ಮಂಗಳವಾರ, ಜೂನ್ 28, 2022
28 °C
Compensation Sheldon Unadkat Harpreet

ಕೋವಿಡ್‌: ದೇಶಿ ಆಟಗಾರರಿಗೆ ಕೇಂದ್ರೀಯ ಗುತ್ತಿಗೆಗೆ ಆಗ್ರಹ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ರದ್ದಾಗಿರುವ ಟೂರ್ನಿಗಳಿಗೆ ಸಂಬಂಧಿಸಿ ಪರಿಹಾರ ವಿತರಣೆಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯಯೋಜನೆ ರೂಪಿಸುತ್ತಿದ್ದಂತೆಯೇ ದೇಶಿ ಕ್ರಿಕೆಟಿಗರನ್ನು ಕೇಂದ್ರೀಯ ಗುತ್ತಿಗೆ ಪದ್ಧತಿಯಡಿಗೆ ತರಬೇಕು ಎಂಬ ಕೂಗು ಜೋರಾಗಿದೆ.

ಕೋವಿಡ್–19ರಿಂದಾಗಿ ಕಳೆದ ಬಾರಿ ರಣಜಿ ಟೂರ್ನಿ ಒಳಗೊಂಡಂತೆ ವಿವಿಧ ಟೂರ್ನಿಗಳು ರದ್ದಾಗಿವೆ. ಅದರಲ್ಲಿ ಪಾಲ್ಗೊಳ್ಳಬೇಕಾದ ಆಟಗಾರರಿಗೆ ಪರಿಹಾರ ಕೊಡಲು ಬಿಸಿಸಿಐ ಮುಂದಾಗಿದೆ. ಕೇಂದ್ರೀಯ ಗುತ್ತಿಗೆಗೆ ಒತ್ತಾಯಿಸುತ್ತಿರುವವರ ಸಾಲಿಗೆ ಈಗ ಜಯದೇವ ಉನದ್ಕತ್‌, ಶೆಲ್ಡನ್ ಜಾಕ್ಸನ್ ಮತ್ತು ಹರಪ್ರೀತ್‌ ಸಿಂಗ್ ಸೇರಿದ್ದಾರೆ.

ರಾಷ್ಟ್ರೀಯ ತಂಡಗಳಿಗೆ ನೀಡುವಂತೆ ಆಯಾ ರಾಜ್ಯದ ಆಟಗಾರರಿಗೆ ಅಲ್ಲಿನ ಕ್ರಿಕೆಟ್ ಸಂಸ್ಥೆಗಳು ಗುತ್ತಿಗೆ ‍ಪದ್ಧತಿ ಜಾರಿಗೆ ತರಬೇಕು ಎಂದು ಮಾಜಿ ಆಟಗಾರ ರೋಹನ್ ಗಾವಸ್ಕರ್ ಕಳೆದ ತಿಂಗಳು ಸಲಹೆ ನೀಡಿದ್ದರು. 

ದೇಶಿ ಕ್ರಿಕೆಟರ್‌ಗಳ ಪೈಕಿ ಅನೇಕರಿಗೆ ಐಪಿಎಲ್‌ನಲ್ಲಿ ಆಡಲು ಅವಕಾಶ ಸಿಗುವುದಿಲ್ಲ. ಬಹುತೇಕರಿಗೆ ಉದ್ಯೋಗ ಭದ್ರತೆಯೂ ಇಲ್ಲ. ಆದ್ದರಿಂದ ಅವರು ಕ್ರಿಕೆಟ್ ಪಂದ್ಯಗಳನ್ನೇ ನಂಬಿಕೊಂಡಿರುತ್ತಾರೆ. ರಾಜ್ಯದ ಪ್ರಮುಖ 30 ಆಟಗಾರರನ್ನಾದರೂ ಗುತ್ತಿಗೆ ಪದ್ಧತಿಯಲ್ಲಿ ಸೇರಿಸಬೇಕು ಎಂದು ಸೌರಾಷ್ಟ್ರ ತಂಡದ ನಾಯಕ ಜಯದೇವ ಉನದ್ಕತ್ ಕೋರಿದ್ದಾರೆ.  

ಛತ್ತೀಸ್‌ಘಡ ತಂಡದ ನಾಯಕ ಹರಪ್ರೀತ್ ಸಿಂಗ್ ಅವರು ಕೋವಿಡ್‌ ನಡುವೆಯೇ ಇಂಗ್ಲೆಂಡ್‌ನಲ್ಲಿ ಕ್ಲಬ್ ಕ್ರಿಕೆಟ್ ಆಡಲು ತೆರಳಿದ್ದಾರೆ. ಮೂರು ವರ್ಷಗಳಿಂದ ಬಾರ್ನ್ಸ್‌ಲಿ ವೂಲಿ ಮೈನರ್ಸ್ ತಂಡದಲ್ಲಿ ಆಡುತ್ತಿದ್ದಾರೆ. ಉದ್ಯೋಗವೂ ಇಲ್ಲದೆ, ಪಂದ್ಯಗಳೂ ಇಲ್ಲದ್ದರಿಂದ ಇಂಗ್ಲೆಂಡ್‌ನಲ್ಲಿ ಕ್ಲಬ್ ಕ್ರಿಕೆಟ್ ಆಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳಿದ್ದಾರೆ.

ದೇಶಿ ಆಟಗಾರರಿಗೆ ಪ್ಯಾಕೇಜ್ ಘೋಷಣೆಗೆ ಸಂಬಂಧಿಸಿ ರಾಜ್ಯ ಸಂಸ್ಥೆಗಳ ಜೊತೆ ಮಾತುಕತೆ ನಡೆದಿದೆ. ಮೇ 29ರಂದು ನಡೆದ ವಿಶೇಷ ಸಭೆಯಲ್ಲಿ ಈ ಕುರಿತು ಚರ್ಚೆಯೂ ನಡೆದಿದೆ ಎಂದು ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು