವಾಗ ಒಮ್ಮೆ ಹೀಗೇ ಆಗಿತ್ತು. ಅಂಥ ವೇಳೆ ನಾನು ರಿಸ್ಕ್‌ ತೆಗೆದುಕೊಳ್ಳಲು ಹೋಗುವುದಿಲ್ಲ. ನಾನು ಸೂಕ್ತ ನಿರ್ಧಾರ ತೆಗೆದುಕೊಂಡೆ’ ಎಂದು ಸ್ಟೋಕ್ಸ್‌ ಬಿಬಿಸಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT