ಮಂಗಳವಾರ, ಡಿಸೆಂಬರ್ 1, 2020
18 °C
ವಿರಾಟ್ ಕೊಹ್ಲಿ ಬಳಗವನ್ನು ಮಣಿಸಿದ ಶ್ರೇಯಸ್ ಪಡೆ; ಧವನ್, ರಹಾನೆಗೆ ಅರ್ಧಶತಕ

IPL 2020| ಪ್ಲೇ ಆಫ್‌ಗೆ ಬೆಂಗಳೂರು, ಡೆಲ್ಲಿ

ಪಿಟಿಐ Updated:

ಅಕ್ಷರ ಗಾತ್ರ : | |

ಅಬುಧಾಬಿ: ಅಜಿಂಕ್ಯ ರಹಾನೆ ಐಪಿಎಲ್‌ನ 13ನೇ ಆವೃತ್ತಿಯಲ್ಲಿ ಮೊದಲ ಅರ್ಧಶತಕ ಗಳಿಸಿದರು. ಉತ್ತಮ ಲಯದಲ್ಲಿರುವ ಶಿಖರ್ ಧವನ್ ಮತ್ತೊಮ್ಮೆ ಮಿಂಚಿದರು. ಇವರಿಬ್ಬರ ಅಮೋಘ ಬ್ಯಾಟಿಂಗ್ ಬಲದಿಂದ ಡೆಲ್ಲಿ ಕ್ಯಾಪಿಟಲ್ಸ್‌ ಆರು ವಿಕೆಟ್‌ಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಜಯ ಸಾಧಿಸಿತು. ಈ ಮೂಲಕ ಪ್ಲೇ ಆಫ್‌ಗೆ ಪ್ರವೇಶಿಸಿತು. ಸೋತರೂ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲೇ ಉಳಿದ ಬೆಂಗಳೂರು ಕೂಡ ಪ್ಲೇ ಆಫ್‌ಗೆ ಪ್ರವೇಶಿಸಿತು.  

ಸೋಮವಾರ ರಾತ್ರಿ 153 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಡೆಲ್ಲಿ 19 ರನ್ ಗಳಿಸುವಷ್ಟರಲ್ಲಿ ಪೃಥ್ವಿ ಶಾ ವಿಕೆಟ್ ಕಳೆದುಕೊಂಡಿತು. ನಂತರ ಶಿಖರ್ ಧವನ್ (54; 41 ಎಸೆತ, 6 ಬೌಂಡರಿ) ಮತ್ತು ಅಜಿಂಕ್ಯ ರಹಾನೆ (60; 46ಎ, 5 ಬೌಂ, 1 ಸಿಕ್ಸರ್‌) 88 ರನ್‌ಗಳ ಜೊತೆಯಾಟ ಆಡಿದರು. ಇದರಿಂದ, ತಂಡ ನಿರಾಯಾಸವಾಗಿ ಗೆಲುವು ಸಾಧಿಸಿತು.

ಟಾಸ್ ಗೆದ್ದ ಡೆಲ್ಲಿ ನಾಯಕ ಶ್ರೇಯಸ್ ಅಯ್ಯರ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ದೇವದತ್ತ ಪಡಿಕ್ಕಲ್ (50; 41 ಎ, 5 ಬೌಂ) ಅವರ ತಾಳ್ಮೆಯ ಬ್ಯಾಟಿಂಗ್‌ ಬಲದಿಂದ ಬೆಂಗಳೂರು 152 ರನ್ ಕಲೆ ಹಾಕಿತು. ಜೋಶ್ ಫಿಲಿಪ್ ಮತ್ತು ದೇವದತ್ತ ಪಡಿಕ್ಕಲ್ ಮೊದಲ ವಿಕೆಟ್‌ಗೆ 17 ಎಸೆತಗಳಲ್ಲಿ 25 ರನ್ ಸೇರಿಸಿದರು. ಕಗಿಸೊ ರಬಾಡ ಈ ಜೊತೆಯಾಟ ಮುರಿದರು. ರಬಾಡ ಅವರ ಲೆಂಗ್ತ್ ಬಾಲ್‌ನ ಗತಿ ಅರಿಯುವಲ್ಲಿ ಎಡವಿದ ಫಿಲಿಪ್, ಆಫ್‌ಸೈಡ್ ಮೂಲಕ ಬೌಂಡರಿ ಗಳಿಸಲು ಪ್ರಯತ್ನಿಸಿದರು. ಆದರೆ ಚೆಂಡು ಪೃಥ್ವಿ ಶಾ ಅವರ ಕೈಸೇರಿತು.

ಪಡಿಕ್ಕಲ್ ಅವರ ಜೊತೆಗೂಡಿದ ನಾಯಕ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್‌ಗೆ ಮುಂದಾದರು. ಇಬ್ಬರೂ ಎರಡನೇ ವಿಕೆಟ್‌ಗೆ 57 ರನ್ ಸೇರಿದರು. ಆದರೆ 13ನೇ ಓವರ್‌ನಲ್ಲಿ ಕೊಹ್ಲಿ ಅವರನ್ನು ರವಿಚಂದ್ರನ್ ಅಶ್ವಿನ್ ವಾಪಸ್ ಕಳುಹಿಸಿದರು. ನಿಧಾನಗತಿಯಲ್ಲಿ ಬಂದ ಚೆಂಡನ್ನು ಮುನ್ನುಗ್ಗಿ ಹೊಡೆಯಲು ಯತ್ನಿಸಿದ ಕೊಹ್ಲಿ ಅವರ ಲಯ ತಪ್ಪಿತು. ಮಿಡ್‌ವಿಕೆಟ್‌ನಲ್ಲಿ ಬೌಂಡರಿ ಗೆರೆ ಬಳಿ ಕಾಯುತ್ತಿದ್ದ ಸ್ಟೋಯಿನಿಸ್ ಕ್ಯಾಚ್ ಮಾಡಿದರು.

ಡಿವಿಲಿಯರ್ಸ್ ಕ್ರೀಸ್‌ಗೆ ಬಂದ ಕೂಡಲೇ ಬೀಸು ಹೊಡೆತಗಳಿಗೆ ಮುಂದಾದರು. ಇನ್ನೊಂದೆಡೆ ದೇವದತ್ತ ಅವರು ಅಮೋಘ ಬ್ಯಾಟಿಂಗ್ ಮುಂದುವರಿಸಿ ಅರ್ಧಶತಕ ಪೂರೈಸಿದರು. 16ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಪಡಿಕ್ಕಲ್ ಅವರನ್ನು ಬೌಲ್ಡ್ ಮಾಡಿದ ಆ್ಯನ್ರಿಕ್ ನಾರ್ಕಿಯ ಕೊನೆಯ ಎಸೆತದಲ್ಲಿ ಕ್ರಿಸ್ ಮೊರಿಸ್ ಅವರನ್ನೂ ವಾಪಸ್ ಕಳುಹಿಸಿದರು. ಡಿವಿಲಿಯರ್ಸ್ ಜೊತೆಗೂಡಿದ ಶಿವಂ ದುಬೆ ವೇಗವಾಗಿ ರನ್ ಕಲೆ ಹಾಕಲು ಮುಂದಾದರು. 18 ಎಸೆತಗಳಲ್ಲಿ ಇವರಿಬ್ಬರು 32 ರನ್ ಸೇರಿಸಿದರು. ಆದರೆ ಒಂದು ರನ್ ಅಂತರದಲ್ಲಿ ಇಬ್ಬರೂ ಔಟಾದರು. ಇಸುರು ಉಡಾನ ಕೂಡ ಬೇಗನೇ ಮರಳಿದರು. 

ಸ್ಕೋರ್ ವಿವರ

ರಾಯಲ್ ಚಾಲೆಂಜರ್ಸ್ ಬೆಂಗಳೂರು 7ಕ್ಕೆ 152 (20 ಓವರ್‌ಗಳಲ್ಲಿ)

ಜೋಶ್ ಫಿಲಿಪ್ ಸಿ ಪೃಥ್ವಿ ಶಾ ಬಿ ಕಗಿಸೊ ರಬಾಡ 12

ದೇವದತ್ತ ಪಡಿಕ್ಕಲ್ ಬಿ ಆ್ಯನ್ರಿಕ್ ನಾರ್ಕಿಯ 50

ವಿರಾಟ್ ಕೊಹ್ಲಿ ಸಿ ಮಾರ್ಕಸ್ ಸ್ಟೊಯಿನಿಸ್ ಬಿ ರವಿಚಂದ್ರನ್ ಅಶ್ವಿನ್ 29

ಎಬಿ ಡಿವಿಲಿಯರ್ಸ್ ರನ್‌ ಔಟ್ (ಅಜಿಂಕ್ಯ ರಹಾನೆ/ರಿಷಭ್ ಪಂತ್) 35

ಕ್ರಿಸ್ ಮೊರಿಸ್ ಸಿ ರಿಷಭ್ ಪಂತ್ ಬಿ ಆ್ಯನ್ರಿಕ್ ನಾರ್ಕಿಯ 00

ಶಿವಂ ದುಬೆ ಸಿ ಅಜಿಂಕ್ಯ ರಹಾನೆ ಬಿ ಕಗಿಸೊ ರಬಾಡ 17

ವಾಷಿಂಗ್ಟನ್ ಸುಂದರ್ ಔಟಾಗದೆ 00

ಇಸುರು ಉಡಾನ ಸಿ ಶ್ರೇಯಸ್ ಅಯ್ಯರ್ ಬಿ ಆ್ಯನ್ರಿಕ್ ನಾರ್ಕಿಯ 04

ಶಹಬಾಜ್ ಅಹಮ್ಮದ್ ಔಟಾಗದೆ 01

ಇತರೆ (ಬೈ 1, ವೈಡ್ 3) 04

ವಿಕೆಟ್ ಪತನ

1-25 (ಜೋಶ್ ಫಿಲಿಪ್, 4.1), 2-82 (ವಿರಾಟ್ ಕೊಹ್ಲಿ, 12.3), 3-112 (ದೇವದತ್ತ ಪಡಿಕ್ಕಲ್, 15.4), 4-112 (ಕ್ರಿಸ್ ಮೊರಿಸ್, 15.6), 5-145 (ಶಿವಂ ದುಬೆ, 18.6), 6-146 (ಎಬಿ ಡಿವಿಲಿಯರ್ಸ್‌, 19.2), 7-150 (ಇಸುರು ಉಡಾನ, 19.4).

ಬೌಲಿಂಗ್

ಡ್ಯಾನಿಯಲ್ ಸ್ಯಾಮ್ಸ್ 4–0–40–0, ರವಿಚಂದ್ರನ್ ಅಶ್ವಿನ್ 4–0–18–1, ಆ್ಯನ್ರಿಕ್ ನಾರ್ಕಿಯ 4–0–33–3, ಕಗಿಸೊ ರಬಾಡ 4–0–30–2, ಅಕ್ಷರ್ ಪಟೇಲ್ 4–0–30–0. 

 

ಡೆಲ್ಲಿ ಕ್ಯಾಪಿಟಲ್ಸ್  4ಕ್ಕೆ 154 (19 ಓವರ್‌ಗಳಲ್ಲಿ)

ಪೃಥ್ವಿ ಶಾ ಬಿ ಮೊಹಮ್ಮದ್ ಸಿರಾಜ್ 09

ಶಿಖರ್ ಧವನ್ ಸಿ ಶಿವಂ ದುಬೆ ಬಿ ಶಹಬಾಜ್ ಅಹಮ್ಮದ್ 54

ಅಜಿಂಕ್ಯ ರಹಾನೆ ಸಿ ಶಿವಂ ದುಬೆ ಬಿ ವಾಷಿಂಗ್ಟನ್ ಸುಂದರ್ 60

ಶ್ರೇಯಸ್ ಅಯ್ಯರ್ ಸಿ ಮೊಹಮ್ಮದ್ ಸಿರಾಜ್ ಬಿ ಶಹಬಾಜ್ ಅಹಮ್ಮ್ 07

ರಿಷಭ್ ಪಂತ್ ಔಟಾಗದೆ 08

ಮಾರ್ಕಸ್ ಸ್ಟೋಯಿನಿಸ್ ಔಟಾಗದೆ 10

ಇತರೆ (ಲೆಗ್ ಬೈ 3, ವೈಡ್ ‌3) 06

 

ವಿಕೆಟ್ ಪತನ

1-19 (ಪೃಥ್ವಿ ಶಾ, 1.5), 2-107 (ಶಿಖರ್ ಧವನ್, 12.4), 3-130 (ಶ್ರೇಯಸ್ ಅಯ್ಯರ್, 16.2), 4-136 (ಅಜಿಂಕ್ಯ ರಹಾನೆ, 17.2)

ಬೌಲಿಂಗ್

ಕ್ರಿಸ್ ಮೊರಿಸ್ 2–0–19–0, ಮೊಹಮ್ಮದ್ ಸಿರಾಜ್ 3–0–29–1, ವಾಷಿಂಗ್ಟನ್ ಸುಂದರ್ 4–0–24–1, ಇಸುರು ಉಡಾನ 2–0–24–0, ಯಜುವೇಂದ್ರ ಚಾಹಲ್ 4–0–29–0, ಶಹಬಾಜ್ ಅಹಮ್ಮದ್ 4–0–26–2

ಫಲಿತಾಂಶ: ಡೆಲ್ಲಿ ಕ್ಯಾಪಿಟಲ್ಸ್‌ಗೆ 6 ವಿಕೆಟ್‌ಗಳ ಜಯ

ಪಂದ್ಯಶ್ರೇಷ್ಠ: ಆ್ಯನ್ರಿಕ್ ನಾರ್ಕಿಯ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು