ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತಡ ಮುಕ್ತನಾಗಲು ಸಿಗರೇಟ್‌ ಸೇದಿದ್ದ ಸ್ಟೋಕ್ಸ್‌!

Last Updated 14 ಜುಲೈ 2020, 9:00 IST
ಅಕ್ಷರ ಗಾತ್ರ

ಕ್ರೈಸ್ಟ್‌ಚರ್ಚ್‌: ನ್ಯೂಜಿಲೆಂಡ್‌ ಎದುರಿನ ಏಕದಿನ ವಿಶ್ವಕಪ್‌ ಫೈನಲ್‌ ಪಂದ್ಯದ ‘ಸೂಪರ್‌ ಓವರ್‌’ಗೂ ಮುನ್ನ ಒತ್ತಡ ಮುಕ್ತನಾಗಲು ಇಂಗ್ಲೆಂಡ್ ಕ್ರಿಕೆಟ್‌‌ ತಂಡದ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಸಿಗರೇಟ್‌ ಸೇದಿದ್ದರಂತೆ!

ಇಂಗ್ಲೆಂಡ್‌ ತಂಡವು ಚೊಚ್ಚಲ ವಿಶ್ವಕಪ್‌ ಗೆದ್ದು ಮಂಗಳವಾರಕ್ಕೆ ಒಂದು ವರ್ಷ ಪೂರ್ಣಗೊಂಡಿದೆ. ಆಂಗ್ಲರ ನಾಡಿನ ತಂಡದ ಈ ಐತಿಹಾಸಿಕ ಸಾಧನೆಯ ನೆನಪಿಗಾಗಿ ಲೇಖಕರಾದ ನಿಕ್‌ ಹೌಲ್ಟ್‌ ಹಾಗೂ ಸ್ಟೀವ್‌ ಜೇಮ್ಸ್‌ ಅವರು ‘ಮಾರ್ಗನ್ಸ್‌ ಮೆನ್‌: ದಿ ಇನ್‌ಸೈಡ್‌ ಸ್ಟೋರಿ ಆಫ್‌ ಇಂಗ್ಲೆಂಡ್ಸ್‌ ರೈಸ್‌ ಫ್ರಂ ಕ್ರಿಕೆಟ್‌ ವರ್ಲ್ಡ್‌ ಕಪ್‌ ಹ್ಯುಮಿಲೇಷನ್‌ ಟು ಗ್ಲೋರಿ’ ಎಂಬ ಪುಸ್ತಕವನ್ನು ಹೊರತಂದಿದ್ದಾರೆ. ಇದರಲ್ಲಿ ಸ್ಟೋಕ್ಸ್‌ ಅವರ ‘ಸಿಗರೇಟ್‌ ಬ್ರೇಕ್‌’ ವಿಷಯವನ್ನು ಪ್ರಸ್ತಾಪಿಸಲಾಗಿದೆ. ಈ ಪುಸ್ತಕವು ಇದೇ ತಿಂಗಳ ಒಂಬತ್ತರಂದು ಬಿಡುಗಡೆಯಾಗಿತ್ತು.

‘ಕ್ರಿಕೆಟ್‌ ಕಾಶಿ’ ಲಾರ್ಡ್ಸ್‌ ಅಂಗಳದಲ್ಲಿ 2019ರ ಜುಲೈ 14ರಂದು ನಡೆದಿದ್ದ ಫೈನಲ್‌ ಪಂದ್ಯದಲ್ಲಿ ಸ್ಟೋಕ್ಸ್‌ ಅಮೋಘ ಆಟ ಆಡಿದ್ದರು. 242ರನ್‌ಗಳ ಗುರಿ ಬೆನ್ನಟ್ಟಿದ್ದ ಆತಿಥೇಯ ತಂಡವು 227ರನ್‌ಗಳಿಗೆ 8 ವಿಕೆಟ್‌ ಕಳೆದುಕೊಂಡು ಸೋಲಿನ ಭೀತಿ ಎದುರಿಸಿತ್ತು. ತವರಿನ ಅಂಗಳದಲ್ಲಿ ಏಕಾಂಗಿ ಹೋರಾಟ ನಡೆಸಿದ್ದ ಸ್ಟೋಕ್ಸ್‌ ಔಟಾಗದೆ 84ರನ್‌ ಗಳಿಸಿ ಪಂದ್ಯವು ಟೈ ಆಗುವಂತೆ ಮಾಡಿದ್ದರು. ಸೂಪರ್‌ ಓವರ್‌ನಲ್ಲೂ ಎಂಟು ರನ್‌ ಬಾರಿಸಿದ್ದ ಸ್ಟೋಕ್ಸ್‌ ‘ಪಂದ್ಯ ಶ್ರೇಷ್ಠ’ ಗೌರವಕ್ಕೂ ಪಾತ್ರರಾಗಿದ್ದರು. ‘ಸೂಪರ್‌ ಓವರ್‌’ ಕೂಡ ಟೈ ಆಗಿದ್ದರಿಂದ ‘ಬೌಂಡರಿ ಕೌಂಟ್‌’ ನಿಯಮದ ಅನ್ವಯ ಇಂಗ್ಲೆಂಡ್‌ ತಂಡವನ್ನು ಚಾಂಪಿಯನ್‌ ಎಂದು ಪ್ರಕಟಿಸಲಾಗಿತ್ತು.

‘ಪಂದ್ಯ ಟೈ ಆದ ಬಳಿಕ ಆಟಗಾರರೆಲ್ಲಾ ಒತ್ತಡಕ್ಕೆ ಒಳಗಾಗಿದ್ದರು. ಇಂಗ್ಲೆಂಡ್‌ ತಂಡದ ಡ್ರೆಸಿಂಗ್‌ ಕೊಠಡಿಯಲ್ಲಿದ್ದ ನಾಯಕ ಏಯೊನ್‌ ಮಾರ್ಗನ್‌, ಸಹ ಆಟಗಾರರಲ್ಲಿ ಸ್ಫೂರ್ತಿ ತುಂಬಲು ಪ್ರಯತ್ನಿಸುತ್ತಿದ್ದರು. 2 ಗಂಟೆ 27 ನಿಮಿಷಗಳ ಕಾಲ ಕ್ರೀಸ್‌ನಲ್ಲಿ ಇದ್ದು ಆಗ ತಾನೆ ಡ್ರೆಸಿಂಗ್‌ ಕೊಠಡಿ ಪ್ರವೇಶಿಸಿದ್ದ ಸ್ಟೋಕ್ಸ್‌ ಬೆವರಿನಲ್ಲಿ ತೋಯ್ದು ಹೋಗಿದ್ದರು. ಅವರು ಧರಿಸಿದ್ದ ಪೋಷಾಕು ಕೂಡ ಕೊಳಕಾಗಿತ್ತು. ಕೂಡಲೇ ಡ್ರೆಸಿಂಗ್‌ ಕೊಠಡಿಯ ಹಿಂದಿದ್ದ ಸ್ನಾನದ ಕೋಣೆ ಪ್ರವೇಶಿಸಿದ ಅವರು ಸಿಗರೇಟು ಸೇದಲು ಶುರುಮಾಡಿದ್ದರು. ಐದೇ ನಿಮಿಷದಲ್ಲಿ ಸ್ನಾನ ಮಾಡಿಕೊಂಡು ಹೊರಬಂದಿದ್ದರು’ ಎಂದು ಪುಸ್ತಕದಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT