ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಟಿದೇಳುವ ಛಲದಲ್ಲಿ ಮಿಥಾಲಿ ಬಳಗ

ಕ್ರಿಕೆಟ್‌: ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಏಕದಿನ ಪಂದ್ಯ ಇಂದು
Last Updated 8 ಮಾರ್ಚ್ 2021, 13:23 IST
ಅಕ್ಷರ ಗಾತ್ರ

ಲಖನೌ: ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯದಲ್ಲೇ ನಿರಾಸೆ ಅನುಭವಿಸಿದ್ದ ಭಾರತ ಮಹಿಳಾ ಕ್ರಿಕೆಟ್ ತಂಡವು ಎರಡನೇ ಹಣಾಹಣಿಯಲ್ಲಿ ಲಯ ಕಂಡುಕೊಳ್ಳುವ ವಿಶ್ವಾಸದಲ್ಲಿದೆ. ಇಲ್ಲಿಯ ಏಕಾನ ಕ್ರೀಡಾಂಗಣದಲ್ಲಿ ಮಂಗಳವಾರ ಪಂದ್ಯ ನಡೆಯಲಿದೆ.

ಕೋವಿಡ್–19ರಿಂದಾಗಿ ಒಂದು ವರ್ಷ ಸ್ಪರ್ಧಾತ್ಮಕ ಕ್ರಿಕೆಟ್ ಕಣಕ್ಕೆ ಇಳಿಯದಿದ್ದ ಮಿಥಾಲಿ ರಾಜ್‌ ನೇತೃತ್ವದ ಭಾರತ ಇದೇ ಮೊದಲ ಬಾರಿ ಸರಣಿ ಆಡುತ್ತಿದೆ. ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ಪ್ರವಾಸಿ ತಂಡ ಸಂಪೂರ್ಣ ಪ್ರಾಬಲ್ಯ ಮೆರೆದಿತ್ತು. ಎಂಟು ವಿಕೆಟ್‌ಗಳಿಂದ ಪಂದ್ಯ ಗೆದ್ದುಕೊಂಡಿತ್ತು. ಪಂದ್ಯದ ಬಳಿಕ ಪ್ರತಿಕ್ರಿಯಿಸಿದ್ದ ಭಾರತ ತಂಡದ ಉಪನಾಯಕಿ ಹರ್ಮನ್‌ಪ್ರೀತ್ ಕೌರ್‌, ‘ಆಟಗಾರ್ತಿಯರಿಗೆ ಒಂದು ತಂಡವಾಗಿ ಆಡಲು ಸ್ವಲ್ಪ ಸಮಯದ ಅಗತ್ಯವಿದೆ‘ ಎಂದಿದ್ದರು.

ಆ ಪಂದ್ಯದಲ್ಲಿ ಕೌರ್‌, ನಾಯಕಿ ಮಿಥಾಲಿ ರಾಜ್ ಅವರನ್ನು ಹೊರತುಪಡಿಸಿ ಉಳಿದ ಯಾರಿಂದಲೂ ಉತ್ತಮ ಸಾಮರ್ಥ್ಯ ಹೊರಹೊಮ್ಮಿರಲಿಲ್ಲ.

ಹೊಡೆತಗಳ ಆಯ್ಕೆಯಲ್ಲಿ ಆಟಗಾರ್ತಿಯರು ಎಡವಿದ್ದನ್ನು ಕೌರ್ ಉಲ್ಲೇಖಿಸಿದ್ದರು.

ಭಾರತ ತಂಡದ ಸಾಂಪ್ರದಾಯಿಕ ಬೌಲಿಂಗ್ ಶಕ್ತಿಯಾಗಿರುವ ಸ್ಪಿನ್ ವಿಭಾಗವೂ ಪ್ರವಾಸಿ ತಂಡದ ಲಿಜೆಲ್ಲೆ ಲೀ ಹಾಗೂ ಲೌರಾ ವೊಲ್ವಾರ್ಟ್‌ ಬ್ಯಾಟಿಂಗ್ ಎದುರು ಹೈರಾಣಾಗಿತ್ತು. ಬ್ಯಾಟಿಂಗ್‌ನಲ್ಲಿ ಮಿಥಾಲಿ ಹಾಗೂ ಬೌಲಿಂಗ್‌ನಲ್ಲಿ ಜೂಲನ್ ಗೋಸ್ವಾಮಿ ಉತ್ತಮ ಆಟವಾಡಿದ್ದು ಭಾರತಕ್ಕೆ ಸಮಾಧಾನದ ಸಂಗತಿ.

ಐದು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲೇ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ದಕ್ಷಿಣ ಆಫ್ರಿಕಾ, ಅದೇ ಲಯದೊಂದಿಗೆ ಮುಂದುವರಿಯುವ ಹಂಬಲದಲ್ಲಿದೆ. ಆ ತಂಡದ ವೇಗಿ ಶಬ್ನಿಮ್ ಇಸ್ಮಾಯಿಲ್‌ ನೇತೃತ್ವದ ಬೌಲಿಂಗ್ ಪಡೆ ಮೊದಲ ಪಂದ್ಯದಲ್ಲಿ ಪರಿಣಾಮಕಾರಿಯಾಗಿತ್ತು. ಈ ‍ಅಪಾಯವನ್ನು ಎದುರಿಸಿ ಕ್ರೀಸ್‌ನಲ್ಲಿ ನೆಲೆಯೂರುವ ಛಲವನ್ನು ಭಾರತದ ಬ್ಯಾಟ್ಸ್‌ವುಮನ್‌ಗಳು ತೋರಬೇಕಿದೆ.

ತಂಡಗಳು: ಭಾರತ: ಮಿಥಾಲಿ ರಾಜ್ (ನಾಯಕಿ), ಸ್ಮೃತಿ ಮಂದಾನ, ಜೆಮಿಮಾ ರಾಡ್ರಿಗಸ್‌, ಪೂನಂ ರಾವತ್‌, ಪ್ರಿಯಾ ಪೂನಿಯಾ, ಯಸ್ತಿಕಾ ಭಾಟಿಯಾ, ಹರ್ಮನ್‌ಪ್ರೀತ್ ಕೌರ್‌, ಡಿ.ಹೇಮಲತಾ, ದೀಪ್ತಿ ಶರ್ಮಾ, ಸುಶ್ಮಾ ವರ್ಮಾ (ವಿಕೆಟ್ ಕೀಪರ್), ಶ್ವೇತಾ ವರ್ಮಾ, ರಾಧಾ ಯಾದವ್‌, ರಾಜೇಶ್ವರಿ ಗಾಯಕವಾಡ್‌, ಜೂಲನ್ ಗೋಸ್ವಾಮಿ, ಮಾನಸಿ ಜೋಶಿ, ಪೂನಂ ಯಾದವ್, ಪ್ರತ್ಯೂಷಾ, ಮೋನಿಕಾ ಪಟೇಲ್‌.

ದಕ್ಷಿಣ ಆಫ್ರಿಕಾ: ಸೂನ್ ಲೂಜ್ (ನಾಯಕಿ), ಅಯಮೊಂಗಾ ಖಾಕ, ಶಬ್ನಿಮ್ ಇಸ್ಮಾಯಿಲ್, ಲೌರಾ ವೊಲ್ವಾರ್ಟ್‌, ತ್ರಿಶಾ ಚೆಟ್ಟಿ, ಸಿನಾಲೊ ಜಾಫ್ತ, ತಸ್ಮಿನ್ ಬ್ರಿಟ್ಜ್‌, ಮರಿಜಾನೆ ಕಾಪ್‌, ನೊಂಡುಮಿಸೊ ಶಾಂಗಸೆ, ಲಿಜೆಲಿ ಲೀ, ಅನೆಕೆ ಬೋಶ್‌, ಫೇ ತನಿಕ್ಲಿಫ್‌, ನೊಂಕುಲುಲೆಕೊ ಮಾಬಾ, ಮಿಗ್ನನ್ ಡು ಪ್ರೀಜ್‌, ನಡಿನೆ ಡಿ ಕ್ಲರ್ಕ್‌, ಲಾರಾ ಗುಡಾಲ್‌, ತೂಮಿ ಸೆಖುಖುನೆ.

ಆರಂಭ: ಬೆಳಿಗ್ಗೆ 9.00

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT