ಭಾನುವಾರ, ಆಗಸ್ಟ್ 1, 2021
26 °C
ವಿಕೆಟ್‌ಕೀಪರ್–ಬ್ಯಾಟ್ಸ್‌ಮನ್

‘ಜೀವಂತ ಶವ’ದಂತಾದ ದೇಹಕ್ಕೆ ಬೇಕು ಫಿಟ್‌ನೆಸ್‌ ತಾಲೀಮು: ದಿನೇಶ್ ಕಾರ್ತಿಕ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಲಾಕ್‌ಡೌನ್‌ನಿಂದಾಗಿ ದೀರ್ಘ ಕಾಲ ‘ಗೃಹಬಂಧನ’ದಲ್ಲಿರುವ ನಮ್ಮ ದೇಹಗಳು ಒಂದು ರೀತಿ ‘ಜೀವಂತ ಶವ’ಗಳಾಗಿವೆ. ಹೊರಾಂಗಣದಲ್ಲಿ ನಾಲ್ಕು ವಾರಗಳ ಫಿಟ್‌ನೆಸ್‌ ತರಬೇತಿಯಿಂದ ಮರಳಿ ಲಯಕ್ಕೆ ಬರಬಹುದು ಎಂದು ಭಾರತ ತಂಡದ ವಿಕೆಟ್‌ಕೀಪರ್–ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಹೇಳಿದ್ದಾರೆ.

‘ಮರಳಿ ಕಣಕ್ಕಿಳಿದು ಎಂದಿನ ಲಯಕ್ಕೆ ಮರಳುವುದು ದೊಡ್ಡ ಸವಾಲಾಗಿದೆ. ಆದರೆ ಹಂತಹಂತವಾಗಿ ನಿಧಾನಕ್ಕೆ ತಾಲೀಮು ಮಾಡುತ್ತ ಸಾಗಿದರೆ ದೇಹವು ಹೊಂದಿಕೊಳ್ಳುತ್ತದೆ. ಆಗ ಮೊದಲಿನ ರೀತಿಯ ದೈಹಿಕ ಕ್ಷಮತೆಯನ್ನು ಗಳಿಸಲು ಸಾಧ್ಯವಾಗುತ್ತದೆ. ಮನೆಯಲ್ಲಿ ಹೆಚ್ಚು ಹೊತ್ತು ಕುಳಿತುಕೊಂಡಿದ್ದರ ಪರಿಣಾಮ ದೇಹವು ಜಡವಾಗಿರುತ್ತದೆ. ಅದನ್ನು ಆ ಹಾದಿಯಿಂದ ನಿಧಾನವಾಗಿ ಹೊರತರಬೇಕು’ ಎಂದು ಇಎಸ್‌ಪಿಎನ್‌ಕ್ರಿಕ್‌ಇನ್ಫೋ ಸಂವಾದದಲ್ಲಿ ಹೇಳಿದ್ದಾರೆ.

‘ಚೆನ್ನೈನಲ್ಲಿ ಈಗ ಲಾಕ್‌ಡೌನ್‌ ಸಡಿಲಗೊಳಿಸಲಾಗಿದೆ. ಅಭ್ಯಾಸಕ್ಕೆ ತೆರಳಲು ಅನುಮತಿ ದೊರೆಯುವ ಸಾಧ್ಯತೆಯೂ ಇದೆ. ಅನುಮತಿ ಸಿಕ್ಕರೆ ನಾನು ಕ್ರೀಡಾಂಗಣಕ್ಕೆ ತೆರಳಿ ಅಭ್ಯಾಸ ಆರಂಭಿಸುತ್ತೇನೆ. ಆದರೆ ಯಾವುದಕ್ಕೂ ಆತುರ ಮಾಡುವುದಿಲ್ಲ. ನಿಧಾನವಾಗಿ ಒಂದೊಂದೇ ರೀತಿಯ ವ್ಯಾಯಾಮಗಳನ್ನು ಮಾಡಿಕೊಂಡು ಹಂತಹಂತವಾಗಿ ಹೆಚ್ಚಿಸುತ್ತೇನೆ’ ಎಂದು ತಮಿಳುನಾಡಿನ ಕಾರ್ತಿಕ್ ತಿಳಿಸಿದ್ದಾರೆ.

ಕೊರೊನಾ ವೈರಸ್ ಸೋಂಕು ತಡೆಯಲು ಮಾರ್ಚ್‌ ಮೂರನೇ ವಾರದಿಂದ  ಲಾಕ್‌ಡೌನ್‌ ಆರಂಭವಾಗಿದೆ.  ಆಗಿನಿಂದಲೂ ಕ್ರಿಕೆಟ್ ಚಟುವಟಿಕೆಗಳು ಸ್ಥಗಿತವಾಗಿವೆ. ಆಟಗಾರರು ತಮ್ಮ ಮನೆಗಳಲ್ಲಿ ಬಂಧಿಯಾಗಿದ್ದಾರೆ. ಹೋದ ವಾರದಿಂದ ಲಾಕ್‌ಡೌನ್‌ ನಿಯಮಗಳನ್ನು ಸಡಿಲು ಮಾಡಲಾಗಿದೆ. ಅದರಿಂದಾಗಿ ಕೆಲವು ಕ್ಲಬ್‌ಗಳು, ಅಕಾಡೆಮಿಗಳಲ್ಲಿ ತಾಲೀಮು ಆರಂಭವಾಗಿದೆ. ಅದಕ್ಕಾಗಿ ಐಸಿಸಿ ಮತ್ತು ಭಾರತ ಸರ್ಕಾರವು ಕೆಲವು ಸುರಕ್ಷತಾ ನಿಯಮಗಳನ್ನು ಪ್ರಕಟಿಸಿದೆ. ಅವುಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.

ಮುಂಬೈನ ಮಧ್ಯಮವೇಗಿ ಶಾರ್ದೂಲ್ ಠಾಕೂರ್ ಅವರು ಹೋದವಾರವೇ ಅಭ್ಯಾಸ ಆರಂಭಿಸಿದ್ದರು. ಲಾಕ್‌ಡೌನ್ ನಂತರ ಹೊರಾಂಗಣಕ್ಕೆ ಕಾಲಿಟ್ಟ ಮೊದಲ ಕ್ರಿಕೆಟಿಗನೂ ಆಗಿದ್ದಾರೆ. ಈಗಲೂ ದೇಶದ ಕೆಲವೆಡೆ ಅಂತರರಾಜ್ಯ ಪ್ರಯಾಣಕ್ಕೆ ನಿರ್ಬಂಧವಿದೆ. ಆದ್ದರಿಂದ ಆಟಗಾರರಿಗೆ ಅವರ ತವರೂರಿನಲ್ಲಿಯೇ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡಲು ಅನುಕೂಲ ಕಲ್ಪಿಸಬೇಕು ಎಂದು ಭಾರತ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಭರತ್ ಅರುಣ್ ಹೇಳಿದ್ದರು.

ಕೊರೊನಾ ಪ್ರಕರಣಗಳು ಹೆಚ್ಚು ವರದಿಯಾಗುತ್ತಿರುವ ಮುಂಬೈ ಹೊರತುಪಡಿಸಿ ಉಳಿದ ನಗರಗಳಲ್ಲಿ ಸೋಮವಾರದಿಂದ ಕ್ರಿಕೆಟ್ ತರಬೇತಿ ಚಟುವಟಿಕೆಗಳು ಗರಿಗೆದರುವ ನಿರೀಕ್ಷೆ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು