ಮಂಗಳವಾರ, ಜುಲೈ 27, 2021
20 °C
ಕೊಹ್ಲಿಗೆ ಹಿರಿಯ ಕ್ರಿಕೆಟಿಗನ ಕಿವಿಮಾತು

ವಿರಾಟ್ ಕೊಹ್ಲಿ ಸಾಧಿಸಬೇಕಿರುವುದು ಇನ್ನೂ ಬಹಳಷ್ಟಿದೆ: ಗೌತಮ್ ಗಂಭೀರ್

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಲವಾರು ದಾಖಲೆಗಳನ್ನು ಬರೆದಿದ್ದಾರೆ. ಆದರೆ, ತಂಡದ ನಾಯಕನಾಗಿ ದೊಡ್ಡ ಚಾಂಪಿಯನ್‌ಷಿಪ್‌ಗಳ ಪ್ರಶಸ್ತಿಗಳನ್ನು ಜಯಿಸುವುದು ಬಾಕಿ ಇದೆ. ವೈಯಕ್ತಿಕ ಸಾಧನೆಗಿಂತ ತಂಡದ ಪ್ರದರ್ಶನ ಮುಖ್ಯ ಎಂದು ಹಿರಿಯ ಕ್ರಿಕೆಟಿಗ ಗೌತಮ್ ಗಂಭೀರ್ ಹೇಳಿದ್ದಾರೆ.

ಟೆಸ್ಟ್‌ನಲ್ಲಿ 27, ಏಕದಿನ ಕ್ರಿಕೆಟ್‌ 43 ಶತಕಗಳನ್ನು ವಿರಾಟ್ ಗಳಿಸಿದ್ದಾರೆ. ವಿರಾಟ್ ಏಕದಿನ ಕ್ರಿಕೆಟ್‌ನಲ್ಲಿ 11 ಸಾವಿರ ರನ್‌ಗಳನ್ನು ಗಳಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಅವರ ದಾಖಲೆಗಳನ್ನು ಮುರಿಯುವತ್ತ ದಾಪುಗಾಲಿಟ್ಟಿದ್ದಾರೆ. ಆದರೆ, ಅವರ ನಾಯಕತ್ವದಲ್ಲಿ ಭಾರತ ತಂಡವು ಹೋದ ವರ್ಷ ಏಕದಿನ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಸೋತಿತ್ತು. ಮೂರು ವರ್ಷಗಳ ಹಿಂದೆ ಚಾಂಪಿಯನ್ಸ್‌ ಟ್ರೋಫಿಯಲ್ಲಿಯೂ ನಿರಾಶೆ ಅನುಭವಿಸಿತ್ತು. ವಿರಾಟ್ ದೀರ್ಘ ಕಾಲದಿಂದ ನಾಯಕತ್ವ ವಹಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇದುವರೆಗೆ ಐಪಿಎಲ್‌ನಲ್ಲಿ ಚಾಂಪಿಯನ್ ಆಗಿಲ್ಲ.  ಈ ಕುರಿತು ಸ್ಟಾರ್ ಸ್ಫೋರ್ಟ್ಸ್‌ನ ಕ್ರಿಕೆಟ್‌ ಕನೆಕ್ಟಡ್‌ನಲ್ಲಿ ಗಂಭೀರ್ ಮಾತನಾಡಿದ್ದಾರೆ.

‘ನಿಮ್ಮ ವೈಯಕ್ತಿಕ ಸಾಧನೆಗಾಗಿ ರನ್‌ಗಳನ್ನು ಗಳಿಸುತ್ತಲೇ ಇರುತ್ತಾರೆ. ವೆಸ್ಟ್ ಇಂಡೀಸ್‌ನ ಬ್ರಯನ್ ಲಾರಾ, ದಕ್ಷಿಣ ಆಫ್ರಿಕಾದ ಜಾಕಸ್ ಕಾಲಿಸ್ ಅವರು ಬಹಳಷ್ಟು ರನ್‌ಗಳನ್ನು ಗಳಿಸಿದ್ದಾರೆ. ಆದರೆ, ಯಾವುದೇ ಮಹತ್ವದ ಟ್ರೋಫಿ ಜಯಿಸಿಲ್ಲ. ಪ್ರಾಮಾಣಿಕವಾಗಿ ಹೇಳುವುದಾದರೆ ವಿರಾಟ್ ಕೂಡ ಸದ್ಯ ಏನೂ ಗೆದ್ದಿಲ್ಲ’ ಎಂದು ಸಂಸದರೂ ಆಗಿರುವ ಗಂಭೀರ್ ಹೇಳಿದ್ದಾರೆ.

‘ವಿರಾಟ್ ಸಾಧಿಸಬೇಕಿರುವುದು ಇನ್ನೂ ಬಹಳಷ್ಟಿದೆ. ಹೆಚ್ಚು ರನ್‌ ಗಳಿಸುವುದು ಸಾಧನೆ ಇರಬಹುದು. ಆದರೆ, ತಂಡದ ಕ್ರೀಡೆಯಲ್ಲಿ ದೊಡ್ಡ ಟ್ರೋಫಿಗಳನ್ನು ಗೆಲ್ಲಬೇಕು. ಅದು ವೃತ್ತಿಜೀವನದ ಹೆಗ್ಗುರುತಾಗುತ್ತದೆ. ಇಲ್ಲದಿದ್ದರೆ ವೈಯಕ್ತಿಕ ಸಾಧನೆ ನಗಣ್ಯವಾಗುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಬೇರೆಲ್ಲರಿಗಿಂತಲೂ ಕೊಹ್ಲಿ ವಿಭಿನ್ನವಾದ ಶೈಲಿ ಹೊಂದಿದ್ದಾರೆ. ಒಬ್ಬ ನಿಜವಾದ ನಾಯಕರಾದವರು ತನ್ನ ತಂಡದ ಆಟಗಾರರು ಯಾವ ರೀತಿ ಇದ್ದಾರೋ ಅವರನ್ನು ಅದೇ ರೀತಿ ಸ್ವೀಕರಿಸಬೇಕು. ಒಬ್ಬರನ್ನು ಇನ್ನೊಬ್ಬರೊಂದಿಗೆ ಹೋಲಿಕೆ ಮಾಡಬಾರದು. ಏಕೆಂದರೆ ಪ್ರತಿಯೊಬ್ಬರ ವ್ಯಕ್ತಿತ್ವವೂ ವಿಭಿನವಾಗಿರುತ್ತದೆ. ಮೊಹಮ್ಮದ್ ಶಮಿ ಅವರು ಜಸ್‌ಪ್ರೀತ್ ಬೂಮ್ರಾ ಆಗುವುದು ಸಾಧ್ಯವಿಲ್ಲ. ಕೆ.ಎಲ್. ರಾಹುಲ್, ವಿರಾಟ್ ಆಗುವುದಿಲ್ಲ. ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ ಮತ್ತಿತರರು ಕೂಡ ವಿರಾಟ್ ಅವರನ್ನು ಸರಿಗಟ್ಟಲು ಸಾಧ್ಯವೇ ಇಲ್ಲ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು